ಬುಧವಾರ, ಜುಲೈ 24, 2013

ಹಲಸಿನಕಾಯಿ ಖಾರದ ಪೋಳ್ಜಾ (ಪೋಳ್ದ್ಯ):



ಬೇಕಾಗುವ ಸಾಮಾಗ್ರಿಗಳು: ಹಲಸಿನಕಾಯಿ ತೊಳೆ - 2೦, ಹಲಸಿನ ಬೀಜ -6-7,  ಹಸಿಮೆಣಸು (ಸೂಜಿ ಮೆಣಸು) ಖಾರ ಜಾಸ್ತಿ ಇರಬೇಕು – 7-8, ಕಾಯಿ ತುರಿ 3 -4 ಚಮಚ, ಬೆಳ್ಳುಳ್ಳಿ 10-12 ಎಸಳು, ಸಾಸಿವೆ 1 ಚಮಚ ರುಬ್ಬಲು ½ ಚಮಚ ಒಗ್ಗರಣೆಗೆ , ನಿ೦ಬೆಕಾಯಿ 2 , ಜೀರಿಗೆ ½ ಚಮಚ, ಕರಿಬೇವು.



ಮಾಡುವ ವಿಧಾನ: ಮೊದಲು ಹಲಸಿನ ತೊಳೆಗಳನ್ನು ಚಿತ್ರದಲ್ಲಿ ತೊರಿಸಿದ೦ತೆ ಹೆಚ್ಚಿಕೊಳ್ಳಿ, ಬೀಜವನ್ನು ಒರಳಲ್ಲಿ (ಕಲ್ಲಲ್ಲಿ) ಜಜ್ಜಿ ಅದರ ಮೇಲಿನ ಸಿಪ್ಪೆಯನ್ನು ತೆಗೆಯಬೇಕು. ಹಲಸಿನ ತೊಳೆ & ಬೀಜವನ್ನು ಒ೦ದು ಪಾತ್ರೆಯಲ್ಲಿ ಹಾಕಿ ಸ್ವಲ್ಪ ನೀರು ಉಪ್ಪು ಹಾಕಿ ಚೆನ್ನಾಗಿ ಬೇಯಿಸಿ. ಸಾಸಿವೆ, ತೆ೦ಗಿನ ತುರಿ, ಹಸಿಮೆಣಸು, ಇವೆಲ್ಲವನ್ನು ನುಣ್ಣಗೆ ರುಬ್ಬಿ ಬೇಯಿಸಿದ ಹಲಸಿನಕಾಯಿಗೆ ಹಾಕಿ ಸ್ವಲ್ಪ ನೀರು (ಬೇಕಾದಲ್ಲಿ) & ಲಿ೦ಬು ರಸ ಹಾಕಿ ಚೆನ್ನಾಗಿ ಕುದಿಸಿ (ಇದು ತು೦ಬ ನೀರಾಗು ಇರಬಾರದು ಗೊಜ್ಜಿನ ಹದದಲ್ಲಿ ಇರಬೇಕು) ಆಮೇಲೆ ಒಗ್ಗರೆಣೆ ಪಾತ್ರೆಗೆ ಎಣ್ಣೆ ಹಾಕಿ ಅದು ಕಾದ ನ೦ತರ ಸಾಸಿವೆ, ಜೀರಿಗೆ, ಕರಿಬೇವು & ಜಜ್ಜಿದ ಬೆಳ್ಳುಳ್ಳಿಯ ಒಗ್ಗರಣೆ ಕೊಡಿ. ಈಗ ಬಿಸಿ ಬಿಸಿ ಖಾರದ ಪೋಳ್ಜಾ  ರೆಡಿ.ಇದು ಅನ್ನದ ಜೊತೆ ಚೆನ್ನಾಗಿರುತ್ತದೆ.         
                       (ಚಿತ್ರದಲ್ಲಿ ತೋರಿಸಿದಷ್ಟು ಗಟ್ಟಿ ಇರಬಾರದು ಸ್ವಲ್ಪ ನೀರು ಸೇರಿಸಬೇಕು.)

ಅಡುಗೆ ಮನೆಗೊ೦ದು ಟಿಪ್ಸ್:ಲಿ೦ಬು ರಸ ನೆಲದ ಮೇಲೆ ಬಿದ್ದು ನೆಲ ಬೆಳ್ಳಗಾದಲ್ಲಿ ಒ೦ದೆರಡು ಹನಿ ಕೊಬ್ಬರಿ ಎಣ್ಣೆ ಹಾಕಿ ತಿಕ್ಕಿ ಆಗ ಬಿಳಿಯ ಬಣ್ಣ ಹೋಗಿ ಅದರ ಮೊದಲಿನ  ಬಣ್ಣ ಬರುತ್ತದೆ.

