ಬುಧವಾರ, ಮೇ 28, 2014

ಹಸಿ ಬಟಾಣಿ ಚಿತ್ರಾನ್ನ :

ಬ್ರಹ್ಮಚಾರಿ ಹುಡುಗರು ಮಾಡುವಂಥ simple & easy ಅಡುಗೆಗಳನ್ನು ಹಾಕಿ ಎಂದು ಕೆಲವರು ಕೇಳಿದ್ದರಿಂದ ಅಂತಹ ರೆಸಿಪಿಗಳನ್ನು ಹಾಕಲು ಪ್ರಯತ್ನಿಸುತ್ತಿದ್ದೇವೆ. ಈ ಚಿತ್ರಾನ್ನವನ್ನು ಕಡಿಮೆ ಸಮಯ ಮತ್ತು ಕಡಿಮೆ ಸಾಮಗ್ರಿಗಳನ್ನು ಉಪಯೋಗಿಸಿ ಧಿಡೀರನೆ ಮಾಡಿ ಬಿಸಿ ಬಿಸಿ ಸವಿಯಬಹುದು. ಅಥವಾ ಲಂಚ್ ಬಾಕ್ಸ್ ಗೆ ಕೂಡ ಮಾಡಬಹುದು. 

ಸಾಮಗ್ರಿಗಳು : ಅಕ್ಕಿ 1 ಕಪ್, ಬಿಡಿಸಿದ ಹಸಿ ಬಟಾಣಿ 1.5 ಕಪ್, ತೆಂಗಿನ ತುರಿ 1/2 ಕಪ್, ಹಸಿಮೆಣಸಿನ ಕಾಯಿ 3-4, ಎಣ್ಣೆ 5-6 ಚಮಚ, ಉದ್ದಿನ ಬೇಳೆ 1 ಚಮಚ, ಸಾಸಿವೆ 1/4 ಚಮಚ, ಕರಿಬೇವು 1 ಎಸಳು, ಅರಿಶಿನ ಪುಡಿ 1/4 ಚಮಚ, ಲಿಂಬೆಹಣ್ಣು 1, ಸಕ್ಕರೆ 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು. 

ವಿಧಾನ : ಅಕ್ಕಿಯನ್ನು ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ. ಬಿಡಿಸಿದ ಹಸಿ ಬಟಾಣಿಗೆ ನೀರು ಹಾಕಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಂಡು ನೀರು ಬಸಿದುಕೊಳ್ಳಿ. (ಕುಕ್ಕರ್ ನಲ್ಲಿ ಬೇಯಿಸುವುದು ಬೇಡ, ಇದು 5-8 ನಿಮಿಷಕ್ಕೆ ಬೇಯುತ್ತದೆ). ಹಸಿ ಮೆಣಸಿನಕಾಯಿಯನ್ನು ಉದ್ದಕ್ಕೆ ಸೀಳಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ, ಉದ್ದಿನ ಬೇಳೆ ಹಾಕಿ ಹೊಂಬಣ್ಣಕ್ಕೆ  ಬಂದ ಮೇಲೆ ಸಾಸಿವೆ ಹಾಕಿ ಸಿಡಿಸಿ, ಹಸಿಮೆಣಸಿನ ಕಾಯಿ, ಕರಿಬೇವು ಅರಿಶಿನ ಪುಡಿ ಹಾಕಿ ಕಲಸಿ. ನಂತರ ಬೇಯಿಸಿಟ್ಟ ಹಸಿ ಬಟಾಣಿ, ತೆಂಗಿನ ತುರಿ, ಉಪ್ಪು ಲಿಂಬೆ ರಸ, ಸಕ್ಕರೆ ಹಾಕಿ ಒಂದೆರಡು ನಿಮಿಷ ಫ್ರೈ ಮಾಡಿ ಉರಿ ಆರಿಸಿ.




ಈ ಮಿಶ್ರಣಕ್ಕೆ ಅನ್ನ ಹಾಕಿ ಕಲಸಿದರೆ ಬಿಸಿ ಬಿಸಿ ಬಟಾಣಿ ಚಿತ್ರಾನ್ನ ಸವಿಯಲು ಸಿದ್ಧ.   


7 ಕಾಮೆಂಟ್‌ಗಳು:

  1. ಒಂದು ಚಿಕ್ಕ addition ಜೊತೆ ಓದಿಕೊಂಡೆ ಮೇಡಂ,
    ಹೆಂಡತಿ ತವರಿಗೆ ಹೋದಾಗ ವಿವಾಹಿತರೂ...

