ಬುಧವಾರ, ಜುಲೈ 30, 2014

ಮಾವಿನಕಾಯಿ ಅಪ್ಪೇಹುಳಿ:



ಈ ಅಪ್ಪೇಹುಳಿಯನ್ನು ಎರಡು ಥರದಲ್ಲಿ ಮಾಡಬಹುದು. ಆ ಎರಡೂ ವಿಧಾನವನ್ನು ತಿಳಿಸುತ್ತೇನೆ.
ಸಾಮಾಗ್ರಿಗಳು: ಹುಳಿ ಮಾವಿನಕಾಯಿ - ಮಧ್ಯಮ ಗಾತ್ರದ್ದು - 1, ಹಸಿಮೆಣಸು- 2, ಒಣಮೆಣಸು - 1, ಬೆಳ್ಳುಳ್ಳಿ-4 ಎಸಳು, ಕರಿಬೇವು 3-4 ಎಲೆ, ಎಣ್ಣೆ – 2 ಚಮಚ, ಸಾಸಿವೆ ½ ಚಮಚ .



ವಿಧಾನ 1: ಮಾವಿನಕಾಯಿಗೆ ನೀರು ಹಾಕಿ 15-20 ನಿಮಿಷ ಬೇಯಿಸಿ ಅದನ್ನು ನೀರಿನಿ೦ದ ತೆಗೆದು ಬದಿಯಲ್ಲಿ ಇಡಿ. ಅದು ತಣ್ಣಗಾದ ನ೦ತರ ಅದಕ್ಕೆ ಸ್ವಲ್ಪ ನೀರು ಸೇರಿಸಿ ರಸ ತೆಗೆಯಬೇಕು. ಸಿಪ್ಪೆ & ಗೊರಟೆಯನ್ನು ಎಸೆದುಬಿಡಿ. ನ೦ತರ 2 ಲೋಟ ನೀರು ಸೇರಿಸಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಬೆಳ್ಳುಳ್ಳು ಜಜ್ಜಿಕೊಳ್ಳಿ. ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ, ಸ್ವಲ್ಪ ಬಿಸಿಯಾದ ನ೦ತರ ಹಸಿಮೆಣಸು, ಒಣಮೆಣಸನ್ನು ಚಿಕ್ಕ ಚಿಕ್ಕ ಚೂರುಗಳನ್ನು ಮಾಡಿ ಹಾಕಬೇಕು, ನ೦ತರ ಸಾಸಿವೆ ಹಾಕಿ ಅದು ಸಿಡಿದ ಮೇಲೆ ಕರಿಬೇವು, ಬೆಳ್ಳುಳ್ಳಿ ಹಾಕಿ, ಮಾವಿನಕಾಯಿ ನೀರಿಗೆ ಒಗ್ಗರಣೆ ಕೊಡಿ.


ವಿಧಾನ 2 : ಮಾವಿನ ಕಾಯಿಯನ್ನು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಹೆಚ್ಚಿಕೊ೦ಡು ಹಸಿ ಮೆಣಸು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ, ರುಬ್ಬಿದ ಮಾವಿನಕಾಯಿಯನ್ನು ಒ೦ದು ಪಾತ್ರೆಗೆ ಹಾಕಿ 3 ಲೋಟ ನೀರನ್ನು ಹಾಕಬೇಕು. ಇದಕ್ಕೆ ಉಪ್ಪು, ಸಕ್ಕರೆ, ಹಾಕಿ ಚೆನ್ನಾಗಿ ಕಲಕಿ. ಇದಕ್ಕೆ ಮೊದಲು ಹೇಳಿದ೦ತೆ ಒಗ್ಗರಣೆ ಕೊಡಿ.
ಇದು ಹಾಗೆ ಕುಡಿಯಲು ತು೦ಬಾ ಚೆನ್ನಾಗಿ ಇರುತ್ತದೆ.
ಜೀರ್ಣಕ್ಕೆ ಸಹಕಾರಿಯು ಹೌದು. ಅದಕ್ಕೆ ಮಲೆನಾಡ ಕಡೆ ಏನಾದರು ಹಬ್ಬ/ಮದುವೆ/ಮು೦ಜಿಯಲ್ಲಿ ಇದನ್ನು ಕಡ್ಡಾಯವಾಗಿ ಮಾಡಿರುತ್ತಾರೆ ;) :)
 

