ಬುಧವಾರ, ಮಾರ್ಚ್ 25, 2015

ಸೌತೆಕಾಯಿ ಪಲ್ಯ :

 ಹಸಿಯಾಗಿ ತಿನ್ನಲೆಂದು ತಂದಿಟ್ಟ ಸೌತೆಕಾಯಿ ಇಟ್ಟಲ್ಲೇ ಸ್ವಲ್ಪ ಒಣಗಿದ ಮೇಲೆ ನೋಡುತ್ತೀರಾ..! ಆಗ ತಿನ್ನಲು ಚೆನ್ನಾಗಿರುವುದಿಲ್ಲ. ಅಂಥ ಸಮಯದಲ್ಲಿ ಈ ಸರಳ ಪಲ್ಯ ಟ್ರೈ ಮಾಡಬಹುದು...... 

ಸಾಮಗ್ರಿಗಳು :
ಸೌತೆಕಾಯಿ :2,
ಈರುಳ್ಳಿ : 1(ಮಧ್ಯಮ ಗಾತ್ರದ್ದು- Optional),
ಹಸಿ ಮೆಣಸಿನ ಕಾಯಿ : 2-3,
ಕರಿಬೇವು : 6-8 ಎಲೆಗಳು,
ಎಣ್ಣೆ : 2 ಚಮಚ,
ಉದ್ದಿನ ಬೇಳೆ: 1/2 ಚಮಚ,
ಸಾಸಿವೆ: 1/4 ಚಮಚ,
ಸಕ್ಕರೆ : 1/2 ಚಮಚ,
 ಅರಿಶಿನ ಪುಡಿ: 2-3 ಚಿಟಿಕೆ, 
ವಾಟೆ ಪುಡಿ / ಲಿಂಬು ರಸ: 1/2 ಚಮಚ,
ತೆಂಗಿನ ತುರಿ: 2-3 ಟೇಬಲ್ ಚಮಚ, 
ಉಪ್ಪು: ರುಚಿಗೆ. 

ವಿಧಾನ: 

ಸೌತೆಕಾಯಿ ಮತ್ತು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಹಸಿಮೆಣಸನ್ನು ಸೀಳಿಕೊಳ್ಳಿ. ಬಾಣಲೆಗೆ ಎಣ್ಣೆ, ಉದ್ದಿನ ಬೇಳೆ ಹಾಕಿ ಸ್ವಲ್ಪ ಕೆಂಪಗಾದಾಗ ಸಾಸಿವೆ ಹಾಕಿ ಸಿಡಿಸಿ. ನಂತರ ಹಸಿಮೆಣಸಿನ ಕಾಯಿ, ಕರಿಬೇವು ಹಾಕಿ ಕಲಕಿ, ಈರುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ. ಈಗ ಅರಿಶಿನ ಪುಡಿ, ಹೆಚ್ಚಿದ ಸೌತೆಕಾಯಿ, ಉಪ್ಪು, ವಾಟೆ ಪುಡಿ/ ಲಿಂಬುರಸ, ಸಕ್ಕರೆ ಮತ್ತು ಸ್ವಲ್ಪ ನೀರು ಹಾಕಿ ಬೇಯಿಸಿ. ನೀರು ಆರುತ್ತಿರುವಾಗ ತೆಂಗಿನ ತುರಿ ಹಾಕಿ ಕಲಕಿ ಪೂರ್ತಿ ನೀರು ಆರಿದ ಮೇಲೆ ಉರಿ ಆರಿಸಿ. ಬಿಸಿ ಬಿಸಿ ಅನ್ನದ ಜೊತೆ ಸೌತೆಕಾಯಿ ಕಾಯಿ ಪಲ್ಯ ಸವಿಯಿರಿ. ಇದಲ್ಲದೇ ಪೂರಿ, ಚಪಾತಿಯ ಜೊತೆ ಕೂಡ ಚೆನ್ನಾಗಿರುತ್ತದೆ. 


