ಸೋಮವಾರ, ಜನವರಿ 9, 2017

ಶ್ರೀಖಂಡ :

ಸಾಮಗ್ರಿಗಳು :
ಗಟ್ಟಿ ಮೊಸರು :1.5 - 2 ಲೀಟರ್
ಸಕ್ಕರೆ: 2 ಕಪ್
ಗೋಡಂಬಿ : 8-10
ಬಾದಾಮಿ:6-7
ಒಣ ದ್ರಾಕ್ಷಿ: 1-2 ಚಮಚ
ಜಾಯಿಕಾಯಿ : 1
ಯಾಲಕ್ಕಿ ಪುಡಿ : 2 ಚಿಟಿಕೆ 
ಉಪ್ಪು : 2 ಚಿಟಿಕೆ

ವಿಧಾನ:
ಒಂದು ತೆಳುವಾದ ಶುಭ್ರ ಬಿಳಿ ಬಟ್ಟೆಯಲ್ಲಿ ಮೊಸರನ್ನು ಹಾಕಿ ಗಂಟು ಕಟ್ಟಿ 3-4 ಘಂಟೆಗಳ ಕಾಲ ಸ್ವಲ್ಪ ಎತ್ತರಕ್ಕೆ ತೂಗುಹಾಕಿ ಕೆಳಗೆ ನೀರು ಬೀಳಲು ಒಂದು ಪಾತ್ರೆ ಇಡಿ. ಮೊಸರಿನಲ್ಲಿರುವ ನೀರಿನಂಶ ಹೋಗಿ ಗಟ್ಟಿ ಮೊಸರನ್ನು ತೆಗೆಯಲು ಈ ವಿಧಾನ. ನಂತರ ಒಂದು ಪಾತ್ರೆಯ ಮೇಲೆ ರವೆ ಜರಡಿ ಹಿಡಿಯುವ ಜರಡಿ ಇಟ್ಟು ಮೊಸರನ್ನು ಹಾಕಿ ಸೌಟಿನಿಂದ ಅರೆಯುತ್ತಾ ಬಂದರೆ ಗಂಟಿಲ್ಲದ ಗಟ್ಟಿ ಮೊಸರು ಕೆಳಗೆ ಪಾತ್ರೆಗೆ ಬೀಳುತ್ತದೆ. 


ಈಗ ಮೊಸರು ಎಷ್ಟಿದೆ ಎಂದು ನೋಡಿಕೊಳ್ಳಿ. 2 ಕಪ್ ಮೊಸರು ಇದ್ದರೆ ಅಷ್ಟೇ ಪ್ರಮಾಣದ ಅಥವಾ 1.5 ಕಪ್ ಸಕ್ಕರೆ ಬೇಕಾಗುತ್ತದೆ. ಸಕ್ಕರೆ ಹಾಕಿ ಚೆನ್ನಾಗಿ ಕಲಕಿ. ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದು ಚೂರುಗಳಾಗಿ ಮಾಡಿ. ಗೋಡಂಬಿಯನ್ನೂ ಚೂರು ಮಾಡಿಕೊಳ್ಳಿ. ಜಾಯಿಕಾಯಿಯನ್ನು ಸಾಣೆಕಲ್ಲಿನ ಮೇಲೆ ತೇಯ್ದು ತಯಾರಿಸಿಟ್ಟ ಮೊಸರು - ಸಕ್ಕರೆ ಮಿಶ್ರಣಕ್ಕೆ ಹಾಕಿ, ಜೊತೆಗೆ ಗೋಡಂಬಿ - ಬಾದಾಮಿ ಚೂರುಗಳು, ಒಣ ದ್ರಾಕ್ಷಿ, ಯಾಲಕ್ಕಿ ಪುಡಿ, ಉಪ್ಪು ಹಾಕಿ ಚೆನ್ನಾಗಿ  ಕಲಕಿ. ಇದಕ್ಕೆ ಕೇಸರಿ ಅಥವಾ ಹಳದಿ ರಂಗನ್ನು (ಬಣ್ಣ / food color) ಹಾಕಿ ಕಲಕಿ. ಇದರ ಬದಲು ಹಾಲಿನಲ್ಲಿ ಅರ್ಧ ಘಂಟೆ ನೆನೆಸಿಟ್ಟ ಕುಂಕುಮ ಕೇಸರಿಯನ್ನು ಹಾಕಿದರೆ ಇನ್ನೂ ಚೆನ್ನಾಗಿರುತ್ತದೆ. 

ಈ ಶ್ರೀಖಂಡವನ್ನು ಹಾಗೆಯೇ ತಿನ್ನಬಹುದು. ಅಲ್ಲದೇ ಪೂರಿ ಮತ್ತು ದೋಸೆಯ ಜೊತೆ ಕೂಡ ತುಂಬಾ ಚೆನ್ನಾಗಿರುತ್ತದೆ. 

ಸಲಹೆ :
ಸಾಣೆಕಲ್ಲು ಇಲ್ಲದಿದ್ದರೆ ಜಾಯಿಕಾಯನ್ನು ನೆನೆಸಿಟ್ಟು ಕುಟ್ಟುವ ಕಲ್ಲಿನಲ್ಲಿ ಹಾಕಿ ನುಣ್ಣಗೆ ಅರೆಯಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