ಮಂಗಳವಾರ, ಜುಲೈ 22, 2014

ಪಾಲಕ್ ಸೊಪ್ಪಿನ ಹಶಿ / ಮೊಸರು ಬಜ್ಜಿ :

ಸಾಮಗ್ರಿಗಳು: 
ಪಾಲಕ್ ಸೊಪ್ಪು - 1 ಕಟ್ಟು 
ತೆಂಗಿನ ತುರಿ  - 1 ಕಪ್ 
ಮೊಸರು - 1 ಕಪ್ 
ಈರುಳ್ಳಿ - 1 (ಮೀಡಿಯಂ ಗಾತ್ರದ್ದು)
ಉಪ್ಪು - ರುಚಿಗೆ ತಕ್ಕಷ್ಟು 

ಒಗ್ಗರಣೆಗೆ: ಎಣ್ಣೆ 1 ಚಮಚ, ಉದ್ದಿನ ಬೇಳೆ 1/2 ಚಮಚ, ಒಣ ಮೆಣಸಿನ ಕಾಯಿ 1, ಸಾಸಿವೆ 1/4 ಚಮಚ 

ವಿಧಾನ:
ಪಾಲಕ್ ಎಲೆಗಳನ್ನು ನೀರಿನಲ್ಲಿ ಶುಚಿಯಾಗಿ ತೊಳೆದು ಸಣ್ಣಗೆ ಹೆಚ್ಚಿಕೊಂಡು 1/4 ನೀರು ಹಾಕಿ ಚೆನ್ನಾಗಿ ಬೇಯಿಸಿ ತಣ್ಣಗಾಗಲು ಬಿಡಿ. 



ತೆಂಗಿನ ತುರಿಯನ್ನು ನುಣ್ಣಗೆ ರುಬ್ಬಿಕೊಂಡು ಬೇಯಿಸಿದ ಸೊಪ್ಪಿಗೆ ಹಾಕಿ, ಮೊಸರು, ಉಪ್ಪು ಹಾಕಿ ಕಲಕಿ. (ಮೊಸರು ಜಾಸ್ತಿ ಹುಳಿ ಇದ್ದರೆ 1/4 ಚಮಚ ಸಕ್ಕರೆ ಸೇರಿಸಿ) ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಿ. ನಂತರ ಎಣ್ಣೆ, ಉದ್ದಿನ ಬೇಳೆ, ಒಣ ಮೆಣಸಿನ ಕಾಯಿ, ಸಾಸಿವೆ ಒಗ್ಗರಣೆ ಮಾಡಿ, ಒಣ ಮೆಣಸಿನ ಕಾಯಿಯನ್ನು ಸಣ್ಣಗೆ ಅರೆಯಿರಿ. ಬಿಸಿ ಬಿಸಿ ಅನ್ನದ ಜೊತೆ ಪಾಲಕ್ ಹಶಿ / ಮೊಸರು ಬಜ್ಜಿ ಸವಿದು ನೋಡಿ...... 

ಮನೆ ಮದ್ದು: ಒಣ ಕೆಮ್ಮು ಶುರುವಾದರೆ ರಾತ್ರಿ ಮಲಗಿದಾಗ ತೊಂದರೆ ಕೊಡುವುದು ಜಾಸ್ತಿ ಅಲ್ಲವೇ...?! ಮಲಗುವಾಗ 3-4 ಒಣ ದ್ರಾಕ್ಷಿಯನ್ನು ಸುಮ್ಮನೆ ಬಾಯಲ್ಲಿರಿಸಿಕೊಂಡು ಮಲಗಿ (ಅಗಿಯಬಾರದು). ಕೆಮ್ಮು ಕಮ್ಮಿಯಾಗಿ ಚೆನ್ನಾಗಿ ನಿದ್ದೆ ಬರುತ್ತದೆ. 

ಬುಧವಾರ, ಜುಲೈ 16, 2014

ಮೆಂತ್ಯ ಸೊಪ್ಪಿನ ಬಾತ್

ಬೇಕಾಗುವ ಸಾಮಗ್ರಿಗಳು : ಅಕ್ಕಿ ೧ ಕಪ್ , ಮೆಂತ್ಯ ಸೊಪ್ಪು (ಸಣ್ಣಗೆ ಹೆಚ್ಚಿದ್ದು ) ೩ ಕಪ್ , ಈರುಳ್ಳಿ ಸಣ್ಣಗೆ ಹೆಚ್ಚಿದ್ದು - ೧ ಕಪ್ , ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ೨ ಟೀ ಚಮಚ , ನಿಂಬು ರಸ ೨ ಟೀ ಚಮಚ,. 

ಒಗ್ಗರಣೆ ಗೆ ಬೇಕಾಗುವ ಸಾಮಗ್ರಿಗಳು : ಉದ್ದಿನಬೇಳೆ, ಸಾಸಿವೆ , ಬೆಳ್ಳುಳ್ಳಿ ೪ ಎಸಳು (ಸಣ್ಣಗೆ ಹೆಚ್ಚಿದ್ದು ), ಹಸಿಮೆಣಸು, ಗೋಡಂಬಿ ೭-೮, ಇಂಗು ೧ ಚಿಟಿಕೆ , ಕರಿಬೇವು 

ಮಸಾಲೆ ಪುಡಿ ಸಾಮಗ್ರಿಗಳು : ಕಡಲೆಬೇಳೆ ೩ ಟೀ ಚಮಚ, ಹುರಿಗಡಲೆ (ಪುಟಾಣಿ) ೧ ಟೀ ಚಮಚ, ಉದ್ದಿನಬೇಳೆ ೧ ಟೀ ಚಮಚ , ಕೊತ್ತಂಬರಿ ಕಾಳು ಅರ್ಧ ಟೀ ಚಮಚ , ಒಣಮೆಣಸು ೪,


ಮಾಡುವ ವಿಧಾನ : ಅಕ್ಕಿಯನ್ನು ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ. 

ಮೇಲೆ ತಿಳಿಸಿದ ಮಸಾಲೆ ಸಾಮಗ್ರಿಗಳಾದ - ಕಡಲೆಬೇಳೆ , ಉದ್ದಿನಬೇಳೆ , ಕೊತ್ತಂಬರಿ ಕಾಳು ,ಹುರಿಗಡಲೆ (ಪುಟಾಣಿ) ಮತ್ತು ಒಣಮೆಣಸನ್ನು ಒಂದು ಬಾಣಲೆಯಲ್ಲಿ ಎಣ್ಣೆ ಹಾಕದೆ ಹುರಿದು ಮಿಕ್ಸಿಯಲ್ಲಿ ಹಾಕಿ ಪುಡಿ ತಯಾರಿಸಿಟ್ಟುಕೊಳ್ಳಿ .. 