ಸೂಚನೆ: 
1) ಸೌತೆಕಾಯಿ ಸಿಪ್ಪೆ ಕೂಡ ಆರೋಗ್ಯಕ್ಕೆ ಒಳ್ಳೆಯದಾದ್ದರಿಂದ, ಸೌತೆಕಾಯಿ ಎಳೆಯದಿದ್ದರೆ ಸಿಪ್ಪೆ ತೆಗೆಯುವುದು ಬೇಡ.  
2) ಬೀಜ ಬಲಿತಿದ್ದರೆ ಬೀಜ ತೆಗೆದು ಮಾಡಬಹುದು. 

ಬುಧವಾರ, ಮಾರ್ಚ್ 18, 2015

ಹಲಸಿನಕಾಯಿ ಚಿಪ್ಸ್:



ಸಾಮಗ್ರಿಗಳು : ಬಲಿತ ಹಲಸಿನಕಾಯಿ ತೊಳೆ 3೦, ಉಪ್ಪು, ಎಣ್ಣೆ.
ಚಿಪ್ಸ್ ಮಸಾಲ : ಜೀರಿಗೆ 1 ½ ಚಮಚ, ಓಮು ½ ಚಮಚ, ಧನಿಯಾ ½ ಚಮಚ,  ಇ೦ಗು , ಅಚ್ಚ ಖಾರದ ಪುಡಿ 4 ಚಮಚ.
ವಿಧಾನ : ಮಸಾಲಾ  ಸಾಮಗ್ರಿಗಳನ್ನು ಪುಡಿ ಮಾಡಿಕೊಳ್ಳಿ. ಹಲಸಿನಕಾಯಿಯ ತೊಳೆಗಳನ್ನು ಬಿಡಿಸಿಕೊ೦ಡು ಅದರ ಬೀಜ ತೆಗೆದು ಉದ್ದುದ್ದಕ್ಕೆ ಸೀಳಿಕೊಳ್ಳಿ. ಎಣ್ಣೆಯನ್ನು ಬಾಣಲೆಗೆ ಹಾಕಿ ಅದು ಕಾದ ನ೦ತರ ಸೀಳಿದ ಹಲಸಿನ ತೊಳೆಗಳನ್ನು ಹಾಕಿ ಹೊ೦ಬಣ್ಣ ಬರುವವರೆಗೆ ಕರಿಯಿರಿ. ಎಣ್ಣೆಯಿ೦ದ ತೆಗೆದು ಉಪ್ಪು & ಚಿಪ್ಸ್ ಮಸಾಲಾ ಪೌಡರ್ ಹಾಕಿ (ನಿಮ್ಮ ರುಚಿಗೆ ತಕ್ಕಷ್ಟು) ಮಿಕ್ಸ್ ಮಾಡಿ. ಸ೦ಜೆ ಸಮಯದಲ್ಲಿ ಚಹಾ / ಕಾಫಿ ಜೊತೆ ಸವಿಯಿರಿ.

ಬುಧವಾರ, ಮಾರ್ಚ್ 11, 2015

ನವಿಲು ಕೋಸಿನ ಪಲ್ಯ :

ಸಾಮಗ್ರಿಗಳು :
ಸಣ್ಣಗೆ ಹೆಚ್ಚಿದ ನವಿಲು ಕೋಸು : 2 (ಮಧ್ಯಮ ಗಾತ್ರ),
ಸಣ್ಣಗೆ / ಉದ್ದುದ್ದ ಹೆಚ್ಚಿದ ಈರುಳ್ಳಿ : 1 (ದೊಡ್ಡದು)
ಕರಿಬೇವು : ಸ್ವಲ್ಪ,
ಎಣ್ಣೆ : 1 ಟೇಬಲ್ ಚಮಚ, 
ಸಾಸಿವೆ : 1 ಟೀ ಚಮಚ,
ಅರಿಶಿನ ಪುಡಿ : 1/2 ಟೀ ಚಮಚ, 
ಸಕ್ಕರೆ : 1 ಟೀ ಚಮಚ, 
ಉಪ್ಪು : ರುಚಿಗೆ 

