ಮಂಗಳವಾರ, ಜನವರಿ 1, 2013

ಮಾವಿನ ಕಾಯಿ ಗೊಜ್ಜು


ಸಾಮಗ್ರಿ: 2 ಮಾವಿನ ಕಾಯಿ (ತೋತಾಪುರಿ ಆದರೆ ಒಳ್ಳೆಯದು), ಬೆಳ್ಳುಳ್ಳಿ 15-20 ಎಸಳು, ಹಸಿ ಮೆಣಸಿನ ಕಾಯಿ 4-5 (ಮಲೆನಾಡಿನ ಸೂಜು ಮೆಣಸಾದರೂ ಒಳ್ಳೆಯದು), ಬೆಲ್ಲ-ಉಪ್ಪು  ರುಚಿಗೆ ತಕ್ಕಷ್ಟು, ಎಣ್ಣೆ 4-5 ಟೇಬಲ್ ಸ್ಪೂನ್, ಕರಿ ಬೇವು ಸ್ವಲ್ಪ, ಸಾಸಿವೆ, ಉದ್ದಿನ ಬೇಳೆ 1 ಚಮಚ.

ವಿಧಾನ: ಮಾವಿನ ಕಾಯಿಗೆ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಕುಕ್ಕರ್ ನಲ್ಲಿ ಕೂಡ ಬೇಯಿಸಬಹುದು. ಬೆಳ್ಳುಳ್ಳಿಯನ್ನು ಜಜ್ಜಿಕೊಳ್ಳಿ. ಸೂಜು ಮೆಣಸಾದರೆ ಜಜ್ಜಿಕೊಳ್ಳಿ, ಹಸಿ ಮೆಣಸಿನ ಕಾಯಾದರೆ ಸಣ್ಣಗೆ ಹೆಚ್ಚಿಡಿ. ಮಾವಿನ ಕಾಯಿ ಬಿಸಿ ಆರಿದ ಮೇಲೆ ಅದರ ಸಿಪ್ಪೆ ಸುಲಿದು ಚೆನ್ನಾಗಿ ಕಿವುಚಿ. ಅದು ಪೇಸ್ಟ್ ನಂತೆ ಆಗುತ್ತದೆ. ನಂತರ ಒಂದು ಬಾಣಲೆಯನ್ನು  ಒಲೆಯ ಮೇಲಿಟ್ಟು ಎಣ್ಣೆ ಹಾಕಿ, ಕಾದ ಮೇಲೆ ಉದ್ದಿನ ಬೇಳೆ, ಸಾಸಿವೆ, ಹಾಕಿ. ಅದು ಚಟ ಪಟಾಯಿಸಿದಾಗ ಕರಿ ಬೇವು, ಜಜ್ಜಿದ ಬೆಳ್ಳುಳ್ಳಿ, ಮೆಣಸಿನ ಕಾಯಿ ಹಾಕಿ ಬಾಡಿಸಿ. ನಂತರ ಕಿವುಚಿದ ಮಾವಿನಕಾಯಿ ರಸ, ಬೆಲ್ಲ, ಉಪ್ಪು ಹಾಕಿ ಕುದಿಸಿ. ತುಂಬಾ ಗಟ್ಟಿ ಇದ್ದರೆ ಸ್ವಲ್ಪ ನೀರು ಹಾಕಿ ಕುದಿಸಿ. ಚಟ್ನಿಯ ಹದಕ್ಕೆ ಇರಲಿ, ತುಂಬಾ ನೀರು ಹಾಕಬೇಡಿ. ಹುಳಿ, ಸಿಹಿ, ಖಾರ ಎಲ್ಲ ಹದವಾಗಿದ್ದರೆ ರುಚಿ ಜಾಸ್ತಿ. ಅನ್ನದ ಜೊತೆಗೆ ಕಲಸಿ ತಿನ್ನಲು ಚೆನ್ನಾಗಿರುತ್ತದೆ. ಬಿಸಿ ಮಾಡುತ್ತಾ ಇದ್ದರೆ 5-6 ದಿನ ಇಡಬಹುದು. ಫ್ರಿಡ್ಜ್ ನಲ್ಲಿ ಇಟ್ಟರೂ ತುಂಬಾ ದಿನ ಉಪಯೋಗಿಸಬಹುದು.ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