ಮಂಗಳವಾರ, ಜೂನ್ 23, 2015

ಅವಲಕ್ಕಿ ಬಿಸಿಬೇಳೆ ಬಾತ್:

ಸಾಮಗ್ರಿಗಳು:
ಹೆಚ್ಚಿದ ಮಿಶ್ರ ತರಕಾರಿಗಳು (ಆಲೂಗಡ್ಡೆ, ಬೀನ್ಸ್, ಕ್ಯಾರೆಟ್) - ಎಲ್ಲಾ ಸೇರಿ 1 ಕಪ್,
ಹೆಚ್ಚಿದ ಟೊಮೇಟೊ - 1/4 ಕಪ್,
ಹೆಚ್ಚಿದ ಕ್ಯಾಪ್ಸಿಕಂ - 1/4 ಕಪ್,
ತೊಗರಿ ಬೇಳೆ - 1/2 ಕಪ್,
ದಪ್ಪ ಅವಲಕ್ಕಿ - 1/2 ಕಪ್,
ಎಣ್ಣೆ - 4/5 ಚಮಚ,
ಸಾಸಿವೆ - 1/2 ಚಮಚ,
ಕರಿಬೇವು - 1 ಎಸಳು,
ಹುಣಸೆ ರಸ - ಸ್ವಲ್ಪ (ರುಚಿಗೆ ತಕ್ಕಷ್ಟು)
ಬೆಲ್ಲ - 1 ಚಮಚ,
ಶೇಂಗಾ - 4-5 ಚಮಚ,
ಅರಿಶಿನ ಪುಡಿ - ಚಿಟಿಕೆ,
ಬಿಸಿಬೇಳೆ ಬಾತ್  ಪೌಡರ್ - 2 ಚಮಚ,
ಉಪ್ಪು - ರುಚಿಗೆ 

ವಿಧಾನ :
ಮಿಶ್ರತರಕಾರಿಗಳನ್ನು (ಟೊಮೇಟೊ, ಕ್ಯಾಪ್ಸಿಕಂ ಬಿಟ್ಟು) ತೊಳೆದ ತೊಗರಿಬೇಳೆಯ ಜೊತೆ ಹಾಕಿ, ನೀರು, ಶೇಂಗಾ, ಸ್ವಲ್ಪ ಉಪ್ಪು, ಸ್ವಲ್ಪ ಎಣ್ಣೆ, ಅರಿಶಿನ ಪುಡಿ ಹಾಕಿ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ದಪ್ಪ ಅವಲಕ್ಕಿಯನ್ನು ತೊಳೆದು ಅರ್ಧ ಗಂಟೆ ನೀರಿನಲ್ಲಿ  ನೆನೆಸಿಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ, ಸಾಸಿವೆ ಹಾಕಿ ಸಿಡಿಸಿ. ಇದಕ್ಕೆ ಕರಿಬೇವು, ಹೆಚ್ಚಿದ ಟೊಮೇಟೊ ಮತ್ತು ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿ. ಇದು ಬೆಂದ ಮೇಲೆ ಹುಣಸೆ ರಸ, ನೀರು, ಬೆಲ್ಲ, ಬಿಸಿಬೇಳೆ ಬಾತ್ ಪುಡಿ, ಉಪ್ಪು ಹಾಕಿ ಕುದಿಸಿ. ನಂತರ ಇದಕ್ಕೆ ಬೆಂದ ಮಿಶ್ರಣ ಮತ್ತು ನೆನೆಸಿಟ್ಟ ಅವಲಕ್ಕಿಯನ್ನು ನೀರು ಬಸಿದುಕೊಂಡು ಹಾಕಿ ಚೆನ್ನಾಗಿ ಕಲಕಿ ಬೇಕಿದ್ದಲಿ ಸ್ವಲ್ಪ ನೀರು ಹಾಕಿದರೆ ಬಿಸಿ ಬಿಸಿ ಅವಲಕ್ಕಿ ಬಿಸಿಬೇಳೆ ಬಾತ್ ಸಿದ್ಧ. 




ಸೋಮವಾರ, ಜೂನ್ 22, 2015

ಮ೦ಗಳೂರು ಬಜ್ಜಿ :


ಸಾಮಗ್ರಿಗಳು : ಮೈದಾಹಿಟ್ಟು 1 ಕಪ್, ಮೊಸರು 1/2 ಕಪ್, ಹಸಿಮೆಣಸು 4-5, ತೆ೦ಗಿನಕಾಯಿ (ಕೊಬ್ಬರಿ) ಚೂರುಗಳು 1-2 ಚಮಚ, ಸೋಡಾ ಚಿಟಿಕೆ, ಜೀರಿಗೆ 1/2 ಚಮಚ, ಕರಿಬೇವು 5-6 ಎಲೆ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.



ವಿಧಾನ : ಮೊದಲು ಹಸಿಮೆಣಸು & ತೆ೦ಗಿನಕಾಯಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಇದಕ್ಕೆ ಮೈದಾಹಿಟ್ಟು ಸೋಡಾ, ಜೀರಿಗೆ, ಉಪ್ಪು, ಮೊಸರು, ಕರಿಬೇವು ಚೂರು ಮಾಡಿಕೊ೦ಡು ಹಾಕಿ ಬಜ್ಜಿ ಹಿಟ್ಟಿನ ಹದಕ್ಕೆ ಕಲೆಸಿಟ್ಟುಕೊಳ್ಳಿ. ಬಾಣಲಿಗೆ ಎಣ್ಣೆ ಹಾಕಿ ಕಾದ ಮೇಲೆ ಈ ಹಿಟ್ಟನ್ನು ಬಜ್ಜಿ ಥರ ಎಣ್ಣೆಯಲ್ಲಿ ಹೊ೦ಬಣ್ಣ ಬರುವವರೆಗೆ ಕರಿದರೆ ಬಿಸಿ ಬಿಸಿ ಮ೦ಗಳೂರು ಬಜ್ಜಿ ಸವಿಯಲು ಸಿದ್ಧ.
ಇದಕ್ಕೆ ಚಟ್ನಿ ಹಾಕಿಕೊ೦ಡು ತಿನ್ನಬೇಕು.

ಚಟ್ನಿ :
 ಸಾಮಗ್ರಿಗಳು : ಕಾಯಿತುರಿ, ಎಳ್ಳು, ಪುದಿನಾಸೊಪ್ಪು, ಪುಟಾಣಿಬೇಳೆ (ಹುರಿಗಡಲೆ), ಹಸಿಮೆಣಸು, ಉಪ್ಪು  ರುಚಿಗೆ ತಕ್ಕಷ್ಟು.
ವಿಧಾನ : ಪುದಿನಾಸೊಪ್ಪು ಹಸಿಮೆಣಸು ಎಳ್ಳು ಇವೆಲ್ಲವನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದುಕೊ೦ಡು ಕಾಯಿತುರಿ ಉಪ್ಪು ಪುಟಾಣಿಬೇಳೆ ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿದರೆ ಚಟ್ನಿ ರೆಡಿ.

ಸೋಮವಾರ, ಜೂನ್ 15, 2015

ಟೊಮೇಟೊ ಸಾರು 1 (ತಿಳಿ ಸಾರು) :


ಸಾಮಗ್ರಿಗಳು : 
ತೊಗರಿ ಬೇಳೆ 1/4 ಕಪ್, ಟೊಮೇಟೊ 1, ರಸಂ ಪುಡಿ 1-1.5 ಟೇಬಲ್ ಚಮಚ (MTR ಅಥವಾ ಮನೆಯಲ್ಲೇ ಮಾಡಿದ ಪುಡಿ), ಹುಣಸೆ ಹಣ್ಣು ನೆಲ್ಲಿಕಾಯಿ ಗಾತ್ರ, ಬೆಲ್ಲ 1 ಟೇಬಲ್ ಚಮಚ, ಕೊತ್ತಂಬರಿ ಸೊಪ್ಪು 1 ಚಮಚ, ಕರಿಬೇವಿನ ಸೊಪ್ಪು ಸ್ವಲ್ಪ, ಹಸಿಮೆಣಸಿನ ಕಾಯಿ 1-2, ಒಣಮೆಣಸಿನ ಕಾಯಿ 2 ಚೂರು, ಎಣ್ಣೆ 3-4 ಚಮಚ, ಜೀರಿಗೆ -ಸಾಸಿವೆ ತಲಾ 1/2 ಚಮಚ, ತೆಂಗಿನ ತುರಿ (ಬೇಕಿದ್ದಲ್ಲಿ ಮಾತ್ರ) 1 ಚಮಚ, ಉಪ್ಪು ರುಚಿಗೆ. 