ಸೋಮವಾರ, ಜುಲೈ 22, 2013

ಬೇಸನ್ ಲಾಡು :

ಸಾಮಗ್ರಿ: ಗೋಧಿ ಹಿಟ್ಟು 1.5 ಕಪ್, ಕಡ್ಲೆ ಹಿಟ್ಟು 1 ಕಪ್, ತುಪ್ಪ 1 ಕಪ್, ಸಕ್ಕರೆ 2 ಕಪ್, ಕೊಬ್ಬರಿ ತುರಿ 1/2 ಕಪ್, ಒಣ ದ್ರಾಕ್ಷಿ 10-12, ಗೋಡಂಬಿ 8-10 (ಚೂರು ಮಾಡಿಕೊಳ್ಳಿ).   



ವಿಧಾನ: ಸಕ್ಕರೆಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಕೊಬ್ಬರಿ ತುರಿಯನ್ನು ಬಾಣಲೆಗೆ ಹಾಕಿ ಸ್ವಲ್ಪವೇ ಹುರಿದುಕೊಂಡು ಮಿಕ್ಸಿಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ನಂತರ ದಪ್ಪ ತಳದ ಬಾಣಲೆಗೆ ಗೋಧಿ ಹಿಟ್ಟು, ಕಡ್ಲೆ ಹಿಟ್ಟು ಮತ್ತು ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಮಿಶ್ರಣ ಮುದ್ದೆ ಮುದ್ದೆಯಾಗುತ್ತದೆ, ದ್ರಾಕ್ಷಿ ಮತ್ತು ಗೋಡಂಬಿ ಚೂರುಗಳನ್ನು ಹಾಕಿ, ಬಿಡದೇ ಕೈ ಆಡಿಸುತ್ತಿರಿ. ತಳದಲ್ಲಿ ಹಿಟ್ಟು ಸ್ವಲ್ಪ ಸ್ವಲ್ಪ ಕಂದು ಬಣ್ಣವಾಗಿ ಹಿಡಿಯಲು ಪ್ರಾರಂಭಿಸುತ್ತದೆ ಮತ್ತು ಕಮ್ಮನೆ ಪರಿಮಳ ಬರಲು ಶುರುವಾದರೆ ಹಿಟ್ಟು ಹುರಿದಿದೆ ಎಂದರ್ಥ. (ಸುಮಾರು 10 - 15 ನಿಮಿಷ ಬೇಕಾಗಬಹುದು). ಈಗ ಉರಿ ಆರಿಸಿ ಹಿಟ್ಟನ್ನು ಕೆಳಗಿಳಿಸಿ. ಇದಕ್ಕೆ ಪುಡಿ ಮಾಡಿಕೊಂಡ ಸಕ್ಕರೆ ಮತ್ತು ಕೊಬ್ಬರಿ ಹಾಕಿ ಚೆನ್ನಾಗಿ ಕಲಸಿ. ಮಿಶ್ರಣ ಸ್ವಲ್ಪ ಬಿಸಿಯಿರುವಾಗಲೇ ಲಡ್ಡು ಗಾತ್ರಕ್ಕೆ ಮಿಶ್ರಣ ತೆಗೆದುಕೊಂಡು ಕೈ ಅಲ್ಲಿ ಒತ್ತಿ ಒತ್ತಿ ಉಂಡೆ ಕಟ್ಟಿ. ರುಚಿಯಾದ ಬೇಸನ್ ಲಾಡು ಸವಿಯಲು ಸಿದ್ಧ. (ಸುಮಾರು 15-20 ಲಡ್ಡು ಆಗುತ್ತದೆ).  
ಸೂಚನೆ : ಸಿಹಿ ಸ್ವಲ್ಪ ಜಾಸ್ತಿ ಬೇಕಾದವರು ಇನ್ನು ಅರ್ಧ ಕಪ್ ಸಕ್ಕರೆ ಜಾಸ್ತಿ ಹಾಕಿಕೊಳ್ಳಬಹುದು. 


ಸುಮ್ನೆ ಟ್ರೈ ಮಾಡಿ : ದಪ್ಪ ಅವಲಕ್ಕಿಯನ್ನು ಬಿಸಿ ಅವಲಕ್ಕಿ ಒಗ್ಗರಣೆ ಮಾಡುವಾಗ, ಈರುಳ್ಳಿ ಹಾಕಿದರೆ ರುಚಿ ಹೆಚ್ಚು ಎಂಬುದು ನಿಮಗೆ ಗೊತ್ತಲ್ವಾ... ಈರುಳ್ಳಿ ಫ್ರೈ ಆದಮೇಲೆ ಅದಕ್ಕೆ ಸ್ವಲ್ಪ ರಸಂ ಪೌಡರ್ ಹಾಕಿ ಆಮೇಲೆ ನೆನಸಿದ ಅವಲಕ್ಕಿ ಹಾಕಿ ಹುರಿದು ನೋಡಿ......!! ರುಚಿ ಬೇರೆ ಥರವೂ, ಚೆನ್ನಾಗಿಯೂ ಇರುತ್ತದೆ ....  

ಸೋಮವಾರ, ಜುಲೈ 15, 2013

ಬೆ೦ಡೆಕಾಯಿ ಪಲ್ಯ



ಬೇಕಾಗುವ ಸಾಮಾಗ್ರಿಗಳು:
ಬೆ೦ಡೆಕಾಯಿ :1/2 ಕೆ.ಜಿ, ಈರುಳ್ಳಿ :1 , ಬೆಳ್ಳುಳ್ಳಿ :2 ಎಸಳು, ಶು೦ಟಿ : 1 ಇ೦ಚು, ಲಿ೦ಬುರಸ 2 ಚಮಚ, ಅಚ್ಚಖಾರದ ಪುಡಿ - 1-2 ಚಮಚ,
ಒಗ್ಗರಣೆಗೆ: ಎಣ್ಣೆ, ಸಾಸಿವೆ, ಕರಿಬೇವು, ಚಿಟಿಕೆ ಅರಿಶಿನ ಪುಡಿ
ಉಪ್ಪು ರುಚಿಗೆ,

ಮಾಡುವ ವಿಧಾನ:
ಮೊದಲು ಬೆ೦ಡೆಕಾಯಿಯನ್ನು ಹೆಚ್ಚಿ ಪಕ್ಕಕ್ಕಿಡಿ.ಬಾಣಲೆಗೆ ಎಣ್ಣೆ, ಸಸಿವೆ, ಕರಿಬೇವು, ಚಿಟಿಕೆ ಅರಿಶಿಣ, ಶು೦ಟಿ ಬೆಳ್ಳುಳ್ಳಿ ಜಜ್ಜಿದ್ದು
ಮತ್ತು ಹೆಚ್ಚಿದ ಈರುಳ್ಳಿ ಹಾಕಿ, ನ೦ತರ ಅದಕ್ಕೆ ಹೆಚ್ಚಿದ ಬೆ೦ಡೆಕಾಯಿ ರುಚಿಗೆ ಉಪ್ಪು, ಲಿ೦ಬುರಸ ಹಾಕಿ ಬೇಯಿಸಿ (ನೀರು ಹಾಕಬಾರದು) ಬೆ೦ದಮೇಲೆ ಖಾರಕ್ಕೆ ಅಚ್ಚ ಖಾರದ ಪುಡಿ ಹಾಕಿ ಕಲೆಸಿದರೆ ರುಚಿಯಾದ ಬೆ೦ಡೆಕಾಯಿ ಪಲ್ಯ ಸಿದ್ದ. ಇದು ಚಪಾತಿ ಜೊತೆ ಮತ್ತು ಅನ್ನಕ್ಕೊ ಚೆನ್ನಾಗಿರುತ್ತದೆ.



ಮಂಗಳವಾರ, ಜುಲೈ 2, 2013

ಬೇರು ಹಲಸಿನ (ದೀವಿ ಹಲಸು) ಪೋಡಿ:

ಸಾಮಗ್ರಿಗಳು: ಚೆನ್ನಾಗಿ ಬಲಿತ ಬೇರು ಹಲಸು 1, ಗೋಧಿ ರವೆ / ಉಪ್ಪಿಟ್ಟು ರವೆ (ಮೀಡಿಯಂ) 2 ಕಪ್,  ಅಚ್ಚ ಮೆಣಸಿನ ಪುಡಿ ಖಾರಕ್ಕೆ, ಉಪ್ಪು ರುಚಿಗೆ, ಜೀರಿಗೆ ಪುಡಿ 1/4 ಚಮಚ, ಎಣ್ಣೆ ಬೇಯಿಸಲು. 



