ಗುರುವಾರ, ಜನವರಿ 29, 2015

ಮಿಶ್ರ ತರಕಾರಿ ಸೂಪ್ (Vegetable Soup):

ಸಾಮಗ್ರಿಗಳು :
ಸಣ್ಣಗೆ ಹೆಚ್ಚಿದ ಮಿಶ್ರ ತರಕಾರಿಗಳು : 1.5 ಕಪ್ (ಕ್ಯಾಬೇಜ್, ಬೀನ್ಸ್, ಕ್ಯಾರಟ್ ಇತ್ಯಾದಿ) 
ಕಾರ್ನ್ ಫ್ಲೋರ್ : 1.5 ಟೇಬಲ್ ಚಮಚ 
ಹಾಲು : 1 ಕಪ್ (optional) 
ಕರಿ ಮೆಣಸಿನ ಪುಡಿ (ಪೆಪ್ಪರ್ ಪೌಡರ್): 1/2 - 1 ಟೀ ಚಮಚ 
ಉಪ್ಪು : ರುಚಿಗೆ 
ಲಿಂಬು ರಸ : 1 ಟೇಬಲ್ ಚಮಚ (optional) 
ಬೆಣ್ಣೆ : 1 ಟೇಬಲ್ ಚಮಚ

ವಿಧಾನ : 
ದಪ್ಪ ತಳದ ಪಾತ್ರೆಯನ್ನು ಒಲೆಯ ಮೇಲಿಟ್ಟು ಬೆಣ್ಣೆ ಹಾಕಿ, ಕರಗಿದ ಮೇಲೆ ಹೆಚ್ಚಿಟ್ಟುಕೊಂಡ ಮಿಶ್ರ ತರಕಾರಿ ಹಾಕಿ 1-2 ನಿಮಿಷ ಫ್ರೈ ಮಾಡಿ. ನಂತರ ತರಕಾರಿ ಮುಳುಗುವಷ್ಟು ನೀರು, ಸ್ವಲ್ಪ ಉಪ್ಪು ಹಾಕಿ 5-10 ನಿಮಿಷ ಬೇಯಿಸಿ. ಕಾರ್ನ್ ಫ್ಲೋರ್ ಅನ್ನು ಒಂದು ಕಪ್ ನೀರು ಅಥವಾ ಹಾಲಿನಲ್ಲಿ ಗಂಟಾಗದಂತೆ ಕಲಕಿಕೊಳ್ಳಿ. ಇದನ್ನು ಬೆಂದ ತರಕಾರಿಗೆ ಹಾಕಿ, 1.5 - 2 ಕಪ್ ನೀರು ಹಾಕಿ ಸಣ್ಣ ಉರಿಯಲ್ಲಿ ಕಲಕುತ್ತಿರಿ. ಸ್ವಲ್ಪ ದಪ್ಪವಾಗುತ್ತಾ ಬಂದಂತೆ ಉಪ್ಪು, ಪೆಪ್ಪರ್ ಪುಡಿ, ಲಿಂಬುರಸ ಹಾಕಿ ಕಲಕಿ ಉರಿ ಆರಿಸಿ. 

ಬಿಸಿ ಬಿಸಿ ಸೂಪ್ ಅನ್ನು ಸರ್ವ್ ಮಾಡಿ. 

ಸಲಹೆಗಳು : 
1) ತರಕಾರಿಗಳ ಜೊತೆ ಈರುಳ್ಳಿ ಕೂಡ ಬಳಸಬಹುದು. ಬೆಣ್ಣೆ ಹಾಕಿದ ನಂತರ ಮೊದಲು ಈರುಳ್ಳಿಯನ್ನು ಹಾಕಿ ಅರ್ಧ ನಿಮಿಷ ಫ್ರೈ ಮಾಡಿ ನಂತರ ಉಳಿದ ತರಕಾರಿ ಹಾಕಿ ಫ್ರೈ ಮಾಡಿ.  

ಗುರುವಾರ, ಜನವರಿ 22, 2015

ವಾ೦ಗಿಭಾತ್:



ಸಾಮಗ್ರಿಗಳು: ಅಕ್ಕಿ 1 ಲೋಟ, ಚಿಕ್ಕ ಬದನೆಕಾಯಿ 4, ಈರುಳ್ಳಿ 1, ಕರಿಬೇವು 8-10 ಎಲೆಗಳು, ಎಣ್ಣೆ 2 ಚಮಚ, ಸಾಸಿವೆ ½ ಚಮಚ, ತುಪ್ಪ 2 ಚಮಚ, ಅರಿಶಿನ ಪುಡಿ ಚಿಟಿಕೆ, ಲಿ೦ಬುರಸ ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ಮಸಾಲಾ ಪೌಡರ್ ಮಾಡಲು : ಕಡಲೆಬೇಳೆ 4 ಚಮಚ , ಉದ್ದಿನಬೇಳೆ  2 ಚಮಚ, ಜೀರಿಗೆ 1 ಚಮಚ, ಎಳ್ಳು 1 ಚಮಚ, ಧನಿಯಾ 1 ಚಮಚ, ಚಕ್ಕೆ 1, ಲವ೦ಗ 3, ಒಣಮೆಣಸು 5, ಇ೦ಗು ಚಿಟಿಕೆ.

ವಿಧಾನ: ಉದುರುದುರಾಗಿ ಅನ್ನವನ್ನು ಮಾಡಿಕೊಳ್ಳಬೇಕು. ಬದನೇಕಾಯಿ & ಈರುಳ್ಳಿಯನ್ನು ತೆಳ್ಳಗೆ ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ. ಮಸಾಲ ಪೌಡರ್ ಗೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಹುರಿದು ಪುಡಿ ಮಾಡಿಕೊಳ್ಳಿ. ಒ೦ದು ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾದ ನ೦ತರ ಅದಕ್ಕೆ ಸಾಸಿವೆ, ಕರಿಬೇವು, ಅರಿಶಿನ ಪುಡಿ ಹಾಕಿ ಹೆಚ್ಚಿಟ್ಟ ಬದನೆಕಾಯಿಯನ್ನು ಹಾಕಿ ಉಪ್ಪು ಹಾಕಿರಿ. ಬದನೆಕಾಯಿ ಬೇಯಲು ನೀರು ಹಾಕಬೇಕಿಲ್ಲ ಎಣ್ಣೆಯಲ್ಲೆ ಬೇಯಿಸಬೇಕು. ಪದೆ ಪದೆ ಕೈಯಾಡಿಸುತ್ತಿರಿ ಇಲ್ಲವಾದಲ್ಲಿ ಅದು ಅಡಿ ಹಿಡಿಯುತ್ತದೆ. ಬದನೇಕಾಯಿ ಬೆ೦ದಮೇಲೆ ಹೆಚ್ಚಿದ ಈರುಳ್ಳಿ ಹಾಕಬೇಕು. ಇವರಡು ಬೆ೦ದ ನ೦ತರ ತುಪ್ಪ & ಮಸಾಲೆ ಪೌಡರ್ ಹಾಕಿ ಉರಿ ಆರಿಸಿ. ಇದಕ್ಕೆ ಅನ್ನ ಸೇರಿಸಿ ಸರಿಯಾಗಿ ಮಿಶ್ರಣಮಾಡಿ. ಲಿ೦ಬುರಸ ಹಾಕಬೇಕು. ರುಚಿ ನೋಡಿಕೊ೦ಡು ಬೇಕಾದಲ್ಲಿ ಉಪ್ಪು ಸೇರಿಸಿ.

ಬುಧವಾರ, ಜನವರಿ 14, 2015

ಕಾಯಿ ಹೋಳಿಗೆ :

ಹೂರಣಕ್ಕೆ ಸಾಮಗ್ರಿಗಳು:
ತೆಂಗಿನ ಕಾಯಿ - 2 (medium or big) 
ಬೆಲ್ಲ - 1.5 ಕಪ್
ಏಲಕ್ಕಿ ಪುಡಿ - 1/4 ಟೀ ಚಮಚ 
ಉಪ್ಪು - 1/2 ಟೀ ಚಮಚ 

ಕಣಕಕ್ಕೆ ಸಾಮಗ್ರಿಗಳು :
ಚಿರೋಟಿ ರವೆ - 1/2 ಕೆಜಿ 
ಅರಿಶಿನ ಪುಡಿ - 1/2 ಟೀ ಚಮಚ 
ಎಣ್ಣೆ - 6-8 ಚಮಚ 
ಉಪ್ಪು - 1/4 ಟೀ ಚಮಚ
ನೀರು - 1- 1 1/4 ಕಪ್  
(ಇಷ್ಟು ಅಳತೆಗೆ 18-20 ಹೋಳಿಗೆ ಆಗಬಹುದು). 

