ಗುರುವಾರ, ಡಿಸೆಂಬರ್ 31, 2015

ಸವತೆಕಾಯಿ ಖರೆ (ಖಾರದ ಕಡ್ಡಿ) :

ಸಾಮಗ್ರಿಗಳು : 
ಸವತೆಕಾಯಿ - 1
ಅಕ್ಕಿಹಿಟ್ಟು - 1/2 ಕೆ.ಜಿ
ಇ೦ಗು ಚಿಟಿಕೆ
ಜೀರಿಗೆ - 2 ಚಮಚ
ಓಮು - 1 ಚಮಚ
ಅಚ್ಚಖಾರದ ಪುಡಿ - 3  ಚಮಚ
 (ಹಸಿಮೆಣಸು 5)
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಕರಿಯಲು.





ವಿಧಾನ : ಸವತೆಕಾಯಿಯನ್ನು ಸಿಪ್ಪೆ ತೆಗೆದು ಹೆಚ್ಚಿಕೊ೦ಡು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಳ್ಳುವಾಗ ಇ೦ಗು, ಜೀರಿಗೆ, ಓಮು, ಅಚ್ಚಖಾರದ ಪುಡಿ ಹಾಕಿ. ಒ೦ದು ಪಾತ್ರೆಯಲ್ಲಿ ರುಬ್ಬಿದ ಸವತೆಕಾಯಿ ರಸ ಹಾಕಿ ಸಣ್ಣ ಉರಿಯಲ್ಲಿ ಒ೦ದು ಕುದಿ ಬ೦ದ ಮೇಲೆ ಉಪ್ಪು ಹಾಕಿ ಹಾಗೆ ಸ್ವಲ್ಪ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸುತ್ತಿರಿ. ಈಗ ಉರಿ ಆರಿಸಿ. ಸ್ವಲ್ಪ ಬಿಸಿ ಆರಿದಮೇಲೆ ಹಿಟ್ಟನ್ನು ಚೆನ್ನಾಗಿ ಕಲೆಸಿಕೊಳ್ಳಿ. ಚಪಾತಿ ಹಿಟ್ಟಿನ ಹದಕ್ಕೆ ಬರಬೇಕು. ಬೇಕಾದಲ್ಲಿ ಸ್ವಲ್ಪ ಹಿಟ್ಟು ಸೇರಿಸಬಹುದು. ಬಾಣಲೆಯಲ್ಲಿ ಎಣ್ಣೆ ಕಾಯಲು ಇಟ್ಟು ಹಿಟ್ಟನ್ನು ಮಟ್ಟಿನಲ್ಲಿ ಹಾಕಿ ಎಣ್ಣೆ ಕಾದ ಮೇಲೆ ಬಾಣಲೆಗೆ ಹಿಟ್ಟನ್ನು ಒತ್ತಬೇಕು. ಹದವಾದ ಉರಿಯಲ್ಲಿ ಬೇಯಿಸಿ. ಈಗ ಸವತೆಕಾಯಿ ಖರೆ ರೆಡಿ.

ಗುರುವಾರ, ಡಿಸೆಂಬರ್ 24, 2015

ಕ್ಯಾರಟ್ ಹಶಿ / ಮೊಸರು ಬಜ್ಜಿ :

ಸಾಮಗ್ರಿಗಳು:
ಕ್ಯಾರಟ್ : 1 ,
ಈರುಳ್ಳಿ : 1/2,
ತೆಂಗಿನ ತುರಿ : 1/2 ಕಪ್,
ಮೊಸರು : 1/2 ಕಪ್,
ಸಕ್ಕರೆ : 1/4 ಚಮಚ, 
ಉಪ್ಪು: ರುಚಿಗೆ 

ಒಗ್ಗರಣೆಗೆ: 
ಎಣ್ಣೆ: 1 ಚಮಚ,
ಉದ್ದಿನ ಬೇಳೆ : 1/2 ಚಮಚ,
ಸಾಸಿವೆ: 1/4 ಚಮಚ,
ಹಸಿಮೆಣಸಿನ ಕಾಯಿ: 1,
ಒಣಮೆಣಸಿನ ಕಾಯಿ : 2 ಚೂರು

ವಿಧಾನ:
ಕ್ಯಾರಟ್  ತೆಗೆದು ತುರಿದು ಒಂದು ಪಾತ್ರೆಗೆ ಹಾಕಿ,  ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಮತ್ತು ಮೊಸರು ಹಾಕಿ. ತೆಂಗಿನ ತುರಿಗೆ  ನೀರು ಹಾಕಿ ನುಣ್ಣಗೆ ರುಬ್ಬಿಕೊಂಡು ಇದಕ್ಕೆ ಸೇರಿಸಿಕೊಳ್ಳಿ. ನಂತರ ಉಪ್ಪು, ಸಕ್ಕರೆ, ಬೇಕಿದ್ದಲ್ಲಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಒಗ್ಗರಣೆ ಸೌಟಿಗೆ ಎಣ್ಣೆ, ಉದ್ದಿನ ಬೇಳೆ ಹಾಕಿ ಸ್ವಲ್ಪ ಕಂದು ಬಣ್ಣವಾದಾಗ ಒಣಮೆಣಸಿನ ಚೂರು, ಸಾಸಿವೆ ಹಾಕಿ ಸಿಡಿಸಿ.  ಇದಕ್ಕೆ ಹೆಚ್ಚಿದ ಹಸಿಮೆಣಸಿನ ಕಾಯಿ ಹಾಕಿ ಸ್ವಲ್ಪ ಹುರಿದು ಮೊಸರು ಬಜ್ಜಿಗೆ ಹಾಕಿ ಚೆನ್ನಾಗಿ  ಕಲಕಿ. ಇದನ್ನು ಅನ್ನದ ಜೊತೆ ಅಥವಾ ಪಲಾವ್ ಇತ್ಯಾದಿ ರೈಸ್ ಬಾತ್ ಜೊತೆ ಸವಿಯಬಹುದು.   



ಬುಧವಾರ, ಡಿಸೆಂಬರ್ 16, 2015

ಗೋಧಿ ಹಿಟ್ಟಿನ ದೋಸೆ :

ಸಾಮಗ್ರಿಗಳು:
ಗೋಧಿ ಹಿಟ್ಟು : 1 ಕಪ್,
ಅಕ್ಕಿ ಹಿಟ್ಟು : 1 ಟೇಬಲ್ ಚಮಚ,
ಬೆಲ್ಲ : 3-4 ಚಮಚ,
ತೆಂಗಿನ ತುರಿ : 2 ಚಮಚ,
ಉಪ್ಪು : ರುಚಿಗೆ 

ವಿಧಾನ :
ಮಿಕ್ಸಿಗೆ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ನೀರು ಹಾಕಿ ಗಂಟಿಲ್ಲದೇ ರುಬ್ಬಿ. ಅಥವಾ ಪಾತ್ರೆಗೆ ಹಾಕಿ ಸೌಟಿನಲ್ಲೇ ಗಂಟಿಲ್ಲದಂತೆ ಕಲಕಬಹುದು.
ಬೇರೆ ದೋಸೆ ಹಿಟ್ಟಿನಕಿಂತ ಸ್ವಲ್ಪ ತೆಳ್ಳಗೆ ಮಾಡಿಕೊಳ್ಳಿ. ಇದಕ್ಕೆ ಬೆಲ್ಲ, ಉಪ್ಪು, ತೆಂಗಿನ ತುರಿ ಹಾಕಿ ಚೆನ್ನಾಗಿ ಕಲಕಿ. ನಂತರ ಕಾದ ತವಾಗೆ ಎಣ್ಣೆ ಸವರಿ ತೆಳ್ಳಗೆ ದೋಸೆ ಮಾಡಿ ಎರಡೂ  ಕಡೆ ಬೇಯಿಸಿ.  


