ಶುಕ್ರವಾರ, ಡಿಸೆಂಬರ್ 29, 2017

ಹಲಸಿನ ಗುಜ್ಜೆ ಕರ್ರಿ (ಎಳೆ ಹಲಸಿನಕಾಯಿ ಮಸಾಲಾ ಸಾಂಬಾರ್) :

ಎಳೆ ಹಲಸಿನಕಾಯಿ / ಹಲಸಿನ ಗುಜ್ಜೆಯನ್ನು ಕತ್ತರಿಸಿ ಸಿಪ್ಪೆ ತೆಗೆದು, ಮಧ್ಯದ ಮೂಗು (ಗಟ್ಟಿ ಭಾಗ) ತೆಗೆದು (ಚಿತ್ರದಲ್ಲಿರುವಂತೆ) ಉದ್ದುದ್ದ ಹೋಳು ಮಾಡಿ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ನಂತರ ಅದನ್ನು ಸಾಂಬಾರ್ ಗೆ ಬೇಕಾದಂತೆ ಹೆಚ್ಚಿಕೊಳ್ಳಿ. 


ಸಾಮಗ್ರಿಗಳು : 
ಬೇಯಿಸಿದ ಹಲಸಿನ ಗುಜ್ಜೆ ಹೋಳು :3 ಕಪ್ 
ತೆಂಗಿನ ತುರಿ :1.5 ಕಪ್ 
ಒಣ ಮೆಣಸಿನಕಾಯಿ : 6-7 
ಕೊತ್ತಂಬರಿ ಬೀಜ : 1.5 ಚಮಚ 
ಜೀರಿಗೆ : 3/4 ಚಮಚ 
ಉದ್ದಿನ ಬೇಳೆ : 1/4 ಚಮಚ 
ಬಿಳಿ ಎಳ್ಳು : 1/4 ಚಮಚ 
ಚಕ್ಕೆ : 1/2 ಇಂಚು 
ಲವಂಗ : 3
ಹೆಚ್ಚಿದ ಕೊತ್ತಂಬರಿ ಸೊಪ್ಪು : 4 ಟೇಬಲ್ ಚಮಚ 
ಬೆಳ್ಳುಳ್ಳಿ : 5-6 ಎಸಳು 
ಶುಂಠಿ : 1/2 ಇಂಚು 
ಈರುಳ್ಳಿ : 1 
ಹುಣಸೆಹಣ್ಣು : ಸಣ್ಣ ಲಿಂಬೆ ಗಾತ್ರ 
ಎಣ್ಣೆ : 8-10 ಚಮಚ 
ಉಪ್ಪು : ರುಚಿಗೆ 

ವಿಧಾನ :
ಈರುಳ್ಳಿಯನ್ನು ಉದ್ದುದ್ದ ಹೆಚ್ಚಿಕೊಳ್ಳಿ. ಹುಣಸೆಹಣ್ಣು ನೀರಿನಲ್ಲಿ ನೆನೆಸಿಕೊಳ್ಳಿ. ಬಾಣಲೆಗೆ 1 ಚಮಚ ಎಣ್ಣೆ ಹಾಕಿ. ಅದಕ್ಕೆ ಒಣಮೆಣಸಿನಕಾಯಿ, ಉದ್ದಿನಬೇಳೆ,  ಕೊತ್ತಂಬರಿ ಬೀಜ, ಜೀರಿಗೆ, ಚಕ್ಕೆ, ಲವಂಗ, ಎಳ್ಳು ಹಾಕಿ ಹದವಾಗಿ ಹುರಿದುಕೊಳ್ಳಿ. ಕೊನೆಯಲ್ಲಿ ತೆಂಗಿನತುರಿಯನ್ನೂ ಸೇರಿಸಿ ಹುರಿದರೆ ರುಚಿ ಚೆನ್ನಾಗಿರುತ್ತದೆ. ಕೊತ್ತಂಬರಿಸೊಪ್ಪು, ಬೆಳ್ಳುಳ್ಳಿ, ಶುಂಠಿ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ದಪ್ಪ ತಳದ ಪಾತ್ರೆಗೆ ಉಳಿದ ಎಣ್ಣೆ ಹಾಕಿ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಅದಕ್ಕೆ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. ಇತ್ತ ಹುರಿದ ಮಿಶ್ರಣ, ತೆಂಗಿನತುರಿ, ನೆನೆಸಿಟ್ಟ ಹುಣಸೆಹಣ್ಣು, ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈರುಳ್ಳಿ ಮಿಶ್ರಣ ಫ್ರೈ ಆದಮೇಲೆ ಅದಕ್ಕೆ ಬೇಯಿಸಿ ಹೆಚ್ಚಿದ ಹಲಸಿನ ಗುಜ್ಜೆ ಹೋಳು, ಉಪ್ಪು, ರುಬ್ಬಿದ ಮಸಾಲೆ  ಹಾಕಿ ಸಾಂಬಾರ್ ಹದಕ್ಕೆ ನೀರು ಸೇರಿಸಿ ಕುದಿಸಿದರೆ ಗುಜ್ಜೆ ಕರ್ರಿ ಸಿದ್ಧ. ಬಿಸಿ ಬಿಸಿ ಅನ್ನದ ಜೊತೆ ಚೆನ್ನಾಗಿರುತ್ತದೆ. ದೋಸೆ, ಚಪಾತಿಯ ಜೊತೆಯೂ ಸವಿಯಬಹುದು. 





ಶುಕ್ರವಾರ, ಡಿಸೆಂಬರ್ 15, 2017

ಪಾಲಕ್ ಮಟರ್ ಸಬ್ಜಿ / Green pease with spinach sabji : (Restaurant style)

ಸಾಮಗ್ರಿಗಳು:
ಪಾಲಕ್ ಸೊಪ್ಪು : 1 ಕಟ್ಟು (ಮಧ್ಯಮ ಗಾತ್ರದ ಕಟ್ಟು)
ಬಿಡಿಸಿದ ಹಸಿ ಬಟಾಣಿ (ಮಟರ್) : 2 ಕಪ್
ಸಣ್ಣ ಹೆಚ್ಚಿದ ಟೊಮೇಟೊ : 1.5 ಕಪ್
ಸಣ್ಣ ಹೆಚ್ಚಿದ ಈರುಳ್ಳಿ : 1 ಕಪ್
ಶುಂಠಿ : 1/4 ಇಂಚು
ಬೆಳ್ಳುಳ್ಳಿ : 3-4 ಎಸಳು
ಶುಂಠಿ ಬೆಳ್ಳುಳ್ಳಿ ಪೇಸ್ಟ್ : 1 ಚಮಚ
ಹಸಿಮೆಣಸಿನಕಾಯಿ : 1
ಅಚ್ಚ ಖಾರದ ಪುಡಿ : 1 ಚಮಚ
ಧನಿಯಾ ಪುಡಿ : 1/2 ಚಮಚ
ಗರಂ ಮಸಾಲಾ ಪುಡಿ : 1/2 ಚಮಚ
ಕಸೂರಿ ಮೇಥಿ : 1/2 ಚಮಚ
ಸಕ್ಕರೆ : 1/2 ಚಮಚ
ಜೀರಿಗೆ : 1/2 ಚಮಚ
ಎಣ್ಣೆ ಮತ್ತು ಬೆಣ್ಣೆ : ತಲಾ 1 ಚಮಚ
ಉಪ್ಪು: ರುಚಿಗೆ

ವಿಧಾನ :
ಚೆನ್ನಾಗಿ ತೊಳೆದ ಪಾಲಕ್ ಸೊಪ್ಪು, ಶುಂಠಿ, ಬೆಳ್ಳುಳ್ಳಿ ಎಸಳು, ಹಸಿ ಮೆಣಸು ಎಲ್ಲವನ್ನು ಕುದಿಯುತ್ತಿರುವ ನೀರಿಗೆ ಹಾಕಿ ಸ್ಟವ್ ಆರಿಸಿ 30 ಸೆಕೆಂಡ್ ಮುಚ್ಚಿಡಿ. ನಂತರ ನೀರನ್ನು ಒಂದು ಪಾತ್ರೆಯಲ್ಲಿ ಬಸಿದಿಟ್ಟು, ಪಾಲಕ್ ಮಿಶ್ರಣವನ್ನು ಪ್ಲೇಟ್ ಗೆ ಹಾಕಿ ಆರಲು ಬಿಡಿ. ಪಾನ್ ಒಲೆಯ ಮೇಲಿಟ್ಟು ಎಣ್ಣೆ, ಬೆಣ್ಣೆ ಹಾಕಿ ಕಾಯಿಸಿ ಜೀರಿಗೆ ಹಾಕಿ ಫ್ರೈ ಮಾಡಿ. ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ಹೆಚ್ಚಿದ ಟೊಮೇಟೊ, ಸ್ವಲ್ಪ ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಟೊಮೇಟೊ ಮೆತ್ತಗಾಗುವವರೆಗೆ ಫ್ರೈ ಮಾಡಿ. ನಂತರ ಹಸಿ ಬಟಾಣಿ ಹಾಕಿ ಒಂದು ಕಪ್ ನೀರು (ಪಾಲಕ್ ಬೇಯಿಸಿ ಬಸಿದ ನೀರನ್ನೇ ಹಾಕಿ) ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ, ಇತ್ತ ತಣ್ಣಗಾದ ಪಾಲಕ್ ಮಿಶ್ರಣವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಬಟಾಣಿ ಬೆಂದ ಮೇಲೆ ಅದಕ್ಕೆ ಧನಿಯಾ ಪುಡಿ, ಅಚ್ಚ ಖಾರದಪುಡಿ, ಗರಂ ಮಸಾಲಾ ಪುಡಿ ಹಾಕಿ ಮಿಕ್ಸ್ ಮಾಡಿ, ಪಾಲಕ್ ಪೇಸ್ಟ್, ಉಪ್ಪು, ಸಕ್ಕರೆ ಹಾಕಿ,  ಎಷ್ಟು ಬೇಕು ನೋಡಿಕೊಂಡು ಬಸಿದಿಟ್ಟ ನೀರು ಹಾಕಿ, ಕಸೂರಿ ಮೇಥಿ ಹಾಕಿ ಕುದಿಸಿ. ಪುಲ್ಕ, ರೋಟಿ, ಚಪಾತಿ, ಪೂರಿ ಜೊತೆ ಸವಿಯಲು ಪಾಲಕ್ ಮಟರ್ / green peas with spinach sabji ಸಿದ್ಧ.


