ಬುಧವಾರ, ಜನವರಿ 30, 2013

ಬೆಂಡೆಕಾಯಿ ನೀರ್ ಸಾರು






 ಸಾಮಗ್ರಿ: ಬೆಂಡೆಕಾಯಿ 8-10, ಬೆಳ್ಳುಳ್ಳಿ ಎಸಳು 5-6, ತೆಂಗಿನ ಹಾಲು (ತೆಂಗಿನ ತುರಿ ರುಬ್ಬಿ ಅದನ್ನು ಹಿಂದಿ ರಸ ತೆಗೆದಿದ್ದು)- 1/2 ಕಪ್, ಹಸಿ ಮೆಣಸು ಖಾರಕ್ಕೆ, ಉಪ್ಪು - ನಿಂಬೆ ರಸ ರುಚಿಗೆ ತಕ್ಕಷ್ಟು.
ಒಗ್ಗರಣೆಗೆ : ಜೀರಿಗೆ 1/4 ಚಮಚ, ಸಾಸಿವೆ ಸ್ವಲ್ಪ, ಕರಿಬೇವು

ವಿಧಾನ: ಬೆಂಡೆ ಕಾಯಿಯನ್ನು ತೊಳೆದು ಬಟ್ಟೆಯಲ್ಲಿ ಒರೆಸಿಕೊಳ್ಳಿ. ಅದನ್ನು ಮಧ್ಯದಲ್ಲಿ ಸೀಳಿಕೊಂಡು ಒಂದಿಂಚು ಉದ್ದಕ್ಕೆ ಹೆಚ್ಚಿ. ಬೆಳ್ಳುಳ್ಳಿ ಜಜ್ಜಿಕೊಳ್ಳಿ. ಹಸಿಮೆಣಸಿನ ಕಾಯನ್ನು ಸೀಳಿಕೊಂಡು ಉದ್ದಕ್ಕೆ ಹೆಚ್ಚಿಕೊಳ್ಳಿ.  ಬಾಣಲೆಗೆ 5-6 ಚಮಚ ಎಣ್ಣೆ ಹಾಕಿ, ಜೀರಿಗೆ, ಸಾಸಿವೆ ಹಾಕಿ. ಅದು ಸಿಡಿದಾಗ ಹಸಿ ಮೆಣಸು, ಕರಿಬೇವು, ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಹೆಚ್ಚಿದ ಬೆಂಡೆಕಾಯಿ ಹಾಕಿ ಫ್ರೈ ಮಾಡಿ. ಅದು ಸ್ವಲ್ಪ ಬಾಡಿದಾಗ 4-5 ಕಪ್ ನೀರು ಹಾಕಿ. ಬೆಂಡೆಕಾಯಿ ಬೇಯುವ ತನಕ ಕುದಿಸಿ. ನಂತರ ಇದಕ್ಕೆ ಉಪ್ಪು, ತೆಂಗಿನ ಹಾಲು ಹಾಕಿ ಕುದಿಸಿ. ನಂತರ ನಿಂಬೆ ರಸ ಹಾಕಿ ಕೆಳಗಿಳಿಸಿ. (ಒಂದು ನಿಂಬೆ ಹಣ್ಣು ಬೇಕಾಗಬಹುದು)  ಇದು ಊಟದ ಜೊತೆ ಬಿಸಿ ಬಿಸಿ ಕುಡಿಯಲು ಮತ್ತು ಅನ್ನದ ಜೊತೆಯೂ ಚೆನ್ನಾಗಿರುತ್ತದೆ. 

ಗುರುವಾರ, ಜನವರಿ 24, 2013

ಉ೦ಡೆ ಗೊಜ್ಜು:




ಸಾಮಾಗ್ರಿಗಳು: ಕಡ್ಲೆಬೇಳೆ 2 ಚಮಚ, ಉದ್ದಿನ ಬೇಳೆ 1 ಚಮಚ, ಹೆಸರು ಬೇಳೆ 2 ಚಮಚ, ತೆ೦ಗಿನ ತುರಿ 2 ಚಮಚ, ಎಣ್ಣೆ ½ ಕಪ್
ಸಾ೦ಬಾರಕ್ಕೆ: ಜೀರಿಗೆ ½ ಚಮಚ, ಮೆ೦ತೆ 5-6 ಕಾಳು, ಧನಿಯ ½ ಚಮಚ , ಎಳ್ಳು ¼ 1 ಚಮಚ, ಸಾಸಿವೆ ಚಿಟಿಕೆ, ಇ೦ಗು ಚಿಟಿಕೆ, ಒಣ ಮೆಣಸು 5-6, ಹುಣಸೆಹಣ್ಣು ಹುಳಿಗೆ ತಕ್ಕಷ್ಟು, ರುಚಿಗೆ ತಕ್ಕಷ್ಟು ಉಪ್ಪು & ಬೆಲ್ಲ.
ಒಗ್ಗರಣೆಗೆ: ಎಣ್ಣೆ,ಸಾಸಿವೆ, ಕರಿಬೇವು (ಶೇ೦ಗಾ & ಪುಟಾಣಿ ಬೇಳೆ ಬೇಕಾದರೆ ಹಾಕಬಹುದು)

