ಬುಧವಾರ, ಏಪ್ರಿಲ್ 22, 2015

ಗೋಭಿ ಪರೋಟ (ವಿಧಾನ 2) :

ಸಾಮಗ್ರಿಗಳು: 
ಹೂಕೋಸು (ಗೋಬಿ) : 1 (ಮಧ್ಯಮ ಗಾತ್ರ),
ಧನಿಯಾ ಪುಡಿ : 1/2 ಟೇಬಲ್ ಚಮಚ,
ಜೀರಿಗೆ ಪುಡಿ : 1/2 ಟೇಬಲ್ ಚಮಚ,
ಗರಂ ಮಸಾಲಾ ಪುಡಿ : 1/2 ಟೇಬಲ್ ಚಮಚ,
ಅಚ್ಚ ಮೆಣಸಿನ ಪುಡಿ : 1/2 ಟೇಬಲ್ ಚಮಚ,
ಅರಿಶಿನ ಪುಡಿ : 1/4 ಟೇಬಲ್ ಚಮಚ,
ಕೊತ್ತಂಬರಿ ಸೊಪ್ಪು : 2 ಚಮಚ ಸಣ್ಣ ಹೆಚ್ಚಿದ್ದು
ಎಣ್ಣೆ : 1 ಚಮಚ,
ಉಪ್ಪು :  1/4 ಟೇಬಲ್ ಚಮಚ,
ತುಪ್ಪ : ಪರೋಟ ಬೇಯಿಸಲು 

ಪರೋಟ ಹಿಟ್ಟು ತಯಾರಿಸಲು ಸಾಮಗ್ರಿಗಳು :
ಗೋಧಿ ಹಿಟ್ಟು : 3 ಕಪ್,
ಮೊಸರು : 2-3 ಟೇಬಲ್ ಚಮಚ,
ಉಪ್ಪು : 1/2 ಟೀ ಚಮಚ,
ತುಪ್ಪ / ಎಣ್ಣೆ : 2-3 ಟೇಬಲ್ ಚಮಚ,
ನೀರು ಅಗತ್ಯವಿದ್ದಷ್ಟು 

ವಿಧಾನ: 
ಹೂಕೋಸನ್ನು ಬಿಡಿಸಿಕೊಂಡು (ದೊಡ್ಡ ಹೋಳುಗಳೇ ಇರಲಿ), ಸೋಸಿಕೊಂಡು ಸ್ವಲ್ಪ ಬೆಚ್ಚಗಿನ ನೀರಿಗೆ 1/4 ಚಮಚ ಅರಿಶಿನ ಮತ್ತು ಉಪ್ಪು ಹಾಕಿಡಿ. ಒಂದು ಅಗಲವಾದ ಪಾತ್ರೆಗೆ ಮೊಸರು, ಉಪ್ಪು, ತುಪ್ಪ  ಅಥವಾ ಎಣ್ಣೆ, 1.5 ಕಪ್ ನಷ್ಟು ನೀರು ಹಾಕಿಕೊಂಡು ಕಲಕಿಕೊಂಡು ಇದಕ್ಕೆ ಸ್ವಲ್ಪ ಸ್ವಲ್ಪ ಗೋಧಿ ಹಿಟ್ಟು ಹಾಕುತ್ತಾ ಕಲಸಿ, ಚಪಾತಿ ಹಿಟ್ಟಿನಕಿಂತಾ ಗಟ್ಟಿ ಕಲಸಿ ಚೆನ್ನಾಗಿ ನಾದಿಕೊಂಡು ಮುಚ್ಚಿಡಿ. 

ಈಗ  ನೆನೆಸಿಟ್ಟ ಹೂಕೋಸನ್ನು ತೆಗೆದು ತುರಿದಿಟ್ಟುಕೊಳ್ಳಿ. 

ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ ಅರಿಶಿನ ಪುಡಿ ಹಾಕಿ ತಕ್ಷಣ ತುರಿದಿಟ್ಟುಕೊಂಡ ಹೂಕೋಸನ್ನು ಹಾಕಿ ಕಲಕಿ. ನಂತರ ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ ಪುಡಿ, ಕೊತ್ತಂಬರಿ ಸೊಪ್ಪು, ಉಪ್ಪು ಎಲ್ಲವನ್ನೂ ಒಂದೊಂದಾಗಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಹೂಕೋಸು ನೀರು ಬಿಟ್ಟುಕೊಳ್ಳದಿದ್ದರೆ ಸ್ವಲ್ಪವೇ ನೀರು ಚಿಮಿಕಿಸಿ ಮುಚ್ಚಿ, ಆಗಾಗ ಕಲಕುತ್ತಾ ನೀರು ಪೂರ್ತಿ ಆರುವವರೆಗೆ ಬೇಯಿಸಿ. ಮಿಶ್ರಣ ತಣ್ಣಗಾಗಲು ಬಿಡಿ. 

ನಂತರ ಪರೋಟ ಹಿಟ್ಟಿನಿಂದ ದೊಡ್ಡ ಲಿಂಬು ಗಾತ್ರದ ಉಂಡೆ ಮಾಡಿಕೊಂಡು ಸಣ್ಣ ಪೂರಿ ಲಟ್ಟಿಸಿ ಅದರಲ್ಲಿ ಅರ್ಧ ಚಮಚದಷ್ಟು ಹೂಕೋಸಿನ ಮಿಶ್ರಣ ತುಂಬಿ ಸರಿಯಾಗಿ ಮುಚ್ಚಿ ಮತ್ತೆ ಲಟ್ಟಿಸಿಕೊಂಡು ಕಾದ ಕಾವಲಿಗೆ ಹಾಕಿ ಎರಡೂ ಕಡೆ ತುಪ್ಪ ಹಾಕಿ ಬೇಯಿಸಿ. 


ಬಿಸಿ ಬಿಸಿ ಹೂಕೋಸಿನ ಪರೋಟವನ್ನು ಗಟ್ಟಿ ಮೊಸರು ಮತ್ತು ಉಪ್ಪಿನ ಕಾಯಿಯೊಂದಿಗೆ ಸವಿಯಿರಿ. 
 



ಸಲಹೆಗಳು:
1) ಗೋಧಿ ಹಿಟ್ಟಿನ ಜೊತೆ ಮೈದಾ ಸೇರಿಸಬಹುದು. ಮೈದಾ ಆರೋಗ್ಯಕ್ಕೆ ಒಳ್ಳೆಯದಲ್ಲವಾದ್ದರಿಂದ ನಾನು ಉಪಯೋಗಿಸುವುದಿಲ್ಲ. 
2) ಮೊಸರು ಇಷ್ಟವಿಲ್ಲದಿದ್ದರೆ ಬೇರೆ ಸಬ್ಜಿಯೊಟ್ಟಿಗೂ ಸವಿಯಬಹುದು. 
3) ಇದೇ ತರಹ ಕ್ಯಾರಟ್ ಪರೋಟ ಮಾಡಬಹುದು.
4) ಗೋಭಿ ಜೊತೆ ಸಣ್ಣ ಹೆಚ್ಚಿದ ಈರುಳ್ಳಿ ಕೂಡ ಸೇರಿಸಬಹುದು. ಗರಂ ಮಸಾಲ ಬದಲು ಪಾವ್ ಬಾಜಿ ಮಸಾಲ ಪುಡಿ ಹಾಕಬಹುದು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಕೂಡ ಹಾಕಬಹುದು. 

3 ಕಾಮೆಂಟ್‌ಗಳು: