ಶುಕ್ರವಾರ, ಜನವರಿ 27, 2017

ಸಬ್ಬಸಿಗೆ ಸೊಪ್ಪಿನ ಅನ್ನ:

ಸಾಮಗ್ರಿಗಳು:  
ಅನ್ನ - 1 ದೊಡ್ಡ ಕಪ್, 
ಹೆಚ್ಚಿಟ್ಟ ಸಬ್ಬಸಿಗೆ ಸೊಪ್ಪು - 1/2 ಕಪ್, 
ಲಿ೦ಬು ರಸ - 2 ಚಮಚ, 
ಹಸಿ ಮೆಣಸು - 3, 
ಈರುಳ್ಳಿ - 1 (ಚಿಕ್ಕದು),
ಸಾಸಿವೆ, ಜೀರಿಗೆ-  ತಲಾ 1/2 ಟೀ ಚಮಚ,
ಅರಿಶಿನ ಪುಡಿ - 1/4 ಟೀ ಚಮಚ,
ಎಣ್ಣೆ - 2-3 ಚಮಚ, 
ಸಕ್ಕರೆ- 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು.



ವಿಧಾನ : ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ. ಸಬ್ಬಸಿಗೆ ಸೊಪ್ಪನ್ನು ತೊಳೆದುಕೊ೦ಡು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಈರುಳ್ಳಿಯನ್ನು ಹೆಚ್ಚಿಟ್ಟುಕೊಳ್ಳಬೇಕು. ಬಾಣಲೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಸಾಸಿವೆ, ಜೀರಿಗೆ, ಕರಿಬೇವು, ಹಸಿ ಮೆಣಸು ಹಾಕಿ ಅಮೇಲೆ ಹೆಚ್ಚಿಟ್ಟ ಈರುಳ್ಳಿ ಹಾಕಿ ಫ್ರೈ ಮಾಡಿ ನ೦ತರ ಹೆಚ್ಚಿಟ್ಟ ಸಬ್ಬಸಿಗೆ ಸೊಪ್ಪು ಉಪ್ಪು ಹಾಕಿ 7-8 ನಿಮಿಷ ಬೇಯಿಸಿ ಕೊನೆಯಲ್ಲಿ ಲಿ೦ಬು ರಸ ಹಾಕಿ ಉರಿ ಆರಿಸಿ. ಈಗ ಅನ್ನವನ್ನು ಸೇರಿಸಿ. ರುಚಿ ನೋಡಿಕೊ೦ಡು ಬೇಕಾದಲ್ಲಿ ಉಪ್ಪು ಹುಳಿ ಸೇರಿಸಬಹುದು.

ಶುಕ್ರವಾರ, ಜನವರಿ 20, 2017

ಸಾಂಬಾರ್ ಭಾಜಿ : (Using leftover Sambar)

ಊಟಕ್ಕೆಂದು ಮಾಡಿದ ಸಾಂಬಾರ್ ಹೆಚ್ಚು ಉಳಿದು ಬಿಟ್ಟರೆ ಮತ್ತೆ ಅದನ್ನೇ ಮರುದಿನ ಊಟಕ್ಕೆ ತಿನ್ನಲು ಬೇಜಾರು, ಚೆಲ್ಲಲೂ ಮನಸ್ಸು ಬಾರದು.... ಅಂಥ ಸಮಯದಲ್ಲಿ ಅದನ್ನೇ ಸ್ವಲ್ಪ ರುಚಿ ಬದಲಿಸಿ ಮರುದಿನ ಬೆಳಿಗ್ಗೆಯ ಉಪಹಾರದ ದೋಸೆ ಅಥವಾ ಚಪಾತಿ ಜೊತೆ ತಿನ್ನಬಹುದು.... 
ಸಾಮಗ್ರಿಗಳು:
ಉಳಿದ ಸಾಂಬಾರ್ : 2 ಕಪ್ 
ಈರುಳ್ಳಿ : 2
ಬೆಳ್ಳುಳ್ಳಿ : 4-5 ಎಸಳು 
ತೆಂಗಿನ ತುರಿ : 2-3 ಚಮಚ 
ಸಕ್ಕರೆ: 1/2 ಚಮಚ 
ಹಸಿಮೆಣಸಿನ ಕಾಯಿ : 1-2
ತುಪ್ಪ : 2 ಚಮಚ 
ಎಣ್ಣೆ :1 ಚಮಚ (Optional) 
ಸಾಸಿವೆ : 1/2 ಚಮಚ 