ವಿಧಾನ : 
ಒಂದು ಅಗಲವಾದ ಪಾತ್ರೆಗೆ ಚಿರೋಟಿ ರವೆ, ಉಪ್ಪು, ಅರಿಶಿನ ಪುಡಿ, 3-4 ಚಮಚ ಎಣ್ಣೆ ಹಾಕಿ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತ  ಚಪಾತಿ ಹಿಟ್ಟಿನಕಿಂತ ಸ್ವಲ್ಪ ಮೆತ್ತಗೆ ಕಲಸಿ ಚೆನ್ನಾಗಿ ನಾದಿಕೊಳ್ಳಿ. ನಂತರ ಅದು ಮುಳುಗುವಷ್ಟು ನೀರು ಹಾಕಿ ಅರ್ಧ ಮುಕ್ಕಾಲು ಗಂಟೆ ಹಾಗೆಯೇ ನೀರಿನಲ್ಲಿ ನೆನೆಸಿ.

ಅಷ್ಟರಲ್ಲಿ ಹೂರಣ ತಯಾರಿಸಬಹುದು. ತೆಂಗಿನ ಕಾಯಿ ತುರಿದು ಸ್ವಲ್ಪವೇ ನೀರು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. (ನೀರು ಹಾಕದೆ ರುಬ್ಬಿದರೂ ಒಳ್ಳೆಯದು). ನಂತರ ದಪ್ಪ ತಳದ ಪಾತ್ರೆ ಅಥವಾ ದೊಡ್ಡ ಕುಕ್ಕರ್ ಗೆ (cooker pan) ರುಬ್ಬಿದ ಮಿಶ್ರಣ, ಬೆಲ್ಲ, ಏಲಕ್ಕಿ ಪುಡಿ, ಉಪ್ಪು ಹಾಕಿ ಮಧ್ಯಮ ಅಥವಾ ಸ್ವಲ್ಪ ದೊಡ್ಡ ಉರಿಯಲ್ಲಿ ಕಲಕುತ್ತಿರಿ. ಇದು ಸ್ವಲ್ಪ ಗಟ್ಟಿಯಾಗುತ್ತಾ ಬಂದಂತೆ ಉರಿ ಸಣ್ಣ ಮಾಡಿ ಕೈ ಬಿಡದೇ ಕಲಕುತ್ತಿರಿ. ಸುಮಾರು ಅರ್ಧ ಗಂಟೆಯಲ್ಲಿ ಇದು ಕೈಗೆ ಅಂಟದೇ ಉಂಡೆ ಮಾಡಲು ಬರುವಷ್ಟು ಗಟ್ಟಿ ಆಗುತ್ತದೆ. ಆಗ ಉರಿ ಆರಿಸಿ ಕೆಳಗಿಳಿಸಿ. 

ಇದು ತಣ್ಣಗಾಗುವಷ್ಟರಲ್ಲಿ ಕಣಕವನ್ನು ನೀರಿನಿಂದ ತೆಗೆದು (ಪೂರ್ತಿಯಾಗಿ ನೀರು ಬಸಿಯಿರಿ) 1-2 ಚಮಚ ಎಣ್ಣೆ ಹಾಕಿ ಮತ್ತೊಮ್ಮೆ ಚೆನ್ನಾಗಿ ನಾದಿಕೊಳ್ಳಿ. ತಣ್ಣಗಾದ ಹೂರಣದಿಂದ ಚಪಾತಿ ಉಂಡೆ ಗಾತ್ರದ ಉಂಡೆ ಮಾಡಿಟ್ಟುಕೊಳ್ಳಿ. 

ಕೈಗೆ ಎಣ್ಣೆ ಸವರಿಕೊಂಡು ಲಿಂಬು ಗಾತ್ರದ  ಕಣಕದ ಉಂಡೆ ತೆಗೆದುಕೊಂಡು ಕೈ ಅಲ್ಲಿ ಹರವಿಕೊಂಡು ಹೂರಣದ ಉಂಡೆ ಇಟ್ಟು ಸರಿಯಾಗಿ ಮುಚ್ಚಿ ತುಂಬಿಕೊಳ್ಳಿ. ಖಾಲಿಯಾದ ಎಣ್ಣೆ ಕವರ್ ಕತ್ತರಿಸಿಕೊಂಡು ಅದಕ್ಕೆ ಮತ್ತು ಲಟ್ಟಣಿಗೆಗೆ ಸರಿಯಾಗಿ ಎಣ್ಣೆ ಸವರಿ, ತುಂಬಿಕೊಂಡ ಹೂರಣದ ಉಂಡೆ ಇಟ್ಟು ತೆಳ್ಳಗೆ ಲಟ್ಟಿಸಿಕೊಳ್ಳಿ.

 ನಂತರ ಅದನ್ನು ಬಿಡಿಸಿ ಕೈಗೆ ಹಾಕಿಕೊಂಡು, ಎಣ್ಣೆ ಸವರಿದ ಕಾದ ತವಾ  ಮೇಲೆ ಹಾಕಿ ಮಧ್ಯಮ ಉರಿಯಲ್ಲಿ ಎರಡೂ ಕಡೆ ಬೇಯಿಸಿ ತೆಗೆಯಿರಿ. ಈ ಕಾಯಿ ಹೋಳಿಗೆಗೆ ತುಪ್ಪ ಅಥವಾ ಬಿಸಿ ಹಾಲು ಹಾಕಿಕೊಂಡು ಸವಿಯಿರಿ. 


ಗುರುವಾರ, ಜನವರಿ 8, 2015

ಮೆಣಸಿನಕಾಯಿ ಬಜ್ಜಿ (ಮಿರ್ಚಿ ಬಜೆ) :



ಸಾಮಗ್ರಿಗಳು: ಬಜ್ಜಿ ಮಾಡುವ ಮೆಣಸಿನಕಾಯಿ 7-8, ಕಡಲೆಹಿಟ್ಟು 1 ಕಪ್, ಅಕ್ಕಿ ಹಿಟ್ಟು 2 ಚಮಚ, ಜೀರಿಗೆ 1/2 ಚಮಚ, ಓಮು 1/4ಚಮಚ, ಇ೦ಗು ಚಿಟಿಕೆ, ಅಡುಗೆ ಸೋಡ ಚಿಟಿಕೆ, ಉಪ್ಪು ರುಚಿಗೆ ತಕ್ಕಷ್ಟು, ಈರುಳ್ಳಿ 1, ಕ್ಯಾರೆಟ್ 1, ಕೊತ್ತ೦ಬರಿ ಸೊಪ್ಪು.
  

ವಿಧಾನ : ಜೀರಿಗೆ, ಓಮು & ಇ೦ಗು ಇವನ್ನು ತರಿ ತರಿಯಾಗಿ ಅರೆದುಕೊಳ್ಳಿ. ಕಡಲೆಹಿಟ್ಟು, ಅಕ್ಕಿ ಹಿಟ್ಟು, ತರಿ ತರಿಯಾಗಿ ಪುಡಿ ಮಾಡಿಕೊ೦ಡ  ಜೀರಿಗೆ, ಓಮು, ಇ೦ಗು, ಅಡುಗೆ ಸೋಡ, ಉಪ್ಪು ಎಲ್ಲವನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಗ೦ಟಾಗದ೦ತೆ (ಬಜ್ಜಿ ಹಿಟ್ಟಿನ ಹದಕ್ಕೆ) ಕಲೆಸಿಕೊಳ್ಳಿ. 10 ನಿಮಿಷ ಹಿಟ್ಟನ್ನು ಹಾಗೆ ಬಿಡಿ. ಇದರಿ೦ದ ಹಿಟ್ಟು ಹದ ಬರುತ್ತದೆ. ಎಣ್ಣೆಯನ್ನು ಬಾಣಲೆಗೆ ಹಾಕಿ ಕಾಯಿಸಿ. ಎಣ್ಣೆ ಕಾದ ಮೇಲೆ ಮೆಣಸನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಗೆ ಹಾಕಿ, ಚೆನ್ನಾಗಿ ಬೇಯಿಸಿ. ಹೊ೦ಬಣ್ಣ ಬ೦ದ ಮೇಲೆ ತೆಗೆಯಿರಿ. ಈರುಳ್ಳಿ & ಕೊತ್ತ೦ಬರಿ ಸೊಪ್ಪನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಕ್ಯಾರೆಟ್ ತುರಿದುಕೊಳ್ಳಿ. ಇವೆಲ್ಲವನ್ನು ಮಿಕ್ಸ್ ಮಾಡಿ ಸ್ವಲ್ಪ ಉಪ್ಪು ಹಾಕಿಟ್ಟುಕೊಳ್ಳಿ (ಬಜ್ಜಿ ಹಿಟ್ಟಿಗೆ ಉಪ್ಪು ಹಾಕಿರುವುದರಿ೦ದ ನೋಡಿಕೊ೦ಡು ಉಪ್ಪು ಹಾಕಿ) ಕರಿದ ಮೆಣಸಿನಕಾಯಿ ಬಜ್ಜಿಯನ್ನು ಮಧ್ಯದಲ್ಲಿ ಸೀಳಿ ಅದರ ಮೇಲೆ ಈರುಳ್ಳಿ ಕ್ಯಾರೆಟ್ ಮಿಶ್ರಣವನ್ನು ಉದುರಿಸಿ. ಚುಮು ಚುಮು ಚಳಿಗೆ ಬಿಸಿ ಬಿಸಿ ಬಜ್ಜಿಯನ್ನು ಸರ್ವ್ ಮಾಡಿ.

