ಶುಕ್ರವಾರ, ಜನವರಿ 24, 2014

ಅವರೆ ಕಾಳಿನ ಬಾಜಿ / ಸಬ್ಜಿ (In Restaurant Style):

ಸಾಮಗ್ರಿಗಳು : ಅವರೆ ಕಾಳು 2 ಕಪ್, ಗೋಡಂಬಿ 1/2 ಕಪ್, ದೊಡ್ಡ ಟೊಮೇಟೊ 1, ಹೆಚ್ಚಿದ ಹೂಕೋಸು 1-2 ಕಪ್, ಶುಂಟಿ - ಬೆಳ್ಳುಳ್ಳಿ ಪೇಸ್ಟ್ - 2 ಚಮಚ, ಈರುಳ್ಳಿ - 1 (ದೊಡ್ಡದು) ಮತ್ತು 1 ಮಧ್ಯಮ ಗಾತ್ರದ್ದು, ಹಸಿ ಮೆಣಸಿನ ಕಾಯಿ 2-3, ಗರಂ ಮಸಾಲ ಪುಡಿ 1 ಚಮಚ, ಧನಿಯಾ ಪುಡಿ 1 ಚಮಚ, ಜೀರಿಗೆ ಪುಡಿ 1/2 ಚಮಚ, ಎಣ್ಣೆ 5-6 ಚಮಚ.  

ವಿಧಾನ : ಮೊದಲು ಗೋಡಂಬಿಯನ್ನು 15-20 ನಿಮಿಷಗಳವರೆಗೆ ನೆನೆಸಿಟ್ಟುಕೊಳ್ಳಿ . ದೊಡ್ಡ ಈರುಳ್ಳಿಯನ್ನು ಹೆಚ್ಚಿಕೊಂಡು, ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿ. ಇದು ಸ್ವಲ್ಪ ಬಾಡಿದ ಮೇಲೆ ಹಸಿಮೆಣಸಿನ ಕಾಯಿ, ಸಣ್ಣಗೆ ಹೆಚ್ಚಿದ ಟೊಮೇಟೊ ಹಾಕಿ ಮೆತ್ತಗಾಗುವ ತನಕ ಫ್ರೈ ಮಾಡಿ ಕೆಳಗಿಳಿಸಿ (ಸ್ವಲ್ಪ ಉಪ್ಪು ಹಾಕಿ ಫ್ರೈ ಮಾಡಿದರೆ ಬೇಗನೆ ಮೆತ್ತಗಾಗುತ್ತದೆ). ಇದು ತಣ್ಣಗಾದ ಮೇಲೆ ನೆನೆಸಿಟ್ಟ ಗೋಡಂಬಿಯ ಜೊತೆ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಮಧ್ಯಮ ಗಾತ್ರದ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ನಂತರ ಕುಕ್ಕರ್ ಗೆ 4-5 ಚಮಚ ಎಣ್ಣೆ ಹಾಕಿ, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣಕ್ಕೆ ತಿರುಗುವ ತನಕ ಹುರಿಯಿರಿ. ನಂತರ ಇದಕ್ಕೆ ಶುಂಟಿ - ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿದು, ಗರಂ ಮಸಾಲ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಹೂಕೋಸು, ಅವರೆಕಾಳುಗಳನ್ನು ಹಾಕಿ, ರುಬ್ಬಿದ ಮಿಶ್ರಣ, ಉಪ್ಪು, ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಿಮಗೆ ಸಬ್ಜಿ ಎಷ್ಟು ಗಟ್ಟಿ ಬೇಕು ನೋಡಿಕೊಂಡು ನೀರು ಹಾಕಿ. ಈಗ ಕುಕ್ಕರ್ ಮುಚ್ಚಿ 3 ಕೂಗು ಕೂಗಿಸಿ, ಇಳಿಸಿದರೆ ಅವರೇ ಕಾಳಿನ ಸಬ್ಜಿ / ಬಾಜಿ ಪುಲ್ಕಾ, ಚಪಾತಿ, ಪೂರಿ ಜೊತೆ ಸವಿಯಲು ಸಿದ್ಧ. 

ಸೂಚನೆ : ಇದೇ ವಿಧಾನದಲ್ಲಿ ಹಸಿ ಬಟಾಣಿಯ ಸಬ್ಜಿ ತುಂಬಾ ಚೆನ್ನಾಗಿರುತ್ತದೆ. ಬೇರೆ ಯಾವುದೇ ಕಾಳುಗಳನ್ನು ಉಪಯೋಗಿಸಿ ಕೂಡ ಮಾಡಬಹುದು. ಒಣಗಿದ ಕಾಳುಗಳನ್ನ (ಕಾಬೂಲ್ ಕಡಲೆ, ಅಲಸಂದೆ ಇತ್ಯಾದಿ) ಉಪಯೋಗಿಸುತ್ತೀರಾದರೆ, ಹಿಂದಿನ ದಿನವೇ ನೀರಿನಲ್ಲಿ ನೆನೆಸಿಕೊಳ್ಳಿ.          

ಸೋಮವಾರ, ಜನವರಿ 20, 2014

ಸಾ೦ಬಾರ್ ಸೊಪ್ಪಿನ (ದೊಡ್ಡ ಪತ್ರೆ) ಗೊಜ್ಜು & ಚಟ್ನಿ:





ಸಾಮಾಗ್ರಿಗಳು: ಸಾ೦ಬಾರ್ ಸೊಪ್ಪು (ದೊಡ್ಡ ಪತ್ರೆ) – 8-10 , ತೆ೦ಗಿನ ಕಾಯಿ ತುರಿ  ½ ಕಪ್, ಎಳ್ಳು ½ ಚಮಚ , ಕೆ೦ಪು(ಒಣ) ಮೆಣಸು 5-6, ಧನಿಯಾ ¼ ಚಮಚ, ಜೀರಿಗೆ ¼ ಚಮಚ, ಬೆಲ್ಲ - ಚಿಕ್ಕ ನಿ೦ಬೆಹಣ್ಣಿನ ಗಾತ್ರದಷ್ಟು, ಹುಣಸೆ ಹಣ್ಣು ನಿಮ್ಮ ಅಳತೆ , ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು.



ವಿಧಾನ: ದೊಡ್ಡಪತ್ರೆ ಎಲೆಯನ್ನು ಸ್ವಲ್ಪ ಎಣ್ಣೆಯನ್ನು ಹಾಕಿ ಬಾಡಿಸಿಕೊಳ್ಳಿ. ಒಣ ಮೆಣಸು, ಎಳ್ಳು, ಧನಿಯಾ, ಜೀರಿಗೆ ಹುರಿದುಕೊಡು, ಬಾಡಿಸಿದ ದೊಡ್ಡಪತ್ರೆ ಎಲೆ ಮತ್ತು ತೆ೦ಗಿನ ತುರಿ ಹುಣಸೆ ಹಣ್ಣು ಸೇರಿಸಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ ಉಪ್ಪು & ಬೆಲ್ಲ ಸೇರಿಸಿ ಸಲ್ಪ ನೀರು (ಮಮೂಲಿ ಗೊಜ್ಜಿನ ಹದ) ಹಾಕಿ 10 ನಿಮಿಷ ಕುದಿಸಿ. ಇದು ಸಿಹಿ ಖಾರ ಎರಡೂ ಸೇರಿ ಅನ್ನದ ಜೊತೆ ತಿನ್ನಲು ಮಜವಾಗಿರುತ್ತದೆ.




