ತಾಯ್ತನ ಪ್ರತಿ ಹೆಣ್ಣಿನ ಜೀವನದ ಮಹತ್ತರ ಘಟ್ಟ. ತಾಯಿಯಾದರೆ ಮರುಜೀವ ಪಡೆದಂತೆ ಎಂಬ ಮಾತಿದೆ. ಬಾಣಂತನದಲ್ಲಿ ಮೈಯಲ್ಲಿನ ನೀರನ್ನು ಪೂರ್ತಿ ಇಳಿಸಿ, ಮೈ ಇಳಿಸುವ ಪ್ರಕ್ರಿಯೆ ರೂಢಿಯಲ್ಲಿದೆ. ಅಂತೆಯೇ ರಕ್ತ ಕೂಡ ಕಮ್ಮಿಯಾಗುತ್ತದೆ ಬಾಳಂತನದ ಆಹಾರದಲ್ಲಿ. ಮೊದಲು ರಕ್ತ ಶುದ್ಧಿಗೆ ಮದ್ದು ಕೊಟ್ಟು, ತಿಂಗಳ ನಂತರ ರಕ್ತ ವೃದ್ಧಿಗೆ ಲೇಹ್ಯ ಕೊಡುವ ಪದ್ಧತಿ ನಮ್ಮಲ್ಲಿದೆ. ಲೇಹ್ಯಗಳ ತಯಾರಿಕೆಯನ್ನು ಮುಂದಿನ ಕಂತುಗಳಲ್ಲಿ ತಿಳಿಸಿಕೊಡುತ್ತೇನೆ. ಬಾಣಂತನ ಮುಗಿದ ನಂತರ ತಲೆ ಕೂದಲೆಲ್ಲಾ ಉದುರಲಾರಂಬಿಸಿ ಹೊಸ ಕೂದಲು ಬರುತ್ತದೆ. ಅಂತೆಯೇ ಮೈ ಚರ್ಮವೆಲ್ಲಾ ಕಪ್ಪಗಾಗಿ ಮುಂದಿನ ದಿನಗಳಲ್ಲಿ ಹೊಸ ಚರ್ಮ ಕೂಡ ಬರುತ್ತದೆ. ಈ ಬಾಣಂತಿ ಆರೈಕೆ ಒಂದೊಂದು ಊರಿನಲ್ಲಿ ಒಂದೊಂದು ಬಗೆಯದಾಗಿದೆ. ನಮ್ಮ ಊರಿನ ಕಡೆ ಮಲೆನಾಡಿನ ಅತೀ ತಂಪು ಹವಾಮಾನಕ್ಕೆ ತಕ್ಕಂತೆ ಔಷಧ ಪದ್ಧತಿ ರೂಢಿಯಲ್ಲಿದೆ.
ಇವತ್ತಿನ ಪುಡಿಗಳ ವಿವರಣೆ ಮಗುವಿನ ಜನನದ ನಂತರ ಮೊದಲ ಊಟದಿಂದಲೇ ಬೇಕಾಗುವಂಥದ್ದು. ಆದ್ದರಿಂದ ಹೆರಿಗೆಯ ಒಂದು ವಾರ ಮುಂಚೆಯೇ ಇದನ್ನು ತಯಾರಿಸಿಟ್ಟುಕೊಳ್ಳುತ್ತಾರೆ.
ಮೊದಲಿಗೆ ಜೀರಿಗೆ ಪುಡಿ ಮಾಡುವುದನ್ನು ನೋಡೋಣ. ಇದಕ್ಕೆ ಹಸಿ ಜೀರಿಗೆ - ಬಿಸಿ ಜೀರಿಗೆ ಪುಡಿ ಎಂದು ಹೇಳುತ್ತಾರೆ. ಅಂದರೆ ಹಸಿ ಮತ್ತು ಹುರಿದ ಜೀರಿಗೆ ಎರಡನ್ನೂ ಸೇರಿಸಿ ಪುಡಿ ಮಾಡುವುದು.
ಸಾಮಗ್ರಿಗಳು:
ಜೀರಿಗೆ : 2 ಕಪ್
ತುಪ್ಪ : 1/2 ಚಮಚ
ವಿಧಾನ :
ಬಾಣಲೆಗೆ ತುಪ್ಪ ಹಾಕಿ ಒಂದು ಕಪ್ ಜೀರಿಗೆಯನ್ನು ಹುರಿದುಕೊಳ್ಳಿ. ಇದನ್ನು ಸ್ವಲ್ಪ ಆರಲು ಬಿಡಿ. ನಂತರ ಮಿಕ್ಸಿ ಜಾರಿಗೆ ಹುರಿದ ಜೀರಿಗೆ ಮತ್ತು ಒಂದು ಕಪ್ ಹಸಿ (ಹುರಿಯದೇ ಇರುವ) ಜೀರಿಗೆ ಹಾಕಿ ಪುಡಿ ಮಾಡಿ ಗಾಳಿಯಾಡದ ಡಬ್ಬಿಗೆ ತುಂಬಿಡಿ.
ಈಗ ಕಾಳು ಮೆಣಸಿನ ಪುಡಿ ಮಾಡುವುದನ್ನು ತಿಳಿಯೋಣ. ಇದು ಬಾಣಂತಿಗೆ ಹೆರಿಗೆಯ ನೋವು ಮತ್ತು ಸೊಂಟ, ಬೆನ್ನು ಇತ್ಯಾದಿ ನೋವುಗಳ ಶಮನಕ್ಕೆ, ಥಂಡಿಯಾಗದಿರಲು ಬಹು ಮುಖ್ಯ ಮನೆ ಮದ್ದು.
ಸಾಮಗ್ರಿಗಳು:
ಬಿಳಿ ಕಾಳುಮೆಣಸು (ಬೋಳ ಕಾಳು) : 1 ಕಪ್
ತುಪ್ಪ : 1 ಚಮಚ
ವಿಧಾನ :
ಬಾಣಲೆಗೆ ತುಪ್ಪ ಹಾಕಿ ಕಾಳುಮೆಣಸು ಹಾಕಿ ಗಮ್ಮೆನ್ನುವಂತೆ ಹುರಿದು ತಣ್ಣಗಾದಮೇಲೆ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಗಾಳಿಯಾಡದಂತೆ ಡಬ್ಬಿಯಲ್ಲಿ ತುಂಬಿಡಿ.
ಬಾಣಂತಿಗೆ ಜಾಸ್ತಿ ಊಟವನ್ನು ಕೊಡುವುದಿಲ್ಲ. ಸಹಜ ಹೆರಿಗೆ ಪ್ರಕ್ರಿಯೆಯಲ್ಲಿ ಹೊಟ್ಟೆಯಲ್ಲಿನ ಜೀರ್ಣಾಂಗಗಳು ಸೋತಿರುವುದರಿಂದ ಹೆಚ್ಚು ಮತ್ತು ಗಟ್ಟಿ ಆಹಾರವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಕಡಿಮೆ ಇರುವುದು ಒಂದು ಕಾರಣವಾದರೆ ಗರ್ಭಿಣಿಯಾದಾಗ ಬಂದ ಮೈ ಇಳಿಸುವುದಕ್ಕೂ ಊಟಕ್ಕೂ ಇರುವ ಸಂಬಂಧ ಮತ್ತೊಂದು ಕಾರಣ! ಆದ್ದರಿಂದ ಬಿಸಿ ಬಿಸಿಯಾದ ಮೆತ್ತಗಿನ ಅನ್ನವನ್ನು ಒಂದು ಸೌಟು ಬಡಿಸಿದರೆ ಅವತ್ತಿನ ಊಟ ಆದಂತೆ! ಅದರಲ್ಲೂ ಹಳೆಯ ಅಕ್ಕಿಯ ಅನ್ನವನ್ನೇ ಮಾಡಬೇಕು. ಮಲೆನಾಡಿನ ಹಳ್ಳಿಗಳಲ್ಲಿ ಕೆಂಪಕ್ಕಿಯ ಅನ್ನವನ್ನು ಮಾಡುತ್ತಾರೆ. ಬಿಳಿ ಅಕ್ಕಿಗಿಂತ ಕೆಂಪಕ್ಕಿ ಅದರಲ್ಲೂ ಹೊಸ ಅಕ್ಕಿ ಜೀರ್ಣವಾಗುವುದು ತಡವಾಗುತ್ತದೆ ಎಂದು ಈ ಪದ್ಧತಿ. ಈಗ ಈ ಪುಡಿಗಳನ್ನು ಸೇವಿಸುವುದರ ಬಗ್ಗೆ ಹೇಳುತ್ತೇನೆ. ಬಿಸಿ ಬಿಸಿಯಾಗಿ ಬಡಿಸಿದ ಅರ್ಧದಷ್ಟು ಅನ್ನಕ್ಕೆ ಒಂದು ದೊಡ್ಡ ಚಮಚ ತುಪ್ಪ ಹಾಕಿಕೊಂಡು ಅದಕ್ಕೆ 1/2 ಚಮಚ ಜೀರಿಗೆ ಪುಡಿ, 1/4 ಚಮಚ ಕಾಳುಮೆಣಸಿನ ಪುಡಿ ಹಾಕಿ ಸ್ವಲ್ಪ ಉಪ್ಪು ಹಾಕಿ ಕಲೆಸಿ ಮೊದಲು ಉಣ್ಣಬೇಕು. ನಂತರ ಉಳಿದ ಅನ್ನಕ್ಕೆ ಗಟ್ಟಿ ಮೊಸರನ್ನು (ಮಧ್ಯಾಹ್ನವಾದರೆ ಮೊಸರು, ಸಂಜೆ ಆದಲ್ಲಿ ಹಾಲು) ಹಾಕಿ ಉಣ್ಣಬೇಕು. ಹಾಲು, ಮೊಸರು ಎರಡೂ ಸೇರಿಸಿ ತಿನ್ನುವುದು ಒಳ್ಳೆಯದಲ್ಲ. ಈಗಿನ ಕಾಲದ ಔಷಧಿಗಳ ಪವರ್ ಜಾಸ್ತಿ ಇರುವುದರಿಂದ ಹೊಟ್ಟೆ ಉಷ್ಣ ಜಾಸ್ತಿ ಆಗಿ ಮರುದಿನ ಮಲ ವಿಸರ್ಜನೆ ಕಷ್ಟವಾಗಬಾರದೆಂದು ಸ್ವಲ್ಪ ಉಪ್ಪು ಹಾಕಿ ಬೇಯಿಸಿದ ತರಕಾರಿಯನ್ನು ಊಟದ ಜೊತೆ ಕೊಡಬಹುದು. ಅದರಲ್ಲೂ ವಾಯು, ನಂಜು ಇರುವಂಥ ತರಕಾರಿಗಳು ವರ್ಜ್ಯ. ಬಿಸಿ ಬಿಸಿ ಹಾಲನ್ನು ಬಾಣಂತಿ ಜಾಸ್ತಿ ಕುಡಿಯಬೇಕು. ಮಗುವಿಗೆ ಚೆನ್ನಾಗಿ ಎದೆ ಹಾಲು ಆಗವಲ್ಲಿ ಇದು ಸಹಾಯಕ. ಮುಂದಿನ ಸಂಚಿಕೆಗಳಲ್ಲಿ ಇನ್ನಷ್ಟು ಆರೈಕೆ/ ಔಷಧಿಗಳನ್ನು ತಿಳಿಸುತ್ತೇನೆ.....
-ಕಾವ್ಯಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