ಗುರುವಾರ, ಜನವರಿ 1, 2015

ಫ್ರೂಟ್ ಸಲಾಡ್ (Fruits Salad) :

             ನಮ್ಮ ಪಾಕಶಾಲೆ ಓದುಗರಿಗೆಲ್ಲಾ ಹೊಸ ವರ್ಷದ ಶುಭಾಶಯಗಳು. ಈ ವರ್ಷ ನಿಮ್ಮೆಲ್ಲರ ಬಾಳು ವರ್ಣಮಯವಾಗಿರಲೆಂದು ನಾವು ಗೆಳತಿಯರೆಲ್ಲಾ ಹಾರೈಸುತ್ತೇವೆ. ವರ್ಣಮಯ ಹೊಸ ವರ್ಷಕ್ಕಾಗಿ ವರ್ಣರಂಜಿತ ಫ್ರೂಟ್ ಸಲಾಡ್ ಮಾಡುವ ವಿಧಾನವನ್ನು ನಿಮಗೆ ನಾನಿಲ್ಲಿ ತಿಳಿಸಿಕೊಡುತ್ತೇನೆ. ಮಳೆ ಅಥವಾ ಚಳಿಯಲ್ಲಿ ಐಸ್ ಕ್ರೀಂ ತಿನ್ನುವ craze ಕೆಲವರಿಗಿದೆ, ಅದರಲ್ಲಿ ನಾನೂ ಒಬ್ಬಳು...!! ಈ ಚಳಿಯಲ್ಲಿ ಐಸ್ ಕ್ರೀಂ ಬದಲು ತಣ್ಣನೆಯ Fruits Salad ಅನ್ನು ಮನೆಯಲ್ಲೇ ಮಾಡಿ ಸವಿಯಬಹುದು...!  

ಸಾಮಗ್ರಿಗಳು :
ಸ್ವಲ್ಪ ಸಣ್ಣಗೆ ಹೆಚ್ಚಿದ ಹಣ್ಣುಗಳು (ಸೇಬು, ಕಿತ್ತಳೆ, ಸಪೋಟ, ಬಾಳೆಹಣ್ಣು ಇತ್ಯಾದಿ) - 2-3 ಕಪ್,
ಬಿಡಿಸಿದ ದಾಳಿಂಬೆ - 1/2 ಕಪ್,
ಗೋಡಂಬಿ - 7-8,
ಒಣ ದ್ರಾಕ್ಷಿ - 3-4 ಚಮಚ, 
ಬಾದಾಮಿ - 7-8 (optional),
ಕಸ್ಟರ್ಡ್ ಪೌಡರ್ (Custard Powder) - 2 ಟೇಬಲ್ ಚಮಚ,
ಹಾಲು - 1/2 ಲೀಟರ್,
ಸಕ್ಕರೆ - 1 - 1.5 ಕಪ್ 

ವಿಧಾನ : 
ಸ್ವಲ್ಪ ಬಿಸಿ ನೀರಿನಲ್ಲಿ ಬಾದಾಮಿಯನ್ನು 1-2 ಘಂಟೆ ನೆನೆಸಿಟ್ಟು, ಸಿಪ್ಪೆ ಸುಲಿದು ಕತ್ತರಿಸಿಕೊಳ್ಳಿ. ಗೋಡಂಬಿಯನ್ನು ಕತ್ತರಿಸಿಕೊಳ್ಳಿ. 

