ಬುಧವಾರ, ಜನವರಿ 14, 2015

ಕಾಯಿ ಹೋಳಿಗೆ :

ಹೂರಣಕ್ಕೆ ಸಾಮಗ್ರಿಗಳು:
ತೆಂಗಿನ ಕಾಯಿ - 2 (medium or big) 
ಬೆಲ್ಲ - 1.5 ಕಪ್
ಏಲಕ್ಕಿ ಪುಡಿ - 1/4 ಟೀ ಚಮಚ 
ಉಪ್ಪು - 1/2 ಟೀ ಚಮಚ 

ಕಣಕಕ್ಕೆ ಸಾಮಗ್ರಿಗಳು :
ಚಿರೋಟಿ ರವೆ - 1/2 ಕೆಜಿ 
ಅರಿಶಿನ ಪುಡಿ - 1/2 ಟೀ ಚಮಚ 
ಎಣ್ಣೆ - 6-8 ಚಮಚ 
ಉಪ್ಪು - 1/4 ಟೀ ಚಮಚ
ನೀರು - 1- 1 1/4 ಕಪ್  
(ಇಷ್ಟು ಅಳತೆಗೆ 18-20 ಹೋಳಿಗೆ ಆಗಬಹುದು). 

ವಿಧಾನ : 
ಒಂದು ಅಗಲವಾದ ಪಾತ್ರೆಗೆ ಚಿರೋಟಿ ರವೆ, ಉಪ್ಪು, ಅರಿಶಿನ ಪುಡಿ, 3-4 ಚಮಚ ಎಣ್ಣೆ ಹಾಕಿ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತ  ಚಪಾತಿ ಹಿಟ್ಟಿನಕಿಂತ ಸ್ವಲ್ಪ ಮೆತ್ತಗೆ ಕಲಸಿ ಚೆನ್ನಾಗಿ ನಾದಿಕೊಳ್ಳಿ. ನಂತರ ಅದು ಮುಳುಗುವಷ್ಟು ನೀರು ಹಾಕಿ ಅರ್ಧ ಮುಕ್ಕಾಲು ಗಂಟೆ ಹಾಗೆಯೇ ನೀರಿನಲ್ಲಿ ನೆನೆಸಿ.

ಅಷ್ಟರಲ್ಲಿ ಹೂರಣ ತಯಾರಿಸಬಹುದು. ತೆಂಗಿನ ಕಾಯಿ ತುರಿದು ಸ್ವಲ್ಪವೇ ನೀರು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. (ನೀರು ಹಾಕದೆ ರುಬ್ಬಿದರೂ ಒಳ್ಳೆಯದು). ನಂತರ ದಪ್ಪ ತಳದ ಪಾತ್ರೆ ಅಥವಾ ದೊಡ್ಡ ಕುಕ್ಕರ್ ಗೆ (cooker pan) ರುಬ್ಬಿದ ಮಿಶ್ರಣ, ಬೆಲ್ಲ, ಏಲಕ್ಕಿ ಪುಡಿ, ಉಪ್ಪು ಹಾಕಿ ಮಧ್ಯಮ ಅಥವಾ ಸ್ವಲ್ಪ ದೊಡ್ಡ ಉರಿಯಲ್ಲಿ ಕಲಕುತ್ತಿರಿ. ಇದು ಸ್ವಲ್ಪ ಗಟ್ಟಿಯಾಗುತ್ತಾ ಬಂದಂತೆ ಉರಿ ಸಣ್ಣ ಮಾಡಿ ಕೈ ಬಿಡದೇ ಕಲಕುತ್ತಿರಿ. ಸುಮಾರು ಅರ್ಧ ಗಂಟೆಯಲ್ಲಿ ಇದು ಕೈಗೆ ಅಂಟದೇ ಉಂಡೆ ಮಾಡಲು ಬರುವಷ್ಟು ಗಟ್ಟಿ ಆಗುತ್ತದೆ. ಆಗ ಉರಿ ಆರಿಸಿ ಕೆಳಗಿಳಿಸಿ. 

ಇದು ತಣ್ಣಗಾಗುವಷ್ಟರಲ್ಲಿ ಕಣಕವನ್ನು ನೀರಿನಿಂದ ತೆಗೆದು (ಪೂರ್ತಿಯಾಗಿ ನೀರು ಬಸಿಯಿರಿ) 1-2 ಚಮಚ ಎಣ್ಣೆ ಹಾಕಿ ಮತ್ತೊಮ್ಮೆ ಚೆನ್ನಾಗಿ ನಾದಿಕೊಳ್ಳಿ. ತಣ್ಣಗಾದ ಹೂರಣದಿಂದ ಚಪಾತಿ ಉಂಡೆ ಗಾತ್ರದ ಉಂಡೆ ಮಾಡಿಟ್ಟುಕೊಳ್ಳಿ. 

ಕೈಗೆ ಎಣ್ಣೆ ಸವರಿಕೊಂಡು ಲಿಂಬು ಗಾತ್ರದ  ಕಣಕದ ಉಂಡೆ ತೆಗೆದುಕೊಂಡು ಕೈ ಅಲ್ಲಿ ಹರವಿಕೊಂಡು ಹೂರಣದ ಉಂಡೆ ಇಟ್ಟು ಸರಿಯಾಗಿ ಮುಚ್ಚಿ ತುಂಬಿಕೊಳ್ಳಿ. ಖಾಲಿಯಾದ ಎಣ್ಣೆ ಕವರ್ ಕತ್ತರಿಸಿಕೊಂಡು ಅದಕ್ಕೆ ಮತ್ತು ಲಟ್ಟಣಿಗೆಗೆ ಸರಿಯಾಗಿ ಎಣ್ಣೆ ಸವರಿ, ತುಂಬಿಕೊಂಡ ಹೂರಣದ ಉಂಡೆ ಇಟ್ಟು ತೆಳ್ಳಗೆ ಲಟ್ಟಿಸಿಕೊಳ್ಳಿ.

 ನಂತರ ಅದನ್ನು ಬಿಡಿಸಿ ಕೈಗೆ ಹಾಕಿಕೊಂಡು, ಎಣ್ಣೆ ಸವರಿದ ಕಾದ ತವಾ  ಮೇಲೆ ಹಾಕಿ ಮಧ್ಯಮ ಉರಿಯಲ್ಲಿ ಎರಡೂ ಕಡೆ ಬೇಯಿಸಿ ತೆಗೆಯಿರಿ. ಈ ಕಾಯಿ ಹೋಳಿಗೆಗೆ ತುಪ್ಪ ಅಥವಾ ಬಿಸಿ ಹಾಲು ಹಾಕಿಕೊಂಡು ಸವಿಯಿರಿ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