ಆರೋಗ್ಯಕರವಾಗಿ ಮಕ್ಕಳನ್ನು ಬೆಳೆಸುವುದು ಪ್ರತಿ ತಾಯಂದಿರ ಕರ್ತವ್ಯ. ಇದಕ್ಕಾಗಿ ರೆಡಿಮೇಡ್ ಆಹಾರಗಳಿಗಿಂತ ಮನೆಯಲ್ಲಿಯೇ ಸರಳವಾಗಿ ಮಾಡಿಕೊಡಬಹುದಾದ ಆಹಾರಗಳನ್ನು ತಿಳಿಸಿಕೊಡಲು 'ಶಿಶು / ಮಕ್ಕಳ ಆಹಾರ' ಎಂಬ ಹೊಸ ಅಂಕಣ ಆರಂಭಿಸಿದ್ದೇವೆ. ನಮಗೆ ತಿಳಿದಷ್ಟನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇವೆ.
ಸಾಮಗ್ರಿಗಳು :
ಹೆಚ್ಚಿದ ಕ್ಯಾರಟ್- 1/4 ಕಪ್
ಹೆಚ್ಚಿದ ಸೇಬು - 1/4 ಕಪ್
ಹೆಚ್ಚಿದ ಆಲೂ - 1/4 ಕಪ್
ಹೆಚ್ಚಿದ ಈರುಳ್ಳಿ - 1/4 ಕಪ್
ಬೆಣ್ಣೆ - 1/2 ಟೀ ಚಮಚ
ಪೆಪ್ಪರ್ ಪೌಡರ್ - 2 ಚಿಟಿಕೆ
ಲಿಂಬೆ ರಸ - 5-6 ಹನಿ
ಉಪ್ಪು - 3-4 ಚಿಟಿಕೆ
ವಿಧಾನ :
ಹೆಚ್ಚಿದ ಸೇಬು-ತರಕಾರಿಗಳೆಲ್ಲವನ್ನೂ ಒಟ್ಟಿಗೇ ಕುಕ್ಕರ್ ನಲ್ಲಿ ಮೂರು ವಿಷಲ್ ಕೂಗಿಸಿ ಬೇಯಿಸಿಕೊಳ್ಳಿ. ಬೆಂದು ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಪ್ಯಾನ್ ಗೆ ಬೆಣ್ಣೆ ಹಾಕಿ, ಪೆಪ್ಪರ್ ಪುಡಿ ಹಾಕಿ ಒಮ್ಮೆ ಕಲಕಿ, ರುಬ್ಬಿದ ಮಿಶ್ರಣ ಹಾಕಿ ಕಾಲು ಕಪ್ ನಷ್ಟು ನೀರು ಹಾಕಿ ಕಲಕಿ. ಬೇಕಿದ್ದಲ್ಲಿ ಇನ್ನು ಸ್ವಲ್ಪ ನೀರು ಸೇರಿಸಿ. ಉಪ್ಪು ಹಾಕಿ ಒಂದು ಕುದಿ ಕುದಿಸಿ (ಮುಂಚೆಯೇ ಬೇಯಿಸಿಕೊಂಡ ಸೇಬು / ತರಕಾರಿ ಆದ್ದರಿಂದ ಸಣ್ಣ ಕುದಿ ಬಂದರೆ ಸಾಕು). ಕೊನೆಯಲ್ಲಿ ಲಿಂಬು ರಸ ಹಾಕಿದರೆ ರುಚಿಯಾದ ಸೂಪ್ ಸಿದ್ಧ. ಸ್ವಲ್ಪ ಬೆಚ್ಚಗಿರುವಾಗಲೇ ಮಕ್ಕಳಿಗೆ ಕುಡಿಸಿ.
ಸಲಹೆಗಳು :
1) 7-8 ತಿಂಗಳು ಮೇಲ್ಪಟ್ಟ ಮಗುವಿಗೆ ಒಳ್ಳೆಯ ಆರೋಗ್ಯಕರ ಆಹಾರ. ಶಾಲೆಗೆ ಹೋಗುವ ಮಕ್ಕಳಿಗೂ ಇಷ್ಟವಾಗುವುದಲ್ಲದೇ ದೊಡ್ಡವರೂ ಸವಿಯಬಹುದು.
2) ತೀರಾ ತೆಳ್ಳಗಾಗುವಷ್ಟು ನೀರು ಹಾಕಬೇಡಿ, ರುಚಿಯಿರುವುದಿಲ್ಲ.
3) ಮಗುವಿಗೆ ಕೊಡುವಾಗ ಉಪ್ಪು, ಹುಳಿ, ಖಾರ ಎಲ್ಲವೂ ಕಡಿಮೆ ಇರುವಂತೆ ಎಚ್ಚರ ವಹಿಸಿ. ಅದಕ್ಕೆ ಎಲ್ಲವನ್ನೂ ಕಡಿಮೆ ಪ್ರಮಾಣದಲ್ಲೇ ಹೇಳಿದ್ದೇನೆ. ದೊಡ್ಡ ಮಕ್ಕಳಿಗಾದರೆ ಅವರ ಇಷ್ಟಕ್ಕನುಸಾರ ಜಾಸ್ತಿ ಮಾಡಿಕೊಳ್ಳಿ.
4) ಎಲ್ಲಾ ತರಕಾರಿಗಳು ಸಮಪ್ರಮಾಣದಲ್ಲಿದ್ದರೆ ರುಚಿ ಚೆನ್ನಾಗಿರುತ್ತದೆ. ಪ್ರಮಾಣದಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆದರೂ ಯಾವುದೇ ತೊಂದರೆಯಿಲ್ಲ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