    ರೆಸಿಪಿ ಸುಲಭವಾಗಿದೆ ಅನಿಸಿತು, ಈ ವಾರಾಂತ್ಯದಲ್ಲಿ ನನ್ನ ಪತ್ನಿಯ ಮೇಲೆ ಪ್ರಯೋಗಿಸಿ ನೋಡುತ್ತೇನೆ. :)

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಹಾ ಹಾ ಹಾ .... ಧನ್ಯವಾದಗಳು ಸರ್... :) ಓಹೋ ಖಂಡಿತ ಪ್ರಯೋಗಿಸಿ ಮಡದಿ ಫುಲ್ ಖುಷ್ ಆಗುತ್ತಾರೆ :)

      ಅಳಿಸಿ
  2. "ವಿಧಾನ : ಅಕ್ಕಿಯನ್ನು ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ"...??? ಹಾಗಂದ್ರೆ ಒಂದೊಂದೇ ಅಕ್ಕಿನಾ ಪ್ರತ್ಯೇಕ ಪ್ರತ್ಯೇಕ ಬೇಯಸಿ ಒಂದ್ ಕಡೆ ತೆಗದಿಟ್ಗ ಬೇಕ ಕಾವ್ಯಕ್ಕ? ನೀವೇಳಿದಂತೆ ಕೇಳ್ತ ಇದ್ರೆ ಮೊದ್ಲೇ ಚಿತ್ರಾನ್ನ ಆಗಿರೋ ಬ್ರಹ್ಮಚಾರಿ ಜೀವ್ನಾ ಎಕ್ಕುಟ್ಟೋಗಿ ಗ್ರಾಚಾರಿ ಆಗ್ ಬುಡ್ತಾರೆ.

    ಪ್ರತ್ಯುತ್ತರಅಳಿಸಿ
  3. ..."ಬಾಣಲಿಗೆ ಎಣ್ಣೆ ಹಾಕಿ "...ಶಿವನೇ ಶಂಭುಲಿಂಗಾ...ಕಾಲ ಕೆಟ್ಟು ಕೆರ ಹಿಡಿತು...ಬಾಣಲೇನೂ ಎಣ್ಣೆ ಹೊಡಿಯಕ್ ಶುರು ಮಾಡಿದೆ...ಛಿ...ಛಿ...ಛೀ....ಕಾಪಾಡು ಮೂರ್ಕಣ್ಮಾಲಿಂಗಾ.

    ಪ್ರತ್ಯುತ್ತರಅಳಿಸಿ
  4. ಶಾಸನ ವಿಧಿಸಿದ ಎಚ್ಚರಿಕೆ: ಇದೇ ರೀತಿ ಮುನ್ನೂರೈವತ್ತೈದು ದಿನ ಅಥವಾ ಅಧಿಕಮಾಸವಿದ್ದ ವರ್ಷದಲ್ಲಿ ಮುನ್ನೂರೈವತ್ತಾರು ದಿನ ಎಡಬಿಡದೇ ಈ ಒಣ ಚಿತ್ರಾನ್ನ ತಿಂದರೆ ವರ್ಷಾಂತದೊಳಗೆ ಚಿತ್ರಗುಪ್ತನ ಸನ್ನಿಧಿಗೆ ಏಕಮುಖ ಪ್ರಯಾಣದ ಕೂಪನ್ ಉಚಿತ.

    ಪ್ರತ್ಯುತ್ತರಅಳಿಸಿ
  5. ಏಕಮುಖದ ಪ್ರಯಾಣಕ್ಕೆ ಡಿಸ್ಕೊಂಟ್ ಕೂಪನ್ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ "ಸಂಸ್ಕಾರ" ಟ್ರಾವೆಲ್ಸನ್ನು ಸಂಪರ್ಕಿಸಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. >ಉದುರುದುರು ಅನ್ನ > ಪೆಟ್ಟೆ ಅನ್ನ ಮಾಡಿಟ್ಟಿಕಡಿ ಹೇಳಿ :D
      >ಎಣ್ಣೆ ವಿಷ್ಯ ಬಿಡ ಮಾರಾಯನೇ... ಎಣ್ಣೆ ದೇಶ ಬಿಟ್ಟಿಕ್ ಹೋಜೆ ಈಗ ....!
      >ಬ್ರಹ್ಮಚಾರಿಗಳಿಗೆಲ್ಲ ಟಿಕೆಟ್ ಹಂಚಿಕಡ... ಕಡಿಗೆ ದೆವ್ವ ಆಗಿ ಬಂದು ಕಾಡ್ತಾ ನೋಡು ನಿನ್ನಾ ...! :P
      > between thanks for visiting our ಪಾಕಶಾಲೆ :)

      ಅಳಿಸಿ