ಗುರುವಾರ, ನವೆಂಬರ್ 20, 2014

ಬಾಳೆಹಣ್ಣಿನ ಬನ್ಸ್ (ಮಂಗಳೂರು ಬನ್ಸ್), ಭಾಜಿ ಮತ್ತು ಚಟ್ನಿ :

ಸಾಮಗ್ರಿಗಳು :
ಚೆನ್ನಾಗಿ ಕಳಿತ ಪಚಬಾಳೆಹಣ್ಣು - ೨
ಮೈದಾ ಹಿಟ್ಟು - ೧/೪ ಕೆ.ಜಿ
ಮೊಸರು - ೨ ಟೇಬಲ್ ಚಮಚ
ಎಣ್ಣೆ - 4-5  ಟೇಬಲ್ ಚಮಚ (ಹಿಟ್ಟು ಕಲೆಸಲು) 
ಸಕ್ಕರೆ - 6-7 ಟೇಬಲ್ ಚಮಚ
ಜೀರಿಗೆ - 1 ಟೀ ಚಮಚ  
ಉಪ್ಪು - ರುಚಿಗೆ 
ಕರಿಯಲು ಎಣ್ಣೆ 
(ಇಷ್ಟು ಸಾಮಗ್ರಿಗೆ 11-12 ಬನ್ಸ್ ಆಗುತ್ತದೆ) 

ವಿಧಾನ: ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಒಂದು ಅಗಲವಾದ ಪಾತ್ರೆಗೆ ಹಾಕಿ  ಸಕ್ಕರೆ ಹಾಕಿ ಕೈ ಇಂದ ನುಣ್ಣಗೆ ಕಿವುಚಿಕೊಳ್ಳಿ ಅಥವಾ ಒಮ್ಮೆ ಮಿಕ್ಸಿಗೆ ಹಾಕಿ ತೆಗೆದು ಪಾತ್ರೆಗೆ ಹಾಕಿ. ಅದಕ್ಕೆ ಉಪ್ಪು, 2-3 ಚಮಚ ಎಣ್ಣೆ, ಜೀರಿಗೆ, ಮೊಸರು ಹಾಕಿ ಒಮ್ಮೆ ಮಿಕ್ಸ್ ಮಾಡಿಕೊಂಡು ಸ್ವಲ್ಪ ಸ್ವಲ್ಪ ಮೈದಾ ಹಿಟ್ಟು ಹಾಕುತ್ತ ಕಲಸಿ. ಬೇಕಿದ್ದರೆ 1-2 ಚಮಚ ಎಣ್ಣೆ ಹಾಕಿ ಕಲಸಿ.  ಚಪಾತಿ ಹಿಟ್ಟಿನಕಿಂತ ಸ್ವಲ್ಪ ಮೆತ್ತಗಿರಲಿ. ಇದಕ್ಕೆ ಒಂದು ಬೌಲ್ ಮುಚ್ಚಿ ೬-೮ ಘಂಟೆ ಹಾಗೆಯೇ ಇಡಬೇಕು. (ಬೆಳಿಗ್ಗೆ ತಿಂಡಿಗೆ ಮಾಡುವಿರಾದರೆ ರಾತ್ರಿಯೇ ಹಿಟ್ಟು ಕಲಸಬೇಕು. ಅಥವಾ ಸಂಜೆ Snacks ಗೆ ಮಾಡುವುದಾದಲ್ಲಿ ಬೆಳಿಗ್ಗೆ ಹಿಟ್ಟು ಕಲಸಿಡಬೇಕು). 


ನಂತರ ಬೆಳಿಗ್ಗೆ ಹಿಟ್ಟನ್ನು ಇನ್ನೊಮ್ಮೆ ಚೆನ್ನಾಗಿ ನಾದಿಕೊಂಡು ಚಪಾತಿಗಿಂತ ಸ್ವಲ್ಪ ದೊಡ್ಡ ಉಂಡೆಗಳನ್ನು ಮಾಡಿ ಲಟ್ಟಣಿಗೆಗೆ ಸ್ವಲ್ಪ ಎಣ್ಣೆ ಸವರಿಕೊಂಡು ಸ್ವಲ್ಪ ದಪ್ಪಕ್ಕೆ ಲಟ್ಟಿಸಿ (ಚಿತ್ರದಲ್ಲಿ ತೋರಿಸಿದಂತೆ).
ನಂತರ ಇದನ್ನು ಕಾದ ಎಣ್ಣೆಯಲ್ಲಿ ಬಿಟ್ಟು ಮಧ್ಯಮ ಉರಿಯಲ್ಲಿ ಎರಡೂ ಕಡೆ ಕರಿದರೆ ಸಿಹಿ ಸವಿ ಬನ್ಸ್ ಸವಿಯಲು ಸಿದ್ಧ. 

ಸೂಚನೆ: ಮೈದಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಮೈದಾ ಬದಲು ಗೋಧಿ ಹಿಟ್ಟು ಬಳಸಿ ಕೂಡ ಬನ್ಸ್ ಮಾಡಬಹುದು. ಎಲ್ಲೋ ತುಂಬಾ ಅಪರೂಪಕ್ಕೆ ಮಾಡುವಾಗ ಮೈದಾ ಉಪಯೋಗಿಸಿ.