ಒಂದು ಬಾಣಲೆಗೆ ಎಣ್ಣೆ ಹಾಕಿ, ಉದ್ದಿನ ಬೇಳೆ ಹಾಕಿ ಹೊಂಬಣ್ಣಕ್ಕೆ  ಬಂದ ಮೇಲೆ ಸಾಸಿವೆ ಹಾಕಿ ಸಿಡಿಸಿ, ಹಸಿಮೆಣಸಿನ ಕಾಯಿ, ಕರಿಬೇವು ಅರಿಶಿನ ಪುಡಿ,ಗೋಡಂಬಿ , ಬೆಳ್ಳುಳ್ಳಿ ಮತ್ತು ಇಂಗು ಹಾಕಿ .. ನಂತರ ಹೆಚ್ಚಿದ ಈರುಳ್ಳಿ ಹಾಕಿ ೨ ನಿಮಿಷ ಫ್ರೈ ಮಾಡಿ ಆಮೇಲೆ ಹೆಚ್ಚಿದ ಮೆ೦ತೆ ಸೊಪ್ಪನ್ನು ಹಾಕಿ ಉಪ್ಪು ಸೇರಿಸಿ ೧೦ ನಿಮಿಷ ಫ್ರೈ ಮಾಡಿ . 

ಈಗ ಇದಕ್ಕೆ ತಯಾರಿಸಿದ ಮಸಾಲೆ ಪುಡಿ ಸೇರಿಸಿ (೩ - ೪ ಚಮಚ ), ಬೇಕಿದ್ದಲ್ಲಿ ಸ್ವಲ್ಪ ಎಣ್ಣೆ ಹಾಕಿ ೨ ನಿಮಿಷ ಚೆನ್ನಾಗಿ ಕಲಕುತ್ತ ಫ್ರೈ ಮಾಡಿ ..



ನಂತರ ಸ್ಟವ್ ಆರಿಸಿ ನಿಂಬು ರಸ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಅನ್ನ ಹಾಗು  ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ . 
                             
ಸೂಚನೆ: ಈ ಮಸಾಲೆ ಪುಡಿಯನ್ನು ಹಾಗಲಕಾಯಿ ಪಲ್ಯ ಅಥವ ಯಾವುದೇ ಸೊಪ್ಪಿನ ಪಲ್ಯಕ್ಕೆ ಬಳಸಬಹುದು.  

ಸೋಮವಾರ, ಜುಲೈ 14, 2014

ಮಾವಿನ ಕಾಯಿ ಪಲ್ಯ

ಸಾಮಗ್ರಿಗಳು : ಮಾವಿನ ಕಾಯಿ - 4-5 (ಚಿಕ್ಕದು), ಎಣ್ಣೆ 6 ಚಮಚ, ಸಾಸಿವೆ, 1/2 ಚಮಚ, ಉದ್ದಿನ ಬೇಳೆ 1 ಚಮಚ, ತೆಂಗಿನ ತುರಿ 1/4 ಕಪ್, ಹಸಿ ಮೆಣಸಿನಕಾಯಿ 3-4, ಕರಿಬೇವು ಸ್ವಲ್ಪ, ಸಕ್ಕರೆ 2 ಚಮಚ, ಅರಿಶಿನ ಪುಡಿ 1/4 ಚಮಚ, ಉಪ್ಪು ರುಚಿಗೆ ತಕ್ಕಷ್ಟು 

ವಿಧಾನ: ಮಾವಿನ ಕಾಯಿಗೆ ನೀರು, ಸ್ವಲ್ಪ ಉಪ್ಪು ಹಾಕಿ ಹೆಚ್ಚಲು ಬರುವಷ್ಟು ಗಟ್ಟಿಯಾಗಿ ಬೇಯಿಸಿಕೊಂಡು, ಸಣ್ಣಗೆ ಹೆಚ್ಚಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ನಂತರ ಸಾಸಿವೆ, ಉದ್ದಿನ ಬೇಳೆ, ಹೆಚ್ಚಿದ ಹಸಿಮೆಣಸು, ಕರಿಬೇವು ಹಾಕಿ. ನಂತರ ಹೆಚ್ಚಿದ ಮಾವಿನಕಾಯಿ ಹಾಕಿ ಚೆನ್ನಾಗಿ ಬಾಡಿಸಿ. ಇದಕ್ಕೆ ಸ್ವಲ್ಪ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಹಾಕಿ 3-4 ನಿಮಿಷ ಫ್ರೈ ಮಾಡಿ ಕಾಯಿ ತುರಿ ಹಾಕಿ ಸ್ವಲ್ಪ ಹುರಿದರೆ ಮಾವಿನ ಕಾಯಿ ಪಲ್ಯ ಅನ್ನದ ಜೊತೆ ಸವಿಯಲು ಸಿದ್ಧ.   


