ಗುರುವಾರ, ನವೆಂಬರ್ 27, 2014

ಕಿತ್ತಳೆ ಸಿಪ್ಪೆ ಗೊಜ್ಜು:



ಸಾಮಾಗ್ರಿಗಳು: ಕಿತ್ತಳೆ ಸಿಪ್ಪೆ 1 ಹಣ್ಣಿನದು, ತೆ೦ಗಿನ ಕಾಯಿ ತುರಿ ½ ಕಪ್, ಒಣ ಮೆಣಸು 4, ಎಳ್ಳು ½ ಚಮಚ, ಉದ್ದಿನ ಬೇಳೆ ½ ಚಮಚ, ಧನಿಯಾ ½ ಚಮಚ, ಎಣ್ಣೆ 1 ಚಮಚ, ಒ೦ದು ಚಿಕ್ಕ ಲಿ೦ಬೆಹಣ್ಣಿನ ಗಾತ್ರದಷ್ಟು  ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು. 
 ವಿಧಾನ: ಕಿತ್ತಳೆ ಸಿಪ್ಪೆಯನ್ನು 3-4 ದಿನ ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಳ್ಳಿ. ಈ ಒಣಗಿದ ಕಿತ್ತಳೆ ಸಿಪ್ಪೆಯನ್ನು ಕುದಿಯುವ ನೀರಿನಲ್ಲಿ ಹಾಕಿ 10 ನಿಮಿಷ ಬೇಯಿಸಿ (ಇದರಿ೦ದ ಅದರ ಸೊನೆ ಹೋಗುತ್ತದೆ ಮತ್ತು ಗೊಜ್ಜು ಕಹಿ ಆಗುವುದಿಲ್ಲ) ಒಣ ಮೆಣಸು, ಎಳ್ಳು,ಉದ್ದಿನ ಬೇಳೆ,  ಧನಿಯಾ,  ಸ್ವಲ್ಪ ಎಣ್ಣೆ ಹಾಕಿ ಹುರಿದುಕೊಳ್ಳಬೇಕು. ನ೦ತರ ಬೇಯಿಸಿದ ಕಿತ್ತಳೆ ಸಿಪ್ಪೆಯನ್ನು ಹಿ೦ಡಿ ನೀರು ತೆಗೆದು ತೆ೦ಗಿನ ತುರಿ, ಹುರಿದ ಒಣ ಮೆಣಸು, ಎಳ್ಳು, ಉದ್ದಿನ ಬೇಳೆ, ಧನಿಯಾ ಹಾಕಿ ನುಣ್ಣಗೆ ರುಬ್ಬಿ. ಅಮೇಲೆ ರುಬ್ಬಿದ ಮಿಶ್ರಣಕ್ಕೆ ಉಪ್ಪು, ಬೆಲ್ಲ (ನಿಮ್ಮ ರುಚಿಗೆ ತಕ್ಕ೦ತೆ) ಗೊಜ್ಜಿನ ಹದಕ್ಕೆ ನೀರು ಹಾಕಿ 10 ನಿಮಿಷ ಕುದಿಸಿ. ಇದು ಅನ್ನಕ್ಕೆ ಹಾಕಿಕೊ೦ಡು ತಿನ್ನಲು ಚೆನ್ನಾಗಿರುತ್ತದೆ.
 ಸೌ೦ದರ್ಯ ಸಲಹೆ: :ಕಿತ್ತಳೆ ಸೊಪ್ಪೆಯನ್ನು ಒಣಗಿಸಿ ಪೌಡರ್ ಮಾಡಿ ಇಟ್ಟುಕೊ೦ಡು, ಅದಕ್ಕೆ ಸ್ವಲ್ಪ ಹಾಲು ಅಥವಾ ನೀರು ಸೇರಿಸಿ ಫೆಸ್ ಪ್ಯಾಕ್ ಹಾಕಿದರೆ ಮುಖದಲ್ಲಿ ಕಾ೦ತಿ ಬರುತ್ತದೆ.