ಸಾ೦ಬಾರ್ ಸೊಪ್ಪಿನ ಚಟ್ನಿ:
ಸಾಮಾಗ್ರಿಗಳು: ಬೆಲ್ಲವನ್ನು ಹೊರತು ಪಡಿಸಿ ಮತ್ತೆಲ್ಲ ಸಾಮಾಗ್ರಿಗಳ ಅಗತ್ಯವಿದೆ.



ವಿಧಾನ: ದೊಡ್ಡಪತ್ರೆ ಎಲೆಯನ್ನು ಸ್ವಲ್ಪ ಎಣ್ಣೆಯನ್ನು ಹಾಕಿ ಬಾಡಿಸಿಕೊಳ್ಳಿ. ಒಣ ಮೆಣಸು, ಧನಿಯಾ, ಜೀರಿಗೆ ಎಳ್ಳು ಹುರಿದುಕೊಡು, ಬಾಡಿಸಿದ ದೊಡ್ಡಪತ್ರೆ ಎಲೆ ಮತ್ತು ತೆ೦ಗಿನ ತುರಿ ಸೇರಿಸಿ ರುಬ್ಬಿಕೊಳ್ಳಿ. ಜಾಸ್ತಿ ನೀರು ಸೇರಿಸಬಾರದು. ಗಟ್ಟಿ ಚಟ್ನಿ ಹದಕ್ಕೆ ಇರಬೇಕು.

ಚಿಕ್ಕ ಮಕ್ಕಳ ಆರೋಗ್ಯಕ್ಕೆ ಸಲಹೆ:ಸಾ೦ಬಾರ್ ಸೊಪ್ಪನ್ನು ಬೆ೦ಕಿಯಲ್ಲಿ ಹಿಡಿದು ಸ್ವಲ್ಪ ಬಾಡಿದ ಮೇಲೆ ಅದರ ರಸ ತೆಗೆದು ಸ್ವಲ್ಪ ಬೆಲ್ಲ ಸೇರಿಸಿ ಚಿಕ್ಕ ಮಕ್ಕಳಿಗೆ ಕುಡಿಸುವುದರಿ೦ದ ನೆಗಡಿ(ಥ೦ಡಿ) ಉಪಶಮನವಾಗುತ್ತದೆ.




ಭಾನುವಾರ, ಜನವರಿ 19, 2014

ಆರೆಂಜ್ ಪುಲಾವ್

                                                                    
ಬೇಕಾಗುವ ಸಾಮಗ್ರಿಗಳು : ಅಕ್ಕಿ ೧ ಕಪ್ , ಕಿತ್ತಳೆ ಹಣ್ಣು ೩, ಗೋಡಂಬಿ ೧  ಟೀ ಸ್ಪೂನ್, ತೆಂಗಿನ ಕಾಯಿ ಹಾಲು ೧/೨  ಕಪ್ , ಈರುಳ್ಳಿ ೨, ಹಸಿಮೆಣಸು ೪, ಶುಂಠಿ ಬೆಳ್ಳುಳ್ಳಿ ಪೇಸ್ಟ್ ೧ ಟೀ ಸ್ಪೂನ್, ತುಪ್ಪ ಅಥವಾ ಎಣ್ಣೆ ೩ ಟೀ ಸ್ಪೂನ್, ಕೊತ್ತಂಬರಿ ಸೊಪ್ಪು ೧/೪ ಕಪ್, ಬೀನ್ಸ್ ಮತ್ತು ಕ್ಯಾರೆಟ್ ತಲಾ ೧/೨ ಕಪ್,  ಪುಲಾವ್ ಪೌಡರ್ ಅಥವಾ ಪಾವ್ ಬಾಜಿ ಮಸಾಲ ಪೌಡರ್ ೨ ಟೀ ಸ್ಪೂನ್ .
ಸಲಹೆ : ತೆಂಗಿನ  ತುರಿಯನ್ನು  ರುಬ್ಬಿ ಅದರ ರಸವನ್ನು ಹಿಂಡಿ ತೆಗೆದು ತೆಂಗಿನ ಹಾಲು ಸಿದ್ಧ ಪಡಿಸಿ. ಮತ್ತು ೩ ಕಿತ್ತಳೆ ಹಣ್ಣುಗಳನ್ನು ಬಿಡಿಸಿ  ಬೀಜ ತೆಗೆದು , ತೊಳೆಯನ್ನು ಮಿಕ್ಸಿ ಯಲ್ಲಿ ಹಾಕಿ ರಸ ತೆಗೆದಿಟ್ಟುಕೊಳ್ಳಿ .  ಸ್ವಲ್ಪ ಸಿಹಿ ಇಷ್ಟ ಪಡುವವರು ಕಿತ್ತಳೆ ರಸದ ಜೊತೆ 4 ಚಮಚ ಸಕ್ಕರೆ ಹಾಕಿಕೊಳ್ಳಬಹುದು .