ಸೂಚನೆ: ಮಾವಿನ ಕಾಯಿ ಬೇಯಿಸುವಾಗ ಉಪ್ಪು ಹಾಕಿರುವುದರಿಂದ ಪಲ್ಯ ಮಾಡುವಾಗ ಸ್ವಲ್ಪವೇ ಉಪ್ಪು ಹಾಕಿ. 

ಶುಕ್ರವಾರ, ಜುಲೈ 4, 2014

ಮೆ೦ತೆ ಸೊಪ್ಪಿನ ಚಿತ್ರಾನ್ನ:



ಸಾಮಾಗ್ರಿಗಳು: ಉದುರುದುರಾದ ಅನ್ನ 1 ಕಪ್, ಮೆ೦ತೆ ಸೊಪ್ಪು (ಹೆಚ್ಚಿದ ಸೊಪ್ಪು 1 ಕಪ್), ಈರುಳ್ಳಿ 1 (ಚಿಕ್ಕದು) , ಹಸಿಮೆಣಸು 4-5, ಲಿ೦ಬು 1 , ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ, ಜೀರಿಗೆ ½ ಚಮಚ, ಸಾಸಿವೆ ½ ಚಮಚ, ಅರಿಶಿನ 3-4 ಚಿಟಿಕೆ




ವಿಧಾನ: ಮೆ೦ತೆ ಸೊಪ್ಪನ್ನು ಚೆನ್ನಾಗಿ ನೀರಿನಲ್ಲಿ ತೊಳೆದುಕೊ೦ಡು ಸಣ್ಣದಾಗಿ ಹೆಚ್ಚಿಕೊಳ್ಳಿ. ಈರುಳ್ಳಿಯನ್ನು ಉದ್ದುದ್ದಕ್ಕೆ ಹೆಚ್ಚಿಕೊಳ್ಳಬೇಕು. ಬಾಣಲೆಗೆ ೩ ಚಮಚ ಎಣ್ಣೆ ಹಾಕಿ ಅದು ಬಿಸಿಯಾದ ನ೦ತರ ಸಾಸಿವೆ, ಜೀರಿಗೆ, ಹೆಚ್ಚಿದ ಹಸಿಮೆಣಸು ಹಾಕಿ ಅದು ಚಿಟಪಟಿಸಿದ ಮೇಲೆ ಈರುಳ್ಳಿ ಹಾಕಿ ೨ ನಿಮಿಷ ಫ್ರೈ ಮಾಡಿ ಆಮೇಲೆ ಹೆಚ್ಚಿದ ಮೆ೦ತೆ ಸೊಪ್ಪನ್ನು ಹಾಕಿ ಉಪ್ಪು ಅರಿಶಿನ ಹಾಕಬೇಕು. ಇದನ್ನು ೧೦ ನಿಮಿಷ ಫ್ರೈ ಮಾಡಿ ಉರಿಯನ್ನು ಆರಿಸಿ ಈಗ ಲಿ೦ಬು ರಸ ಹಾಕಬೇಕು. ಇದಕ್ಕೆ ಮಾಡಿಟ್ಟುಕೊ೦ಡ ಅನ್ನವನ್ನು ಹಾಕಿ ಚೆನ್ನಾಗಿ ಕಲಸಿ. ಬೇಕಾದಲ್ಲಿ ರುಚಿ ನೋಡಿಕೊ೦ಡು ಉಪ್ಪು, ಹುಳಿ ಹಾಕಿಕೊಳ್ಳಿ.