ವಿಧಾನ :
ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಬೆಳ್ಳುಳ್ಳಿ ಸಿಪ್ಪೆ ತೆಗೆದು ಜಜ್ಜಿಕೊಳ್ಳಿ ಮತ್ತು ಹಸಿಮೆಣಸಿನ ಕಾಯಿಯನ್ನು ಉದ್ದುದ್ದ ಸೀಳಿಕೊಳ್ಳಿ. ಬಾಣಲೆಗೆ ತುಪ್ಪ ಮತ್ತು ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಸಾಸಿವೆ ಹಾಕಿ ಚಿಟಪಟಾಯಿಸಿ, ಹಸಿಮೆಣಸಿನ ಕಾಯಿ ಹಾಕಿ ಫ್ರೈ ಮಾಡಿ. ಜಜ್ಜಿದ ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿದು, ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಸಾಂಬಾರ್, ಸಕ್ಕರೆ, ತೆಂಗಿನ ತುರಿ ಬೇಕಿದ್ದಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ. ಬಿಸಿ ಬಿಸಿ ಸಾಂಬಾರ್ ಭಾಜಿ ದೋಸೆಯ ಜೊತೆ ಬಲು ರುಚಿ. ಚಪಾತಿಯ ಜೊತೆಯೂ ತಿನ್ನಬಹುದು. 

ಶುಕ್ರವಾರ, ಜನವರಿ 13, 2017

ಆಲೂ ಗೋಬಿ ಡ್ರೈ:

ಸಾಮಗ್ರಿಗಳು : 
ಹೆಚ್ಚಿಟ್ಟ ಆಲೂಗಡ್ಡೆ - 1 ಕಪ್
ಬಿಡಿಸಿಟ್ಟ ಗೋಬಿ (ಹೂಕೋಸು) - 1 ಕಪ್ ,
ಹಸಿಮೆಣಸು - 2
ಧನಿಯಾ ಪುಡಿ -  1 ಟೀ ಚಮಚ
ಗರ೦ ಮಸಾಲ ಪುಡಿ - 1/2  ಟೀ ಚಮಚ
ಕರಿಬೇವು - 7-8 ಎಲೆಗಳು,
ಜೀರಿಗೆ - 1/2  ಟೀ ಚಮಚ ,
ಸಾಸಿವೆ - 1/2  ಟೀ ಚಮಚ
ಅರಿಶಿನ ಪುಡಿ - 1/4 ಟೀ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 2 ಟೇ. ಚಮಚ


ವಿಧಾನ : ಆಲೂಗಡ್ಡೆ ಸಿಪ್ಪೆ ತೆಗೆದು ಚೌಕ ಹೋಳು ಮಾಡಿಕೊಳ್ಳಿ. ಹೂಕೋಸನ್ನು ಬಿಡಿಸಿಕೊ೦ಡು ಕುದಿಯುವ ನೀರಿಗೆ ಹಾಕಿ ಹಾಗೆ ಉರಿ ಆರಿಸಿ ೨ ನಿಮಿಷದ ನ೦ತರ ನೀರು ಬಸಿದುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಕಾದ ಮೇಲೆ ಜೀರಿಗೆ ಹಸಿಮೆಣಸು ಅರಿಶಿನ ಪುಡಿ, ಕರಿಬೇವು ಹಾಕಿ ನ೦ತರ ಆಲೂಗಡ್ಡೆ & ಹೂಕೋಸನ್ನು ಹಾಕಿ ಉಪ್ಪು ಹಾಕಿ ಅದನ್ನು ಮೀಡಿಯಮ್ ಉರಿಯಲ್ಲಿ ಬೇಯಿಸಿ. ಎಣ್ಣೆ ಕಡಿಮೆ ಹಾಕಿದರೆ ಬೇಯಲು ಜಾಸ್ತಿ ಸಮಯ ಬೇಕು. ಆದರೂ ಕಡಿಮೆ ಎಣ್ಣೆಯನ್ನು ಹಾಕಿ. ಬೇಕಾದಲ್ಲಿ ಮತ್ತೆ ಎಣ್ಣೆ ಸೇರಿಸಬಹುದು. ತಳ ಹಿಡಿಯದ೦ತೆ ನೋಡಿಕೊಳ್ಳಿ. ಕೊನೆಯಲ್ಲಿ ಧನಿಯಾಪುಡಿ ಗರ೦ ಮಸಾಲ ಪುಡಿ ಸೇರಿಸಿ.

ಈ ಬಿಸಿ ಬಿಸಿ ಆಲೂ ಗೋಬಿ ಚಪಾತಿ, ಪುಲ್ಕ ಜೊತೆ ತಿನ್ನಲು ಬಲು ರುಚಿ.

ಸೂಚನೆ: ಇದಕ್ಕೆ ಟೊಮ್ಯಾಟೊ, ಈರುಳ್ಳಿ ಹಾಗೂ ಹಸಿ ಬಟಾಣಿ ಕೂಡ ಸೇರಿಸ ಬಹುದು. ಜಾಸ್ತಿ ಖಾರ ಬೇಕಾದಲ್ಲಿ ಕೊನೆಯಲ್ಲಿ ಮೆಣಸಿನ ಪುಡಿ ಸೇರಿಸಿ.