ಮಾಡುವ ವಿಧಾನ :
ಪ್ರೆಶರ್ ಕುಕ್ಕರ್ ನಲ್ಲಿ ಎಣ್ಣೆ  ೩ ಟೀ ಸ್ಪೂನ್ ಎಣ್ಣೆ ಹಾಕಿ , ಕಾದ ನಂತರ ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್  ಹಾಕಿ ಫ್ರೈ ಮಾಡಿ, ನಂತರ ಉದ್ದುದ್ದ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ, ಈರುಳ್ಳಿ ಫ್ರೈ ಆದೊಡನೆ ಹೆಚ್ಚಿದ ಬೀನ್ಸ್ ಮತ್ತು ಕ್ಯಾರೆಟ್ ಮತ್ತು ಪುಲಾವ್ ಪೌಡರ್ ಅಥವಾ ಪಾವ್ ಬಾಜಿ ಮಸಾಲ ಪೌಡರ್ ಹಾಕಿ ಫ್ರೈ ಮಾಡಿ . ೧/೪ ಕಪ್ ಕಾಯಿ ಹಾಲು ಸೇರಿಸಬೇಕು . ಒಂದು ಕುದಿ ಬಂದ ತಕ್ಷಣ  ಇದಕ್ಕೆ ಅಕ್ಕಿಯನ್ನು ತೊಳೆದು ಹಾಕಿ ೧ ನಿಮಿಷ ಫ್ರೈ ಮಾಡಿ , ೧.೫  ಕಪ್ ಕಿತ್ತಳೆ ರಸವನ್ನು ಹಾಕಿ , ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನಂತರ ಕುಕ್ಕರ್ ಮುಚ್ಚಿ 3 ವಿಸಲ್ ಕೂಗಿಸಿ. ಉಗಿ ಇಳಿದ ಮೇಲೆ ತೆಗೆದು ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಒಮ್ಮೆ ಚೆನ್ನಾಗಿ ಮಿಕ್ಸ್ ಆಗುವಂತೆ ಕಲಸಿ. ಆರೆಂಜ್ ಪುಲಾವ್ ರೆಡಿ ..

ಶುಕ್ರವಾರ, ಜನವರಿ 3, 2014

ಸಾ೦ಬಾರ್ ದೋಸೆ:



 













ಸಾಮಾಗ್ರಿಗಳು: ಅಕ್ಕಿ 2 ಕಪ್, ಉದ್ದಿನ ಬೇಳೆ ½ ಕಪ್, ಕಡಲೆ ಬೇಳೆ 3 ಚಮಚ , ಮೆ೦ತೆ – ½ ಚಮಚ, ಜೀರಿಗೆ 1 ½ ಚಮಚ, ಒಣಮೆಣಸು 5-6, ಧನಿಯ 1 ½ ಚಮಚ, ಈರುಳ್ಳಿ 2 ದೊಡ್ಡದು, ಕೊತ್ತ೦ಬರಿ ಸೊಪ್ಪು ಸ್ವಲ್ಪ, ಹಸಿ ಮೆಣಸು 2-3, ಕರಿಬೇವು