ಗುರುವಾರ, ನವೆಂಬರ್ 20, 2014

ಬಾಳೆಹಣ್ಣಿನ ಬನ್ಸ್ (ಮಂಗಳೂರು ಬನ್ಸ್), ಭಾಜಿ ಮತ್ತು ಚಟ್ನಿ :

ಸಾಮಗ್ರಿಗಳು :
ಚೆನ್ನಾಗಿ ಕಳಿತ ಪಚಬಾಳೆಹಣ್ಣು - ೨
ಮೈದಾ ಹಿಟ್ಟು - ೧/೪ ಕೆ.ಜಿ
ಮೊಸರು - ೨ ಟೇಬಲ್ ಚಮಚ
ಎಣ್ಣೆ - 4-5  ಟೇಬಲ್ ಚಮಚ (ಹಿಟ್ಟು ಕಲೆಸಲು) 
ಸಕ್ಕರೆ - 6-7 ಟೇಬಲ್ ಚಮಚ
ಜೀರಿಗೆ - 1 ಟೀ ಚಮಚ  
ಉಪ್ಪು - ರುಚಿಗೆ 
ಕರಿಯಲು ಎಣ್ಣೆ 
(ಇಷ್ಟು ಸಾಮಗ್ರಿಗೆ 11-12 ಬನ್ಸ್ ಆಗುತ್ತದೆ) 

ವಿಧಾನ: ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಒಂದು ಅಗಲವಾದ ಪಾತ್ರೆಗೆ ಹಾಕಿ  ಸಕ್ಕರೆ ಹಾಕಿ ಕೈ ಇಂದ ನುಣ್ಣಗೆ ಕಿವುಚಿಕೊಳ್ಳಿ ಅಥವಾ ಒಮ್ಮೆ ಮಿಕ್ಸಿಗೆ ಹಾಕಿ ತೆಗೆದು ಪಾತ್ರೆಗೆ ಹಾಕಿ. ಅದಕ್ಕೆ ಉಪ್ಪು, 2-3 ಚಮಚ ಎಣ್ಣೆ, ಜೀರಿಗೆ, ಮೊಸರು ಹಾಕಿ ಒಮ್ಮೆ ಮಿಕ್ಸ್ ಮಾಡಿಕೊಂಡು ಸ್ವಲ್ಪ ಸ್ವಲ್ಪ ಮೈದಾ ಹಿಟ್ಟು ಹಾಕುತ್ತ ಕಲಸಿ. ಬೇಕಿದ್ದರೆ 1-2 ಚಮಚ ಎಣ್ಣೆ ಹಾಕಿ ಕಲಸಿ.  ಚಪಾತಿ ಹಿಟ್ಟಿನಕಿಂತ ಸ್ವಲ್ಪ ಮೆತ್ತಗಿರಲಿ. ಇದಕ್ಕೆ ಒಂದು ಬೌಲ್ ಮುಚ್ಚಿ ೬-೮ ಘಂಟೆ ಹಾಗೆಯೇ ಇಡಬೇಕು. (ಬೆಳಿಗ್ಗೆ ತಿಂಡಿಗೆ ಮಾಡುವಿರಾದರೆ ರಾತ್ರಿಯೇ ಹಿಟ್ಟು ಕಲಸಬೇಕು. ಅಥವಾ ಸಂಜೆ Snacks ಗೆ ಮಾಡುವುದಾದಲ್ಲಿ ಬೆಳಿಗ್ಗೆ ಹಿಟ್ಟು ಕಲಸಿಡಬೇಕು). 


ನಂತರ ಬೆಳಿಗ್ಗೆ ಹಿಟ್ಟನ್ನು ಇನ್ನೊಮ್ಮೆ ಚೆನ್ನಾಗಿ ನಾದಿಕೊಂಡು ಚಪಾತಿಗಿಂತ ಸ್ವಲ್ಪ ದೊಡ್ಡ ಉಂಡೆಗಳನ್ನು ಮಾಡಿ ಲಟ್ಟಣಿಗೆಗೆ ಸ್ವಲ್ಪ ಎಣ್ಣೆ ಸವರಿಕೊಂಡು ಸ್ವಲ್ಪ ದಪ್ಪಕ್ಕೆ ಲಟ್ಟಿಸಿ (ಚಿತ್ರದಲ್ಲಿ ತೋರಿಸಿದಂತೆ).
ನಂತರ ಇದನ್ನು ಕಾದ ಎಣ್ಣೆಯಲ್ಲಿ ಬಿಟ್ಟು ಮಧ್ಯಮ ಉರಿಯಲ್ಲಿ ಎರಡೂ ಕಡೆ ಕರಿದರೆ ಸಿಹಿ ಸವಿ ಬನ್ಸ್ ಸವಿಯಲು ಸಿದ್ಧ. 

ಸೂಚನೆ: ಮೈದಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಮೈದಾ ಬದಲು ಗೋಧಿ ಹಿಟ್ಟು ಬಳಸಿ ಕೂಡ ಬನ್ಸ್ ಮಾಡಬಹುದು. ಎಲ್ಲೋ ತುಂಬಾ ಅಪರೂಪಕ್ಕೆ ಮಾಡುವಾಗ ಮೈದಾ ಉಪಯೋಗಿಸಿ.

ಬನ್ಸ್ ಜೊತೆ ಭಾಜಿ (curry) ಮತ್ತು ಚಟ್ನಿ ಒಳ್ಳೆಯ ಕಾಂಬಿನೇಶನ್. ಈಗ ಭಾಜಿ ಮಾಡುವುದನ್ನು ನೋಡೋಣ..... 

ಆಲೂ ಭಾಜಿಗೆ ಬೇಕಾಗುವ ಸಾಮಗ್ರಿಗಳು : 
ಆಲೂಗಡ್ಡೆ - ೨ (ಮಧ್ಯಮ ಗಾತ್ರದ್ದು)
ಈರುಳ್ಳಿ - ೨ (ಮಧ್ಯಮ ಗಾತ್ರದ್ದು)
ತೆಂಗಿನ ತುರಿ - ೧ ೧/೪ ಕಪ್ 
ಒಣ ಮೆಣಸಿನ ಕಾಯಿ - ೫-೬ 
ಕೊತ್ತಂಬರಿ - ೧/೨ ಚಮಚ,
ಜೀರಿಗೆ - ೧/೨ ಚಮಚ,
ಎಳ್ಳು - ೧/೪ ಚಮಚ,
ಚಕ್ಕೆ - ೧ ಇಂಚು,
ಲವಂಗ - ೨-೩,
ಚಕ್ರ ಮೊಗ್ಗು - ಸಣ್ಣ ಚೂರು, (optional)
ಬೆಳ್ಳುಳ್ಳಿ ಎಸಳು - ೩-೪, ಕರಿಬೇವು ಸ್ವಲ್ಪ, 
ಎಣ್ಣೆ - ೧ ಚಮಚ,
ಉಪ್ಪು - ರುಚಿಗೆ 

ವಿಧಾನ : ಆಲೂಗಡ್ಡೆ ಮತ್ತು ಈರುಳ್ಳಿ ಸಿಪ್ಪೆ  ಸ್ವಲ್ಪ ಸಣ್ಣಗೆ ಹೆಚ್ಚಿಕೊಳ್ಳಿ. ಆಲೂಗಡ್ಡೆಗೆ ನೀರು ಹಾಕಿ ಬೇಯಿಸಿ. ಅದು 80% ಬೆಂದ ಮೇಲೆ ಸ್ವಲ್ಪ ಉಪ್ಪು ಮತ್ತು ಹೆಚ್ಚಿದ ಈರುಳ್ಳಿ ಹಾಕಿ ಬೇಯಿಸಿ. ಒಂದು ಸಣ್ಣ ಬಾಣಲೆಗೆ ಎಣ್ಣೆ ಹಾಕಿ ಒಣ ಮೆಣಸಿನ ಕಾಯಿ, ಕೊತ್ತಂಬರಿ, ಜೀರಿಗೆ, ಚಕ್ಕೆ, ಲವಂಗ, ಚಕ್ರ ಮೊಗ್ಗು, ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿದು ಕೊನೆಯಲ್ಲಿ ಎಳ್ಳು ಹಾಕಿ ಹುರಿಯಿರಿ. ಇದನ್ನು ತೆಂಗಿನ ತುರಿ ಜೊತೆ ಸೇರಿಸಿ ಸ್ವಲ್ಪವೇ ತರಿ ತರಿಯಾಗಿ ರುಬ್ಬಿಕೊಂಡು ಬೆಂದ ಆಲೂ ಮಿಶ್ರಣಕ್ಕೆ ಹಾಕಿ ನೀರು (ಸಂಬಾರ್ ಕಿಂತ ಸ್ವಲ್ಪ ದಪ್ಪಗಿರಲಿ), ಉಪ್ಪು, ಕರಿಬೇವು ಹಾಕಿ ಕುದಿಸಿ. 


ಚಟ್ನಿ ಮಾಡಲು ಸಾಮಗ್ರಿಗಳು:
ತೆಂಗಿನ ತುರಿ - ೧ ಕಪ್,
ಹುರಿಗಡಲೆ - ೨ ಟೇಬಲ್ ಚಮಚ,
ಹಸಿ ಮೆಣಸಿನಕಾಯಿ - ೨-೩ 
ಶುಂಠಿ - ೧/೪ ಇಂಚು,
ಕೊತ್ತಂಬರಿ ಸೊಪ್ಪು - ೧ ಟೇಬಲ್ ಚಮಚ,
ಬೆಳ್ಳುಳ್ಳಿ ಎಸಳು - ೧-೨ (ಬೇಕಿದ್ದರೆ ಮಾತ್ರ) ಮತ್ತು ಉಪ್ಪು ರುಚಿಗೆ

 ವಿಧಾನ : ಸ್ವಲ್ಪ ಎಣ್ಣೆಯಲ್ಲಿ ಹಸಿ ಮೆಣಸಿನಕಾಯಿ ಹುರಿದುಕೊಂಡು ಉಳಿದೆಲ್ಲಾ ಸಾಮಗ್ರಿಗಳ ಜೊತೆ ಸೇರಿಸಿ ರುಬ್ಬಿದರೆ ಚಟ್ನಿ ಸಿದ್ಧ.   