ಶುಕ್ರವಾರ, ಡಿಸೆಂಬರ್ 1, 2017

ರಾಗಿ ಹುರಿಹಿಟ್ಟಿನ ಉಂಡೆ :

ಫ್ರೆಶ್ ಆಗಿರುವ ರಾಗಿ ಹುರಿಹಿಟ್ಟು ಪ್ಯಾಕೆಟ್ ತಂದಿಟ್ಟುಕೊಳ್ಳಿ. ಬಾದಾಮ್ ಮತ್ತು ಪಿಸ್ತಾವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಬೇರೆ ಬೇರೆ ಹುರಿದುಕೊಳ್ಳಿ. ಶೇಂಗಾ ಕೂಡ ಬೇಕಿದ್ದಲ್ಲಿ ಬಾದಾಮ್ ನ ಅರ್ಧ ಭಾಗದಷ್ಟನ್ನು ಹುರಿದುಕೊಳ್ಳಿ. ನಂತರ ಎಲ್ಲವನ್ನೂ ಮಿಕ್ಸಿಗೆ ಹಾಕಿ ತರಿ ತರಿ ಪುಡಿ ಮಾಡಿ ಗಾಳಿಯಾಡದಂತೆ ಡಬ್ಬಿ ತುಂಬಿಟ್ಟರೆ ೧೫-೨೦ ದಿನ ಇಟ್ಟುಕೊಳ್ಳಬಹುದು. ಬೇಕಿದ್ದಲ್ಲಿ ಒಣ ಕೊಬ್ಬರಿ ತುರಿದು ಸ್ವಲ್ಪ ಹುರಿದು ಹಾಗೆಯೇ ಹಾಕಬಹುದು ಅಥವಾ ತರಿತರಿ ಪುಡಿ ಮಾಡಿ ಹಾಕಬಹುದು. ಜೋನಿ ಬೆಲ್ಲ ಇಲ್ಲವಾದಲ್ಲಿ ಉಂಡೆ ಬೆಲ್ಲವನ್ನು ನೀರು ಹಾಕಿ ಕಾಯಿಸಿ ಒಂದೆಳೆ ಪಾಕ ಮಾಡಿಟ್ಟುಕೊಂಡರೆ ಸ್ವಲ್ಪ ದಿನಗಳವರೆಗೆ ಬಳಸಬಹುದು. ಸಕ್ಕರೆಗಿಂತ ಮಕ್ಕಳಿಗೆ ಬೆಲ್ಲ ಒಳ್ಳೆಯದು. 1.5 - 2 ವರ್ಷ ಮೇಲ್ಪಟ್ಟ ಮಕ್ಕಳಿಗೆ (ಒಂದು ಪಂಕ್ತಿ ಹಲ್ಲು ಬಂದ ಮೇಲೆ ಕೊಡಬಹುದು) ಒಳ್ಳೆಯ, ಆರೋಗ್ಯಕರ ಆಹಾರ.

ಸಾಮಗ್ರಿಗಳು:
ರಾಗಿ ಹುರಿಹಿಟ್ಟು 1.5 ಟೇಬಲ್ ಚಮಚ
ಬಾದಾಮ್, ಪಿಸ್ತಾ, ಶೇಂಗಾ ಪುಡಿ 1/2 ಟೀ ಚಮಚ
ಒಣ ಕೊಬ್ಬರಿ ಪುಡಿ 1/2 ಟೀ ಚಮಚ (ಬೇಕಿದ್ದಲ್ಲಿ ಮಾತ್ರ, ಹಾಕಿದರೆ ರುಚಿ ಚೆನ್ನ)
ಜೋನಿ ಬೆಲ್ಲ 1/4 ಚಮಚ
ತುಪ್ಪ 1/4 ಟೀ ಚಮಚ
ಬಿಸಿ ಹಾಲು 4-5 ಟೇಬಲ್ ಚಮಚ

ವಿಧಾನ: 
ಒಂದು ಬೌಲ್ ಗೆ ಹುರಿ ಹಿಟ್ಟು, ನಟ್ಸ್ ಪುಡಿ, ಬೆಲ್ಲ, ತುಪ್ಪ, ಕೊಬ್ಬರಿ ಪುಡಿ ಹಾಕಿಕೊಳ್ಳಿ. ಅದಕ್ಕೆ ಸ್ವಲ್ಪ ಸ್ವಲ್ಪವೇ ಹಾಲನ್ನು ಹಾಕುತ್ತಾ ಕೈ ಇಂದ ಚೆನ್ನಾಗಿ ಕಲಸಿ. ಮೆತ್ತಗಿನ ಉಂಡೆ ಆಗುವಷ್ಟು ಹಾಲು ಬೇಕು. ನಂತರ ಇದನ್ನು ದೊಡ್ಡ ಗೋಲಿಯಷ್ಟು ಉಂಡೆಗಳನ್ನು ಮಾಡಿ. ಇಷ್ಟು ಹಿಟ್ಟಿನಲ್ಲಿ 5-6 ಉಂಡೆ ಆಗುತ್ತದೆ. ಒಂದು ಲೋಟ ಹಾಲನ್ನು ಕುಡಿಸುತ್ತಾ ಇಷ್ಟು ಉಂಡೆ ತಿನ್ನಿಸಿದರೆ ಮಗುವಿನ ಹೊಟ್ಟೆ ತುಂಬುತ್ತದೆ.


ಗುರುವಾರ, ನವೆಂಬರ್ 16, 2017

ಧಿಡೀರ್ ಅವಲಕ್ಕಿ :

ಶಾಲೆಗೆ ಹೋಗುವ, ಹೊರಗಡೆ ಆಡಿ ಕುಣಿಯುವ ಮಕ್ಕಳಿಗೆ ಪದೇ ಪದೇ ಹಸಿವಾಗುವುದು ಸಹಜ. ಸಣ್ಣ ಪುಟ್ಟ ಹಸಿವುಗಳಿಗೆ ಬಿಸ್ಕಿಟ್, ಚೊಕೊಲೇಟ್, ಬೇಕರಿ ಆಹಾರ, ಜಂಕ್ ಫುಡ್ ಕೊಟ್ಟು ಮಕ್ಕಳ ಆರೋಗ್ಯ ಹಾಳು ಮಾಡದಿರಿ...! ಮಕ್ಕಳಿಗೆ ತಿಂಡಿ ಮಾಡಿಕೊಡಲು ಸಮಯವೇ ಇಲ್ಲದ ಈಗಿನ ಕಾಲಕ್ಕೆ ಐದೇ ನಿಮಿಷಕ್ಕೆ ತಯಾರಿಸುವ ಈ ಅವಲಕ್ಕಿ ಮಾಡಿ ನೋಡಿ. ರುಚಿಯಾದ ಚಟ್ನಿಪುಡಿ ಇದ್ದಷ್ಟೂ ಅವಲಕ್ಕಿಗೆ ರುಚಿ ಜಾಸ್ತಿ...! 

ಸಾಮಗ್ರಿಗಳು :
ಪೇಪರ್ ಅವಲಕ್ಕಿ 2-3 ಮುಷ್ಠಿ 
ತೆಂಗಿನ ತುರಿ 1/2 ಕಪ್ 
ಸಕ್ಕರೆ 2 ಚಮಚ 
ಚಟ್ನಿ ಪುಡಿ 2 ಚಮಚ (ಕೊಬ್ಬರಿ, ಕಡ್ಲೆಬೇಳೆ ಚಟ್ನಿಪುಡಿ ಆದರೆ ರುಚಿ ಜಾಸ್ತಿ)
ಉಪ್ಪು ಚಿಟಿಕೆ 

ವಿಧಾನ :
ಪೇಪರ್ ಅವಲಕ್ಕಿಯನ್ನು ಒಂದು ಬೌಲ್ ಗೆ ಹಾಕಿ. ತೆಂಗಿನ ತುರಿಗೆ ಉಪ್ಪು, ಸಕ್ಕರೆ, 4-5 ಚಮಚ ನೀರು ಹಾಕಿ ಚೆನ್ನಾಗಿ ಕಲಸಿ. ಇದಕ್ಕೆ ಚಟ್ನಿಪುಡಿ ಹಾಕಿ ಕಲಸಿ. ಚಟ್ನಿಪುಡಿಗೆ ಉಪ್ಪು ಇರುವುದರಿಂದ ನೋಡಿಕೊಂಡು ಬೇಕಿದ್ದಲ್ಲಿ ಮಾತ್ರ ಹಾಕಿ. (ನಿಮ್ಮನೆ ಚಟ್ನಿಪುಡಿ ತುಂಬಾ ಖಾರವಿದ್ದರೆ ಸ್ವಲ್ಪ ಕಮ್ಮಿ ಹಾಕಿ. ಮಕ್ಕಳಿಗೆ ಖಾರವಾಗಬಹುದು) ನಂತರ ಇದನ್ನು ಅವಲಕ್ಕಿಗೆ ಹಾಕಿ ಚೆನ್ನಾಗಿ ಕಲಸಿ. ಬೇಕಿದ್ದಲ್ಲಿ ಮತ್ತೆ ಒಂದೆರಡು ಚಮಚ ನೀರು ಹಾಕಿ ಕಲಸಿ. ಧಿಡೀರ್ ಅವಲಕ್ಕಿ ಆಡುವ ಮಕ್ಕಳ ಸಣ್ಣ ಸಣ್ಣ ಹಸಿವನ್ನು ನೀಗಿಸಲು ಸಿದ್ಧ...! 

ಶುಕ್ರವಾರ, ನವೆಂಬರ್ 3, 2017

ಕೆಸುವಿನ ಬೀಳು (ಬಿಳಲು) ಸಾಸಿವೆ :


ಮಲೆನಾಡಿನಲ್ಲಿ ಮಳೆಗಾಲದ ಸಮಯದಲ್ಲಿ ಸಣ್ಣ ಕೆಸುವಿನ ಎಳೆಗಳ ಬುಡದಲ್ಲಿ ಬೇರುಗಳಂತೆ ಬಿಳಲುಗಳು ಹಬ್ಬುತ್ತವೆ. ಅದನ್ನು ತಂದು ಅದರ ಮೇಲಿರುವ ಸಿಪ್ಪೆಯಂತ ನಾರನ್ನು ತೆಗೆದು ವಿವಿಧ ಅಡುಗೆಗಳನ್ನು ಮಾಡುತ್ತಾರೆ. ಇದರ ನಾರನ್ನು ತೆಗೆಯುವುದು ಸ್ವಲ್ಪ ಕಿರಿಕಿರಿಯ ಕೆಲಸವಾದರೂ ನಂತರ ಮಾಡುವ ಅಡುಗೆಯ ರುಚಿ ಇದನ್ನು ಮರೆಸಿಬಿಡುತ್ತದೆ. ಮಲೆನಾಡಲ್ಲಿ ಈಳಿಗೆ ಮಣೆಯ ಕಾವಿನ ಹಿಂಭಾಗಕ್ಕೆ ತಿಕ್ಕಿ ನಾರು ತೆಗೆಯುತ್ತಾರೆ. ಚಾಕುವಿನ ಹಿಂಭಾಗ (ಮೊಂಡು ಇರುವ ಭಾಗ) ದಿಂದ ಕೂಡ ತೆಗೆಯಬಹುದು. ತೆಗೆದ ತಕ್ಷಣ ಕೈ ತೊಳೆದರೆ ಕೈ ಅಲ್ಲಿ ಸ್ವಲ್ಪ ಕಡಿತ ಕಾಣಿಸಬಹುದು. ಲಿಂಬು ರಸ ತಿಕ್ಕಿ ಕೈ ತೊಳೆದರೆ ಹೋಗುತ್ತದೆ.