ವಿಧಾನ : 
ಹುಣಸೆ ಹಣ್ಣನ್ನು ನೀರಿನಲ್ಲಿ ಅರ್ಧ ಗಂಟೆ ನೆನೆಸಿ, ಕಿವುಚಿ ರಸ ತೆಗೆದಿಟ್ಟುಕೊಳ್ಳಿ. ತೊಗರಿಬೇಳೆ ಮತ್ತು ಟೊಮೇಟೊವನ್ನು ತೊಳೆದುಕೊಂಡು, ಬೇಳೆಗೆ ನೀರು, ಚಿಟಿಕೆ ಅರಿಶಿನ ಪುಡಿ, 1/4 ಚಮಚ ಎಣ್ಣೆ, 4 ಹೋಳುಗಳಾಗಿ ಸೀಳಿದ ಟೊಮೇಟೊ ಹಾಕಿ ಕುಕ್ಕರ್ ನಲ್ಲಿಟ್ಟು ಮೆತ್ತಗೆ ಬೇಯಿಸಿಕೊಳ್ಳಿ.  ಒಂದು ದಪ್ಪ ತಳದ ಪಾತ್ರೆ ಅಥವಾ ಬಾಣಲೆಗೆ ಎಣ್ಣೆ, ಒಣ ಮೆಣಸಿನ ಚೂರು, ಜೀರಿಗೆ, ಸಾಸಿವೆ ಹಾಕಿ ಸಿಡಿದ ಮೇಲೆ ಸೀಳಿಕೊಂಡ ಹಸಿಮೆಣಸಿನ ಕಾಯಿ, ಹುಣಸೆ ರಸ ಮತ್ತು ಅರ್ಧ ಕಪ್ ನೀರು ಹಾಕಿ.  ನಂತರ ಇದಕ್ಕೆ ಉಪ್ಪು, ರಸಂ ಪುಡಿ, ಬೆಲ್ಲ, ಕರಿಬೇವು ಹಾಕಿ ಕುದಿಸಿ. ಬೆಂದ ಬೇಳೆ ಮತ್ತು ಟೊಮೇಟೊವನ್ನು ಚೆನ್ನಾಗಿ ಸೌಟಿನಲ್ಲಿ ಅರೆದುಕೊಂಡು ಕುದಿಯುತ್ತಿರುವ ಮಿಶ್ರಣಕ್ಕೆ ಹಾಕಿ, ಕೊತ್ತಂಬರಿ ಸೊಪ್ಪು,  ತೆಂಗಿನ ತುರಿ ಮತ್ತು ನೀರು ಎಷ್ಟು ಬೇಕು ನೋಡಿಕೊಂಡು ಹಾಕಿ ಚೆನ್ನಾಗಿ ಕುದಿಸಿದರೆ ಬಿಸಿ ಬಿಸಿ ಸಾರು ಸಿಧ್ಧ. (ಇದೇ ಸಾರನ್ನು ಇನ್ನೊಮ್ಮೆ ಮಾಡುವಾಗ ಒಗ್ಗರಣೆಯ ಜೊತೆ ಬೆಳ್ಳುಳ್ಳಿ, ಈರುಳ್ಳಿ ಹಾಕಿಕೊಂಡು ಟ್ರೈ ಮಾಡಿ...!)



(ಈ ರೆಸಿಪಿ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.)



ಶುಕ್ರವಾರ, ಮೇ 29, 2015

ಬಿಸಿಬೇಳೆ ಬಾತ್ :



ಸಾಮಗ್ರಿಗಳು:ಅಕ್ಕಿ 1 ಕಪ್, ತೊಗರಿಬೇಳೆ 1 ಕಪ್, ಬೀನ್ಸ್ ½ ಕಪ್, ಆಲೂಗಡ್ಡೆ 1 , ಕ್ಯಾರೆಟ್ ¼ ಕಪ್, ಈರುಳ್ಳಿ 2, ಕರಿಬೇವು, ಗೋಡ೦ಬಿ, ತುಪ್ಪ.


ಮಸಾಲೆಗೆ : ಕಡಲೇಬೇಳೆ 4 ಚಮಚ, ಉದ್ದಿನ ಬೇಳೆ 2 ಚಮಚ, ಜೀರಿಗೆ 1 ಚಮಚ, ಧನಿಯಾ 1 ಚಮಚ, ಇ೦ಗು, ಚಕ್ಕೆ 1 ಇ೦ಚು, ಲವ೦ಗ 3,  ತೆ೦ಗಿನ ತುರಿ ½ ಕಪ್.



ವಿಧಾನ : ತೊಗರಿಬೇಳೆಯನ್ನು ½ ಗ೦ಟೆ ನೀರಿನಲ್ಲಿ ನೆನೆಸಿಡಿ. ಅಕ್ಕಿ & ತೊಗರಿಬೇಳೆಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಅಕ್ಕಿ ಬೇರೆ ಪಾತ್ರೆಯಲ್ಲಿ ಮತ್ತು ಬೇಳೆ, ಬೀನ್ಸ್, ಅಲೂಗಡ್ಡೆ, ಕ್ಯಾರೇಟ್ ಇವನ್ನು ಮತ್ತೊ೦ದು ಪಾತ್ರೆಗೆ ಹಾಕಿ ಕುಕ್ಕರ್ ನಲ್ಲಿ 3 ವಿಷಲ್ ಕೂಗಿಸಿ ಉರಿ ಆರಿಸಿ. ಬಾಣಲೆಗೆ ಎಣ್ಣೆ ಹಾಕಿಕೊ೦ಡು  ಬಿಸಿಯಾದ ಮೇಲೆ ಸಾಸಿವೆ, ಕರಿಬೇವು ಹಾಕಿ ಅದು ಚಿಟಪಟಿಸಿದ ಮೇಲೆ ಹೆಚ್ಚಿದ ಈರುಳ್ಳಿ & ಟೊಮೆಟೊ ಹಾಕಿ ಬಾಡಿಸಿ. ಮೇಲೆ ಹೇಳಿದ ಮಸಾಲೆ ಪದಾರ್ಥಗಳನ್ನು ಹುರಿದುಕೊ೦ಡು ತೆ೦ಗಿನ ತುರಿ ಜೊತೆ ಹಾಕಿ ನೀರು ಸೇರಿಸಿ ರುಬ್ಬಿಕೊಳ್ಳಿ. ಈಗ ಮಸಾಲೆಯನ್ನು ಬಾಣಲೆಗೆ ಹಾಕಿ ನಿಮಿಷ ಕುದಿಸಿ, ಅದಕ್ಕೆ ಬೇಯಿಸಿದ ಬೇಳೆ & ತರಕಾರಿಗಳನ್ನು ಸೇರಿಸಿ ಕೊನೆಯಲ್ಲಿ ಎಷ್ಟು ಬೇಕೋ ಅಷ್ಟು ಅನ್ನ ಸೇರಿಸಿ ಮಿಕ್ಸ್ ಮಾಡಿ. ಅದರ ಮೇಲೆ ತುಪ್ಪ ಹಾಕಿದರೆ ಘಮಘಮಿಸುವ ಬಿಸಿಬೇಳೆಭಾತ್ ತಿನ್ನಲು ಸಿದ್ಧ.

ಗುರುವಾರ, ಮೇ 21, 2015

ಮಾವಿನಕಾಯಿ ಚಿತ್ರಾನ್ನ :

ಸಾಮಗ್ರಿಗಳು :
ತೋತಾಪುರಿ ಮಾವಿನಕಾಯಿ 1/2
ಈರುಳ್ಳಿ 1 (ಸಣ್ಣಗೆ ಹೆಚ್ಚಿದ್ದು)
ಅಕ್ಕಿ 1 ಕಪ್ 
ಎಣ್ಣೆ 3-4 ಟೇಬಲ್ ಚಮಚ 
ಶೇಂಗಾ 1-2 ಚಮಚ  
ಉದ್ದಿನ ಬೇಳೆ 1/2 ಚಮಚ 
ಕಡ್ಲೆ ಬೇಳೆ 1/2 ಚಮಚ 
ಸಾಸಿವೆ 1/4 ಚಮಚ 
ಕರಿಬೇವು 8-10 ಎಲೆಗಳು  
ಅರಿಶಿನ ಪುಡಿ 1/4 ಚಮಚ 
ಸಕ್ಕರೆ 1/2 ಚಮಚ 
ತೆಂಗಿನ ತುರಿ 2 ಚಮಚ 
ಉಪ್ಪು ರುಚಿಗೆ ತಕ್ಕಷ್ಟು 

ವಿಧಾನ :
ಅಕ್ಕಿಯಿಂದ ಉದುರುದುರಾಗಿ ಅಣ್ಣ ಮಾಡಿಕೊಳ್ಳಿ. ಮಾವಿನಕಾಯಿ ಸಿಪ್ಪೆ ತೆಗೆದು ತುರಿದುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಶೇಂಗಾ, ಕಡ್ಲೆ ಬೇಳೆ, ಉದ್ದಿನ ಬೇಳೆ ಹಾಕಿ ಸ್ವಲ್ಪ ಕೆಂಪಗಾದ ಮೇಲೆ ಸಾಸಿವೆ ಹಾಕಿ ಸಿಡಿಸಿ. ನಂತರ ಕರಿಬೇವು, ಹೆಚ್ಚಿದ ಈರುಳ್ಳಿ, ಅರಿಶಿನ ಪುಡಿ ಹಾಕಿ  ಹುರಿಯಿರಿ. ಈಗ ತುರಿದ ಮಾವಿನ ಕಾಯಿ, ಉಪ್ಪು, ಸಕ್ಕರೆ ಹಾಕಿ ಒಂದು ನಿಮಿಷ ಹುರಿಯಿರಿ. ಮಾವಿನ ಕಾಯಿ ಮೆತ್ತಗಾದ ಮೇಲೆ ತೆಂಗಿನ ತುರಿ  ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಉರಿ ಆರಿಸಿ. ಇದಕ್ಕೆ ಅನ್ನ ಹಾಕಿ ಕಲಸಿದರೆ ಮಾವಿನಕಾಯಿ ಚಿತ್ರಾನ್ನ  ಸವಿಯಲು ಸಿದ್ಧ. 


ಗುರುವಾರ, ಮೇ 14, 2015

ಹಾಲುಬಾಯಿ (ಅಕ್ಕಿ ಮಣ್ಣಿ):

ಸಾಮಗ್ರಿಗಳು: ಅಕ್ಕಿ - 1 ಲೋಟ, ಜೋನಿಬೆಲ್ಲ - 2 ಲೋಟ, ಅವಲಕ್ಕಿ 1 ಮುಷ್ಟಿ, ಹಾಲು 2 ಲೋಟ, ಏಲಕ್ಕಿ ಪುಡಿ 1 ಚಮಚ, ತುಪ್ಪ 4 ಚಮಚ, ಉಪ್ಪು 1/2 ಚಮಚ.






ವಿಧಾನ : ಅಕ್ಕಿಯನ್ನು ೨ ಗ೦ಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಅವಲಕ್ಕಿಯನ್ನು ೧/೨ ಗ೦ಟೆ ನೆನೆಸಿಟ್ಟಿರಬೇಕು. ಅಮೇಲೆ ಅಕ್ಕಿ & ಅವಲಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಹಿಟ್ಟಿಗೆ ಬೆಲ್ಲ & ಏಲಕ್ಕಿ ಪುಡಿ, ಉಪ್ಪು ಸೇರಿಸಿ, ಇದಕ್ಕೆ ೧ ಲೋಟ ನೀರು & ೨ ಲೋಟ ಹಾಲು ಹಾಕಿ ದಪ್ಪ ತಳದ ಬೋಗಣಿಯಲ್ಲಿ  ಇದನ್ನು ಹಾಕಿ, ಸಣ್ಣ ಉರಿಯಲ್ಲಿ ನಿರ೦ತರವಾಗಿ ಅದು ಸೌಟು ಬಿಡುವಷ್ಟು ಗಟ್ಟಿಯಾಗುವವರೆಗೂ ತೊಳೆಸುತ್ತಿರಬೇಕು. ನ೦ತರ ಉರಿ ಆರಿಸಿ ೧ ಚಮಚ ತುಪ್ಪ ಹಾಕಿ ತೊಳೆಸಿ. ಈಗ ಪ್ಲೇಟ್ ಗೆ ತುಪ್ಪ ಸವರಿಕೊ೦ಡು ಈ ಮಿಶ್ರಣವನ್ನು ಹಾಕಿ ಹರವಿರಿ. ಬಿಸಿ ಆರಿದಮೇಲೆ ಹಲ್ವದ ಥರ ಕತ್ತರಿಸಿ, ತುಪ್ಪದ ಜೊತೆ ಸರ್ವ್ ಮಾಡಿ.

ಶನಿವಾರ, ಮೇ 9, 2015

ಕರಬೂಜ ರಸಾಯನ :

ಸಾಮಗ್ರಿಗಳು:
ಸಣ್ಣಗೆ ಹೆಚ್ಚಿದ ಕರಬೂಜ ಹಣ್ಣು - ೧ ಕಪ್
ದಪ್ಪ ತೆಂಗಿನ ಹಾಲು - ೨ ಕಪ್
ಸಕ್ಕರೆ - ೧/೪ ಕಪ್
ಪೇಪರ್ ಅವಲಕ್ಕಿ - ೧ ಕಪ್
ಏಲಕ್ಕಿ ಪುಡಿ - ೧/೪ ಟೀ ಚಮಚ

ವಿಧಾನ : 
ತೆಂಗಿನ ಹಾಲನ್ನು ಒಂದು ಪಾತ್ರೆಗೆ ಹಾಕಿ, ಸಕ್ಕರೆ ಹಾಕಿ ಕಲಕಿ. ಸಕ್ಕರೆ ಕರಗಿದ
ಮೇಲೆ ಅದಕ್ಕೆ ಹೆಚ್ಚಿದ ಕರಬೂಜ ಹಣ್ಣು, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಇದನ್ನು ಒಂದೆರಡು ಘಂಟೆ ಫ್ರಿಡ್ಜ್ ನಲ್ಲಿ ಇಡಿ. ತಣ್ಣಗಾದ ಮೇಲೆ ಇದಕ್ಕೆ ಅವಲಕ್ಕಿಸೇರಿಸಿ ಕಲಸಿ ಸರ್ವ್ ಮಾಡಿ.



ಸೂಚನೆ :
೧) ಅವಲಕ್ಕಿ ಹಾಕಿದ ಐದು ನಿಮಿಷಗಳಲ್ಲಿ ಸರ್ವ್ ಮಾಡಬೇಕು, ತುಂಬಾ ಹೊತ್ತು ಹಾಗೆಯೇ ಇಡಲು ಹೋಗಬೇಡಿ. ಜಾಸ್ತಿ ಎನಿಸಿದರೆ ಎಷ್ಟು ಬೇಕೋ ಅಷ್ಟು ರಸಾಯನಕ್ಕೆ ಅವಲಕ್ಕಿ ಸೇರಿಸಿಕೊಳ್ಳಿ.
೨) ತೆಂಗಿನ ತುರಿಯನ್ನು ಒಂದು ಸುತ್ತು ರುಬ್ಬಿ ಅದರ ಹಾಲನ್ನು ಹಿಂಡಿಕೊಳ್ಳಬೇಕು. ನಂತರ ಹಿಂಡಿಟ್ಟ ಗಸಟನ್ನು ಸಾಂಬಾರ್ ಮಾಡಲು ಬಳಸಬಹುದು. ಇಲ್ಲವಾದಲ್ಲಿ ತೆಂಗಿನ ಕಾಯನ್ನು ಅತ್ಯಂತ ನುಣ್ಣಗೆ ರುಬ್ಬಿ ಸ್ವಲ್ಪ ತೆಳ್ಳಗಾಗುವಷ್ಟು ನೀರು ಸೇರಿಸಿ ಕೂಡ ರಸಾಯನಕ್ಕೆ ಹಾಕಬಹುದು.