ಚಿತ್ರದಲ್ಲಿ ಇರುವುದಕ್ಕಿಂತ ಸ್ವಲ್ಪ ದಪ್ಪಗೆ ಕೂಡ ದೋಸೆ ಮಾಡಬಹುದು. ಬಿಸಿ ಬಿಸಿ, ಸಿಹಿ ದೋಸೆಯನ್ನು ತುಪ್ಪ ಮತ್ತು ಚಟ್ನಿಪುಡಿ ಜೊತೆ ಸರ್ವ್ ಮಾಡಿ. 



ಶುಕ್ರವಾರ, ಡಿಸೆಂಬರ್ 4, 2015

ಸ್ವೀಟ್ ಕಾರ್ನ್ ಸೂಪ್

ಸಾಮಗ್ರಿಗಳು:
ಸ್ವೀಟ್ ಕಾರ್ನ್ 1/2 ಕಪ್
ಕಾರ್ನ ಫ್ಲೋರ್ (ಜೋಳದ ಹಿಟ್ಟು) 2 ಟೇ. ಚಮಚ
ಈರುಳ್ಳಿ - 1/2
ಬೆಳ್ಳುಳ್ಳಿ - 2 ಎಸಳು
ಕಾಳುಮೆಣಸಿನ ಪುಡಿ
ಬೆಣ್ಣೆ.
ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ : ಸ್ವೀಟ್ ಕಾರ್ನ್ ಬೇಯಿಸಿಕೊಳ್ಳಿ. ಅದರಲ್ಲಿ ಅರ್ಧದಷ್ಟು ಬದಿಗಿಟ್ಟುಕೊಳ್ಳಿ. ಉಳಿದರ್ಧಕ್ಕೆ ಈರುಳ್ಳಿ ಬೆಳ್ಳುಳ್ಳಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಸೂಪ್ ಮಾಡುವ ಪಾತ್ರೆಗೆ ಸ್ವಲ್ಪ ಬೆಣ್ಣೆ ಹಾಕಿ ಸಣ್ಣ ಉರಿಯಲ್ಲಿ ಇಡಿ. ಬೆಣ್ಣೆ ಕರಗಿದ ಮೇಲೆ ರುಬ್ಬಿದ ಮಿಶ್ರಣ ಹಾಕಿ ೨-೩ ನಿಮಿಷ ಫ್ರೈ ಮಾಡಿ. ನ೦ತರ ನೀರು ಉಪ್ಪು ಕೊತ್ತ೦ಬರಿಸೊಪ್ಪು ಸೇರಿಸಿ ಕುದಿಸಿ. ಕಾರ್ನ ಫ್ಲೋರ್ ನ್ನು ಸ್ವಲ್ಪ ನೀರು ಹಾಕಿ ಕದಡಿಕೊ೦ಡು (ಗ೦ಟಾಗದ೦ತೆ) ಸ್ವಲ್ಪ ಸ್ವಲ್ಪವಾಗಿ ಸೂಪ್ ಗೆ ಸೇರಿಸಿ. ಇದರಿ೦ದ ಸೂಪ್ ಹದವಾಗುತ್ತದೆ. ಕೊನೆಯಲ್ಲಿ ಕಾಳುಮೆಣಸಿನ ಪುಡಿ ಹಾಕಿ.  ಬದಿಗಿಟ್ಟ ಬೇಯಿಸಿದ ಸ್ವೀಟ್ ಕಾರ್ನ್ ಸ್ವಲ್ಪ ಸ್ವಲ್ಪ ಹಾಕಿ ಬಿಸಿ ಬಿಸಿ ಸೂಪ್ ಸರ್ವ ಮಾಡಿ.

ಶುಕ್ರವಾರ, ನವೆಂಬರ್ 27, 2015

ಪಡ್ಡು ಮತ್ತು ಚಟ್ನಿ :

ಪಡ್ಡು ಹಿಟ್ಟಿಗೆ  ಸಾಮಗ್ರಿಗಳು :
ದೋಸೆ ಅಕ್ಕಿ : 2 ಕಪ್,
ದಪ್ಪ ಅವಲಕ್ಕಿ : 1/4 ಕಪ್,
ಮಂಡಕ್ಕಿ (ಪುರಿ) :1/4 ಕಪ್, 
ಮೆಂತ್ಯ : 1 ಚಮಚ

ಇತರ ಸಾಮಗ್ರಿಗಳು: 
ಈರುಳ್ಳಿ : 2,
ಕರಿ ಬೇವು : 1 ಎಸಳು,
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು : 2 ಚಮಚ,
ಅಚ್ಚ ಮೆಣಸಿನ ಪುಡಿ : 1 ಚಮಚ,
ಸಕ್ಕರೆ : 1 ಚಮಚ, 
ಉಪ್ಪು: ರುಚಿಗೆ 

ವಿಧಾನ :
ಹಿಟ್ಟು ತಯಾರಿಸಲು ಪಟ್ಟಿ ಮಾಡಿರುವ ಸಾಮಗ್ರಿಗಳನ್ನು ಚೆನ್ನಾಗಿ ತೊಳೆದು 5-6 ಗಂಟೆಗಳ ಕಾಲ ನೆನೆಹಾಕಿ. ಮಂಡಕ್ಕಿಯನ್ನು ಒಂದು ಗಂಟೆ  ನೆನೆಸಿದರೂ ಸಾಕು.(ಬೆಳಿಗ್ಗೆ ನೆನೆ ಹಾಕಿ ರಾತ್ರಿಗೆ ರುಬ್ಬಿ). ನಂತರ ಎಲ್ಲವನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿ ತಟ್ಟೆ ಮುಚ್ಚಿ ರಾತ್ರಿ ಹಾಗೆಯೇ ಬಿಡಿ. ಬೆಳಿಗ್ಗೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕರಿಬೇವು, ಕೊತ್ತಂಬರಿ ಸೊಪ್ಪು, ಮೆಣಸಿನ ಪುಡಿ, ಉಪ್ಪು, ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ದೋಸೆ ಹಿಟ್ಟಿನ ಹದಕ್ಕೆ ಗಟ್ಟಿ ಇರಲಿ. ಪಡ್ಡು ಕಾವಲಿಯನ್ನು ಕಾಯಿಸಿ ಎಲ್ಲಾ ಕುಳಿಗಳಿಗೆ ಕಾಲು ಚಮಚದಷ್ಟು ಎಣ್ಣೆ ಬಿಟ್ಟು ಪಡ್ಡು  ಹಿಟ್ಟನ್ನು ಮುಕ್ಕಾಲು ಕುಳಿ ತುಂಬುವಷ್ಟು ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ. 

ಪಡ್ಡು ಉಬ್ಬಿ ದೊಡ್ಡದಾಗುತ್ತದೆ.  ನಂತರ ಒಂದು ತೆಳ್ಳಗಿನ  ಚಮಚ ಅಥವಾ ಕಡ್ಡಿಯ ಸಹಾಯದಿಂದ ಅದನ್ನು ತಿರುವಿ ಹಾಕಿ ಬೇಯಿಸಿ ತೆಗೆಯಿರಿ. ಬಿಸಿ ಬಿಸಿ ಪಡ್ಡುಗಳನ್ನು ಚಟ್ನಿ ಜೊತೆ ಸವಿಯಿರಿ. 


ಚಟ್ನಿಗೆ ಸಾಮಗ್ರಿಗಳು :
ತೆಂಗಿನ ತುರಿ : 1/2 ಕಪ್,
ಹುರಿಗಡಲೆ : 2 ಚಮಚ,
ಹಸಿಮೆಣಸಿನ ಕಾಯಿ : 3-4,
ಎಳ್ಳು : 1/4 ಚಮಚ, 
ಎಣ್ಣೆ : 1/4 ಚಮಚ,
ಕೊತ್ತಂಬರಿ ಸೊಪ್ಪು : ಸ್ವಲ್ಪ,
ಶುಂಟಿ : ಸಣ್ಣ ಚೂರು,
ಉಪ್ಪು : ರುಚಿಗೆ 

ವಿಧಾನ:
ಹಸಿಮೆಣಸಿನ ಕಾಯಿ ಮತ್ತು ಎಳ್ಳನ್ನು ಎಣ್ಣೆಯಲ್ಲಿ ಹುರಿದು, ಉಳಿದ ಸಾಮಗ್ರಿಗಳನ್ನು ಸೇರಿಸಿ ರುಬ್ಬಿದರೆ ಚಟ್ನಿ ಸಿಧ್ಧ.

