ಮಂಗಳವಾರ, ಜನವರಿ 1, 2013

ಕಾರ್ನ್ ರೈಸ್ ಸಾಮಗ್ರಿ: 1 ಕಪ್ ಸ್ವೀಟ್ ಕಾರ್ನ್, 2 ಕಪ್ ಅಕ್ಕಿ, ತೆಂಗಿನ ಕಾಯಿ ಹಾಲು 1 ಕಪ್, ಈರುಳ್ಳಿ 2-3, ಟೊಮೇಟೊ 2, ಸಣ್ಣಗೆ ಹೆಚ್ಚಿದ ಪುದೀನಾ-ಕೊತ್ತಂಬರಿ ಸೊಪ್ಪು 1/4 ಕಪ್, ಶುಂಟಿ-ಬೆಳ್ಳುಳ್ಳಿ ಪೇಸ್ಟ್ 2 ಚಮಚ, ಅರಿಶಿನ ಪುಡಿ, ಅಚ್ಚ ಮೆಣಸಿನ ಪುಡಿ ಸ್ವಲ್ಪ, ಉಪ್ಪು ರುಚಿಗೆ, ಚಕ್ಕೆ ಒಂದಿಂಚು, ಲವಂಗ 5-6, ಏಲಕ್ಕಿ 2-3, ಪಲಾವ್ ಎಲೆ ಒಂದು, ಎಣ್ಣೆ 2 ಚಮಚ, ತುಪ್ಪ 2 ಚಮಚ. 
ಸಲಹೆ: ತೆಂಗಿನ ಕಾಯಿ ತುರಿದು ರುಬ್ಬಿ ಅದರ ರಸವನ್ನು ಹಿಂಡಿ ತೆಗೆದು ತೆಂಗಿನ ಹಾಲು ಸಿದ್ಧ ಪಡಿಸಿ. 

ವಿಧಾನ: ಅಕ್ಕಿ ತೊಳೆದು ನೀರು ಬಸಿದಿಡಿ. ಈರುಳ್ಳಿಯನ್ನು ಉದ್ದುದ್ದ ಹೆಚ್ಚಿ, ಟೊಮೇಟೊ ಸಣ್ಣಗೆ ಹೆಚ್ಚಿ. ಕುಕ್ಕರ್ ಒಲೆಯ ಮೇಲಿಟ್ಟು ಎಣ್ಣೆ, ತುಪ್ಪ ಹಾಕಿ ಬಿಸಿಯಾದ ಮೇಲೆ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ ಹಾಕಿ ಸ್ವಲ್ಪ ಫ್ರೈ ಮಾಡಿ. ನಂತರ ಈರುಳ್ಳಿ ಹಾಕಿ ಹೊಂಬಣ್ಣ ಬರುವಂತೆ ಹುರಿಯಿರಿ. ಇದಕ್ಕೆ ಶುಂಟಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವ ತನಕ ಫ್ರೈ ಮಾಡಿ. ನಂತರ ಟೊಮೇಟೊ ಹಾಕಿ ಅದು ಮೆತ್ತಗೆ ಆಗುವ ತನಕ ಫ್ರೈ ಮಾಡಿ. ಇದಕ್ಕೆ ಹೆಚ್ಚಿದ ಪುದೀನಾ-ಕೊತ್ತಂಬರಿ ಸೊಪ್ಪು ಹಾಕಿ ಬಾಡಿಸಿ. ನಂತರ ಕಾರ್ನ್ ಹಾಕಿ, ಅರಿಶಿನ ಪುಡಿ, ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ತೆಂಗಿನ ಹಾಲು, ಉಪ್ಪು ಹಾಕಿ ಸ್ವಲ್ಪ ಕುದಿಸಿ. ಇದು ಗ್ರೇವಿಯ ಥರ ಆದಾಗ ಅಕ್ಕಿ, ಸುಮಾರು 4 ಕಪ್ ನಷ್ಟು ನೀರು ಹಾಕಿ ಕುಕ್ಕರ್ ಮುಚ್ಚಿ ಕೂಗಿಸಿ. (ತೆಂಗಿನ ಹಾಲು ಹಾಕಿರುವುದರಿಂದ ನಿಮ್ಮ ಅಳತೆಗಿಂತ ಅರ್ಧ ಕಪ್ ನೀರು ಕಮ್ಮಿ ಹಾಕಿ.)ಮೊಸರು ಬಜ್ಜಿ (ರಾಯ್ತ) : ಈರುಳ್ಳಿ-ಸೌತೆ ಕಾಯಿ-ಟೊಮೇಟೊ ಎಲ್ಲ ಸಣ್ಣಗೆ ಹೆಚ್ಚಿ ಮೊಸರಿಗೆ ಹಾಕಿ, ಉಪ್ಪು, (ಮೊಸರು ಹುಳಿ  ಇದ್ದರೆ  1/4 ಚಮಚ ಸಕ್ಕರೆ ಹಾಕಿ). ಬೇಕಾದರೆ ಎಣ್ಣೆ, ಉದ್ದಿನಬೇಳೆ, ಹಸಿಮೆಣಸಿನ ಕಾಯಿ ಹಾಕಿ ಒಗ್ಗರಣೆ ಮಾಡಬಹುದು. ಇದಕ್ಕೆ  ಕೊತ್ತಂಬರಿ ಸೊಪ್ಪು ಉದುರಿಸಿ ಕಾರ್ನ್ ರೈಸ್ ಜೊತೆ ಸರ್ವ್ ಮಾಡಿ. 
ಮೊಸರು ಬಜ್ಜಿ ರುಚಿ ಬದಲಿಸಲು: ಮಾಮೂಲಿ ಒಗ್ಗರಣೆ ಮಾಡಿಕೊಂಡು ಅದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪವೇ ಹುರಿಯಿರಿ, ಅದಕ್ಕೆ ಸ್ವಲ್ಪ ಧನಿಯ ಪುಡಿ, ಮೆಣಸಿನ ಪುಡಿ ಹಾಕಿ ಕೆಳಗಿಳಿಸಿ. ಇದಕ್ಕೆ  ಸೌತೆ ಕಾಯಿ, ಟೊಮೇಟೊ, ಮೊಸರನ್ನು ಹಾಕಿ. ಉಪ್ಪು ಕೊತ್ತಂಬರಿ ಸೊಪ್ಪು ಹಾಕಿ. 
4 ಕಾಮೆಂಟ್‌ಗಳು: