ಬುಧವಾರ, ಫೆಬ್ರವರಿ 11, 2015

ಮಸಾಲೆ ದೋಸೆ :

ದೋಸೆ ಹಿಟ್ಟಿಗೆ ಸಾಮಗ್ರಿಗಳು: 
ದೋಸೆ ಅಕ್ಕಿ : 2 ಕಪ್,
ಕಡಲೆಬೇಳೆ : 1/2 ಕಪ್,
ಮೆಂತ್ಯ : 1 ಚಮಚ, 
ಉದ್ದಿನ ಬೇಳೆ : 2 ಚಮಚ (optional),
ಅವಲಕ್ಕಿ : 1/4 ಕಪ್, 
ಉಪ್ಪು : ರುಚಿಗೆ,
ಸಕ್ಕರೆ : 1 ಚಮಚ 

ವಿಧಾನ : 
ಉಪ್ಪು, ಸಕ್ಕರೆ ಹೊರತು ಪಡಿಸಿ ಉಳಿದೆಲ್ಲ ಸಾಮಗ್ರಿಗಳನ್ನು ತೊಳೆದು 5-6  ನೀರಿನಲ್ಲಿ ನೆನೆಸಿ, ನುಣ್ಣಗೆ ರುಬ್ಬಿಕೊಳ್ಳಿ. (ಬೆಳಿಗ್ಗೆ ನೆನೆಸಿ ರಾತ್ರಿ ರುಬ್ಬಿಕೊಂಡು ಮರುದಿನ ಬೆಳಿಗ್ಗೆ ದೋಸೆ ಮಾಡಬಹುದು). ಇದನ್ನು 6-8 ಘಂಟೆಗಳ ಕಾಲ ಹಾಗೆಯೇ ಮುಚ್ಚಿಡಿ. ಬೆಳಿಗ್ಗೆ ಚೆನ್ನಾಗಿ ಹುದುಗಿದ ದೋಸೆ ಹಿಟ್ಟಿಗೆ ಉಪ್ಪು, ಸಕ್ಕರೆ ಸೇರಿಸಿ ಕಾದ ತವಾ ಮೇಲೆ ತೆಳ್ಳಗೆ ದೋಸೆ ಎರೆದು ಅದರ ಮೇಲೆ ಸ್ವಲ್ಪ ಎಣ್ಣೆ ಹಾಕಿ, ಚಟ್ನಿ ಪುಡಿ ಉದುರಿಸಿ (ಬೇಕಿದ್ದರೆ ಮುಚ್ಚಿ) ಬೇಯಿಸಿ. ನಂತರ ಅದರ ಮೇಲೆ ಆಲೂ ಪಲ್ಯ ಹಾಕಿ ಸುರುಳಿ ಸುತ್ತಿ ಚಟ್ನಿಯ ಜೊತೆ ಸರ್ವ್ ಮಾಡಿ.   




ಆಲೂ ಪಲ್ಯಕ್ಕೆ ಸಾಮಗ್ರಿಗಳು :
ಆಲೂಗಡ್ಡೆ : 3-4 (ಮೀಡಿಯಂ ಗಾತ್ರ),
ಈರುಳ್ಳಿ : 3 (ಮೀಡಿಯಂ ಗಾತ್ರ),
ಕಡಲೆ ಬೇಳೆ : 1 ಚಮಚ,
ಉದ್ದಿನ ಬೇಳೆ : 1 ಚಮಚ,
ಸಾಸಿವೆ : 1/2 ಚಮಚ,
ಎಣ್ಣೆ : 5-6 ಟೇಬಲ್ ಚಮಚ,
ಕರಿಬೇವು : ಸ್ವಲ್ಪ, 
ಅರಿಶಿನ ಪುಡಿ : 1/4 ಚಮಚ,
ಹಸಿ ಮೆಣಸಿನ ಕಾಯಿ : 5-6 (ಮಧ್ಯ ಕತ್ತರಿಸಿ ಉದ್ದುದ್ದ ಸೀಳಿಕೊಳ್ಳಿ),
ಉಪ್ಪು : ರುಚಿಗೆ