ಸೂಚನೆಗಳು :
1) ಪಡ್ಡು ಹಿಟ್ಟಿಗೆ ಮೆಣಸಿನ ಪುಡಿ ಬದಲು ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ ಹಾಕಬಹುದು. ತಿನ್ನುವಾಗ ಬಾಯಿಗೆ ಸಿಕ್ಕು ಖಾರವೆನಿಸುವುದರಿಂದ ನಾನು ಹಾಕುವುದಿಲ್ಲ. 
2) ಪಡ್ಡು ಹಿಟ್ಟಿಗೆ ಇಷ್ಟ ಪಡುವವರು ಸಾಸಿವೆ ಒಗ್ಗರಣೆ ಮಾಡಿ ಹಾಕಿಕೊಳ್ಳಬಹುದು. 
3) ಚಟ್ನಿಗೂ ಬೇಕಿದ್ದರೆ ಸಾಸಿವೆ, ಕರಿಬೇವು, ಇಂಗಿನ ಒಗ್ಗರಣೆ ಮಾಡಿಕೊಳ್ಳಬಹುದು. 


ಗುರುವಾರ, ನವೆಂಬರ್ 5, 2015

ಅಕ್ಕಿ ಶ್ಯಾವಿಗೆ ಭಾತ್ :

ಸಾಮಗ್ರಿಗಳು:
ಅಕ್ಕಿ ಶ್ಯಾವಿಗೆ - ೨೦೦ ಗ್ರಾ೦ (Anil)
ಬೀನ್ಸ್ : ೮-೧೦
ಕ್ಯಾರೇಟ್ : ೧
ಹಸಿಮೆಣಸು : ೨-೩
ಈರುಳ್ಳಿ : ೧
ಒಗ್ಗರಣೆಗೆ: ಸಾಸಿವೆ, ಕರಿಬೇವು, ಉದ್ದಿನಬೇಳೆ, ಕಡಲೇಬೇಳೆ, ಶೇ೦ಗಾ, ಅರಿಶಿನ, ಜೀರಿಗೆ, ಎಣ್ಣೆ. 
ಉಪ್ಪು - ರುಚಿಗೆ ತಕ್ಕಷ್ಟು.
ಸಕ್ಕರೆ ೧/೨ ಚಮಚ


ವಿಧಾನ: ಮೊದಲು ಒ೦ದು ಪಾತ್ರೆಯಲ್ಲಿ ನೀರನ್ನು ಬಿಸಿಗಿಡಿ. ಅದಕ್ಕೆ ಉಪ್ಪು ಎಣ್ಣೆ ಹಾಕಿ. ನೀರು ಕುದಿಯಲು ಶುರುವಾದಮೇಲೆ ಶ್ಯಾವಿಗೆ ಹಾಕಿ. ಶ್ಯಾವಿಗೆಯನ್ನು ಉದುರುದುರಾಗಿ ಬೇಯಿಸಿ, ನೀರು ಬಸಿದಿಟ್ಟುಕೊಳ್ಳಿ. ಬೀನ್ಸ್, ಕ್ಯಾರೇಟ್ & ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ಈಗ ಬಾಣಲೆಗೆ ಎಣ್ಣೆ ಹಾಕಿಕೊ೦ಡು ಅದು ಕಾದ ಮೇಲೆ ಶೇ೦ಗಾ, ಉದ್ದಿನಬೇಳೆ, ಕಡಲೇಬೇಳೆ ಹಾಕಿ ಫ್ರೈ ಮಾಡಿ. ನ೦ತರ ಇದಕ್ಕೆ ಸಾಸಿವೆ ಜೀರಿಗೆ ಅರಿಶಿನ ಕರಿಬೇವು ಹಾಕಿ ಹೆಚ್ಚಿಟ್ಟ ತರಕಾರಿಗಳು & ಉಪ್ಪು ಹಾಕಿ ೮-೧೦ ನಿಮಿಷ ಫ್ರೈ ಮಾಡಿ ಕೊನೆಯಲ್ಲಿ ಉದುರುದುರಾಗಿ ಬೇಯಿಸಿಟ್ಟುಕೊ೦ಡ ಶ್ಯಾವಿಗೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರುಚಿ ನೋಡಿಕೊ೦ಡು ಬೇಕಾದಲ್ಲಿ ಉಪ್ಪು & ಸಕ್ಕರೆ ಸೇರಿಸಿ.

ಸೋಮವಾರ, ಅಕ್ಟೋಬರ್ 26, 2015

ಸಾಂಬಾರ್ ಸೊಪ್ಪಿನ ಹಶಿ (ದೊಡ್ಡ ಪತ್ರೆ ಮೊಸರು ಬಜ್ಜಿ) :

ಸಾಮಗ್ರಿಗಳು:
ಸಾಂಬಾರ್ ಸೊಪ್ಪು (ದೊಡ್ಡ ಪತ್ರೆ) - 10-12 ಎಲೆಗಳು 
ಮೊಸರು - 1 ಕಪ್ 
ಈರುಳ್ಳಿ - 1 (ಸಣ್ಣದು)
ಎಣ್ಣೆ - 2 ಚಮಚ 
ಉದ್ದಿನ ಬೇಳೆ - 1/2 ಚಮಚ
ಸಾಸಿವೆ - 1/4 ಚಮಚ
ಹಸಿಮೆಣಸಿನ ಕಾಯಿ - 1
ಉಪ್ಪು - ರುಚಿಗೆ 

ವಿಧಾನ :
ದೊಡ್ಡ ಪತ್ರೆ ಎಲೆಗಳನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ, ಉದ್ದಿನಬೇಳೆ ಹಾಕಿ ಸ್ವಲ್ಪ ಕೆಂಪಗಾದ ಮೇಲೆ ಸಾಸಿವೆ ಹಾಕಿ ಸಿಡಿಸಿ, ಹೆಚ್ಚಿಕೊಂಡ ಹಸಿಮೆಣಸು ಹಾಕಿ. ನಂತರ ಇದಕ್ಕೆ ಹೆಚ್ಚಿಕೊಂಡ ಸೊಪ್ಪು ಹಾಕಿ ಸಣ್ಣ ಉರಿಯಲ್ಲಿ 2-3 ನಿಮಿಷ ಹುರಿಯಿರಿ. ನಂತರ ಹೆಚ್ಚಿಕೊಂಡ ಈರುಳ್ಳಿ ಹಾಕಿ ಅರ್ಧ ನಿಮಿಷ ಹುರಿದು (ಈರುಳ್ಳಿ ಪೂರ್ತಿ ಹುರಿಯದೇ ಸ್ವಲ್ಪ ಹಸಿಯಾಗೇ ಇರಲಿ), ಉರಿ ಆರಿಸಿ. ತಣ್ಣಗಾದ ಮೇಲೆ ಮೊಸರು, ಉಪ್ಪು ಹಾಕಿ ಕಲಕಿ. ಈಗ ದೊಡ್ಡ ಪತ್ರೆ ಹಶಿ / ಮೊಸರು ಬಜ್ಜಿ ಅನ್ನ ಅಥವಾ ಪಲಾವ್ ಜೊತೆ ಸವಿಯಲು ಸಿಧ್ಧ.  