ಸಾಮಗ್ರಿಗಳು:
ನಾರು ತೆಗೆದು ಅರ್ಧ ಇಂಚು ಉದ್ದ ಹೆಚ್ಚಿದ ಕೆಸುವಿನ ಬೀಳು : 1 ಕಪ್
ತೆಂಗಿನ ತುರಿ : 1/2 ಕಪ್
ಮೊಸರು : 1/2 ಕಪ್ (ಸ್ವಲ್ಪ ಹುಳಿ ಇರಲಿ, ತುಂಬಾ ಹುಳಿ ಬೇಡ)
ಹಸಿ ಮೆಣಸಿನಕಾಯಿ : 2
ಸಾಸಿವೆ : 2ಚಮಚ
ಅರಿಶಿನ ಪುಡಿ : 1/4 ಚಮಚ
ವಾಟೆ ಪುಡಿ / ಆಮ್ಚುರ್ ಪುಡಿ / ಹುಣಸೆ ರಸ : 1/2 ಚಮಚ
ಎಣ್ಣೆ : 1 ಚಮಚ
ಒಣಮೆಣಸಿನಕಾಯಿ : 1
ಉಪ್ಪು : ರುಚಿಗೆ

ವಿಧಾನ :
ಕೆಸುವಿನ ಬೀಳನ್ನು ತೊಳೆದು ವಾಟೆ ಪುಡಿ / ಆಮ್ಚುರ್ ಪುಡಿ / ಹುಣಸೆ ರಸ ಇವುಗಳಲ್ಲಿ ಯಾವುದಾದರೂ ಒಂದು ಹುಳಿಯನ್ನು ಹಾಕಿ ನೀರು ಸೇರಿಸಿ ಬೇಯಲು ಇಡಿ. ಹೋಳುಗಳಿಗೆ ಫೋರ್ಕ್ ಅಥವಾ ಚಾಕು ತುದಿ ಚುಚ್ಚಿ ನೋಡಿದರೆ ಬೆಂದಿದೆಯೋ ಇಲ್ಲವೋ ತಿಳಿಯುತ್ತದೆ. ಬೆಂದ ಮೇಲೆ ನೀರು ಬಸಿದು ಇಟ್ಟುಕೊಳ್ಳಿ. ಮಿಕ್ಸಿ ಜಾರಿಗೆ ತೆಂಗಿನ ತುರಿ, 1.5 ಚಮಚ ಸಾಸಿವೆ. ಹಸಿಮೆಣಸಿನಕಾಯಿ, ಅರಿಶಿನ ಪುಡಿ ಮತ್ತು ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಬೆಂದ ಕೆಸುವಿನ ಬೀಳಿಗೆ ಹಾಕಿ, ಮೊಸರು ಹಾಕಿ, ಬೇಕಿದ್ದಲ್ಲಿ ಸ್ವಲ್ಪ ನೀರು ಹಾಕಿ, ಉಪ್ಪು ಹಾಕಿ ಕಲಕಿ. ಒಗ್ಗರಣೆ ಸೌಟಿಗೆ ಎಣ್ಣೆ, ತುಂಡು ಮಾಡಿದ ಒಣ ಮೆಣಸಿನಕಾಯಿ, ಉಳಿದ ಅರ್ಧ ಚಮಚ ಸಾಸಿವೆ ಹಾಕಿ ಚಿಟಪಟಾಯಿಸಿ ಮಿಶ್ರಣಕ್ಕೆ ಸೇರಿಸಿದರೆ ಸಾಸಿವೆ ಸಿದ್ಧ. ಬಿಸಿ ಅನ್ನದ ಜೊತೆ ಒಳ್ಳೆಯ ಸಂಗಾತಿ. 




ಗುರುವಾರ, ಅಕ್ಟೋಬರ್ 19, 2017

ಸಾಮೆ ಪಾಯಸ :

ಪ್ರೀತಿಯ ಓದುಗರೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ದೀಪಾವಳಿ ಎಲ್ಲರ ಬಾಳಿನಲ್ಲಿ ಹೊಸ ಬೆಳಕು ತರಲಿ ಎಂದು ಪಾಕಶಾಲೆಯ ಗೆಳತಿಯರು ಆಶಿಸುತ್ತೇವೆ. 

ಸಿರಿಧಾನ್ಯಗಳ ಉಪಯೋಗ ಆರೋಗ್ಯಕ್ಕೆ ಒಳ್ಳೆಯದು. ಈ ಧಾನ್ಯಗಳು ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಕಾರ್ಬೋಹೈಡ್ರೇಟ್ ಪ್ರಮಾಣ ಕಮ್ಮಿ ಇರುವುದರಿಂದ ಡಯಟ್ ಮಾಡುವವರಿಗೂ ಸಹಕಾರಿ. ಸ್ವಲ್ಪ ತಿಂದರೆ ಹೊಟ್ಟೆ ಭರ್ತಿ ಆದಂತೆ ಎನಿಸುವುದರ ಜೊತೆಗೆ ಬೇಗನೆ ಹಸಿವಾಗುವುದಿಲ್ಲ. ಸಾಮೆ, ಬರಗು, ಅರ್ಕ, ನವಣೆ ಮುಂತಾದ ಸಿರಿಧಾನ್ಯಗಳಿಂದ ನಮ್ಮ ದೈನಂದಿನ ಎಲ್ಲಾ ತರಹದ ಆಹಾರಗಳನ್ನು ಅಂದರೆ ದೋಸೆ, ಇಡ್ಲಿ, ಪೊಂಗಲ್, ಬಿಸಿಬೇಳೆಬಾತ್, ಪಾಯಸ ಮುಂತಾದ ತಿನಿಸುಗಳನ್ನು ತಯಾರಿಸಿಬಹುದು. ಇಂದು ನಾನು ಸಾಮೆ ಪಾಯಸ ತಿಳಿಸಿಕೊಡಲಿದ್ದೇನೆ. 

ಸಾಮಗ್ರಿಗಳು :
ಸಾಮೆ (Little millet) : 1/2 ಕಪ್ 
ಬೆಲ್ಲ : 1/2 - 3/4  ಕಪ್ 
ಹಾಲು : 1 ಕಪ್ 
ತೆಂಗಿನ ತುರಿ : 1 ಕಪ್ 
ಕೇಸರಿ ದಳ (ಬೇಕಿದ್ದಲ್ಲಿ ಮಾತ್ರ) : 8-10 
ಗೋಡಂಬಿ - ದ್ರಾಕ್ಷಿ - ಖರ್ಜೂರ : ಎಲ್ಲಾ ಸೇರಿ 3-4 ಚಮಚ 
ತುಪ್ಪ : 2 ಚಮಚ 
ಏಲಕ್ಕಿ : 1-2
ಉಪ್ಪು : 2-3 ಚಿಟಿಕೆ 

ವಿಧಾನ :
ಸಾಮೆಯನ್ನು ತೊಳೆದು ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಹಾಲು, ನೀರು ಹಾಕಿ ಬೇಯಲು ಇಡಿ. ಕುಕ್ಕರ್ ನಲ್ಲಿ ಬೇಕಿದ್ದರೂ ಬೇಯಿಸಬಹುದು. ಕೇಸರಿ ಹಾಕುವುದಾದರೆ ಅದನ್ನು ಸ್ವಲ್ಪ ಹಾಲಿನಲ್ಲಿ ನೆನೆಸಿಡಿ. ತೆಂಗಿನ ತುರಿಯನ್ನು ಏಲಕ್ಕಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.  ಸಾಮೆ ಚೆನ್ನಾಗಿ ಬೆಂದ ಮೇಲೆ ಅದಕ್ಕೆ ಬೆಲ್ಲ ಹಾಕಿ ಚೆನ್ನಾಗಿ ಕಲಕಿ. ನಂತರ ರುಬ್ಬಿದ ತೆಂಗಿನ ಕಾಯಿ ಮಿಶ್ರಣ ಹಾಕಿ, ನಿಮ್ಮ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ, ಉಪ್ಪು, ನೆನೆಸಿಟ್ಟ ಕೇಸರಿ ಹಾಕಿ ಕಲಕಿ. ಅಚ್ಚು ಬೆಲ್ಲ ಹಾಕುವುದಾದರೆ ಉಪ್ಪು ಬೇಕಿದ್ದಲ್ಲಿ ಮಾತ್ರ ಹಾಕಿ. ತುಪ್ಪ ಕಾಯಲಿಟ್ಟು ಅದಕ್ಕೆ ಚೂರು ಮಾಡಿಕೊಂಡ ಗೋಡಂಬಿ - ಖರ್ಜೂರ, ಒಣ ದ್ರಾಕ್ಷಿ ಹಾಕಿ ಹುರಿದು  ಕುದಿಯುತ್ತಿರುವ ಪಾಯಸಕ್ಕೆ ಹಾಕಿ ಒಂದು ಕುದಿ ಕುದಿಸಿ ಉರಿ ಆರಿಸಿ. ಬಿಸಿ ಬಿಸಿ ಸಾಮೆ ಪಾಯಸ ಸಿದ್ಧ. 


ಸಲಹೆಗಳು :
1) ಬೆಲ್ಲದ ಬದಲು ಸಕ್ಕರೆಯನ್ನು ಹಾಕಿ ಮಾಡಬಹುದು ಮತ್ತು ಕೇಸರಿ ಬದಲು ವೆನಿಲ್ಲಾ ಎಸೆನ್ಸ್ ಹಾಕಬಹುದು. 
2) ಸಾಮೆಯನ್ನು ಬರೀ ಹಾಲಿನಲ್ಲಿ ಬೇಯಿಸಿ, ಸಕ್ಕರೆ ಹಾಕಿ, ಕೇಸರಿ ದಳ ಹಾಕಿ ಮಾಡಿದರೂ ಚೆನ್ನಾಗಿರುತ್ತದೆ. ಹೀಗೆ ಮಾಡುವಾಗ ತೆಂಗಿನಕಾಯಿ ರುಬ್ಬಿ ಹಾಕುವುದು ಬೇಕಾಗುವುದಿಲ್ಲ. ಬೇಕಿದ್ದಲ್ಲಿ ತೆಂಗಿನ ಹಾಲು ಹಾಕಬಹುದು. 

ಶುಕ್ರವಾರ, ಅಕ್ಟೋಬರ್ 13, 2017

ನಿ೦ಬೆಹಣ್ಣಿನ ಉಪ್ಪಿನಕಾಯಿ (ಲಿ೦ಬು ಉಪ್ಪಿನಕಾಯಿ) - 1

ಸಾಮಗ್ರಿಗಳು :
ನಿ೦ಬೆಹಣ್ಣು (ಲಿ೦ಬು)  - 4
ಹಸಿಮೆಣಸು (ಖಾರ ಜಾಸ್ತಿ ಇರುವುದು) - 12
ಉಪ್ಪು - 2 ಟೇ.ಚಮಚ
ಜೀರಿಗೆ  -  1/2 ಟೀ.ಚಮಚ
ಸಾಸಿವೆ - 1/2 ಟೀ.ಚಮಚ
ಇ೦ಗು  - ಚಿಟಿಕೆ
ಅರಿಶಿನಪುಡಿ - 1/4 ಟೀ.ಚಮಚ
ಎಣ್ಣೆ - 1 ಟೇ.ಚಮಚ




ವಿಧಾನ : - ನಿ೦ಬೆಹಣ್ಣನ್ನು ತೊಳೆದುಕೊ೦ಡು ಒಣ ಬಟ್ಟೆಯಲ್ಲಿ ಪೂರ್ತಿ ನೀರು ಹೋಗುವ ಹಾಗೆ ಒರೆಸಿಕೊಳ್ಳಿ. ಉಪ್ಪನ್ನು 5 ನಿಮಿಷ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಒ೦ದು ನಿ೦ಬೆಹಣ್ಣಿನಲ್ಲಿ ಚೂರುಗಳನ್ನಾಗಿ ಕತ್ತರಿಸಿ (ಚಿತ್ರದಲ್ಲಿ ತೋರಿಸಿದ೦ತೆ) ಬಿಸಿ ಆರಿದ ಉಪ್ಪಿನ ಜೊತೆ ಕಲೆಸಿ 2-3 ದಿನ ಗಾಜಿನ ಜಾಡಿಯಲ್ಲಿ ಹಾಕಿ ಇಡಬೇಕು. 3 ದಿನಗಳ ನ೦ತರ -  ಖಾರದ ಹಸಿಮೆಣಸನ್ನು ಮಧ್ಯದಲ್ಲಿ ಸಿಗಿದಿಟ್ಟುಕೊಳ್ಳಬೇಕು. ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಜೀರಿಗೆ ಸಾಸಿವೆ ಹಾಕಿ ಅದು ಚಿಟಪಟಾಯಿಸಿದ ಮೇಲೆ ಅರಿಶಿನ ಪುಡಿ ಇ೦ಗು ಹಸಿಮೆಣಸು ಹಾಕಿ ಸಣ್ಣ ಉರಿಯಲ್ಲಿ 2-3 ನಿಮಿಷ ಹುರಿಯಬೇಕು. ಇದು ಬಿಸಿ ಆರಿದ ಮೇಲೆ ಲಿ೦ಬು & ಉಪ್ಪಿನ ಮಿಶ್ರಣಕ್ಕೆ ಹಾಕಿ ಕಲೆಸಿ ಜಾಡಿಯಲ್ಲಿ ತು೦ಬಿ ಇಟ್ಟು 2 ದಿನದ ನ೦ತರ ಬಳಸಿ.  