ವಿಧಾನ:
ಕಡ್ಲೆಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ ಇವುಗಳನ್ನು 1-2 ಗ೦ಟೆಗಳ ಕಾಲ ನೀರಿನಲ್ಲಿ ನೆನೆಸಿ. ನ೦ತರ ಚೆನ್ನಾಗಿ ತೊಳೆದು ಸ್ವಲ್ಪ ಉಪ್ಪು (ರುಚಿಗೆ ತಕ್ಕಷ್ಟು) ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ (ಅ೦ಬೋಡೆ ಹಿಟ್ಟಿನ ಹದಕ್ಕೆ - ಸ್ವಲ್ಪ ನುಣ್ಣಗೆ ರುಬ್ಬಿದರೆ ಒಳ್ಳೆಯದು) ಬಾಣಲೆಗೆ ½ ಕಪ್ ಎಣ್ಣೆ ಹಾಕಿ ಅದು ಕಾದ ಕೂಡಲೆ ತಯಾರಿಸಿಟ್ಟ ಹಿಟ್ಟನ್ನು ಚಿಕ್ಕ ಚಿಕ್ಕ ಉ೦ಡೆಯ೦ತೆ ಮಾಡಿ ಕರಿದು (ಬಜ್ಜಿ/ಬೊ೦ಡ ಥರ) ಪಕ್ಕಕ್ಕಿಡಿ. ಜೀರಿಗೆ ½ ಚಮಚ, ಮೆ೦ತೆ 5-6 ಕಾಳು, ಧನಿಯ ½ ಚಮಚ , ಎಳ್ಳು ¼ ಚಮಚ, ಸಾಸಿವೆ ಚಿಟಿಕೆ, ಇ೦ಗು ಚಿಟಿಕೆ, ಒಣ ಮೆಣಸು 5-6 ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ನ೦ತರ ಹುಣಸೆಹಣ್ಣು, ಕಾಯಿತುರಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಕಾದ ನ೦ತರ ಸಾಸಿವೆ, ಕರಿಬೇವು ಹಾಕಿ ಅದು ಚಿಟಪಟಿಸಿದ ಮೇಲೆ ಬೇಕಾದರೆ ಶೇ೦ಗಾ & ಪುಟಾಣಿ ಬೇಳೆ ಹಾಕಬಹುದು. ಅದಕ್ಕೆ ರುಬ್ಬಿಕೊ೦ಡ ಮಸಾಲ ಉಪ್ಪು, ಬೆಲ್ಲ ಸ್ವಲ್ಪ ನೀರು ಹಾಕಿ  ಒ೦ದು ಕುದಿ ಬ೦ದ ಮೇಲೆ ಕರಿದಿಟ್ಟ ಉ೦ಡೆಗಳನ್ನು ಹಾಕಿ ಚೆನಾಗಿ ಕುದಿಸಿ (ಗ್ರೇವಿ ಹದ) ಈಗ ಬಿಸಿ ಬಿಸಿ ಉ೦ಡೆ ಗೊಜ್ಜು ರೆಡಿ. ಇದು ಅನ್ನದ ಜೊತೆ ಚೆನ್ನಾಗಿರುತ್ತದೆ
 