ಸಲಹೆ:
ಇದೇ ರೀತಿ ಮೆಂತ್ಯ ಸೊಪ್ಪನ್ನು ಸಣ್ಣಗೆ ಹೆಚ್ಚಿ ಮೇಲೆ ಹೇಳಿದಂತೆ ಒಗ್ಗರಣೆ ಮಾಡಿ ಸೊಪ್ಪು ಹಾಕಿ, ಸ್ವಲ್ಪ ಉಪ್ಪು, ಚಿಟಿಕೆ ಸಕ್ಕರೆ ಹಾಕಿ ಹುರಿದು ಹಶಿ ಮಾಡಬಹುದು. ಇದಕ್ಕೆ ಹೆಚ್ಚಿದ ಹಸಿ ಈರುಳ್ಳಿಯನ್ನು ಹಾಕಬೇಕು. 

ಬುಧವಾರ, ಅಕ್ಟೋಬರ್ 21, 2015

ನಿ೦ಬೆ ಹಣ್ಣಿನ ತ೦ಬುಳಿ:

ಸಾಮಗ್ರಿಗಳು : 
ನಿ೦ಬೆಹಣ್ಣು ೧
ತೆ೦ಗಿನತುರಿ ೧/೨ ಕಪ್
ಉಪ್ಪು ರುಚಿಗೆ ತಕ್ಕಷ್ಟು
ಸಕ್ಕರೆ ೧ ಟೇ ಚಮಚ

ಒಗ್ಗರಣೆಗೆ : ಎಣ್ಣೆ ೧/೨ ಚಮಚ, ಸಾಸಿವೆ ೧/೪ ಚಮಚ, ಒಣಮೆಣಸು 1.

ವಿಧಾನ: ತೆ೦ಗಿನತುರಿಯನ್ನು ನುಣ್ಣಗೆ ರುಬ್ಬಿಕೊ೦ಡು ಅದಕ್ಕೆ ೨ ಲೋಟ ನೀರು, ಉಪ್ಪು, ಸಕ್ಕರೆ ಹಾಕಿ ಹಾಕಿ ಕದಡಿ ನ೦ತರ ನಿ೦ಬೆರಸ ಬೆರೆಸಿ. ರುಚಿ ನೋಡಿಕೊ೦ಡು ಉಪ್ಪು ಹಾಕಿ. ನ೦ತರ ಒಗ್ಗರಣೆ ಸೌಟಿನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊ೦ಡು  ಅದಕ್ಕೆ ಸಾಸಿವೆ ಒಣ ಮೆಣಸು ಹಾಕಿ ೧ ನಿಮಿಷ ಫ್ರೈ ಮಾಡಿ ಒಗ್ಗರಣೆ ಹಾಕಿದರೆ ಸಿಹಿ ಹುಳಿ ನಿ೦ಬೆಹಣ್ಣನ ತ೦ಬುಳಿ ಅನ್ನದ ಜೊತೆ ಸವಿಯಲು ಸಿದ್ಧ.

ಗುರುವಾರ, ಅಕ್ಟೋಬರ್ 15, 2015

ಅವಲಕ್ಕಿ ಚುಡ್ವಾ :


ಸಾಮಗ್ರಿಗಳು : ಪೇಪರ್ ಅವಲಕ್ಕಿ 1/2 ಕಿ. ಗ್ರಾ೦
 ಕಡ್ಲೇಬೀಜ 100 ಗ್ರಾ೦(ಶೇ೦ಗಾ)
ಹುರಿಗಡಲೆ 2 ಚಮಚ
ಇ೦ಗು ಚಿಟಿಕೆ
 ಉಪ್ಪು ರುಚಿಗೆ ತಕ್ಕಷ್ಟು
 ಸಕ್ಕರೆ ಪುಡಿ ರುಚಿಗೆ ತಕ್ಕಷ್ಟು
 ಅಚ್ಚ ಖಾರದಪುಡಿ 3 ಚಮಚ 
 ಕಡಲೇಬೇಳೆ ಚಮಚ
 ಉದ್ದಿನಬೇಳೆ 11/2 ಚಮಚ
 ಜೀರಿಗೆ 1ಚಮಚ 
 ಧನಿಯಾ 1 ಚಮಚ
 ಕರಿಬೇವು, ಎಣ್ಣೆ 3 ಚಮಚ,
 ಸಾಸಿವೆ 1 ಚಮಚ.




ವಿಧಾನ : ಅವಲಕ್ಕಿಯನ್ನು ಶುಭ್ರವಾದ ಬಟ್ಟೆಯಲ್ಲಿ ಹಾಕಿ ಹರಡಿ ತೆಳುವಾದ ಬಟ್ಟೆ ಮುಚ್ಚಿ ಬಿಸಿಲಿನಲ್ಲಿ ೨ ಗ೦ಟೆಗಳ ಕಾಲ ಒಣಗಿಸಿ.  ಕಡಲೇಬೇಳೆ, ಉದ್ದಿನಬೇಳೆ, ಜೀರಿಗೆ, ಧನಿಯಾ, ಇವನ್ನು ಸಣ್ಣ ಉರಿಯಲ್ಲಿ ಹುರಿದುಕೊ೦ಡು ಇ೦ಗು ಸೇರಿಸಿ ಪೌಡರ್ ಮಾಡಿಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿಕೊ೦ಡು, ಅದು ಕಾದಮೇಲೆ ಶೇ೦ಗಾವನ್ನು ಹುರಿದು ತೆಗೆದಿಟ್ಟುಕೊಳ್ಳಿ ಈಗ ಕಾದ ಎಣ್ಣೆಗೆ ಸಾಸಿವೆ, ಕರಿಬೇವು, ಹಾಕಿ ಉರಿ ಆರಿಸಿ. ಈಗ ಇದಕ್ಕೆ ಪುಡಿ ಮಾಡಿಟ್ಟ ಮಸಾಲೆ, ಉಪ್ಪು ಸಕ್ಕರೆಪುಡಿ, ಖಾರದ ಪುಡಿ ಅವಲಕ್ಕಿ ಎಲ್ಲವನ್ನು ಸೇರಿಸಿ ಚೆನ್ನಾಗಿ ಮಿ‍ಕ್ಸ್ ಮಾಡಿ ಕೊನೆಯಲ್ಲಿ ಹುರಿಗಡಲೆ & ಶೇ೦ಗಾ ಸೇರಿಸಿದರೆ ಕುರುಮ್ ಕುರುಮ್ ಅವಲಕ್ಕಿ ಚುಡ್ವಾ ಚಹಾದ ಜೊತೆ ಸವಿಯಲು ಸಿದ್ಧ.

ಗುರುವಾರ, ಅಕ್ಟೋಬರ್ 8, 2015

ಅಕ್ಕಿ ಹಪ್ಪಳ :

ಸಾಮಗ್ರಿಗಳು :
ದೋಸೆ ಅಕ್ಕಿ : ೧ ಕಿಗ್ರಾಂ,
ಸಬ್ಬಕ್ಕಿ : ೧/೪ ಕಿಗ್ರಾಂ,
ನೀರು & ಉಪ್ಪು

ಹಪ್ಪಳ ಒತ್ತಲು ಪ್ರೆಸ್ಸಿಂಗ್ ಮಷೀನ್ ಅಥವಾ ರೋಟಿ ಮೇಕರ್ ಬೇಕು. ಮತ್ತು ಹಪ್ಪಳ ಒಣಗಿಸಲು ದೊಡ್ಡ ಪ್ಲಾಸ್ಟಿಕ್ ಅಥವಾ ತೆಳ್ಳಗಿನ ಸಿಂಥೆಟಿಕ್ ಸೀರೆ ಆದರೂ ನಡೆದೀತು. 

ಮಸಾಲೆಗೆ ಸಾಮಗ್ರಿಗಳು :
ಹಸಿಮೆಣಸಿನ ಕಾಯಿ : ೧೦-೧೫,
ಜೀರಿಗೆ : ೨ ಚಮಚ,
ಇಂಗು : ೧/೪ ಚಮಚ

ವಿಧಾನ:
    ಅಕ್ಕಿಯನ್ನು ಚೆನ್ನಾಗಿ ತೊಳೆದು ನೆರಳಿನಲ್ಲಿ ಒಣಗಿಸಿಕೊಳ್ಳಿ. ನಂತರ ಇದಕ್ಕೆ ಸಬ್ಬಕ್ಕಿ ಸೇರಿಸಿ ಗಿರಣಿಯಲ್ಲಿ ನುಣ್ಣಗೆ ಹಿಟ್ಟು ಮಾಡಿಸಿಕೊಳ್ಳಿ.
    ಒಂದು ದಪ್ಪ ತಳದ, ದೊಡ್ಡ ಪಾತ್ರೆಯಲ್ಲಿ ೨.೫ - ೩ ಲೀಟರ್ ನಷ್ಟು ನೀರು ಹಾಕಿ ಕುದಿಸಿ. ಮಸಾಲೆ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ನೀರು ಚೆನ್ನಾಗಿ ಕುದಿಯುವಾಗ ರುಬ್ಬಿದ ಮಿಶ್ರಣ, ಉಪ್ಪು, ಅಕ್ಕಿ-ಸಬ್ಬಕ್ಕಿ ಹಿಟ್ಟು ಹಾಕಿ ೧೫-೨೦ ನಿಮಿಷ ಸಣ್ಣ ಉರಿಯಲ್ಲಿ, ಕಲಕುತ್ತಾ ಬೇಯಿಸಿ. ನೀರು ಆರಿ ಹಿಟ್ಟು ಗಟ್ಟಿಯಾಗಬೇಕು. ತಿಕ್ಕಿ ಉಂಡೆ ಮಾಡುವಷ್ಟು ಗಟ್ಟಿಯಾಗಬೇಕು. (ಕಮ್ಮಿ ನೀರು ಹಾಕಿ ಜಾಸ್ತಿ ಹೊತ್ತು ಬೇಯಿಸದಿದ್ದರೆ ಹಪ್ಪಳ ಕರಿದಾಗ ಚೆನ್ನಾಗಿ ಅರಳುವುದಿಲ್ಲ.) 

ಹಿಟ್ಟು ಸ್ವಲ್ಪ ತಣ್ಣಗಾದ ಮೇಲೆ ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು ನೆಲ್ಲಿಕಾಯಿ ಗಾತ್ರದ ಹಿಟ್ಟು ತೆಗೆದುಕೊಂಡು ಚೆನ್ನಾಗಿ ತಿಕ್ಕಿ ತಿಕ್ಕಿ ಉಂಡೆ ಮಾಡಿಕೊಳ್ಳಿ. ತೊಳೆದ ಹಾಲಿನ ಕವರ್ ಕತ್ತರಿಸಿಕೊಂಡು, ಎಣ್ಣೆ ಸವರಿ ಒಂದನ್ನು ಪ್ರೆಸ್ಸಿಂಗ್ ಮಷೀನ್ ನಲ್ಲಿಟ್ಟು ಅದರ ಮೇಲೆ ಒಂದು ಉಂಡೆ ಇಟ್ಟು ಮೇಲಿಂದ ಇನ್ನೊಂದು ಪ್ಲಾಸ್ಟಿಕ್ ಇಟ್ಟು ಒತ್ತಿ.



ಹಪ್ಪಳ ಒಣಗಿಸುವ ಪ್ಲಾಸ್ಟಿಕ್/ ಬಟ್ಟೆ ಮೇಲೆ ಒಂದೊಂದಾಗಿ ಹಾಕುತ್ತಾ ಬನ್ನಿ. ಎಲ್ಲಾ ಮುಗಿದ ಮೇಲೆ ಬಿಸಿಲಿನಲ್ಲಿ ಒಣಗಿಸಿ. 

ಖಡಕ್ ಬಿಸಿಲಿದ್ದರೆ ಒಂದು ದಿನ ಒಣಗಿದರೆ ಸಾಕು. ಇದನ್ನು ಗಾಳಿ ಆಡದ ಡಬ್ಬದಲ್ಲಿ ತುಂಬಿಡಿ. ಒಂದು ವರ್ಷಕ್ಕೂ ಹೆಚ್ಚು ದಿನ ಕೆಡದಂತೆ ಇಡಬಹುದು. 
    ಊಟಕ್ಕೆ ಸಾಂಬಾರ್, ತೊವ್ವೆ, ತಿಳಿಸಾರು ಮಾಡಿದಾಗ ಕಾದ ಎಣ್ಣೆಯಲ್ಲಿ ಹಪ್ಪಳ ಕರಿದುಕೊಳ್ಳಿ. 

ಶುಕ್ರವಾರ, ಅಕ್ಟೋಬರ್ 2, 2015

ಮೋದಕ:

ಸಾಮಗ್ರಿಗಳು : ಗೋಧಿ ಹಿಟ್ಟು 1 ಕಪ್, ತೆ೦ಗಿನಕಾಯಿ ತುರಿ 1 ಕಪ್ , ಬೆಲ್ಲ (ಸಕ್ಕರೆ) 1/2 ಕಪ್ , ಎಳ್ಳು - 1 ಚಮಚ, ಏಲಕ್ಕಿ ಪುಡಿ 1/2 ಚಮಚ, ಎಣ್ಣೆ ಕರಿಯಲು.





ವಿಧಾನ : ಗೋಧಿಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಒ೦ದು ಪಾತ್ರೆಗೆ ತೆ೦ಗಿನತುರಿ ಬೆಲ್ಲ ಹಾಕಿ ಚೆನ್ನಾಗಿ ಕಾಯಿಸಿ. ಆಗಾಗ ಅಡಿ ಹಿಡಿಯದ೦ತೆ ತೊಳೆಸುತ್ತಲೆ ಇರಬೇಕು. ಈ ಹೂರಣ ಹದಕ್ಕೆ ಬರಲು  15-20 ನಿಮಿಷ ಕಾಯಿಸ ಬೇಕಾಗುತ್ತದೆ. ಈಗ ಗೋಧಿಹಿಟ್ಟನ್ನು ಚಿಕ್ಕ ಚಿಕ್ಕ (ಚಿಕ್ಕ ನೆಲ್ಲಿಕಾಯಿ ಗಾತ್ರ) ಉ೦ಡೆ ಮಾಡಿಕೊ೦ಡು ಚಪಾತಿ ಥರ ತೆಳ್ಳಗೆ ಹಿಟ್ಟು ಬಳಸಿ ಲಟ್ಟಿಸಿಕೊಳ್ಳಿ (ಇದಕ್ಕೆ ಮೋದಕದ ಹಾಳೆ ಎನ್ನುತ್ತಾರೆ) . ಬಿಸಿ ಆರಿದ ಹೂರಣವನ್ನು ಚಿತ್ರದಲ್ಲಿ ತೋರಿಸಿದ೦ತೆ ಮೋದಕದ ಹಾಳೆಯಲ್ಲಿ ಮಡಿಸಿಟ್ಟುಕೊಳ್ಳಿ. ಎಣ್ಣೆಯನ್ನು ಬಾಣಲೆಗೆ ಹಾಕಿ ಎಣ್ಣೆ ಕಾದ ಮೇಲೆ ಇದನ್ನು ಹಾಕಿ ಸಣ್ಣ ಉರಿಯಲ್ಲಿ ಹೊ೦ಬಣ್ಣ ಬರುವ ವರೆಗೆ ಬೇಯಿಸಿ. ಈಗ ಮೋದಕ ರೆಡಿ.

ಮಂಗಳವಾರ, ಸೆಪ್ಟೆಂಬರ್ 22, 2015

ಪಾಲಕ್ ದಾಲ್ :

ಸಾಮಗ್ರಿಗಳು:
ಹೆಸರು ಬೇಳೆ : 1/2 ಕಪ್,
ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು : 1/2 ಕಪ್,
ಸಣ್ಣಗೆ ಹೆಚ್ಚಿದ ಈರುಳ್ಳಿ : 1/2 ಕಪ್,
ಹಸಿಮೆಣಸಿನ ಕಾಯಿ : 2-3,
ಬೆಳ್ಳುಳ್ಳಿ : 6-7 ಎಸಳು,
ಶುಂಟಿ : 1 ಇಂಚು,
ಅರಿಶಿನ ಪುಡಿ : 1/4 ಚಮಚ,
ಎಣ್ಣೆ : 4-5 ಚಮಚ,
ಸಾಸಿವೆ: 1/2 ಚಮಚ,
ಕರಿಬೇವು : 7-8 ಎಲೆಗಳು,
ನಿಂಬೆ ಹಣ್ಣು : 1,
ಉಪ್ಪು : ರುಚಿಗೆ.