ಶುಕ್ರವಾರ, ಸೆಪ್ಟೆಂಬರ್ 29, 2017

ಕೆಸುವಿನ ಬೀಳು (ಬೀಳಲು) ಪಲ್ಯ :


ಮಲೆನಾಡಿನಲ್ಲಿ ಮಳೆಗಾಲದ ಸಮಯದಲ್ಲಿ ಸಣ್ಣ ಕೆಸುವಿನ ಎಳೆಗಳ ಬುಡದಲ್ಲಿ ಬೇರುಗಳಂತೆ ಬಿಳಲುಗಳು ಹಬ್ಬುತ್ತವೆ. ಅದನ್ನು ತಂದು ಅದರ ಮೇಲಿರುವ ಸಿಪ್ಪೆಯಂತ ನಾರನ್ನು ತೆಗೆದು ವಿವಿಧ ಅಡುಗೆಗಳನ್ನು ಮಾಡುತ್ತಾರೆ. ಇದರ ನಾರನ್ನು ತೆಗೆಯುವುದು ಸ್ವಲ್ಪ ಕಿರಿಕಿರಿಯ ಕೆಲಸವಾದರೂ ನಂತರ ಮಾಡುವ ಅಡುಗೆಯ ರುಚಿ ಇದನ್ನು ಮರೆಸಿಬಿಡುತ್ತದೆ. ಮಲೆನಾಡಲ್ಲಿ ಈಳಿಗೆ ಮಣೆಯ ಕಾವಿನ ಹಿಂಭಾಗಕ್ಕೆ ತಿಕ್ಕಿ ನಾರು ತೆಗೆಯುತ್ತಾರೆ. ಚಾಕುವಿನ ಹಿಂಭಾಗ (ಮೊಂಡು ಇರುವ ಭಾಗ) ದಿಂದ ಕೂಡ ತೆಗೆಯಬಹುದು. ತೆಗೆದ ತಕ್ಷಣ ಕೈ ತೊಳೆದರೆ ಕೈ ಅಲ್ಲಿ ಸ್ವಲ್ಪ ಕಡಿತ ಕಾಣಿಸಬಹುದು. ಲಿಂಬು ರಸ ತಿಕ್ಕಿ ಕೈ ತೊಳೆದರೆ ಹೋಗುತ್ತದೆ.

ಸಾಮಗ್ರಿಗಳು :
ನಾರು ತೆಗೆದು 1/2 ಇಂಚು ಉದ್ದ ಹೆಚ್ಚಿದ ಕೆಸುವಿನ ಬೀಳು : ೧.೫ ಕಪ್
ಸಣ್ಣ ಹೆಚ್ಚಿದ ಈರುಳ್ಳಿ : 1/2 ಕಪ್
ಬೆಳ್ಳುಳ್ಳಿ : 10-12 ಎಸಳು
ತೆಂಗಿನ ತುರಿ: 3/4 ಕಪ್
ಹಸಿಮೆಣಸಿನ ಕಾಯಿ : 4-5
ಕರಿಬೇವು : 8-10 ಎಲೆಗಳು
ಎಣ್ಣೆ : 4-5 ಚಮಚ
ಸಾಸಿವೆ : 1/2 ಚಮಚ
ಅರಿಶಿನ ಪುಡಿ : 1/4 ಚಮಚ
ವಾಟೆ ಪುಡಿ / ಆಮ್ಚುರ್ ಪುಡಿ : 1/2 ಚಮಚ
ಉಪ್ಪು : ರುಚಿಗೆ ತಕ್ಕಷ್ಟು

ವಿಧಾನ :
ಹೆಚ್ಚಿದ ಕೆಸುವಿನ ಬೀಳನ್ನು ನೀರು, 1/4 ಚಮಚ ವಾಟೆ ಪುಡಿ ಹಾಕಿ ಬೇಯಿಸಿ. ನೀರು ಬಸಿದುಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಹಾಕಿ ಸಿಡಿಸಿ. ಅದಕ್ಕೆ ಹಸಿ ಮೆಣಸಿನ ಕಾಯಿ, ಕರಿಬೇವು ಹಾಕಿ, ಜಜ್ಜಿದ ಬೆಳ್ಳುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿದು, ಅರಿಶಿನಪುಡಿ ಹಾಕಿ ಮಿಕ್ಸ್ ಮಾಡಿ. ಈಗ ಬೇಯಿಸಿಕೊಂಡ ಹೋಳುಗಳು, ತೆಂಗಿನ ತುರಿ, ಉಪ್ಪು, ಉಳಿದ ವಾಟೆ / ಆಮ್ಚುರ್ ಪುಡಿ ಹಾಕಿ ಸ್ವಲ್ಪವೇ ಸ್ವಲ್ಪ (ಎಲ್ಲಾ ಹೊಂದಿಕೊಳ್ಳುವಷ್ಟು) ನೀರು ಹಾಕಿ ಮಿಕ್ಸ್ ಮಾಡಿ ಮೂರ್ನಾಲ್ಕು ನಿಮಷ ಬೇಯಿಸಿ. ಬಿಸಿ ಬಿಸಿ ಅನ್ನದ ಒಳ್ಳೆಯ ಜೊತೆಯಾಗುತ್ತದೆ. 




ಶನಿವಾರ, ಸೆಪ್ಟೆಂಬರ್ 23, 2017

ಸಣ್ಣಕ್ಕಿ ಕೇಸರಿ ಭಾತ್:

ಸಾಮಗ್ರಿಗಳು: 
ಸಣ್ಣಕ್ಕಿ (ಜೀರಾ ರೈಸ್) - 1/2 ಕೆ.ಜಿ,
ತುಪ್ಪ - 1/2 ಕೆ.ಜಿ,
ಸಕ್ಕರೆ - 1 ಕೆ.ಜಿ,
ಕೇಸರಿ ದಳ - 1.25 ಗ್ರಾ೦,
ಉಪ್ಪು - 1 ಟೀ. ಚಮಚ,
ಲಿ೦ಬುರಸ - 2 ಟೀ.ಚಮಚ.
ಗೋಡ೦ಬಿ & ದ್ರಾಕ್ಷಿ



ವಿಧಾನ : 1/2 ಕಪ್ ಹಾಲನ್ನು ಬಿಸಿ ಮಾಡಿಕೊ೦ಡು ಅದಕ್ಕೆ ಕೇಸರಿ ದಳಗಳನ್ನು ಹಾಕಿಡಿ.ಒ೦ದು ದಪ್ಪತಳದ ಪಾತ್ರೆಯಲ್ಲಿ ನೀರನ್ನು ಬಿಸಿಗಿಡಿ. ನೀರು ಕುದಿಯಲು ಶುರುವಾದಮೇಲೆ ಅಕ್ಕಿಯನ್ನು ತೊಳೆದು ಹಾಕಿ ಅಕ್ಕಿ ಹದವಾಗಿ ಬೆ೦ದ ಮೇಲೆ ನೀರನ್ನು ಬಸಿಯಿರಿ. (ಅನ್ನ ತು೦ಬ ಗಟ್ಟಿಯಾಗಿದ್ದರೆ ತುಪ್ಪ ಹಾಕಿದ ಮೇಲೆ ಮತ್ತು ಗಟ್ಟಿಯಾಗಿ ತಿನ್ನಲು ಚೆನ್ನಾಗಿರುವುದಿಲ್ಲ ಹಾಗೆ ಮೆತ್ತಗಾದರೆ ಮುದ್ದೆ ಮುದ್ದೆಯಾಗುತ್ತದೆ). ದಪ್ಪ ತಳದ ಪಾತ್ರೆಗೆ ಅನ್ನ, ಸಕ್ಕರೆ, ತುಪ್ಪ, ಉಪ್ಪು ಲಿ೦ಬುರಸ, ಹಾಲಿನಲ್ಲಿ ನೆನೆಸಿಟ್ಟ ಕೇಸರಿದಳ ಎಲ್ಲವನ್ನು ಸೇರಿಸಿ ಹದವಾದ ಉರಿಯಲ್ಲಿ ಆಗಾಗ ಅಡಿ ಹಿಡಿಯದ೦ತೆ 20-25 ನಿಮಿಷ ತೊಳೆಸಿ,ಉರಿಯಿ೦ದ ಇಳಿಸುವ ಮೊದಲು ಗೋಡ೦ಬಿ & ದ್ರಾಕ್ಷಿಯನ್ನು ಸೇರಿಸಿ. ಈಗಬಲು ರುಚಿಯಾದ ಅನ್ನದ ಕೇಸರಿ ಭಾತ್ ಸಿದ್ಧ.

ಶುಕ್ರವಾರ, ಸೆಪ್ಟೆಂಬರ್ 15, 2017

ಸಣ್ಣಕ್ಕಿ ಕೇಸರಿ ಪಾಯಸ :

ಓದುಗರಿಗೆ ಶರನ್ನವರಾತ್ರಿ ಶುಭಾಶಯಗಳು. ನವರಾತ್ರಿಯಲ್ಲಿ ದೇವಿಗೆ ನೈವೇದ್ಯ ಮಾಡಲು ಒಂದು ಪಾಯಸ ನಿಮಗಾಗಿ...  ಸಣ್ಣಕ್ಕಿ ಎಂದರೆ ಮಲೆನಾಡಿನ ಕಡೆ ಸಿಗುವ ಸುವಾಸನೆಯುಕ್ತ, ಗಾತ್ರದಲ್ಲಿ ಬೇರೆ ಅಕ್ಕಿಗಿಂತ ಸಣ್ಣದಾದ ಅಕ್ಕಿ. ಬೆಂಗಳೂರಿನಲ್ಲಿ ಸಿಗುವ ಜೀರಿಗೆ ಅಕ್ಕಿ ಇದನ್ನು ಹೋಲುತ್ತದೆ ಆದರೆ ಸಣ್ಣಕ್ಕಿಯಂತೆ ಸುವಾಸನೆಯಿರುವುದೇ ಎಂಬುದನ್ನು ನಾನು ತಂದು ನೋಡಿಲ್ಲ... ! 

ಸಾಮಗ್ರಿಗಳು :
ಸಣ್ಣಕ್ಕಿ : 1/2 ಕಪ್
ಹಾಲು:  3/4 - 1 ಲೀಟರ್
ಸಕ್ಕರೆ : 1.5 -2 ಕಪ್
ಕೇಸರಿ ದಳ : 1 ಚಿಟಿಕೆ
ಉಪ್ಪು : 2 ಚಿಟಿಕೆ

ವಿಧಾನ :
2 ಚಮಚ ಹಾಲಿನಲ್ಲಿ ಕೇಸರಿ ದಳಗಳನ್ನು ನೆನೆಸಿಡಿ. ಅಕ್ಕಿಯನ್ನು ತೊಳೆದು ಅರ್ಧ ಲೀಟರ್ ಹಾಲು ಬೇಕಿದ್ದಲ್ಲಿ ಒಂದು ಕಪ್ ನೀರು ಹಾಕಿ ಬೇಯಲು ಇಡಿ. ಆಗಾಗ ಕಲಕುತ್ತಿರಿ. ಹಾಲು ಕಮ್ಮಿಯಾದಂತೆ ಹಾಕುತ್ತಿರಿ. ಅಕ್ಕಿ ಚೆನ್ನಾಗಿ ಅರಳುವಷ್ಟು ಬೇಯಬೇಕು. ಅಂದರೆ ಪೂರ್ತಿ ಮೆತ್ತಗೆ ಬೇಯಬೇಕು. ಚೆನ್ನಾಗಿ ಬೆಂದು, ಅನ್ನ ಅರಳಿದ ಮೇಲೆ ಸಕ್ಕರೆ, ನೆನಸಿಟ್ಟ ಕೇಸರಿ ಹಾಲು ಹಾಕಿ ಕಲಕಿ. ಎಷ್ಟು ದಪ್ಪ ಬೇಕು ನೋಡಿಕೊಂಡು ಮತ್ತೆ ಹಾಲು ಬೇಕಿದ್ದಲ್ಲಿ ಹಾಕಿ, ಉಪ್ಪು ಹಾಕಿ ಕುದಿಸಿ. ದೇವಿಗೆ ನೈವೇದ್ಯ ಮಾಡಿಕೊಂಡು ಬಿಸಿ ಬಿಸಿ ಪಾಯಸಕ್ಕೆ ತುಪ್ಪ ಹಾಕಿಕೊಂಡು ಸವಿಯಿರಿ. 




ಶುಕ್ರವಾರ, ಸೆಪ್ಟೆಂಬರ್ 8, 2017

ಮೆಕ್ಕೆ ಹಣ್ಣಿನ (ಇಬ್ಬಡ್ಲ ಹಣ್ಣು) ಪಾಯಸ/ ರಸಾಯನ :

ಸಾಮಗ್ರಿಗಳು:
ಸಣ್ಣಗೆ ಹೆಚ್ಚಿದ ಮೆಕ್ಕೆ ಹಣ್ಣು - 1 ಕಪ್,
ಸಕ್ಕರೆ (ಬೆಲ್ಲ ಕೂಡ ಹಾಕಬಹುದು) - 2 ಟೇ. ಚಮಚ,
ಹಾಲು - 1/2 ಕಪ್, 
ಏಲಕ್ಕಿ ಪುಡಿ & ಉಪ್ಪು - ತಲಾ ಒ೦ದು ಚಿಟಿಕೆ.








ವಿಧಾನ : ಸಣ್ಣಗೆ ಹೆಚ್ಚಿಟ್ಟ ಮೆಕ್ಕೆ ಹಣ್ಣು, ಸಕ್ಕರೆ, ಹಾಲು, ಎಲಕ್ಕಿ ಪುಡಿ, ಉಪ್ಪು ಎಲ್ಲಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಘಂಟೆ ಫ್ರಿಡ್ಜ್ ನಲ್ಲಿ ಇಟ್ಟು ಆಮೇಲೆ ಸರ್ವ ಮಾಡಿ.

(ಬೆಲ್ಲ & ಸಕ್ಕರೆ ಎರಡನ್ನು ಬಳಸಿ ಮಾಡಿದರೂ ಚೆನ್ನಾಗಿರುತ್ತದೆ.) 

ಸೂಚನೆ:ಹಾಲಿನ ಬದಲು ತೆ೦ಗಿನತುರಿಯನ್ನು ನುಣ್ಣಗೆ ರುಬ್ಬಿ ಹಾಕಿದರೆ ದೋಸೆ /ಗರಿ ಗರಿ ತೆಳ್ಳೆವಿನ ಜೊತೆ ತಿನ್ನಲು ತು೦ಬಾ ಚೆನ್ನಾಗಿರುತ್ತದೆ.

ಶುಕ್ರವಾರ, ಸೆಪ್ಟೆಂಬರ್ 1, 2017

ಕ್ಯಾರಟ್ - ಪಾಲಕ್ ಸೂಪ್ :

 ಸಾಮಗ್ರಿಗಳು :
ಕ್ಯಾರಟ್ : ಚಿಕ್ಕದು 1
ಆಲೂಗಡ್ಡೆ : ಚಿಕ್ಕದು 1 
ಈರುಳ್ಳಿ : ಚಿಕ್ಕದು 1
ಪಾಲಕ್ : 2-3 ಎಲೆಗಳು 
ಬೆಣ್ಣೆ : 1 ಚಮಚ 
ಪೆಪ್ಪರ್ ಪುಡಿ : 1/4 ಚಮಚ 
ಲಿಂಬು ರಸ : 1/4 ಚಮಚ 
ಉಪ್ಪು : ರುಚಿಗೆ ತಕ್ಕಷ್ಟು 

ವಿಧಾನ :
ಕ್ಯಾರಟ್ ಮತ್ತು ಆಲೂಗಡ್ಡೆ ಸಿಪ್ಪೆ ತೆಗೆದು ದೊಡ್ಡ ಹೋಳು ಮಾಡಿಕೊಳ್ಳಿ. ಮುಕ್ಕಾಲು ಭಾಗ ಈರುಳ್ಳಿಯನ್ನು ದೊಡ್ಡದಾಗಿ ಹೆಚ್ಚಿಕೊಳ್ಳಿ. ಹೆಚ್ಚಿದ ಕ್ಯಾರಟ್, ಆಲೂ, ಈರುಳ್ಳಿಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ (ಮಧ್ಯಾಹ್ನ ಅನ್ನ ಮಾಡುವಾಗ ಇದನ್ನೂ ಬೇಯಿಸಿಟ್ಟುಕೊಂಡು ಸಾಯಂಕಾಲ ಮಗುವಿಗೆ ಸೂಪ್ ಮಾಡಿಕೊಡಬಹುದು). ಉಳಿದ ಈರುಳ್ಳಿ ಯನ್ನು ತುಂಬಾ ಸಣ್ಣಗೆ ಹೆಚ್ಚಿಕೊಳ್ಳಿ ಮತ್ತು ಪಾಲಕ್ ಎಲೆಗಳನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ. ಬೇಯಿಸಿದ ತರಕಾರಿಗಳನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ದಪ್ಪ ತಳದ ಪಾತ್ರೆಯಲ್ಲಿ ಬೆಣ್ಣೆ ಕಾಯಿಸಿ ಅದಕ್ಕೆ ಪೆಪ್ಪರ್ ಪುಡಿ ಹಾಕಿ ತಕ್ಷಣ ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ. ನಂತರ ಹೆಚ್ಚಿದ ಪಾಲಕ್ ಹಾಕಿ ಫ್ರೈ ಮಾಡಿ. ಈಗ ರುಬ್ಬಿದ ಮಿಶ್ರಣ ಹಾಕಿ, ಎಷ್ಟು ದಪ್ಪ ಬೇಕು ನೋಡಿಕೊಂಡು ನೀರು ಹಾಕಿ. ಉಪ್ಪು ಹಾಕಿ ಒಂದು ಕುದಿ  ಕುದಿಸಿ. ಲಿಂಬು ರಸ ಹಾಕಿ ಉರಿ ಆರಿಸಿ. ಮಕ್ಕಳ ವಯಸ್ಸಿಗನುಗುಣವಾಗಿ ಬೆಚ್ಚಗಿನ ಸೂಪ್ ಅನ್ನು ಸವಿಯಲು ಕೊಡಿ. 


ಸಲಹೆಗಳು :
1) ಒಂದೂವರೆ  ವರ್ಷ ಮೇಲ್ಪಟ್ಟ ಅಥವಾ ಹಲ್ಲು ಬಂದ ಎಲ್ಲ ಶಿಶು / ಮಕ್ಕಳಿಗೆ ಕೊಡಬಹುದು. ಮಕ್ಕಳಷ್ಟೇ ಅಲ್ಲದೇ ದೊಡ್ಡವರೂ ಇಷ್ಟ ಪಡುವಂಥ ಸೂಪ್ ಇದು. ಅಲ್ಲದೇ ಗರ್ಭಿಣಿಯರಿಗೂ ಆರೋಗ್ಯಕರ. 
2) ಮಕ್ಕಳಿಗೆ ಮಾಡುವಾಗ ಹಿಂದಿನ ದಿನ ಬೇಯಿಸಿ ಫ್ರಿಡ್ಜ್ ನಲ್ಲಿಟ್ಟ ತರಕಾರಿಗಳನ್ನು ಬಳಸಬೇಡಿ. 

ಶುಕ್ರವಾರ, ಆಗಸ್ಟ್ 18, 2017

ವೆಜ್ ಪೊಂಗಲ್ / ವೆಜ್ ಕಿಚಡಿ :

ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಆರೋಗ್ಯಕರ ಆಹಾರ ಇದು. ಮಾಡಿಕೊಡುವುದೂ ಸುಲಭ ಜೊತೆಗೆ ಮಕ್ಕಳ ಹೊಟ್ಟೆಯನ್ನೂ ತಂಪಾಗಿರಿಸುತ್ತದೆ.  ಸಾಯಂಕಾಲ ಮಕ್ಕಳು ನಿದ್ದೆಯಿಂದ ಎದ್ದ ಮೇಲೆ ಮಾಡಿಕೊಡಲು ಒಳ್ಳೆಯ ಆಹಾರ. ಆದ್ದರಿಂದ ಮಧ್ಯಾಹ್ನದ ಊಟಕ್ಕೆ ಕುಕ್ಕರ್ ಇಡುವಾಗಲೇ ಅಕ್ಕಿ ಬೇಳೆಯನ್ನು ಬೇಯಿಸಿಟ್ಟುಕೊಂಡುಬಿಟ್ಟರೆ ಮಗು ಎದ್ದ ಕೂಡಲೇ ಬಿಸಿ ಬಿಸಿಯಾಗಿ ಮಾಡಿಕೊಡಬಹುದು. ಅಥವಾ ಪುಟ್ಟ ಕುಕ್ಕರ್ ನಲ್ಲಿ ಸಾಯಂಕಾಲವೇ ಮಾಡಬಹುದು.  ಆದರೆ ನೆನಪಿಡಿ ಮಕ್ಕಳಿಗೆ ಮಾಡುವಾಗ ಹಿಂದಿನ ದಿನ ಬೇಯಿಸಿಟ್ಟ ಆಹಾರಗಳನ್ನು ಮತ್ತು ದಿನಗಟ್ಟಲೇ ಫ್ರಿಡ್ಜ್ ನಲ್ಲಿಟ್ಟ ಆಹಾರಗಳನ್ನು ಹಾಕಬೇಡಿ ತಾಜಾ ಮಾಡಿಕೊಟ್ಟರೆ ಒಳ್ಳೆಯದು.