ಬುಧವಾರ, ಜನವರಿ 16, 2013

ಕರಿದ ಒಡಪೆ




ಬೇಕಾಗುವ ಸಾಮಾಗ್ರಿಗಳು:  ಸಣ್ಣಗೆ ಹೆಚ್ಚಿದ - ಕ್ಯಾಬೇಜ್ 1/2 ಕಪ್, ಈರುಳ್ಳಿ - 1/2 ಕಪ್, ಕ್ಯಾಪ್ಸಿಕಮ್ - 2 ಚಮಚ, ಹಸಿ ಮೆಣಸು - 2, ಅಕ್ಕಿ ಹಿಟ್ಟು- 2 ಕಪ್, ಮೊಸರು - 2-3 ಚಮಚ, ಉಪ್ಪು ರುಚಿಗೆ. ಹಿಟ್ಟು ಹದಕ್ಕೆ ಬರಲು ಸ್ವಲ್ಪ ನೀರು ಸೇರಿಸಬಹುದು, ಎಣ್ಣೆ : 1 ಕಪ್ - ಕರಿಯಲು
ಮಾಡುವ ವಿಧಾನ: ಈ ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ರೊಟ್ಟಿ ಹಿಟ್ಟಿನ ಹದಕ್ಕೆ ಮೆದುವಾಗಿ ಕಲೆಸಿಕೊಳ್ಳಿ. ಒ೦ದು ರೊಟ್ಟಿ ಮಾಡುವಷ್ಟೆ ದೊಡ್ಡ ಉ೦ಡೆಗಳನ್ನು ಮಾಡಿಕೊಳ್ಳಿ.ಒ೦ದು ದಪ್ಪ ಪ್ಲಾಸ್ಟಿಕ್ ಹಾಳೆಗೆ ಎಣ್ಣೆ ಸವರಿಕೊ೦ಡು  ಹಿಟ್ಟಿನ ಉ೦ಡೆಯನ್ನು ಪೂರಿಯಷ್ಟೆ ದಪ್ಪಗೆ ಮತ್ತು ಅಷ್ಟೆ ದೊಡ್ಡದಾಗಿ ಕೈಯಲ್ಲಿ ತಟ್ಟಿ(ಕೈಗೆ ಎಣ್ಣೆ ಹಚ್ಚಿಕೊ೦ಡು ತಟ್ಟಿದರೆ ಹಿಟ್ಟು ಕೈಗೆ ಅ೦ಟುವುದಿಲ್ಲ), ಎಣ್ಣೆ ಬಾಣಲಿಗೆ ಹಾಕಿ ಸ್ವಲ್ಪ ಹೊ೦ಬಣ್ಣ ಬರುವವರೆಗೆ ಕರಿಯಿರಿ.

ಇದಕ್ಕೆ ಶೇ೦ಗಾ - ತೆ೦ಗಿನಕಾಯಿ ಚಟ್ನಿ ಹಚ್ಚಿಕೊ೦ಡು ತಿನ್ನಲು ರುಚಿ. ಹಾಗೆ ಕೂಡ ತಿನ್ನಬಹುದು.

ಸೋಮವಾರ, ಜನವರಿ 7, 2013

ಕನ್ನೆ ಕುಡಿ (ಸ್ವರ್ಲೆ ಕುಡಿ) ಚಟ್ನಿ


ಸಾಮಗ್ರಿ: ಕನ್ನೆ ಕುಡಿ - 8-10, ತೆಂಗಿನ ತುರಿ - 1 ಕಪ್, ಜೀರಿಗೆ 1/2 ಚಮಚ, ಎಣ್ಣೆ 3 ಚಮಚ, ಬೆಳ್ಳುಳ್ಳಿ 10-12 ಎಸಳು, ಹಸಿ ಮೆಣಸು / ಸೂಜು ಮೆಣಸು ಖಾರಕ್ಕೆ ತಕ್ಕಷ್ಟು, ಸಾಸಿವೆ ಒಗ್ಗರಣೆಗೆ, ಉಪ್ಪು-ನಿಂಬೆ ರಸ ರುಚಿಗೆ ತಕ್ಕಷ್ಟು.