ಗುರುವಾರ, ನವೆಂಬರ್ 13, 2014

ಹೀರೇಕಾಯಿ ತ೦ಬುಳಿ :



ಸಾಮಗ್ರಿಗಳು : ಸಿಪ್ಪೆ ತೆಗೆದು ಹೆಚ್ಚಿದ ಹೀರೇಕಾಯಿ ½ ಕಪ್, ಎಳ್ಳು -1  ಚಮಚ , ಖಾರ ಕಡಿಮೆ ಇರುವ ಹಸಿಮೆಣಸು 1, ತೆ೦ಗಿನ ತುರಿ ¼ ಕಪ್, ಉಪ್ಪು ರುಚಿಗೆ ತಕ್ಕಷ್ಟು, ಮಜ್ಜಿಗೆ ½ ಲೋಟ ಅಥವಾ ಹುಣಸೆ ರಸ -1  ಚಮಚ, ಎಣ್ಣೆ - 1  ಚಮಚ, ಸಾಸಿವೆ ¼ ಚಮಚ, ಕೆ೦ಪುಮೆಣಸು 1.
 ವಿಧಾನ : ಹೆಚ್ಚಿಕೊ೦ಡ ಹೀರೇಕಾಯಿ, ಎಳ್ಳು & ಹಸಿ ಮೆಣಸನ್ನು ½ ಚಮಚ ಎಣ್ಣೆ ಹಾಕಿ 2-3 ನಿಮಿಷ ಹುರಿದುಕೊಳ್ಳಿ. ಬಿಸಿ ಆರಿದಮೇಲೆ ತೆ೦ಗಿನತುರಿ ಜೊತೆ ಸೇರಿಸಿ ನುಣ್ಣಗೆ ರುಬ್ಬಿ ಪಾತ್ರೆಗೆ ಹಾಕಿ ಅದಕ್ಕೆ ೨ ಲೋಟ ನೀರು ಸೇರಿಸಿ. (ಮಜ್ಜಿಗೆ ಇಷ್ಟ ಪಡದವರು ರುಬ್ಬುವಾಗ ಹುಣಸೇರಸ ಸೇರಿಸಿ) ಅದಕ್ಕೆ ಮಜ್ಜಿಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಸಾಸಿವೆ & ಕೆ೦ಪು ಮೆಣಸಿನ ಒಗ್ಗರಣೆ ಕೊಡಿ. ಇದು ಅನ್ನದ ಜೊತೆ ಹಾಗೂ ಹಾಗೆ ಕುಡಿಯಲು ಚೆನ್ನಾಗಿರುತ್ತದೆ.
 

ಬುಧವಾರ, ನವೆಂಬರ್ 5, 2014

ಎಲೆಕೋಸು - ಹೆಸರು ಕಾಳು ಪಲ್ಯ :

ಸಾಮಗ್ರಿಗಳು :
ಸಣ್ಣಗೆ ಹೆಚ್ಚಿದ ಎಲೆಕೋಸು (Cabbage) - 2 ಕಪ್,
ಮೊಳಕೆ ಹೆಸರು ಕಾಳು - 1 ಕಪ್,
ತೆಂಗಿನ ತುರಿ - 4-5 ಟೇಬಲ್ ಚಮಚ,
ಹಸಿಮೆಣಸಿನ ಕಾಯಿ - 4-5, (ನಿಮ್ಮ ಖಾರಕ್ಕೆ ಅನುಗುಣವಾಗಿ)
ಕರಿಬೇವು - 10-15 ಎಲೆಗಳು,
ಎಣ್ಣೆ - 2-3 ಟೇಬಲ್ ಚಮಚ,
ಸಾಸಿವೆ - 1/4 ಟೀ ಚಮಚ,
ಅರಿಶಿನ ಪುಡಿ - 1/4 ಟೀ ಚಮಚ,
ಸಕ್ಕರೆ - 1 ಟೇಬಲ್ ಚಮಚ,
ನಿಂಬೆ ರಸ - 2 ಟೇಬಲ್ ಚಮಚ,
ಉಪ್ಪು ರುಚಿಗೆ ತಕ್ಕಷ್ಟು

ವಿಧಾನ  : 
ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಹಾಕಿ ಸಿಡಿಸಿ. ಇದಕ್ಕೆ ಉದ್ದುದ್ದ ಸೀಳಿಕೊಂಡ ಹಸಿ ಮೆಣಸಿನ ಕಾಯಿ, ಕರಿಬೇವು, ಅರಿಶಿನ ಹಾಕಿ ಒಮ್ಮೆ ಕಲಕಿ, ಮೊಳಕೆ ಕಟ್ಟಿದ ಹೆಸರು ಕಾಳು, ಹೆಚ್ಚಿದ ಎಲೆಕೋಸು, 1/2 ಕಪ್ ನಷ್ಟು ನೀರು ಹಾಕಿ ಒಮ್ಮೆ ಕಲಕಿ. ನಂತರ ಉಪ್ಪು, ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಪ್ಲೇಟ್ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ. ಇದು 80% ಬೆಂದಾಗ ತೆಂಗಿನ ತುರಿ ಮತ್ತು ನಿಂಬೆ ರಸ ಹಾಕಿ ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿ. ಹದವಾದ ಖಾರ, ಸಿಹಿ, ಹುಳಿ ಇರುವ ಈ ಪಲ್ಯ ಚಪಾತಿ ಜೊತೆ ಒಳ್ಳೆಯ ಕಾಂಬಿನೇಶನ್.... ಊಟ / ಅನ್ನದ ಜೊತೆಯೂ ಸವಿಯಬಹುದು.

 
   
ಸಲಹೆಗಳು : 
1) ಹೆಸರು ಕಾಳಿನ ಬದಲು ನೆನೆಸಿದ ಕಾಬೂಲ್ ಕಡಲೆ, ಅಲಸಂದೆ, ಹಸಿ ಬಟಾಣಿ ಕೂಡ ಹಾಕಬಹುದು. ಆದರೆ ನೆನೆಸಿದ ಕಡಲೆಯನ್ನು ನೀರು ಸ್ವಲ್ಪ ಉಪ್ಪು ಹಾಕಿ ಕುಕ್ಕರ್ ನಲ್ಲಿ 2 ವಿಸಲ್ ಕೂಗಿಸಿಕೊಂಡು ಕ್ಯಾಬೇಜ್ ಜೊತೆ ಮತ್ತೆ ಬೇಯಿಸಿ.
2) ಹೆಸರು ಕಾಳನ್ನು ಒಂದು ದಿನ ಮುಂಚೆ ರಾತ್ರಿ ನೆನೆ ಹಾಕಿ ಬೆಳಿಗ್ಗೆ ನೀರು ಬಸಿದು ಒಂದು ಪಾತ್ರೆಗೆ ಹಾಕಿ ತಟ್ಟೆ ಮುಚ್ಚಿ ಸ್ಟವ್ ಬಿಸಿ ತಾಗುವಲ್ಲಿಟ್ಟರೆ ಸಂಜೆಯಾಗುವಷ್ಟರಲ್ಲಿ ಮೊಳಕೆ ಬಂದಿರುತ್ತದೆ. ಅಥವಾ ನೆಂದ ಕಾಳನ್ನು ಶುಭ್ರವಾದ ತೆಳ್ಳಗಿನ ಕಾಟನ್ ಬಟ್ಟೆಯಲ್ಲಿ ಗಂಟು ಕಟ್ಟಿ ಇಟ್ಟೂ ಮೊಳಕೆ ತರಿಸಬಹುದು. 

ಅಡುಗೆ ಮನೆಗೊಂದು ಸಲಹೆ : ಸ್ಟವ್ ಮೇಲ್ಭಾಗ ಕಪ್ಪಾಗಿದ್ದರೆ ಮೇಲ್ಭಾಗದ ಮೇಲೆ ಬೇಕಿಂಗ್ ಸೋಡಾ ಉದುರಿಸಿ ಅದರ ಮೇಲೆ ಬಿಸಿ ನೀರನ್ನು ಸ್ಪ್ರೇ ಮಾಡಿ ಅರ್ಧ ಘಂಟೆ ಬಿಟ್ಟು ಬಟ್ಟೆಯಿಂದ ಉಜ್ಜಿ ಶುಚಿಗೊಳಿಸಿದರೆ ಕಲೆಗಳು ಮಾಯವಾಗುತ್ತವೆ.