ದಪ್ಪ ತಳದ ಪಾತ್ರೆಯಲ್ಲಿ ಸ್ವಲ್ಪ ಹಾಲಿಗೆ ಕಸ್ಟರ್ಡ್ ಪೌಡರ್ ಹಾಕಿ ಗಂಟಾಗದಂತೆ ಕಲಸಿ, ಉಳಿದ ಹಾಲನ್ನು ಹಾಕಿ, ಸಕ್ಕರೆ ಹಾಕಿ ಒಲೆಯ ಮೇಲಿಡಿ. 

ಮೊದಲ ಐದು ನಿಮಿಷ ಮಧ್ಯಮ ಉರಿಯಲ್ಲಿ ಕಲಕುತ್ತಿರಿ. ನಂತರ ಸಣ್ಣ ಉರಿಯಲ್ಲಿ ಕೈ ಬಿಡದೇ  ಕಲಕುತ್ತಿರಿ. (ಸಕ್ಕರೆ ಪೂರ್ತಿ ಕರಗಿದ ಮೇಲೆ ರುಚಿ ನೋಡಿಕೊಂಡು ಬೇಕಿದ್ದಲ್ಲಿ ಸಕ್ಕರೆ ಸೇರಿಸಿ. ಮಿಶ್ರಣ ತಣ್ಣಗಾದ ಮೇಲೆ ಸಕ್ಕರೆ ಸರಿಯಾಗಿ ಕರಗುವುದಿಲ್ಲ). ಮುಂದಿನ 10-15 ನಿಮಿಷಗಳಲ್ಲಿ ಮಿಶ್ರಣ ಸ್ವಲ್ಪ ದಪ್ಪಗಾಗುತ್ತದೆ. ಆಗ ಉರಿ ಆರಿಸಿ ತಣ್ಣಗಾಗಲು ಬಿಡಿ. ಪೂರ್ತಿ ತಣ್ಣಗಾದ ಮೇಲೆ ಕಾತರಿಸಿದ ಹಣ್ಣುಗಳು, ಬಿಡಿಸಿದ ದಾಳಿಂಬೆ, ಗೊದಮ್ನಿ, ಬಾದಾಮಿ, ಒಣದ್ರಾಕ್ಷಿ ಎಲ್ಲ ಹಾಕಿ ಚೆನ್ನಾಗಿ ಕಲಕಿ, ತಟ್ಟೆ ಮುಚ್ಚಿ 2-3 ಘಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ. ಬೇಗನೆ ತಣ್ಣಗಾಗಬೇಕೆಂದರೆ ಫ್ರೀಜರ್ ನಲ್ಲಿತ್ತಾರೆ ಒಂದು ಘಂಟೆಯೊಳಗೆ ಪೂರ್ತಿ ತಂಪಾಗುತ್ತದೆ. ತಣ್ಣಗಿನ ಫ್ರೂಟ್ ಸಲಾಡ್ ಅನ್ನು ಕಪ್ ಗೆ ಹಾಕಿ ಸರ್ವ್ ಮಾಡಿ.   



ಸಲಹೆಗಳು :
1) ಕಾಯಿಸುವಾಗ ತಳ ಬೇಗನೆ ಸೀದುವುದರಿಂದ ಕೈ ಬಿಡದೇ ಚೆನ್ನಾಗಿ ಕಲಕುತ್ತಲೇ ಇರಬೇಕು. 
2) ಹಣ್ಣುಗಳಲ್ಲಿ ನಿಮಗಿಷ್ಟವಾದ ಯಾವುದೇ ಹಣ್ಣುಗಳನ್ನು ಬಳಸಬಹುದು, ನಾನು ಹಾಕಿರುವ ಹಣ್ಣುಗಳನ್ನೇ ಹಾಕಬೇಕೆಂದೇನಿಲ್ಲ. ದ್ರಾಕ್ಷಿ, ಅನಾನಸ್ ಇತ್ಯಾದಿ ಬಳಸಬಹುದು. ಕಿತ್ತಳೆ ಹಣ್ಣು ಹುಳಿ ಇದ್ದರೆ ಹಾಕಲೇಬೇಡಿ. 
3) ಇದು  ಶಕ್ತಿದಾಯಕ ಮತ್ತು ರುಚಿಕರ ರೆಸಿಪಿ. ದೊಡ್ಡ ದೊಡ್ಡ Provision Store ಗಳಲ್ಲಿ ಕಸ್ಟರ್ಡ್ ಪೌಡರ್ ದೊರೆಯುತ್ತದೆ. ನಾನು ಬೇಕರಿ ಅಂಗಡಿಯಿಂದ ಕೊಂಡು ತಂದೆ....!!