ವಿಧಾನ: ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಕಾದ ನಂತರ ಜೀರಿಗೆ, ಹಸಿಮೆಣಸು/ಸೂಜು ಮೆಣಸು ಹಾಕಿ ಬಾಡಿಸಿ. ನಂತರ ಇದಕ್ಕೆ ಕನ್ನೆ ಕುಡಿ ಹಾಕಿ ಎಲೆಯ ಹಸಿ ವಾಸನೆ ಹೋಗುವ ತನಕ ಹುರಿಯಿರಿ. ನಂತರ ಮಿಕ್ಸರ್ ಗೆ ತೆಂಗಿನ ತುರಿ, ಹುರಿದ ಮಿಶ್ರಣ, 2 ಎಸಳು ಬೆಳ್ಳುಳ್ಳಿ, ಉಪ್ಪು ನೀರು ಹಾಕಿ ರುಬ್ಬಿ. ಉಳಿದ ಬೆಳ್ಳುಳ್ಳಿಯನ್ನು ಜಜ್ಜಿಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ  ಸ್ವಲ್ಪ ತೆಳ್ಳಗಿನ ಚಟ್ನಿಯ ಹದಕ್ಕೆ ನೀರು ಹಾಕಿ, ನಿಂಬೆ ರಸ ಹಾಕಿ. ನಂತರ ಇದಕ್ಕೆ  2 ಚಮಚ ಎಣ್ಣೆ, ಸಾಸಿವೆ, ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಬಾಡಿಸಿ ಒಗ್ಗರಣೆ ಮಾಡಿ. ಸ್ವಲ್ಪ ಖಾರ ಜಾಸ್ತಿಯಿದ್ದರೆ ರುಚಿ ಜಾಸ್ತಿ. ಇದು ಅನ್ನದ ಜೊತೆ ಚೆನ್ನಾಗಿರುತ್ತದೆ.

ಶನಿವಾರ, ಜನವರಿ 5, 2013

ಒಣ ಮೆಣಸಿನ ಗೊಜ್ಜು:



ಬೇಕಾಗುವ ಸಾಮಾಗ್ರಿಗಳು:
ಬೆಳ್ಳುಳ್ಳಿ - 2-3 ಎಸಳು, ಒಣ ಮೆಣಸು- 5-6 ಉದ್ದಿನ ಬೇಳೆ,ಎಳ್ಳು, ಧನಿಯಾ- ಸ್ವಲ್ಪ, ಉಪ್ಪು, ಬೆಲ್ಲ ರುಚಿಗೆ, ಮೊಸರು 1 ಬಟ್ಟಲು
ಕಾಯಿತುರಿ 3 ಚಮಚ

ಮಾಡುವ ವಿಧಾನ:
ಮೊದಲು ಒಣ ಮೆಣಸು,ಉದ್ದಿನ ಬೇಳೆ,ಎಳ್ಳು, ಧನಿಯಾ ಎಣ್ಣೆಯಲ್ಲಿ ಹುರಿದುಕೊಳ್ಳಿ
ಇದರ ಜೊತೆ ಕಾಯಿತುರಿ,ಬೆಳ್ಳುಳ್ಳಿ ಸೇರಿಸಿ ರುಬ್ಬಿ
ರುಬ್ಬಿದ ಮಿಶ್ರಣಕ್ಕೆ  ಉಪ್ಪು,ಬೆಲ್ಲ , ಮೊಸರು ಸೇರಿಸಿ.
ಇದು ಅನ್ನದ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಮಂಗಳವಾರ, ಜನವರಿ 1, 2013

ಕಾರ್ನ್ ರೈಸ್



 ಸಾಮಗ್ರಿ: 1 ಕಪ್ ಸ್ವೀಟ್ ಕಾರ್ನ್, 2 ಕಪ್ ಅಕ್ಕಿ, ತೆಂಗಿನ ಕಾಯಿ ಹಾಲು 1 ಕಪ್, ಈರುಳ್ಳಿ 2-3, ಟೊಮೇಟೊ 2, ಸಣ್ಣಗೆ ಹೆಚ್ಚಿದ ಪುದೀನಾ-ಕೊತ್ತಂಬರಿ ಸೊಪ್ಪು 1/4 ಕಪ್, ಶುಂಟಿ-ಬೆಳ್ಳುಳ್ಳಿ ಪೇಸ್ಟ್ 2 ಚಮಚ, ಅರಿಶಿನ ಪುಡಿ, ಅಚ್ಚ ಮೆಣಸಿನ ಪುಡಿ ಸ್ವಲ್ಪ, ಉಪ್ಪು ರುಚಿಗೆ, ಚಕ್ಕೆ ಒಂದಿಂಚು, ಲವಂಗ 5-6, ಏಲಕ್ಕಿ 2-3, ಪಲಾವ್ ಎಲೆ ಒಂದು, ಎಣ್ಣೆ 2 ಚಮಚ, ತುಪ್ಪ 2 ಚಮಚ. 
ಸಲಹೆ: ತೆಂಗಿನ ಕಾಯಿ ತುರಿದು ರುಬ್ಬಿ ಅದರ ರಸವನ್ನು ಹಿಂಡಿ ತೆಗೆದು ತೆಂಗಿನ ಹಾಲು ಸಿದ್ಧ ಪಡಿಸಿ. 

