ಸಾಮಗ್ರಿಗಳು:
ಉಪ್ಪಿಟ್ಟಿನ ರವೆ / ಸೂಜಿ ರವೆ : 1ಕಪ್
ನೀರು : 8 ಕಪ್
ಉಪ್ಪು : 1 ಚಮಚ
ಹಸಿಮೆಣಸಿನ ಕಾಯಿ : 7-8
ಜೀರಿಗೆ : 1/2 ಚಮಚ
ಇಂಗು :1/2 ಚಮಚ
ವಿಧಾನ :
ದೊಡ್ಡ ಪಾತ್ರೆಯಲ್ಲಿ 8 ಕಪ್ ನೀರು ಹಾಕಿ ಕುದಿಯಲು ಇಡಿ. ಹಸಿಮೆಣಸು ಮತ್ತು ಜೀರಿಗೆ ಪೇಸ್ಟ್ ಮಾಡಿಕೊಳ್ಳಿ. ಜೀರಿಗೆ ತರಿ ತರಿ ಇದ್ದರೂ ಆಯಿತು.
ನೀರು ಕುದಿಯಲು ಶುರು ಆದ ಮೇಲೆ ರವೆ, ಉಪ್ಪು, ಇಂಗು ಹಾಕಿ ರವೆ ಗಂಟಾಗದಂತೆ ಮಧ್ಯಮ ಉರಿಯಲ್ಲಿ ಚೆನ್ನಾಗಿ ಕಲಕುತ್ತಿರಿ. ಸ್ವಲ್ಪ ದಪ್ಪ ಗಂಜಿಯಷ್ಟು ಗಟ್ಟಿಯಾದ ಮೇಲೆ ಉರಿ ಆರಿಸಬೇಕು.
ಒಂದು ಚಮಚದಲ್ಲಿ ಮಿಶ್ರಣವನ್ನು ತೆಗೆದುಕೊಂಡು ತಟ್ಟೆಗೆ ಹಾಕಿದರೆ ಅದು ಹರಿದುಕೊಂಡು ಹೋಗದಷ್ಟು ಗಟ್ಟಿ ಇದ್ದರೆ ಸಾಕು. ತುಂಬಾ ದಪ್ಪಗಾದರೂ ಚೆನ್ನಾಗಿರುವುದಿಲ್ಲ. ತಣ್ಣಗಾದಂತೆ ಇನ್ನೂ ಗಟ್ಟಿಯಾಗುತ್ತಾ ಬರುತ್ತದೆ. ಒಂದು ಪ್ಲಾಸ್ಟಿಕ್ ಶೀಟ್ ಅನ್ನು ಬಿಸಿಲಿನಲ್ಲಿ ಹರವಿಕೊಂಡು ಹಾರಿ ಹೋಗದಂತೆ ಸುತ್ತಲೂ ಕಲ್ಲು ಇಡಿ. ಈಗ ಒಂದು ಬೌಲ್ ನಲ್ಲಿ ರವೆ ಮಿಶ್ರಣವನ್ನು ತೆಗೆದುಕೊಂಡು ಒಂದು ಚಮಚದಿಂದ ಸಂಡಿಗೆ ಹಾಕುತ್ತಾ ಬನ್ನಿ.
ಒಂದು ಅಥವಾ ಎರಡು ದಿನಕ್ಕೆ ಪೂರ್ತಿ ಒಣಗಿ ಪ್ಲಾಸ್ಟಿಕ್ ಬಿಡುತ್ತದೆ. ನಂತರ ಸಂಡಿಗೆಯನ್ನು ಪ್ಲಾಸ್ಟಿಕ್ ನಿಂದ ಬಿಡಿಸಿ ಒಂದು ಅಗಲವಾದ ತಟ್ಟೆಗೆ ಹಾಕಿ ಇನ್ನೊಂದು ದಿನ ಬಿಸಿಲಿನಲ್ಲಿ ಇಡಿ.
ಗರಿ ಗರಿಯಾಗಿ ಒಣಗಿದ ಸಂಡಿಗೆಯನ್ನು ವರ್ಷದವರೆಗೆ ಗಾಳಿಯಾಡದ ಡಬ್ಬಿಯಲ್ಲಿ ಶೇಖರಿಸಿಡಬಹುದು. ಬೇಕಾದಾಗ ಕಾದ ಎಣ್ಣೆಯಲ್ಲಿ ಕರಿದು, ಬಿಸಿ ಬಿಸಿ ಅನ್ನ - ಸಾರು / ತೊವ್ವೆ ಜೊತೆ ಸವಿಯಬಹುದು.
ಸಲಹೆ : ಹಸಿಮೆಣಸಿನ ಪೇಸ್ಟ್ ಬದಲು ಅಚ್ಚ ಖಾರದ ಪುಡಿಯನ್ನೂ ಬಳಸಬಹುದು ಮತ್ತು ಇಂಗು ಹಾಕುವ ಬದಲು ಬೆಳ್ಳುಳ್ಳಿ ಪೇಸ್ಟ್ ಕೂಡ ಹಾಕಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