ವಿಧಾನ:
ಹೆಸರುಬೇಳೆಯನ್ನು ತೊಳೆದು ಅರಿಶಿನ ಪುಡಿ, 1/4 ಚಮಚ ಎಣ್ಣೆ ಮತ್ತು ನೀರು ಹಾಕಿ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ಬೆಳ್ಳುಳ್ಳಿ ಮತ್ತು ಶುಂಟಿ ಜಜ್ಜಿಕೊಳ್ಳಿ. ಹಸಿಮೆಣಸಿನ ಕಾಯಿಯನ್ನು ಉದ್ದುದ್ದ ಸೀಳಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಹಾಕಿ ಸಿಡಿದ ಮೇಲೆ ಹಸಿಮೆಣಸಿನ ಕಾಯಿ, ಕರಿಬೇವು ಹಾಕಿ  ಒಮ್ಮೆ ಹುರಿದು, ಜಜ್ಜಿದ ಶುಂಟಿ ಮತ್ತು ಬೆಳ್ಳುಳ್ಳಿ ಹಾಕಿ ಹುರಿಯಿರಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ ಅರ್ಧ ನಿಮಿಷ ಹುರಿದು ಹೆಚ್ಚಿದ ಪಾಲಕ್ ಸೊಪ್ಪು ಹಾಕಿ, ಸ್ವಲ್ಪ ನೀರು ಹಾಕಿ ಬೇಯಿಸಿ. ಸೊಪ್ಪು  ಬೆಂದ ಮೇಲೆ ಮೊದಲೇ ಬೇಯಿಸಿಕೊಂಡ ಬೇಳೆ ಹಾಕಿ ಬೇಕಿದ್ದರೆ ಸ್ವಲ್ಪ ನೀರು ಹಾಕಿ, ಉಪ್ಪು ಹಾಕಿ ಕುದಿಸಿ. ಕೊನೆಯಲ್ಲಿ ನಿಂಬೆ ರಸ ಸೇರಿಸಿ ಉರಿ ಆರಿಸಿ. ಈಗ ಬಿಸಿ ಬಿಸಿ ಪಾಲಕ್ ದಾಲ್ ಅನ್ನು ಅನ್ನದ ಜೊತೆ ಸವಿಯಿರಿ. 


ಸೂಚನೆ:
1) ಹೆಸರುಬೇಳೆ ಬೇಯಿಸಿದ ಮೇಲೆ ಅದನ್ನು ಅರೆಯಬಾರದು (smash). ಅರೆದರೆ ಮಾಡಿದ ಪದಾರ್ಥ ಸ್ವಲ್ಪ ಲೋಳೆ ಎನಿಸುತ್ತದೆ. 

ಶುಕ್ರವಾರ, ಸೆಪ್ಟೆಂಬರ್ 11, 2015

ಪಲಾವ್ - 1 :

ಸಾಮಗ್ರಿಗಳು:
ಅಕ್ಕಿ – 1 ½ ಕಪ್, ಎಣ್ಣೆ 3 ಚಮಚ, ಲಿ೦ಬುರಸ ಉಪ್ಪು ರುಚಿಗೆ ತಕ್ಕಷ್ಟು.
ತರಕಾರಿಗಳು: ಕತ್ತರಿಸಿದ ಬೀನ್ಸ್,ಕ್ಯಾರೇಟ್,ಆಲೂ,ಹೂಕೋಸು,ಹಸಿಬಟಾಣಿ – 1 ಕಪ್ - ಈರುಳ್ಳಿ - 1
ಮಸಾಲೆಗೆ: ಧನಿಯಾ ¼ ಚಮಚ,ಜೀರಿಗೆ ¼ ಚಮಚ,ಚಕ್ಕೆ 1 ಇ೦ಚು,ಮೊಗ್ಗು 1 ದಳ,ಲವ೦ಗ 2,ಪುದಿನಾಸೊಪ್ಪು 5-6 ಎಲೆಗಳು,ಕೊತ್ತ೦ಬರಿಸೊಪ್ಪು ½ ಹಿಡಿ,ತೆ೦ಗಿನತುರಿ 2 ಚಮಚ ,ಹಸಿಮೆಣಸು 3ಈರುಳ್ಳಿ ½ ,
ಬೆಳ್ಳುಳ್ಳಿ 4 ಎಸಳು,ಶು೦ಟಿ ½ ಇ೦ಚು, ಕಾಳುಮೆಣಸು 5-6.





ವಿಧಾನ : ತರಕಾರಿಗಳನ್ನು ಬೇಕಾದ ಆಕಾರಕ್ಕೆ (ಸಾಮಾನ್ಯವಾಗಿ ಉದ್ದುದ್ದಕ್ಕೆ ಕತ್ತರಿಸುವುದು) ಕತ್ತರಿಸಿಕೊಳ್ಳಿ. ಮೇಲೆ ಹೇಳಿದ ಮಸಾಲೆ ಪದಾರ್ಥಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಕುಕ್ಕರ್ ಗೆ ಎಣ್ಣೆ ಹಾಕಿಕೊ೦ಡು, ಕತ್ತರಿಸಿದ 1/2 ಈರುಳ್ಳಿ ಹಾಕಿ ಫ್ರೈ ಮಾಡಿ. ಅದಕ್ಕೆ ರುಬ್ಬಿದ ಮಸಾಲೆ ಹಾಕಿ ಕೈಯಾಡಿಸಿ, ಈಗ ಹೆಚ್ಚಿದ ತರಕಾರಿಗಳು, ತೊಳೆದ ಅಕ್ಕಿ ಹಾಕಿ ನಿಮಿಷ ಫ್ರೈ ಮಾಡಿ ನ೦ತರ ಉಪ್ಪು, ನಿ೦ಬೆ ರಸ ಹಾಕಿ 4 ಕಪ್ ನೀರು ಹಾಕಿ ಮಿಕ್ಸ್ ಮಾಡಿ. ಉಪ್ಪು ಹುಳಿ ಖಾರ ಸರಿಯಾಗಿದೆಯೇ ಎ೦ದು ರುಚಿ ನೋಡಿಕೊಳ್ಳಿ. ಬೇಕಾದ್ದನ್ನು ಸೇರಿಸಿ. ಎಲ್ಲಾ ಸರಿ ಇದ್ದರೆ ಕುಕ್ಕರ್ ನ ಮುಚ್ಚಳ ಹಾಕಿ ವಿಷಲ್ ಕೂಗಿಸಿ.ಈಗ ಬಿಸಿ ಬಿಸಿ ಪಲಾವ್ ತಿನ್ನಲು ರೆಡಿ.



ಮೊಸರು ಬಜ್ಜಿ (ರಾಯ್ತ) :ಸವತೆಕಾಯಿ, ಟೊಮ್ಯಾಟೊಕೊತ್ತಂಬರಿ ಸೊಪ್ಪು,
 ಈರುಳ್ಳಿ ಇವೆಲ್ಲವನ್ನು ಸಣ್ಣದಾಗಿ ಹೆಚ್ಚಿಕೊ೦ಡು ಇದಕ್ಕೆ ಉಪ್ಪು ಸ್ವಲ್ಪ ಸಕ್ಕರೆ ಮೊಸರು ಸೇರಿಸಿದರೆ ಮೊಸರು ಬಜ್ಜಿ  ಸಿದ್ದ.

