ಬ್ರಹ್ಮಚಾರಿ ಹುಡುಗರು ಮಾಡುವಂಥ simple & easy ಅಡುಗೆಗಳನ್ನು ಹಾಕಿ ಎಂದು ಕೆಲವರು ಕೇಳಿದ್ದರಿಂದ ಅಂತಹ ರೆಸಿಪಿಗಳನ್ನು ಹಾಕಲು ಪ್ರಯತ್ನಿಸುತ್ತಿದ್ದೇವೆ. ಈ ಚಿತ್ರಾನ್ನವನ್ನು ಕಡಿಮೆ ಸಮಯ ಮತ್ತು ಕಡಿಮೆ ಸಾಮಗ್ರಿಗಳನ್ನು ಉಪಯೋಗಿಸಿ ಧಿಡೀರನೆ ಮಾಡಿ ಬಿಸಿ ಬಿಸಿ ಸವಿಯಬಹುದು. ಅಥವಾ ಲಂಚ್ ಬಾಕ್ಸ್ ಗೆ ಕೂಡ ಮಾಡಬಹುದು.
ಸಾಮಗ್ರಿಗಳು : ಅಕ್ಕಿ 1 ಕಪ್, ಬಿಡಿಸಿದ ಹಸಿ ಬಟಾಣಿ 1.5 ಕಪ್, ತೆಂಗಿನ ತುರಿ 1/2 ಕಪ್, ಹಸಿಮೆಣಸಿನ ಕಾಯಿ 3-4, ಎಣ್ಣೆ 5-6 ಚಮಚ, ಉದ್ದಿನ ಬೇಳೆ 1 ಚಮಚ, ಸಾಸಿವೆ 1/4 ಚಮಚ, ಕರಿಬೇವು 1 ಎಸಳು, ಅರಿಶಿನ ಪುಡಿ 1/4 ಚಮಚ, ಲಿಂಬೆಹಣ್ಣು 1, ಸಕ್ಕರೆ 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ವಿಧಾನ : ಅಕ್ಕಿಯನ್ನು ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ. ಬಿಡಿಸಿದ ಹಸಿ ಬಟಾಣಿಗೆ ನೀರು ಹಾಕಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಂಡು ನೀರು ಬಸಿದುಕೊಳ್ಳಿ. (ಕುಕ್ಕರ್ ನಲ್ಲಿ ಬೇಯಿಸುವುದು ಬೇಡ, ಇದು 5-8 ನಿಮಿಷಕ್ಕೆ ಬೇಯುತ್ತದೆ). ಹಸಿ ಮೆಣಸಿನಕಾಯಿಯನ್ನು ಉದ್ದಕ್ಕೆ ಸೀಳಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ, ಉದ್ದಿನ ಬೇಳೆ ಹಾಕಿ ಹೊಂಬಣ್ಣಕ್ಕೆ ಬಂದ ಮೇಲೆ ಸಾಸಿವೆ ಹಾಕಿ ಸಿಡಿಸಿ, ಹಸಿಮೆಣಸಿನ ಕಾಯಿ, ಕರಿಬೇವು ಅರಿಶಿನ ಪುಡಿ ಹಾಕಿ ಕಲಸಿ. ನಂತರ ಬೇಯಿಸಿಟ್ಟ ಹಸಿ ಬಟಾಣಿ, ತೆಂಗಿನ ತುರಿ, ಉಪ್ಪು ಲಿಂಬೆ ರಸ, ಸಕ್ಕರೆ ಹಾಕಿ ಒಂದೆರಡು ನಿಮಿಷ ಫ್ರೈ ಮಾಡಿ ಉರಿ ಆರಿಸಿ.
ಈ ಮಿಶ್ರಣಕ್ಕೆ ಅನ್ನ ಹಾಕಿ ಕಲಸಿದರೆ ಬಿಸಿ ಬಿಸಿ ಬಟಾಣಿ ಚಿತ್ರಾನ್ನ ಸವಿಯಲು ಸಿದ್ಧ.