ವಿಧಾನ: ಬೇರು ಹಲಸಿನ ಸಿಪ್ಪೆ ತೆಗೆದು ಸೀಳಿಕೊಂಡು ಮಧ್ಯದ ಗಟ್ಟಿ ಭಾಗವನ್ನು (ಮೂಗು) ತೆಗೆದುಕೊಳ್ಳಿ. ನಂತರ ಇದನ್ನು ತೆಳ್ಳಗೆ, ಉದ್ದುದ್ದ ಸ್ಲೈಸ್ ಮಾಡಿಕೊಂಡು ನೀರಿನಲ್ಲಿ ಹಾಕಿಡಿ. ಒಂದು ತಟ್ಟೆಯಲ್ಲಿ ರವೆ, ಮೆಣಸಿನ ಪುಡಿ, ಜೀರಾ ಪುಡಿ ಹಾಕಿ, ಪುಡಿ ಉಪ್ಪನ್ನು ಮತ್ತೊಮ್ಮೆ ಚೆನ್ನಾಗಿ ಕೈ ಅಲ್ಲಿ ನುರಿದು ಹಾಕಿ ಸರಿಯಾಗಿ ಕಲಸಿ. ಹಲಸಿನ ಕಾಯಿ ಸ್ಲೈಸ್ ಅನ್ನು ನೀರಿನಿಂದ ತೆಗೆದಿಟ್ಟುಕೊಳ್ಳಿ. (ರವೆಗೆ ಹಾಕುವ ಮುನ್ನ ನೀರು ಸ್ವಲ್ಪ ಆರಲಿ ಇಲ್ಲವಾದಲ್ಲಿ ರವೆ ಮುದ್ದೆಯಾಗುತ್ತದೆ). ಕಾವಲಿಯನ್ನು (ತವಾ) ಒಲೆಯ ಮೇಲಿಡಿ. ಬೇರು ಹಲಸಿನ ಸ್ಲೈಸ್ ಅನ್ನು ರವೆಯ ಮಿಶ್ರಣದಲ್ಲಿ ಅದ್ದಿ ಸರಿಯಾಗಿ ರವೆ ಹಿಡಿದುಕೊಂಡ ಮೇಲೆ ತವಾ ಮೇಲೆ ಹಾಕಿ ಅದರ ಮೇಲೆ ಸ್ವಲ್ಪ ಎಣ್ಣೆ ಹಾಕಿ ಸ್ವಲ್ಪ ನೀರು ಸಿಂಪಡಿಸಿ ಮುಚ್ಚಳ ಮುಚ್ಚಿ ಅರ್ಧ ನಿಮಿಷದಷ್ಟು ಕಾಲ ಹಾಗೆಯೇ ಬಿಡಿ (ಮೀಡಿಯಂ ಫ್ಲೇಮ್ ಇರಲಿ).  ನಂತರ ಅದನ್ನು ತಿರುವಿ ಹಾಕಿ ಮತ್ತೆ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ. ಎರಡೂ ಕಡೆ ಚೆನ್ನಾಗಿ ರೋಸ್ಟ್ ಮಾಡಿದರೆ ಬಿಸಿ ಬಿಸಿ ಪೋಡಿ ಸವಿಯಲು ಸಿದ್ಧ. 



ಸಲಹೆ : ಇದೇ ರೀತಿ ಬಾಳೆಕಾಯಿ ಪೋಡಿ ಕೂಡ ಮಾಡಬಹುದು. ಬಾಳೆಕಾಯಿ ಸಿಪ್ಪೆ ತೆಗೆದು ಅರ್ಧ ಮಾಡಿಕೊಂಡು ಅದರಲ್ಲಿ ಸ್ಲೈಸ್ ಮಾಡಿ ಇದೇ ವಿಧಾನದಲ್ಲಿ ಟ್ರೈ ಮಾಡಿ... 


ಸುಮ್ಮನೆ ಒಂದು ಕಿವಿಮಾತು : ಹೊಸದಾಗಿ ಮನೆಗೆ ಹಚ್ಚಿದ ಪೇಯಿಂಟ್ ವಾಸನೆ ಬೇಗನೆ ಹೋಗುವಂತೆ ಮಾಡಲು ಬಟ್ಟಲಿನಲ್ಲಿ ಸ್ವಲ್ಪ ಉಪ್ಪು ಹಾಕಿ ಪ್ರತೀ ಮೂಲೆಯಲ್ಲೂ ಇಡಿ. 

ಕಾವ್ಯಾ :)