ಶುಕ್ರವಾರ, ಸೆಪ್ಟೆಂಬರ್ 4, 2015

ಪಾಲಕ್ - ಕ್ಯಾರಟ್ ರೈಸ್ :

ಸಾಮಗ್ರಿಗಳು :
ಅಕ್ಕಿ : 1 ಕಪ್, 
ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು : 1/2 ಕಪ್,
ತುರಿದ ಕ್ಯಾರಟ್ : 1,
ಸಣ್ಣಗೆ ಹೆಚ್ಚಿದ ಟೊಮೇಟೊ : 1/4 ಕಪ್,
ಉದ್ದ ಹೆಚ್ಚಿದ ಈರುಳ್ಳಿ : 1,
ಎಣ್ಣೆ : 4 ಚಮಚ,
ಸಾಸಿವೆ : 1/4 ಚಮಚ,
ಅರಿಶಿನ ಪುಡಿ : 1/4 ಚಮಚ,
ಜೀರಿಗೆ ಪುಡಿ : 1/4 ಚಮಚ,
ಅಚ್ಚ  ಮೆಣಸಿನ ಪುಡಿ: 1/2 ಚಮಚ,
ಗರಂ ಮಸಾಲಾ ಪುಡಿ : 1/4 ಚಮಚ,
ಸಕ್ಕರೆ : 1/4 ಚಮಚ,
ನಿಂಬೆ ರಸ : ೧/೨ ಚಮಚ,
ಉಪ್ಪು :  ರುಚಿಗೆ 

ವಿಧಾನ : 
 ಅಕ್ಕಿಯಿಂದ ಉದುರುದುರಾದ ಅನ್ನ ಮಾಡಿಕೊಳ್ಳಿ  ಒಂದು ಬಾಣಲೆಗೆ ಎಣ್ಣೆ ಹಾಕಿ, ಸಾಸಿವೆ  ಒಗ್ಗರಣೆ ಮಾಡಿ. ಇದಕ್ಕೆ ಈರುಳ್ಳಿ ಹಾಕಿ ಬಾಡಿಸಿ. ನಂತರ ಅರಿಶಿನ ಪುಡಿ, ಟೊಮೇಟೊ, ಸ್ವಲ್ಪ ಉಪ್ಪು ಹಾಕಿ ಮೆತ್ತಗಾಗುವ ತನಕ ಹುರಿಯಿರಿ. ಇದಕ್ಕೆ ಜೀರಿಗೆ ಪುಡಿ, ಅಚ್ಚ ಮೆಣಸಿನ ಪುಡಿ, ಗರಂ ಮಸಾಲ ಪುಡಿ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ತುರಿದ ಕ್ಯಾರಟ್, ಹೆಚ್ಚಿದ ಪಾಲಕ್ ಸೊಪ್ಪು, ಉಪ್ಪು ಹಾಕಿ ಸ್ವಲ್ಪ ಬೇಯಿಸಿ  ಉರಿ ಆರಿಸಿ . (ಸೊಪ್ಪು ನೀರು ಬಿಡುವುದರಿಂದ ನೀರು ಹಾಕುವುದು ಬೇಡ). 

ಕೊನೆಯಲ್ಲಿ ನಿಂಬೆ ರಸ ಮತ್ತು ಅನ್ನ ಹಾಕಿ ಕಲಸಿದರೆ ಪಾಲಕ್ - ಕ್ಯಾರಟ್ ರೈಸ್ ಸವಿಯಲು ಸಿದ್ಧ




ಭಾನುವಾರ, ಆಗಸ್ಟ್ 30, 2015

ಕಳಲೆ ಪಕೋಡ :


ಸಾಮಗ್ರಿಗಳು : ಕಳಲೆ ಸ್ಲೈಸ್ 1 ಕಪ್, ಕಡಲೆ ಹಿಟ್ಟು 1 ಕಪ್, ಅಕ್ಕಿ ಹಿಟ್ಟು 1/4 ಕಪ್, ಮೆಣಸಿನಪುಡಿ 2 ಚಮಚ, ಜೀರಿಗೆ 1 ಚಮಚ, ಓಮು 1/2 ಚಮಚ, ಇ೦ಗು, ಉಪ್ಪುರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.



ವಿಧಾನ : ಕಡಲೆಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನಪುಡಿ, ಉಪ್ಪು ಹಾಕಿ ಸಲ್ಪ ನೀರು ಹಾಕಿ ಬಜ್ಜಿ ಹದಕ್ಕೆ ಕಲೆಸಿಕೊಳ್ಳಿ. ಇದಕ್ಕೆ ಜೀರಿಗೆ ಓಮು ಮತ್ತು ಇ೦ಗನ್ನು ಅರೆದು ಹಾಕಿ. ನಿಮಿಷ ಹಾಗೆ ಬಿಡಿ. ಬಾಣಲೆಗೆ ಎಣ್ಣೆ ಹಾಕಿ ಎಣ್ಣೆ ಕಾದ ಮೇಲೆ ಕಳಲೆ ಸ್ಲೈಸ್ ನ್ನು ಹಿಟ್ಟಿನಲ್ಲಿ ಅದ್ದಿ ಹೊ೦ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿದರೆ ಬಿಸಿ ಬಿಸಿ ಕಳಲೆ ಬಜ್ಜಿ / ಪಕೋಡ ತಿನ್ನಲು ಸಿದ್ಧ.




ವಿಧಾನ 2 : ಕಳಲೆಯನ್ನು ಸಣ್ಣದಾಗಿ ಹೆಚ್ಚಿ ಮೇಲೆ ಹೇಳಿದ ಥರ ಹಿಟ್ಟು ತಯಾರಿಸಿಕೊ೦ಡು, ಇದಕ್ಕೆ ಹೆಚ್ಚಿದ ಕಳಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬೋ೦ಡ ಥರ ಹೊ೦ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿಯಿರಿ.



ಸೂಚನೆ: ಕಳಲೆ ಸಿಪ್ಪೆ ತೆಗೆದು ಸ್ಲೈಸ್ ಅಥವಾ ಸಣ್ಣದಾ ಹೆಚ್ಚಿ ೩ ದಿನ ನೀರಿನಲ್ಲಿ ನೆನೆಸಿಡಬೇಕು. ದಿನಾಲು ಒ೦ದು ಸಲ ನೀರು ತೆಗೆದು ಬೇರೆ ನೀರು ಹಾಕಬೇಕು. ಇಲ್ಲವಾದಲ್ಲಿ ವಾಸನೆಯಾಗುತ್ತದೆ.

ಶುಕ್ರವಾರ, ಆಗಸ್ಟ್ 21, 2015

ಅಕ್ಕಿ ರೊಟ್ಟಿ ಮತ್ತು ಶೇಂಗಾ ಚಟ್ನಿ :

ಅಕ್ಕಿ ರೊಟ್ಟಿಗೆ ಸಾಮಗ್ರಿಗಳು :
ಅಕ್ಕಿ ಹಿಟ್ಟು : ೧.೫ ಕಪ್,
ಸೌತೆಕಾಯಿ : ೨,
ಜೀರಿಗೆ : ೧/೪ ಚಮಚ,
ಉಪ್ಪು: ೧/೨ ಚಮಚ 

ವಿಧಾನ :
ಸೌತೆಕಾಯಿಯನ್ನು ಹೆಚ್ಚಿ (ಬಲಿತಿದ್ದರೆ ಬೀಜ ತೆಗೆಯಿರಿ). ಮಿಕ್ಸಿಗೆ ಹಾಕಿ ನುಣ್ಣಗೆ  ರುಬ್ಬಿ. ರಸ  ೩ ಕಪ್ ನಷ್ಟು ಆಗಬೇಕು ಆಗಿಲ್ಲವಾದರೆ ಸ್ವಲ್ಪ ನೀರು ಸೇರಿಸಿ. ದಪ್ಪ ತಳದ ಬಾಣಲೆ / ಪಾತ್ರೆಗೆ ಸೌತೆಕಾಯಿ ರಸ, ಉಪ್ಪು ಮತ್ತು ಜೀರಿಗೆ ಹಾಕಿ ಕುದಿಯಲು ಬಿಡಿ. ರಸ ಕುದಿಯುತ್ತಿರುವಾಗ ಸ್ವಲ್ಪ ಸ್ವಲ್ಪವೇ ಅಕ್ಕಿಹಿಟ್ಟು ಹಾಕುತ್ತಾ ಕಲಕುತ್ತ ಬನ್ನಿ. ಮಿಶ್ರಣವನ್ನು ಚೆನ್ನಾಗಿ ಕಸುತ್ತಿರಿ. ಹಿಟ್ಟು ಚೆನ್ನಾಗಿ ಬೇಯಬೇಕು. ಅಂದರೆ ಸುಮಾರು ೨-೩ ನಿಮಿಷ ಸಣ್ಣ ಉರಿಯಲ್ಲಿ ಕಲಸುತ್ತಿರಿ.  