ಸೋಮವಾರ, ಜನವರಿ 9, 2017

ಶ್ರೀಖಂಡ :

ಸಾಮಗ್ರಿಗಳು :
ಗಟ್ಟಿ ಮೊಸರು :1.5 - 2 ಲೀಟರ್
ಸಕ್ಕರೆ: 2 ಕಪ್
ಗೋಡಂಬಿ : 8-10
ಬಾದಾಮಿ:6-7
ಒಣ ದ್ರಾಕ್ಷಿ: 1-2 ಚಮಚ
ಜಾಯಿಕಾಯಿ : 1
ಯಾಲಕ್ಕಿ ಪುಡಿ : 2 ಚಿಟಿಕೆ 
ಉಪ್ಪು : 2 ಚಿಟಿಕೆ

ವಿಧಾನ:
ಒಂದು ತೆಳುವಾದ ಶುಭ್ರ ಬಿಳಿ ಬಟ್ಟೆಯಲ್ಲಿ ಮೊಸರನ್ನು ಹಾಕಿ ಗಂಟು ಕಟ್ಟಿ 3-4 ಘಂಟೆಗಳ ಕಾಲ ಸ್ವಲ್ಪ ಎತ್ತರಕ್ಕೆ ತೂಗುಹಾಕಿ ಕೆಳಗೆ ನೀರು ಬೀಳಲು ಒಂದು ಪಾತ್ರೆ ಇಡಿ. ಮೊಸರಿನಲ್ಲಿರುವ ನೀರಿನಂಶ ಹೋಗಿ ಗಟ್ಟಿ ಮೊಸರನ್ನು ತೆಗೆಯಲು ಈ ವಿಧಾನ. ನಂತರ ಒಂದು ಪಾತ್ರೆಯ ಮೇಲೆ ರವೆ ಜರಡಿ ಹಿಡಿಯುವ ಜರಡಿ ಇಟ್ಟು ಮೊಸರನ್ನು ಹಾಕಿ ಸೌಟಿನಿಂದ ಅರೆಯುತ್ತಾ ಬಂದರೆ ಗಂಟಿಲ್ಲದ ಗಟ್ಟಿ ಮೊಸರು ಕೆಳಗೆ ಪಾತ್ರೆಗೆ ಬೀಳುತ್ತದೆ. 


ಈಗ ಮೊಸರು ಎಷ್ಟಿದೆ ಎಂದು ನೋಡಿಕೊಳ್ಳಿ. 2 ಕಪ್ ಮೊಸರು ಇದ್ದರೆ ಅಷ್ಟೇ ಪ್ರಮಾಣದ ಅಥವಾ 1.5 ಕಪ್ ಸಕ್ಕರೆ ಬೇಕಾಗುತ್ತದೆ. ಸಕ್ಕರೆ ಹಾಕಿ ಚೆನ್ನಾಗಿ ಕಲಕಿ. ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದು ಚೂರುಗಳಾಗಿ ಮಾಡಿ. ಗೋಡಂಬಿಯನ್ನೂ ಚೂರು ಮಾಡಿಕೊಳ್ಳಿ. ಜಾಯಿಕಾಯಿಯನ್ನು ಸಾಣೆಕಲ್ಲಿನ ಮೇಲೆ ತೇಯ್ದು ತಯಾರಿಸಿಟ್ಟ ಮೊಸರು - ಸಕ್ಕರೆ ಮಿಶ್ರಣಕ್ಕೆ ಹಾಕಿ, ಜೊತೆಗೆ ಗೋಡಂಬಿ - ಬಾದಾಮಿ ಚೂರುಗಳು, ಒಣ ದ್ರಾಕ್ಷಿ, ಯಾಲಕ್ಕಿ ಪುಡಿ, ಉಪ್ಪು ಹಾಕಿ ಚೆನ್ನಾಗಿ  ಕಲಕಿ. ಇದಕ್ಕೆ ಕೇಸರಿ ಅಥವಾ ಹಳದಿ ರಂಗನ್ನು (ಬಣ್ಣ / food color) ಹಾಕಿ ಕಲಕಿ. ಇದರ ಬದಲು ಹಾಲಿನಲ್ಲಿ ಅರ್ಧ ಘಂಟೆ ನೆನೆಸಿಟ್ಟ ಕುಂಕುಮ ಕೇಸರಿಯನ್ನು ಹಾಕಿದರೆ ಇನ್ನೂ ಚೆನ್ನಾಗಿರುತ್ತದೆ. 

ಈ ಶ್ರೀಖಂಡವನ್ನು ಹಾಗೆಯೇ ತಿನ್ನಬಹುದು. ಅಲ್ಲದೇ ಪೂರಿ ಮತ್ತು ದೋಸೆಯ ಜೊತೆ ಕೂಡ ತುಂಬಾ ಚೆನ್ನಾಗಿರುತ್ತದೆ. 

ಸಲಹೆ :
ಸಾಣೆಕಲ್ಲು ಇಲ್ಲದಿದ್ದರೆ ಜಾಯಿಕಾಯನ್ನು ನೆನೆಸಿಟ್ಟು ಕುಟ್ಟುವ ಕಲ್ಲಿನಲ್ಲಿ ಹಾಕಿ ನುಣ್ಣಗೆ ಅರೆಯಬೇಕು.