ಗುರುವಾರ, ಜನವರಿ 2, 2014

ಸೌತೆಕಾಯಿ ಬಜೆ / ಪಕೋಡ :

ಸಾಮಗ್ರಿ: ಸೌತೆಕಾಯಿ 1 (ಮೀಡಿಯಂ ಗಾತ್ರದ್ದು), ಉಪ್ಪಿಟ್ಟು ರವೆ 1 - 1.5 ಕಪ್, ಅಕ್ಕಿ ಹಿಟ್ಟು 2 ಚಮಚ, ಸಣ್ಣಗೆ ಹೆಚ್ಚಿದ ಕರಿಬೇವು 1 - 2 ಚಮಚ, ಅಚ್ಚ ಮೆಣಸಿನ ಪುಡಿ 1 - 2 ಚಮಚ (ನಿಮ್ಮ ಖಾರಕ್ಕೆ ತಕ್ಕಂತೆ ಬದಲಾಯಿಸಬಹುದು), ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.

ವಿಧಾನ: ಸೌತೆಕಾಯಿ ಸಿಪ್ಪೆ ತೆಗೆದು ತುರಿಯಿರಿ (ಬಲಿತು ಹೋದ ಸೌತೆ ಕಾಯಾದರೆ ಬೀಜ ತೆಗೆಯಿರಿ). ನಂತರ ಅದನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಉಪ್ಪು, ಮೆಣಸಿನ ಪುಡಿ, ಕರಿಬೇವು ಹಾಕಿ. ನಂತರ ಸ್ವಲ್ಪ ಸ್ವಲ್ಪವೇ ರವೆ ಹಾಕುತ್ತ ಕಲಸುತ್ತಾ ಬನ್ನಿ. ಈ ಮಿಶ್ರಣ ಕೈ ಬಿಟ್ಟು, ಎಣ್ಣೆಯಲ್ಲಿ ಬಿಡುವಷ್ಟು ಗಟ್ಟಿ ಆದರೆ ಸಾಕು, ತುಂಬಾ ಗಟ್ಟಿಯಾಗುವಷ್ಟು ರವೆ ಹಾಕುವುದು ಬೇಡ. ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ. ಮಿಶ್ರಣವನ್ನು ಉಪ್ಪು ಖಾರ ಸರಿಯಾಗಿದೆಯೇ ಎಂದು ಪರೀಕ್ಷಿಸಿ ಸರಿ ಪಡಿಸಬಹುದು. ಇನ್ನೇನು ಕರಿಯಲು ಸಿದ್ಧ ಎನ್ನುವಷ್ಟರಲ್ಲಿ 2 ಚಮಚ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಸೌತೆಕಾಯಿ ನೀರು ಬಿಟ್ಟು ಕೊಳ್ಳುವುದರಿಂದ ಹಿಟ್ಟು ಸ್ವಲ್ಪ ತೆಳುವಾಗಿದೆ ಎನಿಸಿದರೆ ಮತ್ತೆ ಸ್ವಲ್ಪ ರವೆ ಹಾಕಿ ಕಲಸಿ, ಅಕ್ಕಿ ಹಿಟ್ಟನ್ನು ಹಾಕಬೇಡಿ. (ಅಕ್ಕಿ ಹಿಟ್ಟನ್ನು ಜಾಸ್ತಿ ಹಾಕಿದರೆ ಬಜೆ ಗಟ್ಟಿಯಾಗುತ್ತದೆ). ನಂತರ ಈ ಮಿಶ್ರಣವನ್ನು ಕೈ ಅಲ್ಲಿ ತೆಗೆದುಕೊಂಡು ಗೋಲಿಗಳಂತೆ ಎಣ್ಣೆಯಲ್ಲಿ ಬಿಟ್ಟು ಹೊಂಬಣ್ಣ ಬರುವ ತನಕ ಕರಿಯಿರಿ. ಗರಿಗರಿಯಾದ ಸೌತೆಕಾಯಿ ಬಜೆ ಸವಿಯಲು ಸಿದ್ಧ. ದಿಢೀರ್ ಅತಿಥಿಗಳ ಆಗಮನವಾದಾಗ ದಿಢೀರನೆ ಇದನ್ನು ಮಾಡಬಹುದು. 



ಸೂಚನೆ : 1) ಮಿಶ್ರಣದ ಜೊತೆ ಹೆಚ್ಚಿದ ಈರುಳ್ಳಿ ಕೂಡ ಹಾಕಬಹುದು. ಸೌತೆಕಾಯಿಯ ಪರಿಮಳ ಇಷ್ಟ ಪಡುವವರು ಈರುಳ್ಳಿ ಹಾಕಬೇಡಿ.
2) ಹಳ್ಳಿ ಕಡೆ ಬೆಳೆಯುವ ಮುಳ್ಳು ಸವತೆಯಾದರೆ ಮತ್ತೂ ಗರಿ ಗರಿಯಾಗುತ್ತದೆ. 

ಅಡುಗೆ ಮನೆಗೊಂದು ಸಲಹೆ: ರಸ ತೆಗೆದ ಲಿಂಬು ಹಣ್ಣನ್ನು ಬಿಸಾಕಬೇಡಿ. ಪ್ರತಿದಿನ ಕುಕ್ಕರಿನಲ್ಲಿ ಅನ್ನ / ಬೇಳೆ ಬೇಯಿಸುವಾಗ ತಳಕ್ಕೆ ನೀರಿನ ಜೊತೆ ಈ ಲಿಂಬು ಸಿಪ್ಪೆಯನ್ನು ಹಾಕಿಡಿ, ತಳ ಕಪ್ಪಗಾಗುವುದಿಲ್ಲ....!! 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