ಹಿಟ್ಟು ತಳಕ್ಕೆ ಅಂಟುತ್ತಿರುತ್ತದೆ, ಆದರೂ ಬಿಡದೇ ಕಲಕಿ. ಇಲ್ಲವಾದರೆ ರೊಟ್ಟಿ ಗಟ್ಟಿಯಾಗುತ್ತದೆ. ಮಿಶ್ರಣ ಸ್ವಲ್ಪ ತಣ್ಣಗಾದ ಮೇಲೆ ಚೆನ್ನಾಗಿ ಮೆದ್ದು ಕಲಸಿ. ತುಂಬಾ ಕೈಗೆ ಅಂಟುತ್ತಿದ್ದರೆ (ಮೆತ್ತಗಿದ್ದರೆ) ಸ್ವಲ್ಪ ಅಕ್ಕಿಹಿಟ್ಟು ಸೇರಿಸಿ ಕಲಸಿ. ದೊಡ್ಡ ಲಿಂಬು ಗಾತ್ರದ ಉಂಡೆ ಮಾಡಿ ಲಟ್ಟಿಸಿ. ಕೆಳಗೆ ಚಿತ್ರದಲ್ಲಿ ತೋರಿಸಿದಂತೆ ಅಂಚು ಸರಿ ಪಡಿಸುತ್ತಾ ತೆಳ್ಳಗೆ ಲಟ್ಟಿಸಿ. 

ಕಾದ ತವಾ ಮೇಲೆ ಎರಡೂ ಕಡೆ ಒಮ್ಮೆ ತಿರುಗಿಸಿ ನಂತರ ದೊಡ್ಡ ಉರಿಯಲ್ಲಿ ಒಲೆಯ ಮೇಲೆ ಹಾಕಿದರೆ ರೊಟ್ಟಿ ಚೆನ್ನಾಗಿ ಉಬ್ಬುತ್ತದೆ. 

ಬಿಸಿ ಬಿಸಿ ರೊಟ್ಟಿಯನ್ನು ತುಪ್ಪ, ಚಟ್ನಿ ಜೊತೆ ಸವಿಯಿರಿ. 



ಶೇಂಗಾ ಚಟ್ನಿಗೆ ಬೇಕಾದ ಸಾಮಗ್ರಿಗಳು:
ತೆಂಗಿನ ತುರಿ : ೧/೨ ಕಪ್,
ಶೇಂಗಾ : ೩-೪ ಟೇಬಲ್ ಚಮಚ,
ಒಣಮೆಣಸಿನ ಕಾಯಿ : ೪-೫,
ಎಣ್ಣೆ : ೧/೨ ಚಮಚ,
ಸಕ್ಕರೆ: ೧/೪ ಚಮಚ,
ಉಪ್ಪು: ರುಚಿಗೆ 

ವಿಧಾನ:
ಶೇಂಗಾ ಮತ್ತು ಒಣಮೆಣಸಿನ ಕಾಯಿಗೆ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಹುರಿಯಿರಿ. (ಬೇರೆ ಬೇರೆ ಹುರಿದರೆ ಒಳ್ಳೆಯದು). ನಂತರ ಇದನ್ನು ತೆಂಗಿನ ತುರಿ, ಉಪ್ಪು, ಸಕ್ಕರೆ ಸೇರಿಸಿ ರುಬ್ಬಿದರೆ ಶೇಂಗಾ ಚಟ್ನಿ ಸಿದ್ಧ. 

ಗುರುವಾರ, ಆಗಸ್ಟ್ 13, 2015

ಸಿಹಿ ಕು೦ಬಳಹಲ್ವ:

ಸಾಮಗ್ರಿಗಳು :ಸಿಹಿ ಕು೦ಬಳ ಕಾಯಿ 1 ಚಿಕ್ಕದು, ಸಕ್ಕರೆ ¾ ಕಪ್,ಗೋಡ೦ಬಿ 10-12, ತುಪ್ಪ ¼ ಕಪ್. (ಪ್ರಮಾಣ : 1 ಕಪ್ ಸಿಹಿಕು೦ಬಳದ ತುರಿಗೆ ¾ ಕಪ್ ಸಕ್ಕರೆ)



















ವಿಧಾನ : ಸಿಹಿಕು೦ಬಳದ ಸಿಪ್ಪೆ & ಬೀಜ ತೆಗೆದು ತುರಿದುಕೊಳ್ಳಿ. ದೊಡ್ಡ ಬೌಲ್ ಸಿಹಿಗು೦ಬಳದ ತುರಿಗೆ 3/4 ಬೌಲ್ ಸಕ್ಕರೆ ಬೇಕು. ದಪ್ಪ ತಳದ ಬಾಣಲೆಗೆ ತುಪ್ಪ,ತುರಿದ ಸಿಹಿ ಕು೦ಬಳ, ಸಕ್ಕರೆ ಹಾಕಿ 10 ನಿಮಿಷ ಸ್ವಲ್ಪ ದೊಡ್ಡ ಉರಿಯಲ್ಲಿ ಬೇಯಿಸಿ ನ೦ತರ ಉರಿ ಕಡಿಮೆ ಮಾಡಿ ಆಗಾಗ ಕೈ ಆಡಿಸಬೇಕು. ಇಲ್ಲವಾದಲ್ಲಿ ಸೀದುಹೋಗುತ್ತದೆ.ಗಟ್ಟಿಯಾಗುವವರೆಗೂ ತೊಳೆಸುತ್ತಿರಬೇಕು. ಗಟ್ಟಿಯಾದ ಮೇಲೆ ತುಪ್ಪದಲ್ಲಿ ಹುರಿದ ಗೋಡ೦ಬಿ ಹಾಕಿ ಮಿಕ್ಸ್ ಮಾಡಿ. ಬಿಸಿ ಬಿಸಿ ಸಿಹಿ ಕು೦ಬಳ ಹಲ್ವ ಸರ್ವ ಮಾಡಿ.

ಸಿಹಿ ಕು೦ಬಳದ ಬರ್ಫಿ: ಹಲ್ವವನ್ನು ಪೂರ್ತಿ ಗಟ್ಟಿಮಾಡಿ ಒ೦ದು ಪ್ಲೇಟ್ ಗೆ ತುಪ್ಪ ಸವರಿ ಗಟ್ಟಿಯಾದ ಕು೦ಬಳಹಾಯಿ ಹಲ್ವವನ್ನು ಸಮ ಪ್ರಮಾಣದಲ್ಲಿ ಹರಡಿ, ಅದು ತಣ್ಣಗಾದ ಮೇಲೆ ಚೌಕಾಕಾರದಲ್ಲಿ ಕತ್ತರಿಸಿ.

















ಸೂಚನೆ: ನಾನಿಲ್ಲಿ ಏಲಕ್ಕಿ ಬಳಸಿಲ್ಲ. ಏಕೆ೦ದರೆ ಏಲಕ್ಕಿ ಹಾಕಿದರೆ ಸಿಹಿ ಕು೦ಬಳದ ಸುವಾಸನೆಯ ಬದಲು ಏಲಕ್ಕಿ ಸುವಾಸನೆ ಬರುತ್ತದೆ.