ವಿಧಾನ : 
ಆಲೂಗಡ್ಡೆಯನ್ನು ಕುಕ್ಕರ್ ನಲ್ಲಿ ಮೆತ್ತಗೆ ಬೇಯಿಸಿಕೊಂಡು ಪುಡಿ ಮಾಡಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿಕೊಂಡು ಅದಕ್ಕೆ ಕಡಲೇಬೇಳೆ, ಉದ್ದಿನ ಬೇಳೆ ಹಾಕಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದ ಮೇಲೆ ಸಾಸಿವೆ ಹಾಕಿ ಸಿಡಿಸಿ. ನಂತರ ಹಸಿಮೆಣಸಿನ ಕಾಯಿ, ಕರಿಬೇವು ಮತ್ತು ಈರುಳ್ಳಿ, ಅರಿಶಿನ ಪುಡಿ ಹಾಕಿ ಎರಡು ನಿಮಿಷ ಹುರಿಯಿರಿ. ನಂತರ ಇದಕ್ಕೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಪುಡಿ ಮಾಡಿಟ್ಟುಕೊಂಡ ಆಲೂ ಹಾಕಿ ಚೆನ್ನಾಗಿ ಕಲಸಿ. ಒಂದೆರಡು ನಿಮಿಷ ಕಲಕುತ್ತಲೇ ಇದ್ದು ಉರಿ ಆರಿಸಿ ಮುಚ್ಚಿಡಿ. 


ಚಟ್ನಿಗೆ ಸಾಮಗ್ರಿಗಳು : 
ತೆಂಗಿನ ತುರಿ : 1 ಕಪ್,
ಹಸಿಮೆಣಸಿನ ಕಾಯಿ : 2-3,
ಹುರಿಗಡಲೆ : 1 ಟೇಬಲ್ ಚಮಚ,
ಕರಿಬೇವು : 5-6 ಎಲೆಗಳು,
ಶುಂಠಿ : ಸಣ್ಣ ಚೂರು, 
ಎಳ್ಳು : 1/2 ಚಮಚ,
ಉಪ್ಪು ರುಚಿಗೆ 
ವಿಧಾನ : 
ಒಗ್ಗರಣೆ ಸೌಟಿಗೆ ಒಂದೆರಡು ಹನಿ ಎಣ್ಣೆ ಹಾಕಿಕೊಂಡು ಹಸಿಮೆಣಸಿನ ಕಾಯಿ, ಕರಿಬೇವು, ಹಾಕಿ ಬಾಡಿಸಿಕೊಂಡು ಎಳ್ಳು ಹಾಕಿ ಹುರಿದುಕೊಳ್ಳಿ. ಮಿಕ್ಸಿ ಜಾರ್ ಗೆ ಹುರಿದುಕೊಂಡ ಮಿಶ್ರಣ, ಶುಂಠಿ, ತೆಂಗಿನ ತುರಿ, ಉಪ್ಪು ಹಾಕಿ ರುಬ್ಬಿದರೆ ಚಟ್ನಿ ಸಿದ್ಧ.

ಸಲಹೆಗಳು: 
೧) ದೋಸೆಯ ಮೇಲೆ ಚಟ್ನಿ ಪುಡಿಯ ಬದಲು ಬೆಳ್ಳುಳ್ಳಿ ಚಟ್ನಿ ಯನ್ನು ಸವರಿಕೊಳ್ಳಬಹುದು. ಒಣ ಮೆಣಸಿನ ಕಾಯಿ ಮತ್ತು ಬೆಳ್ಳುಳ್ಳಿಯನ್ನು ಎಣ್ಣೆಯಲ್ಲಿ ಸ್ವಲ್ಪ ಹುರಿದು ತೆಂಗಿನ ತುರಿ ಮತ್ತು ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಂಡರೆ ಬೆಳ್ಳುಳ್ಳಿ ಚಟ್ನಿ ಸಿದ್ಧ. 
೨) ದೋಸೆ ಹಿಟ್ಟಿಗೆ ಸಕ್ಕರೆ ಹಾಕುವುದರಿಂದ ಹೊಂಬಣ್ಣದ ಮತ್ತು ಗರಿ ಗರಿಯಾದ ದೋಸೆ ಮಾಡಬಹುದು. 

3 ಕಾಮೆಂಟ್‌ಗಳು:

  1. ಬಾಯಲ್ಲಿ ನೀರೂರಿಸೋ ಷಢ್ಯಂತ್ರವೇ ಕಾವ್ಯಾಜೀ? :-) ;-)

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಹಾ ಹಾ ಹಾ..... ಈ ಷಢ್ಯಂತ್ರಕ್ಕೆ ಪ್ರತಿ ಮಂತ್ರವಾಗಿ ಮಾಡಿಕೊಡಲು ಹೇಳಿ ಅತ್ತಿಗೆಗೆ....!! ನೀವು ಚಪ್ಪರಿಸಬಹುದು .... :)

      ಅಳಿಸಿ
  2. ನಾನು ಮಸಾಲ್ ದೋಸೆ ಚೆನ್ನಾಗಿದೆ. ಈಗಲೇ ಮಾಡುವ ಆಸೆ. ನನ್ನ ಻ಅಕ್ಕ ಮಾಡಿದ್ದಳು ತುಂಬಾ ಚೆನ್ನಾಗಿತ್ತು. ಬಹಳ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