ವಿಧಾನ: ಅಕ್ಕಿ ತೊಳೆದು ನೀರು ಬಸಿದಿಡಿ. ಈರುಳ್ಳಿಯನ್ನು ಉದ್ದುದ್ದ ಹೆಚ್ಚಿ, ಟೊಮೇಟೊ ಸಣ್ಣಗೆ ಹೆಚ್ಚಿ. ಕುಕ್ಕರ್ ಒಲೆಯ ಮೇಲಿಟ್ಟು ಎಣ್ಣೆ, ತುಪ್ಪ ಹಾಕಿ ಬಿಸಿಯಾದ ಮೇಲೆ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ ಹಾಕಿ ಸ್ವಲ್ಪ ಫ್ರೈ ಮಾಡಿ. ನಂತರ ಈರುಳ್ಳಿ ಹಾಕಿ ಹೊಂಬಣ್ಣ ಬರುವಂತೆ ಹುರಿಯಿರಿ. ಇದಕ್ಕೆ ಶುಂಟಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವ ತನಕ ಫ್ರೈ ಮಾಡಿ. ನಂತರ ಟೊಮೇಟೊ ಹಾಕಿ ಅದು ಮೆತ್ತಗೆ ಆಗುವ ತನಕ ಫ್ರೈ ಮಾಡಿ. ಇದಕ್ಕೆ ಹೆಚ್ಚಿದ ಪುದೀನಾ-ಕೊತ್ತಂಬರಿ ಸೊಪ್ಪು ಹಾಕಿ ಬಾಡಿಸಿ. ನಂತರ ಕಾರ್ನ್ ಹಾಕಿ, ಅರಿಶಿನ ಪುಡಿ, ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ತೆಂಗಿನ ಹಾಲು, ಉಪ್ಪು ಹಾಕಿ ಸ್ವಲ್ಪ ಕುದಿಸಿ. ಇದು ಗ್ರೇವಿಯ ಥರ ಆದಾಗ ಅಕ್ಕಿ, ಸುಮಾರು 4 ಕಪ್ ನಷ್ಟು ನೀರು ಹಾಕಿ ಕುಕ್ಕರ್ ಮುಚ್ಚಿ ಕೂಗಿಸಿ. (ತೆಂಗಿನ ಹಾಲು ಹಾಕಿರುವುದರಿಂದ ನಿಮ್ಮ ಅಳತೆಗಿಂತ ಅರ್ಧ ಕಪ್ ನೀರು ಕಮ್ಮಿ ಹಾಕಿ.)



ಮೊಸರು ಬಜ್ಜಿ (ರಾಯ್ತ) : ಈರುಳ್ಳಿ-ಸೌತೆ ಕಾಯಿ-ಟೊಮೇಟೊ ಎಲ್ಲ ಸಣ್ಣಗೆ ಹೆಚ್ಚಿ ಮೊಸರಿಗೆ ಹಾಕಿ, ಉಪ್ಪು, (ಮೊಸರು ಹುಳಿ  ಇದ್ದರೆ  1/4 ಚಮಚ ಸಕ್ಕರೆ ಹಾಕಿ). ಬೇಕಾದರೆ ಎಣ್ಣೆ, ಉದ್ದಿನಬೇಳೆ, ಹಸಿಮೆಣಸಿನ ಕಾಯಿ ಹಾಕಿ ಒಗ್ಗರಣೆ ಮಾಡಬಹುದು. ಇದಕ್ಕೆ  ಕೊತ್ತಂಬರಿ ಸೊಪ್ಪು ಉದುರಿಸಿ ಕಾರ್ನ್ ರೈಸ್ ಜೊತೆ ಸರ್ವ್ ಮಾಡಿ. 
ಮೊಸರು ಬಜ್ಜಿ ರುಚಿ ಬದಲಿಸಲು: ಮಾಮೂಲಿ ಒಗ್ಗರಣೆ ಮಾಡಿಕೊಂಡು ಅದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪವೇ ಹುರಿಯಿರಿ, ಅದಕ್ಕೆ ಸ್ವಲ್ಪ ಧನಿಯ ಪುಡಿ, ಮೆಣಸಿನ ಪುಡಿ ಹಾಕಿ ಕೆಳಗಿಳಿಸಿ. ಇದಕ್ಕೆ  ಸೌತೆ ಕಾಯಿ, ಟೊಮೇಟೊ, ಮೊಸರನ್ನು ಹಾಕಿ. ಉಪ್ಪು ಕೊತ್ತಂಬರಿ ಸೊಪ್ಪು ಹಾಕಿ. 







ಮಾವಿನ ಕಾಯಿ ಗೊಜ್ಜು


ಸಾಮಗ್ರಿ: 2 ಮಾವಿನ ಕಾಯಿ (ತೋತಾಪುರಿ ಆದರೆ ಒಳ್ಳೆಯದು), ಬೆಳ್ಳುಳ್ಳಿ 15-20 ಎಸಳು, ಹಸಿ ಮೆಣಸಿನ ಕಾಯಿ 4-5 (ಮಲೆನಾಡಿನ ಸೂಜು ಮೆಣಸಾದರೂ ಒಳ್ಳೆಯದು), ಬೆಲ್ಲ-ಉಪ್ಪು  ರುಚಿಗೆ ತಕ್ಕಷ್ಟು, ಎಣ್ಣೆ 4-5 ಟೇಬಲ್ ಸ್ಪೂನ್, ಕರಿ ಬೇವು ಸ್ವಲ್ಪ, ಸಾಸಿವೆ, ಉದ್ದಿನ ಬೇಳೆ 1 ಚಮಚ.

ವಿಧಾನ: ಮಾವಿನ ಕಾಯಿಗೆ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಕುಕ್ಕರ್ ನಲ್ಲಿ ಕೂಡ ಬೇಯಿಸಬಹುದು. ಬೆಳ್ಳುಳ್ಳಿಯನ್ನು ಜಜ್ಜಿಕೊಳ್ಳಿ. ಸೂಜು ಮೆಣಸಾದರೆ ಜಜ್ಜಿಕೊಳ್ಳಿ, ಹಸಿ ಮೆಣಸಿನ ಕಾಯಾದರೆ ಸಣ್ಣಗೆ ಹೆಚ್ಚಿಡಿ. ಮಾವಿನ ಕಾಯಿ ಬಿಸಿ ಆರಿದ ಮೇಲೆ ಅದರ ಸಿಪ್ಪೆ ಸುಲಿದು ಚೆನ್ನಾಗಿ ಕಿವುಚಿ. ಅದು ಪೇಸ್ಟ್ ನಂತೆ ಆಗುತ್ತದೆ. ನಂತರ ಒಂದು ಬಾಣಲೆಯನ್ನು  ಒಲೆಯ ಮೇಲಿಟ್ಟು ಎಣ್ಣೆ ಹಾಕಿ, ಕಾದ ಮೇಲೆ ಉದ್ದಿನ ಬೇಳೆ, ಸಾಸಿವೆ, ಹಾಕಿ. ಅದು ಚಟ ಪಟಾಯಿಸಿದಾಗ ಕರಿ ಬೇವು, ಜಜ್ಜಿದ ಬೆಳ್ಳುಳ್ಳಿ, ಮೆಣಸಿನ ಕಾಯಿ ಹಾಕಿ ಬಾಡಿಸಿ. ನಂತರ ಕಿವುಚಿದ ಮಾವಿನಕಾಯಿ ರಸ, ಬೆಲ್ಲ, ಉಪ್ಪು ಹಾಕಿ ಕುದಿಸಿ. ತುಂಬಾ ಗಟ್ಟಿ ಇದ್ದರೆ ಸ್ವಲ್ಪ ನೀರು ಹಾಕಿ ಕುದಿಸಿ. ಚಟ್ನಿಯ ಹದಕ್ಕೆ ಇರಲಿ, ತುಂಬಾ ನೀರು ಹಾಕಬೇಡಿ. ಹುಳಿ, ಸಿಹಿ, ಖಾರ ಎಲ್ಲ ಹದವಾಗಿದ್ದರೆ ರುಚಿ ಜಾಸ್ತಿ. ಅನ್ನದ ಜೊತೆಗೆ ಕಲಸಿ ತಿನ್ನಲು ಚೆನ್ನಾಗಿರುತ್ತದೆ. ಬಿಸಿ ಮಾಡುತ್ತಾ ಇದ್ದರೆ 5-6 ದಿನ ಇಡಬಹುದು. ಫ್ರಿಡ್ಜ್ ನಲ್ಲಿ ಇಟ್ಟರೂ ತುಂಬಾ ದಿನ ಉಪಯೋಗಿಸಬಹುದು.