ಬನ್ಸ್ ಜೊತೆ ಭಾಜಿ (curry) ಮತ್ತು ಚಟ್ನಿ ಒಳ್ಳೆಯ ಕಾಂಬಿನೇಶನ್. ಈಗ ಭಾಜಿ ಮಾಡುವುದನ್ನು ನೋಡೋಣ..... 

ಆಲೂ ಭಾಜಿಗೆ ಬೇಕಾಗುವ ಸಾಮಗ್ರಿಗಳು : 
ಆಲೂಗಡ್ಡೆ - ೨ (ಮಧ್ಯಮ ಗಾತ್ರದ್ದು)
ಈರುಳ್ಳಿ - ೨ (ಮಧ್ಯಮ ಗಾತ್ರದ್ದು)
ತೆಂಗಿನ ತುರಿ - ೧ ೧/೪ ಕಪ್ 
ಒಣ ಮೆಣಸಿನ ಕಾಯಿ - ೫-೬ 
ಕೊತ್ತಂಬರಿ - ೧/೨ ಚಮಚ,
ಜೀರಿಗೆ - ೧/೨ ಚಮಚ,
ಎಳ್ಳು - ೧/೪ ಚಮಚ,
ಚಕ್ಕೆ - ೧ ಇಂಚು,
ಲವಂಗ - ೨-೩,
ಚಕ್ರ ಮೊಗ್ಗು - ಸಣ್ಣ ಚೂರು, (optional)
ಬೆಳ್ಳುಳ್ಳಿ ಎಸಳು - ೩-೪, ಕರಿಬೇವು ಸ್ವಲ್ಪ, 
ಎಣ್ಣೆ - ೧ ಚಮಚ,
ಉಪ್ಪು - ರುಚಿಗೆ 

ವಿಧಾನ : ಆಲೂಗಡ್ಡೆ ಮತ್ತು ಈರುಳ್ಳಿ ಸಿಪ್ಪೆ  ಸ್ವಲ್ಪ ಸಣ್ಣಗೆ ಹೆಚ್ಚಿಕೊಳ್ಳಿ. ಆಲೂಗಡ್ಡೆಗೆ ನೀರು ಹಾಕಿ ಬೇಯಿಸಿ. ಅದು 80% ಬೆಂದ ಮೇಲೆ ಸ್ವಲ್ಪ ಉಪ್ಪು ಮತ್ತು ಹೆಚ್ಚಿದ ಈರುಳ್ಳಿ ಹಾಕಿ ಬೇಯಿಸಿ. ಒಂದು ಸಣ್ಣ ಬಾಣಲೆಗೆ ಎಣ್ಣೆ ಹಾಕಿ ಒಣ ಮೆಣಸಿನ ಕಾಯಿ, ಕೊತ್ತಂಬರಿ, ಜೀರಿಗೆ, ಚಕ್ಕೆ, ಲವಂಗ, ಚಕ್ರ ಮೊಗ್ಗು, ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿದು ಕೊನೆಯಲ್ಲಿ ಎಳ್ಳು ಹಾಕಿ ಹುರಿಯಿರಿ. ಇದನ್ನು ತೆಂಗಿನ ತುರಿ ಜೊತೆ ಸೇರಿಸಿ ಸ್ವಲ್ಪವೇ ತರಿ ತರಿಯಾಗಿ ರುಬ್ಬಿಕೊಂಡು ಬೆಂದ ಆಲೂ ಮಿಶ್ರಣಕ್ಕೆ ಹಾಕಿ ನೀರು (ಸಂಬಾರ್ ಕಿಂತ ಸ್ವಲ್ಪ ದಪ್ಪಗಿರಲಿ), ಉಪ್ಪು, ಕರಿಬೇವು ಹಾಕಿ ಕುದಿಸಿ. 


ಚಟ್ನಿ ಮಾಡಲು ಸಾಮಗ್ರಿಗಳು:
ತೆಂಗಿನ ತುರಿ - ೧ ಕಪ್,
ಹುರಿಗಡಲೆ - ೨ ಟೇಬಲ್ ಚಮಚ,
ಹಸಿ ಮೆಣಸಿನಕಾಯಿ - ೨-೩ 
ಶುಂಠಿ - ೧/೪ ಇಂಚು,
ಕೊತ್ತಂಬರಿ ಸೊಪ್ಪು - ೧ ಟೇಬಲ್ ಚಮಚ,
ಬೆಳ್ಳುಳ್ಳಿ ಎಸಳು - ೧-೨ (ಬೇಕಿದ್ದರೆ ಮಾತ್ರ) ಮತ್ತು ಉಪ್ಪು ರುಚಿಗೆ

 ವಿಧಾನ : ಸ್ವಲ್ಪ ಎಣ್ಣೆಯಲ್ಲಿ ಹಸಿ ಮೆಣಸಿನಕಾಯಿ ಹುರಿದುಕೊಂಡು ಉಳಿದೆಲ್ಲಾ ಸಾಮಗ್ರಿಗಳ ಜೊತೆ ಸೇರಿಸಿ ರುಬ್ಬಿದರೆ ಚಟ್ನಿ ಸಿದ್ಧ.   

4 ಕಾಮೆಂಟ್‌ಗಳು: