ಸಾಮಗ್ರಿಗಳು :
ರವೆ / ಸೂಜಿ : 1 ಕಪ್
ನೀರು : 2 ಕಪ್
ಹಾಲು : 1 ಕಪ್
ಸಕ್ಕರೆ : 1 1/4 ಕಪ್
ತುಪ್ಪ : 1/3 ಕಪ್
ಸಣ್ಣಗೆ ಹೆಚ್ಚಿದ ಮಾವಿನಹಣ್ಣು : 1/2 ಕಪ್
ಗೋಡಂಬಿ : 8-10
ಕುಂಕುಮ ಕೇಸರಿ : 10-12 ದಳಗಳು
ಉಪ್ಪು : 2 ಚಿಟಿಕೆ
ವಿಧಾನ :
ಕೇಸರಿಯನ್ನು ಎರಡು ಚಮಚ ಬಿಸಿ ಹಾಲಿನಲ್ಲಿ ನೆನೆಸಿಡಿ. ಬಾಣಲೆಗೆ ತುಪ್ಪ ಹಾಕಿ ರವೆ ಹಾಕಿ ಚೆನ್ನಾಗಿ ಹುರಿಯಿರಿ. ರವೆ ಸ್ವಲ್ಪ ಕೆಂಪಗಾಗಿ, ಘಮ್ಮನೆ ಸುವಾಸನೆ ಬಂದರೆ ರವೆ ಹುರಿದಿದೆ ಎಂದರ್ಥ. ರವೆ ಹುರಿಯಿತ್ತುರುವಾಗಲೇ ನೀರು ಮತ್ತು ಹಾಲನ್ನು ಸೇರಿಸಿ ಕುದಿಯಲು ಇಡಿ. ಹುರಿದ ರವೆಗೆ ಕುದಿಯುತ್ತಿರುವ ನೀರು ಮತ್ತು ಹಾಲನ್ನು ಹಾಕಿ ಕಲಕುತ್ತಾ ಬನ್ನಿ. ರವೆ ಹುರಿಯುತ್ತಿರುವ ಒಲೆಯನ್ನು ಸಣ್ಣ ಉರಿಯಲ್ಲಿಟ್ಟು ನೀರು ಹಾಕಿ, ಬಿಸಿ ನೀರು ಸಿಡಿಯುತ್ತದೆ. ಮೊದಲ ಸಲ ಮಾಡುತ್ತಿರುವವರಾದರೆ ನೀರು ಹಾಕಿ ಮಿಕ್ಸ್ ಮಾಡುವವರೆಗೆ ಒಮ್ಮೆ ಉರಿ ಆರಿಸಿಕೊಳ್ಳುವುದು ಉತ್ತಮ. ನಂತರ ನೆನೆಸಿಟ್ಟ ಕೇಸರಿ ದಳಗಳು, ಹೆಚ್ಚಿದ ಮಾವಿನಹಣ್ಣು, ಗೋಡಂಬಿ ಚೂರುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ ಒಂದೆರಡು ನಿಮಿಷ ಬೇಯಲು ಬಿಡಿ. ರವೆ ಬೆಂದ ಮೇಲೆ ಸಕ್ಕರೆ, ಉಪ್ಪು ಹಾಕಿ ಕಲಕುತ್ತಾ ಬನ್ನಿ. ಸಕ್ಕರೆ ಹಾಕಿದ ಮೇಲೆ ಮತ್ತೆ ಸ್ವಲ್ಪ ನೀರು ಬಿಟ್ಟುಕೊಳ್ಳುತ್ತದೆ. ಮಿಶ್ರಣ ಬಾಣಲೆಗೆ ಅಂಟಿಕೊಳ್ಳದಂತೆ ಸೌಟು ಮತ್ತು ಬಾಣಲೆಯನ್ನು ಬಿಡುವವರೆಗೂ ಚೆನ್ನಾಗಿ ಮಿಕ್ಸ್ ಮಾಡುತ್ತಿರಿ. ಮಿಶ್ರಣ ಬಾಣಲೆ ಅಂಚನ್ನು ಬಿಟ್ಟುಕೊಂಡ ಮೇಲೆ ಉರಿ ಆರಿಸಿ. ಈಗ ಮಾವಿನಹಣ್ಣಿನ ಶಿರಾವನ್ನು ಬಿಸಿ ಬಿಸಿಯಾಗಿ ಸವಿಯಿರಿ.
ಸಲಹೆಗಳು :
1) ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಇದನ್ನು ಸಾಯಂಕಾಲದ ತಿಂಡಿಗೆ ಮಾಡಿಕೊಡಬಹುದು. ದೊಡ್ಡವರಿಗೂ ಇಷ್ಟವಾಗುವ ಸಿಹಿ ತಿನಿಸಿದು. ಮಕ್ಕಳಿಗೆ ಮಾಡುವಾಗ ಅಗಿದು ತಿನ್ನುವಷ್ಟು ಹಲ್ಲು ಬರದಿದ್ದರೆ ಗೋಡಂಬಿಯನ್ನು ಹಾಕಬೇಡಿ ಮತ್ತು ನೀರಿನ ಪ್ರಮಾಣಕ್ಕಿಂತ ಹಾಲಿನ ಪ್ರಮಾಣ ಜಾಸ್ತಿ ಹಾಕಿ.
2) ಮಾವಿನಹಣ್ಣಿನ ಬದಲು ಕಿತ್ತಳೆ ಹಣ್ಣು, ಬಾಳೆಹಣ್ಣು ಅಥವಾ ಅನಾನಸ್ ಹಣ್ಣು ಹಾಕಿ ಮಾಡಿದರೂ ಚೆನ್ನಾಗಿರುತ್ತದೆ.
3) ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಕೊನೆಯಲ್ಲಿ ಕೂಡ ಸೇರಿಸಬಹುದು. ಜೊತೆಗೆ ಒಣ ದ್ರಾಕ್ಷಿ ಹಾಕಬಹುದು ಆದರೆ ಮಾವಿನಹಣ್ಣಿನ ಜೊತೆ ಚೆನ್ನಾಗಿರುವುದಿಲ್ಲ. ಬೇರೆ ಹಣ್ಣನ್ನು ಹಾಕಿ ಮಾಡಿದಾಗ ಹಾಕಿಕೊಳ್ಳಿ.
4) ಸೂಜಿ ರವೆಯ ಬದಲು ಚಿರೋಟಿ ರವೆಯಿಂದ ಮಾಡಿದರೂ ತುಂಬಾ ಚೆನ್ನಾಗಿ ಆಗುತ್ತದೆ.