ಸಾಮಗ್ರಿಗಳು : ಅವರೆ ಕಾಳು 2 ಕಪ್, ಗೋಡಂಬಿ 1/2 ಕಪ್, ದೊಡ್ಡ ಟೊಮೇಟೊ 1, ಹೆಚ್ಚಿದ ಹೂಕೋಸು 1-2 ಕಪ್, ಶುಂಟಿ - ಬೆಳ್ಳುಳ್ಳಿ ಪೇಸ್ಟ್ - 2 ಚಮಚ, ಈರುಳ್ಳಿ - 1 (ದೊಡ್ಡದು) ಮತ್ತು 1 ಮಧ್ಯಮ ಗಾತ್ರದ್ದು, ಹಸಿ ಮೆಣಸಿನ ಕಾಯಿ 2-3, ಗರಂ ಮಸಾಲ ಪುಡಿ 1 ಚಮಚ, ಧನಿಯಾ ಪುಡಿ 1 ಚಮಚ, ಜೀರಿಗೆ ಪುಡಿ 1/2 ಚಮಚ, ಎಣ್ಣೆ 5-6 ಚಮಚ.
ವಿಧಾನ : ಮೊದಲು ಗೋಡಂಬಿಯನ್ನು 15-20 ನಿಮಿಷಗಳವರೆಗೆ ನೆನೆಸಿಟ್ಟುಕೊಳ್ಳಿ . ದೊಡ್ಡ ಈರುಳ್ಳಿಯನ್ನು ಹೆಚ್ಚಿಕೊಂಡು, ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿ. ಇದು ಸ್ವಲ್ಪ ಬಾಡಿದ ಮೇಲೆ ಹಸಿಮೆಣಸಿನ ಕಾಯಿ, ಸಣ್ಣಗೆ ಹೆಚ್ಚಿದ ಟೊಮೇಟೊ ಹಾಕಿ ಮೆತ್ತಗಾಗುವ ತನಕ ಫ್ರೈ ಮಾಡಿ ಕೆಳಗಿಳಿಸಿ (ಸ್ವಲ್ಪ ಉಪ್ಪು ಹಾಕಿ ಫ್ರೈ ಮಾಡಿದರೆ ಬೇಗನೆ ಮೆತ್ತಗಾಗುತ್ತದೆ). ಇದು ತಣ್ಣಗಾದ ಮೇಲೆ ನೆನೆಸಿಟ್ಟ ಗೋಡಂಬಿಯ ಜೊತೆ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಮಧ್ಯಮ ಗಾತ್ರದ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ನಂತರ ಕುಕ್ಕರ್ ಗೆ 4-5 ಚಮಚ ಎಣ್ಣೆ ಹಾಕಿ, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣಕ್ಕೆ ತಿರುಗುವ ತನಕ ಹುರಿಯಿರಿ. ನಂತರ ಇದಕ್ಕೆ ಶುಂಟಿ - ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿದು, ಗರಂ ಮಸಾಲ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಹೂಕೋಸು, ಅವರೆಕಾಳುಗಳನ್ನು ಹಾಕಿ, ರುಬ್ಬಿದ ಮಿಶ್ರಣ, ಉಪ್ಪು, ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಿಮಗೆ ಸಬ್ಜಿ ಎಷ್ಟು ಗಟ್ಟಿ ಬೇಕು ನೋಡಿಕೊಂಡು ನೀರು ಹಾಕಿ. ಈಗ ಕುಕ್ಕರ್ ಮುಚ್ಚಿ 3 ಕೂಗು ಕೂಗಿಸಿ, ಇಳಿಸಿದರೆ ಅವರೇ ಕಾಳಿನ ಸಬ್ಜಿ / ಬಾಜಿ ಪುಲ್ಕಾ, ಚಪಾತಿ, ಪೂರಿ ಜೊತೆ ಸವಿಯಲು ಸಿದ್ಧ.
ಸೂಚನೆ : ಇದೇ ವಿಧಾನದಲ್ಲಿ ಹಸಿ ಬಟಾಣಿಯ ಸಬ್ಜಿ ತುಂಬಾ ಚೆನ್ನಾಗಿರುತ್ತದೆ. ಬೇರೆ ಯಾವುದೇ ಕಾಳುಗಳನ್ನು ಉಪಯೋಗಿಸಿ ಕೂಡ ಮಾಡಬಹುದು. ಒಣಗಿದ ಕಾಳುಗಳನ್ನ (ಕಾಬೂಲ್ ಕಡಲೆ, ಅಲಸಂದೆ ಇತ್ಯಾದಿ) ಉಪಯೋಗಿಸುತ್ತೀರಾದರೆ, ಹಿಂದಿನ ದಿನವೇ ನೀರಿನಲ್ಲಿ ನೆನೆಸಿಕೊಳ್ಳಿ.
ನಾಳೇನೇ tryingಊ.
ಪ್ರತ್ಯುತ್ತರಅಳಿಸಿ:) :)
ಅಳಿಸಿ