ಮಾಡುವ ವಿಧಾನ:ಅಕ್ಕಿ,ಉದ್ದಿನ ಬೇಳೆ, ಕಡಲೆ ಬೇಳೆ, ಮೆ೦ತೆ ಇವನ್ನು 6-7 ಗ೦ಟೆಗಳ ಕಾಲ ನೀರಿನಲ್ಲಿ ನೆನೆಸಿಡಿ (ಬೆಳಿಗ್ಗೆ ನೆನೆಸಿ ರಾತ್ರಿ ರುಬ್ಬಿ) ರುಬ್ಬುವಾಗ ಇವೆಲ್ಲದರ ಜೊತೆಗೆ ಧನಿಯಾ, ಜೀರಿಗೆ, ಚಿಟಿಕೆ ಅರಿಶಿನ ಹಾಕಿ ನುಣ್ಣಗೆ ರುಬ್ಬಿ ಇಡಿ. ರಾತ್ರಿ ರುಬ್ಬಿ ಇಡುವುದರಿ೦ದ ಬೆಳಿಗ್ಗೆ ಹೊತ್ತಿಗೆ ಹಿಟ್ಟು ಚೆನ್ನಾಗಿ ಹದ ಬ೦ದಿರುತ್ತದೆ. ದೋಸೆ ಹಿಟ್ಟಿಗೆ ಈರುಳ್ಳಿ, ಕೊತ್ತ೦ಬರಿ ಸೊಪ್ಪು ಮತ್ತು ಹಸಿಮೆಣಸನ್ನು ಸಣ್ಣಗೆ ಹೆಚ್ಚಿ ಹಾಕಿ. (ಕರಿಬೇವನ್ನು ಅಕ್ಕಿಯ ಜೊತೆಗೆ ರುಬ್ಬಲು ಹಾಕಬಹುದು ಅಥವಾ ಕೊತ್ತ೦ಬರಿ ಸೊಪ್ಪಿನ ಹಾಗೆ ಸಣ್ಣಗೆ ಹೆಚ್ಚಿ ದೋಸೆ ಹಿಟ್ಟಿಗೆ ಸೇರಿಸ ಬಹುದು) ಉಪ್ಪು ರುಚಿಗೆ ತಕ್ಕಷ್ಟು, ಬೆಲ್ಲ ಚಿಕ್ಕ ಚಮಚದಲ್ಲಿ ಅರ್ಧ ಚಮಚ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. (ಚಳಿಗಾಲದ ಸಮಯದಲ್ಲಿ ಅಕ್ಕಿಯನ್ನು ಹಿ೦ದಿನ ದಿನ ಮಧ್ಯಾಹ್ನವೇ ರುಬ್ಬಿಕೊ೦ಡರೆ ಮರುದಿನ ಬೆಳಿಗ್ಗೆಯ ಹೊತ್ತಿಗೆ ಹಿಟ್ಟಿನ ಸರಿಯಾಗಿ ಹದ ಬ೦ದಿರುತ್ತದೆ)
ಕಾವಲಿಗೆ ಎಣ್ಣೆ ಹಚ್ಚಿಕೊ೦ಡು ದೋಸೆ ಮಾಡುವಾಗ ಅದರ ಮೇಲೆ ಸ್ವಲ್ಪ ಎಣ್ಣೆ ಹಾಕಿ.

ಈ ದೋಸೆಯನ್ನು ತುಪ್ಪ ಬೆಲ್ಲ ಅಥವಾ ಚಟ್ನಿ ಜೊತೆ ತಿನ್ನಬಹುದು. ಇದಕ್ಕೆ ಹುರಿಗಡಲೆ ಚಟ್ನಿ / ಶೇ೦ಗಾ ಚಟ್ನಿ

ಚೆನ್ನಾಗಿರುತ್ತದೆ.