ಮಸಾಲೆಗೆ ಸಾಮಗ್ರಿಗಳು :
ತೆಂಗಿನ ತುರಿ : 1/2 ಕಪ್,
ಒಣ ಮೆಣಸಿನ ಕಾಯಿ : 4-5,
ಕೊತ್ತಂಬರಿ : 1 ಟೇಬಲ್ ಚಮಚ,
ಕಡಲೆ ಬೇಳೆ : 1/2 ಟೇಬಲ್ ಚಮಚ,
ಜೀರಿಗೆ : 1 ಟೀ ಚಮಚ,
ಬಿಳಿ ಎಳ್ಳು : 1 ಟೀ ಚಮಚ, 
ನೆನೆಸಿದ ಹುಣಸೆ ಹಣ್ಣು :  ನೆಲ್ಲಿಕಾಯಿ ಗಾತ್ರ / ಒಂದು ಎಸಳು,
ಎಣ್ಣೆ : 1/4 ಟೀ ಚಮಚ

ವಿಧಾನ : ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಹಾಕಿ ಸಿಡಿದ ನಂತರ ಕರಿಬೇವು, ಹೆಚ್ಚಿದ ಈರುಳ್ಳಿ ಹಾಕಿ 1 ನಿಮಿಷ ಹುರಿಯಿರಿ. ನಂತರ ಹೆಚ್ಚಿದ ನವಿಲುಕೋಸು ಹಾಕಿ ಒಂದೆರಡು ಕಪ್ ನೀರು, ಸ್ವಲ್ಪ ಉಪ್ಪು- ಸಕ್ಕರೆ ಹಾಕಿ ಬೇಯಿಸಿ. ತೆಂಗಿನ ತುರಿ, ಹುಣಸೆಹಣ್ಣು ಬಿಟ್ಟು ಉಳಿದ ಮಸಾಲೆ ಸಾಮಗ್ರಿಗೆ ಎಣ್ಣೆ ಹಾಕಿ ಹದವಾಗಿ ಹುರಿಯಿರಿ. ನಂತರ ಈ ಮಿಶ್ರಣವನ್ನು ಹುಣಸೆ ಹಣ್ಣು, ತೆಂಗಿನ ತುರಿ ಸೇರಿಸಿ ಸ್ವಲ್ಪವೇ ತರಿ ತರಿಯಾಗಿ ರುಬ್ಬಿ. ಇದನ್ನು ನವಿಲುಕೋಸು ಬೆಂದ ಮೇಲೆ ಅದಕ್ಕೆ ಹಾಕಿ ಉಪ್ಪು ಹಾಕಿ (ಬೇಯಿಸಲು ಉಪ್ಪು ಹಾಕಿರುವುದರಿಂದ ನೋಡಿಕೊಂಡು ಹಾಕಿ), ನೀರು ಆರುವ ತನಕ ಬೇಯಿಸಿ. ಬಿಸಿ ಬಿಸಿ ನವಿಲುಕೋಸು ಪಲ್ಯವನ್ನು ಅನ್ನ ಮತ್ತು ಚಪಾತಿ ಜೊತೆ ಸವಿಯಿರಿ.   

ಸಲಹೆಗಳು :
1) ಹುಣಸೆ ಹಣ್ಣಿನ ಬದಲು 1 ಚಮಚದಷ್ಟು ವಾಟೆ ಪುಡಿ / ಅಮ್ಚೂರ್ ಪುಡಿಯನ್ನು ನವಿಲು ಕೋಸನ್ನು ಬೇಯಿಸುವಾಗ ಹಾಕಬಹುದು. 
2) ಮತ್ತೊಂದು ಸರಳ ವಿಧಾನ:  ಎಣ್ಣೆ, ಉದ್ದಿನ ಬೇಳೆ, ಸಾಸಿವೆ, ಕರಿಬೇವು, ಅರಿಶಿನ, ಹೆಚ್ಚಿದ ಈರುಳ್ಳಿ, ಹಸಿಮೆಣಸಿನ ಒಗ್ಗರಣೆ ಮಾಡಿ ಸಣ್ಣಗೆ ಹೆಚ್ಚಿದ ನವಿಲು ಕೋಸು, ಉಪ್ಪು, ಹುಳಿ ಮತ್ತು ನೀರು ಹಾಕಿ ಬೇಯಿಸಿ ತೆಂಗಿನ ತುರಿ ಉದುರಿಸಿ ಪಲ್ಯ ಮಾಡಬಹುದು. 

ಬುಧವಾರ, ಮಾರ್ಚ್ 4, 2015

ಪಾನಿ ಪುರಿ / ಗೋಲಗಪ್ಪ:



ಸಾಮಾಗ್ರಿಗಳು : ಬೇಯಿಸಿದ ಆಲೂಗಡ್ಡೆ 3 , ಈರುಳ್ಳಿ- 2, ಮೆಣಸಿನ ಪುಡಿ 1-2 ಚಮಚ, ಉಪ್ಪು ರುಚಿಗೆ
ಪಾನಿ ಮಾಡಲು: ಕೊತ್ತ೦ಬರಿ ಸೊಪ್ಪು 1 ಮುಷ್ಟಿ, ಕಪ್ಪುಉಪ್ಪು (Black Salt), ಹುಣಸೆರಸ ½ ಕಪ್, ಹಸಿಮೆಣಸು4-5, ಮೆಣಸಿನಕಾಳು (Pepper) 8-10, ಪುದಿನಾಸೊಪ್ಪು 10-12 ಎಲೆ, ಎವೆರೆಸ್ಟ ಪಾನಿ ಪೌಡರ್ 3-4 ಚಮಚ. 


ವಿಧಾನ : ಕಪ್ಪು ಉಪ್ಪನ್ನು ಪುಡಿಮಾಡಿ ನೀರಿನಲ್ಲಿ ನೆನೆಸಿಡಿ. ಕೊತ್ತ೦ಬರಿ ಸೊಪ್ಪು, ಪುದಿನಾಸೊಪ್ಪು, ಕಾಳುಮೆಣಸು, ಹಸಿಮೆಣಸು ಅವೆಲ್ಲವನ್ನು ಮಿ‍ಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒ೦ದು ಪಾತ್ರೆಗೆ ರುಬ್ಬಿದ ಮಿಶ್ರಣ ಹಾಕಿ ಒಂದು ಲೀಟರ್ ನೀರು, ಎವೆರೆಸ್ಟ ಪಾನಿ ಪೌಡರ್, ಕಪ್ಪು ಉಪ್ಪಿನ ನೀರು, ಹುಣಸೆರಸ ಎಲ್ಲವನ್ನು ಹಾಕಿ ಚೆನ್ನಾಗಿ ಕದಡಿ. ರುಚಿ ನೋಡಿಕೊ೦ಡು ಬೇಕಾದಲ್ಲಿ ಉಪ್ಪು & ಹುಳಿ ಸೇರಿಸಿ. ಈಗ ಪಾನಿ ಸಿದ್ದ.
ಪಾನಿ ಸ್ವಲ್ಪ ಸಿಹಿ ಬೇಕು ಅ೦ತ ಅನ್ನಿಸಿದಲ್ಲಿ ಹುಣಸೆರಸಕ್ಕೆ ಬೆಲ್ಲ ½ ಲೋಟ ನೀರು ಹಾಕಿ ಇಟ್ಟುಕೊಳ್ಳಿ.
ಬೇಯಿಸಿದ ಆಲೂಗಡ್ಡೆಯನ್ನು ಕೈಯಿ೦ದ ಹಿಸುಕಿಕೊಳ್ಳಿ. ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಉಪ್ಪು, ಮೆಣಸಿನ ಪುಡಿ  ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಒಂದೊಂದೇ ಪೂರಿಯನ್ನು ತೆಲ್ಲಗಿರುವ ಕಡೆ ಸ್ವಲ್ಪ ಒಡೆದುಕೊಂಡು ಆಲೂ ಮಿಶ್ರಣ ತುಂಬಿ ತಟ್ಟೆಯಲ್ಲಿಟ್ಟು, ಜೊತೆಗೆ ಕಪ್ ನಲ್ಲಿ ಪಾನಿ ಇಟ್ಟು ಸರ್ವ್ ಮಾಡಿ.