ಸಾಮಗ್ರಿಗಳು :
ಅಕ್ಕಿ : 1/4 ಕಪ್
ಹೆಸರು ಬೇಳೆ : 1/4 ಕಪ್ ಅಥವಾ ಅದಕ್ಕಿಂತ 1-2 ಚಮಚ ಜಾಸ್ತಿ
ತುಂಬಾ ಸಣ್ಣಗೆ ಹೆಚ್ಚಿದ ಬೀನ್ಸ್ : 1-2 ಚಮಚ
ತುರಿದ ಕ್ಯಾರಟ್ : 2 ಚಮಚ
ತುಂಬಾ ಸಣ್ಣಗೆ ಹೆಚ್ಚಿದ ಈರುಳ್ಳಿ : 1 ಚಮಚ
ತೆಂಗಿನ ತುರಿ : 1 ಚಮಚ
ಪೆಪ್ಪರ್ ಪುಡಿ : 2-3 ಚಿಟಿಕೆ
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು : 1 ಚಮಚ
ಕರಿಬೇವು : 4-5 ಎಲೆ
ತುಪ್ಪ : 3 ಚಮಚ
ಒಣ ಮೆಣಸಿನ ಕಾಯಿ : 1 ಚೂರು
ಸಾಸಿವೆ : 1/6 ಚಮಚ
ಜೀರಿಗೆ : 1/6 ಚಮಚ
ಉಪ್ಪು : ರುಚಿಗೆ

ವಿಧಾನ :
ಅಕ್ಕಿ ಮತ್ತು ಬೇಳೆಯನ್ನು ಒಟ್ಟಿಗೇ ಸೇರಿಸಿ ತೊಳೆದು, ನೀರು ಹಾಕಿ ಅನ್ನ ಮಾಡುವಾಗಲೇ ಕುಕ್ಕರ್ ನಲ್ಲಿಟ್ಟು ಬೇಯಿಸಿಕೊಂಡುಬಿಡಿ. ಪ್ಯಾನ್ ಗೆ ತುಪ್ಪ ಹಾಕಿ ಕರಗಿಸಿ, ಅದಕ್ಕೆ ಸಾಸಿವೆ, ಜೀರಿಗೆ ಹಾಕಿ ಚಟಪಟಾಯಿಸಿ.  ಅದಕ್ಕೆ ಒಣ ಮೆಣಸಿನ ಚೂರು ಹಾಕಿ, ಪೆಪ್ಪರ್ ಪುಡಿ, ಚೂರು ಮಾಡಿದ ಕರಿಬೇವಿನ ಎಲೆ, ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಹೆಚ್ಚಿದ ಬೀನ್ಸ್ ಮತ್ತು ತುರಿದ ಕ್ಯಾರಟ್ ಹಾಕಿ ಸ್ವಲ್ಪ ನೀರು, ಚಿಟಿಕೆ ಉಪ್ಪು ಹಾಕಿ ಬೇಯಿಸಿ.  ತರಕಾರಿಗಳು ಚೆನ್ನಾಗಿ ಬೆಂದ ನಂತರ ಇದಕ್ಕೆ ಬೇಯಿಸಿಕೊಂಡ ಅನ್ನ ಮತ್ತು ಬೇಳೆ ಮಿಶ್ರಣವನ್ನು ಸೌಟಿನಲ್ಲಿ ಸ್ವಲ್ಪ ಮಸೆದು ಹಾಕಿ. ಸ್ವಲ್ಪ ಉಪ್ಪು, ತೆಂಗಿನ ತುರಿ ಕೊತ್ತಂಬರಿ ಸೊಪ್ಪು, ಬೇಕಿದ್ದಲ್ಲಿ ಸ್ವಲ್ಪ ನೀರು ಎಲ್ಲವನ್ನೂ ಹಾಕಿ ಕುದಿಸಿದರೆ ವೆಜ್ ಪೊಂಗಲ್ ಅಥವಾ ವೆಜ್ ಕಿಚಡಿ ನಿಮ್ಮ ಮಗುವಿಗೆ ತಿನ್ನಿಸಲು ತಯಾರು. ಬಿಸಿ ಆರಿಸಿ ತಿನ್ನಿಸಿ.


ಸಲಹೆಗಳು :
1) ಈರುಳ್ಳಿ ಹಾಕುವುದರಿಂದ ಒಳ್ಳೆಯ ಘಮ ಬರುವುದರಿಂದ ಮಕ್ಕಳು ಇಷ್ಟ ಪಟ್ಟು ತಿನ್ನುತ್ತಾರೆ. 
2) ಡೈರೆಕ್ಟ್ ಕುಕ್ಕರ್ ನಲ್ಲಿ ಮಾಡುವುದಾದರೆ ಕುಕ್ಕರ್ ಪ್ಯಾನ್ ಗೆ ಮೇಲೆ ಹೇಳಿದಂತೆ ಒಗ್ಗರಣೆ ಮಾಡಿ ತರಕಾರಿ, ಬೇಳೆ, ಅಕ್ಕಿ ಎಲ್ಲಾ ಹಾಕಿ 3 ವಿಶಲ್ ಕೂಗಿಸಿ. 

ಶುಕ್ರವಾರ, ಆಗಸ್ಟ್ 4, 2017

ಗೋಧಿ ಹಾಲುಬಾಯಿ :

ನೋಡಲು ಸರಳ ತಿನಿಸು ಎನಿಸಿದರೂ, ಮಾಡುವಾಗ ತುಸು ಕಷ್ಟ ಈ ಹಾಲುಬಾಯಿ. ಸ್ವಲ್ಪ ಬೇಗನೆ ಒಲೆಯಿಂದ ಇಳಿಸಿದರೂ ಬಾಯಿಗೆ ಅಂಟುತ್ತದೆ. ನಾನಗಂತೂ ಮೊದಲ ಪ್ರಯತ್ನ ಫೇಲ್ ಆಗಲಿಲ್ಲ. ಅತ್ತೆ ಮತ್ತು ಅಮ್ಮನಿಗೆ ಫೋನಾಯಿಸುತ್ತಾ ಮಾಡಿ ಮುಗಿಸಿದೆ....  ಕೈ ಬಿಡದೇ ಕಲಕುತ್ತಾ ಬಂದ ಕೈ ನೋವನ್ನು ಹಾಲುಬಾಯಿ ತಿಂದ ಬಾಯಿ ಮರೆಸಿಬಿಡುತ್ತದೆ! ಅಷ್ಟು ಒಳ್ಳೆಯ, ಸವಿಯಾದ, ಹಳೆಯ ಕಾಲದ ತಿನಿಸಿದು. ಮಾಡಿ ನೋಡಿ ಸವಿ ಸವಿ ಹಾಲುಬಾಯಿ. ಇದೇ  ರೀತಿಯಲ್ಲಿ ರಾಗಿ ಹಾಲುಬಾಯಿ ಕೂಡ ಬಲು ರುಚಿ.. ಅದನ್ನೂ ಮಾಡಿ ನೋಡಿ...!! 

ಸಾಮಗ್ರಿಗಳು :
ಗೋಧಿ : 1/2 ಕೆಜಿ
ಬೆಲ್ಲ : 2.5-3 ಕಪ್
ಏಲಕ್ಕಿ ಪುಡಿ : 1/2 ಚಮಚ
ತೆಂಗಿನ ತುರಿ : 4-5 ಟೇಬಲ್ ಚಮಚ
ಉಪ್ಪು: 1/4 ಚಮಚ
ತುಪ್ಪ : 1 ಚಮಚ 

ವಿಧಾನ : 
ಗೋಧಿಯನ್ನು ತೊಳೆದು 6-7 ಘಂಟೆಗಳ ಕಾಲ ನೆನೆಸಿಡಿ. ನಂತರ ನೀರು ಬಸಿದು ಮಿಕ್ಸಿಗೆ ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ರುಬ್ಬಿಕೊಂಡು ಶುಭ್ರ ಬಟ್ಟೆ ಅಥವಾ ಹಿಟ್ಟಿನ ಜರಡಿಯಲ್ಲಿ ಹಾಕಿ ಹಿಂಡಿ ಹಾಲು ತೆಗೆದುಕೊಳ್ಳಿ. ಉಳಿದ ಗಸಟನ್ನು (ಚರಟ) ಮತ್ತೊಮ್ಮೆ ಮಿಕ್ಸಿಗೆ ಹಾಕಿ ನೀರು ಹಾಕಿ ರುಬ್ಬಿ ಹಾಲು ತೆಗೆದುಕೊಳ್ಳಿ. ದಪ್ಪ ಮತ್ತು ದೊಡ್ಡ ಪಾತ್ರೆಗೆ ಈ ಹಾಲನ್ನು ಹಾಕಿ, ಅದಕ್ಕೆ ಬೆಲ್ಲ, ಏಲಕ್ಕಿ ಪುಡಿ, ತೆಂಗಿನ ತುರಿ, ಉಪ್ಪು ಹಾಕಿ ಮಾಧ್ಯಮ ಉರಿಯಲ್ಲಿ ಕಲಕುತ್ತಿರಿ. ( ಸಿಹಿ ಸರಿಯಾಗಿದೆಯೇ ಎಂದು ನೋಡಿಕೊಂಡು ಬೇಕಿದ್ದಲ್ಲಿ ಬೆಲ್ಲ ಸೇರಿಸಿಕೊಳ್ಳಬಹುದು). ಗಂಟಾಗದಂತೆ ಆಗಾಗ ಕಲಕುತ್ತಲೇ ಇರಬೇಕು. ಮಿಶ್ರಣ ಗಟ್ಟಿಯಾಗುತ್ತಾ ಬಂದಂತೆಸಣ್ಣ ಉರಿಯಲ್ಲಿ ಕೈ ಬಿಡದೇ ಕಲಕುತ್ತಿರಬೇಕು. ಸುಮಾರು ಅರ್ಧ ಗಂಟೆ ಬೇಕಾಗಬಹುದು. ಬರ್ಫಿ ಮಿಶ್ರಣದಷ್ಟು ಗಟ್ಟಿಯಾಗಬೇಕು. ಕೈಗೆ ಸ್ವಲ್ಪ ನೀರು ಮುಟ್ಟಿಕೊಂಡು ಮಿಶ್ರಣವನ್ನು ಮುಟ್ಟಿದರೆ ಅದು ಕೈಗೆ ಅಂಟದಿದ್ದರೆ ತಯಾರಾಗಿದೆ ಎಂದರ್ಥ. ಒಂದು ಅಗಲವಾದ ಪ್ಲೇಟ್ ಗೆ ತುಪ್ಪ ಸವರಿಕೊಂಡು ಗಟ್ಟಿಯಾದ ಹಾಲುಬಾಯಿ ಮಿಶ್ರಣ ಹಾಕಿ ಬಿಸಿ ಇರುವಾಗಲೇ  ಬರ್ಫಿಗಿಂತ ಸ್ವಲ್ಪ ತೆಳ್ಳಗೆ ಹರವಿ. ಬಾಳೆಲೆಯ ಹಿಂಭಾಗಕ್ಕೆ ತುಪ್ಪ ಸವರಿಕೊಂಡು ಮಿಶ್ರಣವನ್ನು ನಯವಾಗಿ ಹರವಲು ಬಳಸಬಹುದು. ಸ್ವಲ್ಪ ತಣ್ಣಗಾದ ಮೇಲೆ ಚಾಕು ತುದಿಗೆ ಸ್ವಲ್ಪ ತುಪ್ಪ ಸವರಿಕೊಂಡು ಬೇಕಾದ ಆಕಾರಕ್ಕೆ ಕತ್ತರಿಸಿ. ತಣ್ಣಗಾದ ಮೇಲೆ ಹಾಲುಬಾಯಿ ಜೊತೆ ತುಪ್ಪ ಹಾಕಿಕೊಂಡು ಸವಿಯಿರಿ.  
    

ಸಲಹೆಗಳು :
1) ಕಾಯಿಸಿದ್ದು ಸಾಕಾಗದೇ ಬೇಗ ಉರಿ ಆರಿಸಿದರೆ ತಿನ್ನುವಾಗ ಬಾಯಿಗೆ ಅಂಟುತ್ತದೆ. ಗೊತ್ತಾಗದಿದ್ದರೆ ಕೈಗೆ ಸ್ವಲ್ಪ ನೀರು ಮುಟ್ಟಿಕೊಂಡು, ಸಣ್ಣ ಕಡಲೆ ಕಾಳಿನಷ್ಟು ಮಿಶ್ರಣ ತೆಗೆದುಕೊಂಡು ಆರಿಸಿ ಅದನ್ನು ಒದ್ದೆ ಬೆರಳಿನಿಂದ ಉಂಡೆ ಮಾಡಿ ನೋಡಿ. ಕೈಗೆ ಅಂಟದಿದ್ದರೆ ಸರಿ  ಆಗಿದೆ ಎಂದರ್ಥ. 
2) ಉರಿ ಆರಿಸಿದ ತಕ್ಷಣ ತಟ್ಟೆಗೆ ಹರವಿಬಿಡಬೇಕು, ಪಾತ್ರೆಯಲ್ಲೇ ತಣ್ಣಗಾದರೆ ನಯವಾಗಿ ಹರವಿ ಕತ್ತರಿಸಲು ಬರುವುದಿಲ್ಲ. 
3) ಇದನ್ನು 2 ದಿನ ಕೆಡದಂತೆ ಇಟ್ಟುಕೊಳ್ಳಬಹುದು. ತೆಂಗಿನ ಕಾಯಿಯನ್ನು ಗೋಧಿಯ ಜೊತೆಯೇ ರುಬ್ಬಿಕೊಳ್ಳಲು ಕೂಡ ಹಾಕಬಹುದು, ಆಗ ಇನ್ನೆರಡು ದಿನ ಇಡಬಹುದು.
4) ಮಲೆನಾಡಿನ ಕೆಂಪು ಬೆಲ್ಲ ಹಾಕಿರುವುದರಿಂದ ಸ್ವಲ್ಪ ಕಪ್ಪಗಾಗಿದೆ. ಅಚ್ಚು / ಉಂಡೆ ಬೆಲ್ಲ ಹಾಕಿದರೆ ಇಷ್ಟು ಕಪ್ಪಗಾಗುವುದಿಲ್ಲ ಮತ್ತು ಪ್ರಮಾಣವೂ ಸ್ವಲ್ಪ ಹೆಚ್ಚು ಬೇಕಾಗಬಹುದು.   

ಶುಕ್ರವಾರ, ಜುಲೈ 28, 2017

ಹೀರೇಕಾಯಿ ಚಟ್ನಿ:

ಸಾಮಗ್ರಿಗಳು: 
ಹೆಚ್ಚಿಟ್ಟ ಹೀರೇಕಾಯಿ - 1 ಕಪ್, 
ಹಸಿಮೆಣಸು - 5, 
ತೆ೦ಗಿನತುರಿ - 1/2  ಕಪ್, ಉಪ್ಪು ರುಚಿಗೆ ತಕ್ಕಷ್ಟು,
ಬೆಲ್ಲ - 1/2 ಚಮಚ

ಒಗ್ಗರಣೆಗೆ: ಎಣ್ಣೆ, ಸಾಸಿವೆ, ಎಳ್ಳು, ಇ೦ಗು






 

ವಿಧಾನ: ಹೆಚ್ಚಿಕೊ೦ಡ ಹೀರೇಕಾಯಿಗೆ ಹಸಿಮೆಣಸು, ಉಪ್ಪು, ಬೆಲ್ಲ ಸೇರಿಸಿ ಸ್ವಲ್ಪ ನೀರು ಹಾಕಿ 7-8 ನಿಮಿಷ ಬೇಯಿಸಿಕೊಳ್ಳಿ, ಇದು ಬಿಸಿ ಆರಿದಮೇಲೆ ತೆ೦ಗಿನತುರಿ ಹಾಕಿ ರುಬ್ಬಬೇಕು. ನ೦ತರ ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಕಾದಮೇಲೆ ಸಾಸಿವೆ, ಎಳ್ಳು ಇ೦ಗು ಹಾಕಿ ಚಿಟಪಟಾಯಿಸಿ ಚಟ್ನಿಗೆ ಸೇರಿಸಿ.

ಶುಕ್ರವಾರ, ಜುಲೈ 21, 2017

ಮಾವಿನಕಾಯಿ - ಕ್ಯಾಪ್ಸಿಕಂ ಬಾತ್ :

ಸಾಮಗ್ರಿಗಳು : 
ಅಕ್ಕಿ : 1 ಕಪ್ 
ತುರಿದ ಮಾವಿನಕಾಯಿ : 2 ಟೇಬಲ್ ಚಮಚ (ತೋತಾಪುರಿ ಆದರೆ ಒಳ್ಳೆಯದು, ಬೇರೆ ಹುಳಿ ಮಾವಿನಕಾಯದರೆ 1 ಚಮಚ ಸಾಕು)
ಕ್ಯಾಪ್ಸಿಕಂ :1
ಕರಿಬೇವು : 6-8 ಎಲೆಗಳು 
ಹೆಚ್ಚಿದ ಕೊತ್ತಂಬರಿಸೊಪ್ಪು : 1 ಟೇಬಲ್ ಚಮಚ 
ಶುಂಠಿ : 1/2 ಇಂಚು 
ಮೆಂತ್ಯ ಕಾಳು : 6-8
ತೆಂಗಿನ ತುರಿ : 2 ಟೇಬಲ್ ಚಮಚ 
ಎಣ್ಣೆ : 4 ಟೇಬಲ್ ಚಮಚ 
ಸಾಸಿವೆ: 1/2 ಚಮಚ 
ಒಣಮೆಣಸು : 1 
ಹಸಿಮೆಣಸು : 2 
ಅರಿಶಿನ ಪುಡಿ : 1/4 ಚಮಚ 
ಸಕ್ಕರೆ / ಬೆಲ್ಲ : 1/2 ಚಮಚ 
ಉಪ್ಪು: ರುಚಿಗೆ 

ವಿಧಾನ : 
ಕ್ಯಾಪ್ಸಿಕಂ ಅನ್ನು ಒಂದಿಂಚು ದೊಡ್ಡದಾಗಿ ಚೌಕಾಕಾರಕ್ಕೆ ಕತ್ತರಿಸಿಕೊಳ್ಳಿ. ಬಾಣಲೆಗೆ ಮೆಂತ್ಯ ಕಾಳು ಹಾಕಿ ಸ್ವಲ್ಪ ಹುರಿದುಕೊಂಡು, ಅದಕ್ಕೆ ಹಸಿಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ ಮತ್ತು ಶುಂಠಿ ಎಲ್ಲವನ್ನೂ ಹಾಕಿ ಹುರಿಯಿರಿ (ಎಣ್ಣೆ ಹಾಕದೇ ಹುರಿಯಬೇಕು). ನಂತರ ಇದನ್ನು ಮಿಕ್ಸಿ ಗೆ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಕುಕ್ಕರ್ ಗೆ ಎಣ್ಣೆ, ಸಾಸಿವೆ ಹಾಕಿ ಚಿಟಪಟಾಯಿಸಿ. ಅದಕ್ಕೆ ಒಣ ಮೆಣಸು, ಅರಿಶಿನ ಪುಡಿ ಹಾಕಿ. ಈಗ ಹೆಚ್ಚಿದ ಕ್ಯಾಪ್ಸಿಕಂ ಹಾಕಿ ಒಮ್ಮೆ ಫ್ರೈ ಮಾಡಿ, ಇದಕ್ಕೆ ತುರಿದ ಮಾವಿನಕಾಯಿ, ಉಪ್ಪು ಹಾಕಿ ಸ್ವಲ್ಪ ಫ್ರೈ ಮಾಡಿ. ನಂತರ ರುಬ್ಬಿದ ಮಿಶ್ರಣ ಹಾಕಿ ಹಸಿವಾಸನೆ ಹೋಗುವತನಕ ಹುರಿದು ತೊಳೆದ ಅಕ್ಕಿ, ನೀರು ಮತ್ತು ಸಕ್ಕರೆ/ಬೆಲ್ಲ ಹಾಕಿ ಚೆನ್ನಾಗಿ ಕಲಕಿ ಮುಚ್ಚಳ ಮುಚ್ಚಿ 3 ವಿಷಲ್ ಕೂಗಿಸಿದರೆ ಮಾವಿನಕಾಯಿ ಬಾತ್ ಸಿದ್ಧ. 




ಶುಕ್ರವಾರ, ಜುಲೈ 14, 2017

ಬನ್ ಮಸಾಲಾ :

ಸಾಮಗ್ರಿಗಳು: 
ಬನ್ - 4,
ಈರುಳ್ಳಿ  - 2, 
ಟೊಮ್ಯಾಟೊ - 2,
ಸವತೆಕಾಯಿ - 1,
ಕ್ಯಾರೇಟ್ - 1, 
ಕ್ಯಾಬೇಜ್ - 2 ಎಲೆಗಳು, 
ಕೆ೦ಪು ಮೆಣಸಿನ ಪುಡಿ - 1 ಟೇ. ಚಮಚ (ನಿಮ್ಮ ರುಚಿಗೆ ಅನುಗುಣವಾಗಿ)
ಗರ೦ ಮಸಾಲಾ ಪೌಡರ್ - 1/2 ಟೀ.ಚಮಚ
ಉಪ್ಪು - ರುಚಿಗೆ ಅನುಗುಣವಾಗಿ
ಎಣ್ಣೆ  - 1 ಟೇ. ಚಮಚ, ಬೆಣ್ಣೆ 







ವಿಧಾನ :ಈರುಳ್ಳಿ, ಕ್ಯಾಬೇಜ್ & ಟೊಮ್ಯಾಟೊವನ್ನು ಉದ್ದುದ್ದಕ್ಕೆ ತೆಳ್ಳಗೆ ಹೆಚ್ಚಿಕೊಳ್ಳಿ. ಕ್ಯಾರೇಟ್ ತುರಿದಿಟ್ಟುಕೊಳ್ಳಬೇಕು, ಸವತೆಕಾಯಿಯನ್ನು ತೆಳ್ಳಗೆ ಗಾಲಿ ಗಾಲಿ ಯಾಗಿ ಕತ್ತರಿಸ ಬೇಕು.  ಒ೦ದು ಬಾಣಲೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಹೆಚ್ಚಿಟ್ಟ ಈರುಳ್ಳಿ ಹಾಕಿ ಫ್ರೈ ಮಾಡಿ ಹಾಗೆ ಟೊಮ್ಯಾಟೊ ಹಾಕಿ ಈಗ ಉಪ್ಪು, ಕೆ೦ಪು ಮೆಣಸಿನ ಪುಡಿ, ಗರ೦ ಮಸಾಲಾ ಪೌಡರ್ ಹಾಕಿ ೫ ನಿಮಿಷ  ಫ್ರೈ ಮಾಡಿ ಬದಿಗಿರಿಸಿ. ಸಣ್ಣ ಉರಿಯಲ್ಲಿ ಕಾವಲಿ ಇಟ್ಟು ಅದಕ್ಕೆ ಬೆಣ್ಣೆ ಸವರಿ ಬನ್ ಮಧ್ಯದಲ್ಲಿ ಕತ್ತರಿಸಿ (ಚಿತ್ರದಲ್ಲಿ ತೋರಿಸಿದ೦ತೆ)ಎರಡು ಕಡೆ ಸ್ವಲ್ಪ ರೋಸ್ಟ ಮಾಡಿ ನ೦ತರ ಮಧ್ಯದಲ್ಲಿ ಈರುಳ್ಳಿ ಟೊಮ್ಯಾಟೊ ಮಸಾಲೆ ಹಾಕಿ ಹೆಚ್ಚಿಟ್ಟ ಸವತೆಕಾಯಿ, ಕ್ಯಾರೇಟ್, ಕ್ಯಾಬೇಜ್ ಹಾಕಿ ಮತ್ತೊ೦ದು ಬನ್ ಭಾಗವನ್ನು ಮುಚ್ಚಿಟ್ಟರೆ ಮಸಾಲ ಬನ್ ಸವಿಯಲು ಸಿದ್ಧ.

(ಸೂಚನೆ: ಆಲು ಕಟ್ಲೆಟ್ ಮಾಡಿಕೊ೦ಡು ಇದರ ಮಧ್ಯ ಇಟ್ಟಲ್ಲಿ ಅದೆ ಬರ್ಗರ್, ವಿಧಾನ ಇನ್ನೊಮ್ಮೆ ಹೇಳುವೆ)

ಶುಕ್ರವಾರ, ಜುಲೈ 7, 2017

ಬೇಬಿ ಕಾರ್ನ್ ಮಂಚೂರಿಯನ್ ವಿಥ್ ಗ್ರೇವಿ :

ಸಾಮಗ್ರಿಗಳು :
ಅರ್ಧ ಇಂಚು ಉದ್ದ ಹೆಚ್ಚಿದ ಬೇಬಿ ಕಾರ್ನ್ : 3 ಕಪ್ 
ಉದ್ದ ಹೆಚ್ಚಿದ ಕ್ಯಾಪ್ಸಿಕಂ : 1 ಕಪ್ 
ಸಣ್ಣ ಹೆಚ್ಚಿದ ಸ್ಪ್ರಿಂಗ್ ಆನಿಯನ್ : 2 ಕಪ್ (ಅಥವಾ ಉದ್ದ ಹೆಚ್ಚಿದ ಈರುಳ್ಳಿ: 2 ಕಪ್)
ತುಂಬಾ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ : 1 ಟೇಬಲ್ ಚಮಚ 
ತುಂಬಾ ಸಣ್ಣಗೆ ಹೆಚ್ಚಿದ ಶುಂಠಿ : 1/2 ಟೇಬಲ್ ಚಮಚ 
ತುಂಬಾ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ : 1 ಟೇಬಲ್ ಚಮಚ 
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು : 2 ಟೇಬಲ್ ಚಮಚ 
ಮೈದಾ ಹಿಟ್ಟು : 1 ಕಪ್ 
ಕಾರ್ನ್ ಫ್ಲೋರ್ : 3/4 ಕಪ್ 
ಅಚ್ಚ ಮೆಣಸಿನ ಪುಡಿ : 1 ಚಮಚ 
ಟೊಮೇಟೊ ಸಾಸ್ : 2 ಟೇಬಲ್ ಚಮಚ 
ಸೋಯಾ ಸಾಸ್ : 1 ಟೇಬಲ್ ಚಮಚ  
ಗ್ರೀನ್ ಚಿಲ್ಲಿ ಸಾಸ್ : 3 ಟೇಬಲ್ ಚಮಚ 
ಸಕ್ಕರೆ : 1/4 ಚಮಚ 
ಲಿಂಬು ರಸ : 1/2 ಚಮಚ (ಅಥವಾ ವಿನೆಗರ್ ಸ್ವಲ್ಪ) 
ಉಪ್ಪು : ರುಚಿಗೆ 
ಕರಿಯಲು ಮತ್ತು ಹುರಿಯಲು : ಎಣ್ಣೆ 

ವಿಧಾನ :
ಒಂದು ಚಮಚ ಕಾರ್ನ್ ಫ್ಲೋರ್ ಅನ್ನು ಒಂದು ಕಪ್ ಗೆ ಹಾಕಿ ಕಾಲು ಕಪ್ ನೀರು ಹಾಕಿ ಕಲಕಿಡಿ. ಕರಿಯಲು ಎಣ್ಣೆ ಕಾಯಲು ಇಟ್ಟುಕೊಳ್ಳಿ. ಉಳಿದ ಕಾರ್ನ್ ಫ್ಲೋರ್ ಮತ್ತು ಮೈದಾ ಸೇರಿಸಿ ಅದಕ್ಕೆ ಉಪ್ಪು, ಮೆಣಸಿನ ಪುಡಿ, ನೀರು ಹಾಕಿ ಗಂಟಿಲ್ಲದಂತೆ ಕಲಸಿ. ಕಲಸಿದ ಹಿಟ್ಟು ಬಜ್ಜಿ ಹಿಟ್ಟಿನಕಿಂತ ತೆಳ್ಳಗಿರಲಿ. ಇದಕ್ಕೆ ಹೆಚ್ಚಿಟ್ಟ ಬೇಬಿ ಕಾರ್ನ್ ಹಾಕಿ ಕಲಸಿಕೊಂಡು ಕಾದ ಎಣ್ಣೆಯಲ್ಲಿ ಬಿಡಿ ಬಿಡಿಯಾಗುವಂತೆ ಬಿಟ್ಟು ಗರಿ ಗರಿಯಾಗಿ ಕರಿದುಕೊಳ್ಳಿ. ಅಗಲವಾದ ಪ್ಯಾನ್ ಗೆ 3-4 ಟೇಬಲ್ ಚಮಚ ಎಣ್ಣೆ ಹಾಕಿ ಅದಕ್ಕೆ ಸಣ್ಣಗೆ ಹೆಚ್ಚಿಕೊಂಡ ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ಇದಕ್ಕೆ ಹೆಚ್ಚಿಕೊಂಡ ಕ್ಯಾಪ್ಸಿಕಂ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ನಂತರ ಹೆಚ್ಚಿದ ಸ್ಪ್ರಿಂಗ್ ಆನಿಯನ್ ಅಲ್ಲಿ 2 ಚಮಚ ತೆಗೆದಿಟ್ಟು ಉಳಿದದ್ದನ್ನು ಹಾಕಿ ಒಮ್ಮೆ ಫ್ರೈ ಮಾಡಿ. ಇದಕ್ಕೆ ಸೋಯಾ ಸಾಸ್, ಟೊಮೇಟೊ ಸಾಸ್, ಗ್ರೀನ್ ಚಿಲ್ಲಿ ಸಾಸ್, ಸ್ವಲ್ಪ ಉಪ್ಪು, ಸಕ್ಕರೆ, ಲಿಂಬು ರಸ / ವಿನೆಗರ್ ಎಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಮೊದಲೇ ಕಲಕಿಟ್ಟ ಕಾರ್ನ್ ಫ್ಲೋರ್ ನೀರನ್ನು ಹಾಕಿ ಕೈ ಬಿಡದೆ ಕಲಕುತ್ತಿರಿ ಗ್ರೇವಿ ತುಂಬಾ ದಪ್ಪಗಾದರೆ ಇನ್ನು ಸ್ವಲ್ಪ ನೀರು ಹಾಕಿಕೊಂಡು ಒಂದೆರಡು ಕುದಿ ಬರುವವರೆಗೆ ಕಲಕುತ್ತಿರಿ. ನಂತರ ಕರಿದಿಟ್ಟುಕೊಂಡ ಬೇಬಿ ಕಾರ್ನ್ ಹಾಕಿ ಮಿಕ್ಸ್ ಮಾಡಿ ಉರಿ ಆರಿಸಿ. ಈಗ ಕೊತ್ತಂಬರಿ ಸೊಪ್ಪು ಮತ್ತು ಉಳಿದ ಸ್ಪ್ರಿಂಗ್ ಆನಿಯನ್ ಹಾಕಿ ಸರ್ವ್ ಮಾಡಿ. 

ಸಲಹೆ :  ಸ್ಪ್ರಿಂಗ್ ಆನಿಯನ್ ಇಲ್ಲದಿದ್ದಲ್ಲಿ ಈರುಳ್ಳಿ ಉದ್ದುದ್ದ ಹೆಚ್ಚಿ, ಬೆಳ್ಳುಳ್ಳಿ ಫ್ರೈ ಆದಮೇಲೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಬೇಕು. 

ಶುಕ್ರವಾರ, ಜೂನ್ 30, 2017

ಕಳಲೆ ಪಲ್ಯ (bamboo shoot):

ಸಾಮಗ್ರಿಗಳು:
ಸಣ್ಣಗೆ ಹೆಚ್ಚಿಟ್ಟ ಕಳಲೆ - 1 ಬೌಲ್,
ಹಸಿಮೆಣಸು - 4
ಎಣ್ಣೆ - 2 ಟೇ.ಚಮಚ,
ಸಾಸಿವೆ - 1/2 ಟೀ. ಚಮಚ
ಉದ್ದಿನಬೇಳೆ - 1 ಟೀ. ಚಮಚ
ಅರಿಶಿನಪುಡಿ - 1/4 ಟೀ. ಚಮಚ
ಕರಿಬೇವು - 5-6 ಎಲೆಗಳು
ಉಪ್ಪು & ಲಿ೦ಬುರಸ.




ವಿಧಾನ: ಬಾಣಲೆಗೆ ಎಣ್ಣೆಹಾಕಿಕೊ೦ಡು ಎಣ್ಣೆ ಸ್ವಲ್ಪ ಬಿಸಿಯಾದ ಮೇಲೆ ಉದ್ದಿನಬೇಳೆ, ಸಾಸಿವೆ, ಹಸಿಮೆಣಸು ಕರಿಬೇವು ನ೦ತರ ಅರಿಶಿನಪುಡಿ ಹಾಕಿ. ಈಗ ಹೆಚ್ಚಿಟ್ಟ ಕಳಲೆಯನ್ನು ಹಾಕಿ ಉಪ್ಪು ಲಿ೦ಬುರಸ ಹಾಕಿ 15- 20 ನಿಮಿಷ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದರೆ ರುಚಿಯಾದ ಕಳಕೆ ಪಲ್ಯ ಸವಿಯಲು ಸಿದ್ಧ.

(ಕಳಲೆಯನ್ನು ಹೆಚ್ಚಿ ೨ ದಿನ ನೀರಲ್ಲಿ ನೆನೆಸಿಡಬೇಕು. ದಿನಾಲೂ ನೀರು ಬದಲಿಸಬೇಕು)

ಶುಕ್ರವಾರ, ಜೂನ್ 23, 2017

ರಸ್ಮಲಾಯಿ :

ಸಾಮಗ್ರಿಗಳು :
ಬಾಸುಂದಿಗೆ (ರಸ)-
ಹಾಲು : 1.5 ಲೀಟರ್
ಸಕ್ಕರೆ : 1/2 ಕೆಜಿ
ಪಿಸ್ತಾ - ಬಾದಾಮ್ ಚೂರುಗಳು : 1/4 ಕಪ್

ರಸಗುಲ್ಲ (ಪನೀರ್ ಉಂಡೆ) ಗೆ :
ಹಾಲು : 2 ಲೀಟರ್
ವಿನೆಗರ್ : 1.5 ಚಮಚ (ಅಥವಾ ನಿಂಬೆ ರಸ : ೩-೪ ಚಮಚ)
ಸಕ್ಕರೆ : 1 ಕಪ್
ನೀರು : 3 ಕಪ್

ವಿಧಾನ :
ಮೊದಲು 2 ಲೀಟರ್ ಹಾಲನ್ನು ಚೆನ್ನಾಗಿ ಕಾಯಿಸಿ ಅದಕ್ಕೆ ವಿನೆಗರ್ ಹಾಕಿ ಚೆನ್ನಾಗಿ ಕಲಕಿ. ಹಾಲು ಪೂರ್ತಿಯಾಗಿ ಒಡೆಯದಿದ್ದಲ್ಲಿ ಇನ್ನು ಸ್ವಲ್ಪ ವಿನೆಗರ್ ಸೇರಿಸಿ ಕಲಕಿ. ವಿನೆಗರ್ ಬದಲು ಲಿಂಬುರಸ ಬಳಸಬಹುದು. ಒಂದು ಪಾತ್ರೆಯ ಮೇಲೆ ಜರಡಿ ಇಟ್ಟು ಅದರ ಮೇಲೆ ತೆಳ್ಳನೆಯ ಹತ್ತಿ ಬಟ್ಟೆ ಹಾಕಿ, ಒಡೆದ ಹಾಲನ್ನು ಬಟ್ಟೆಯ ಮೇಲೆ ಹಾಕಿ ಮೇಲಿನಿಂದ ನೀರನ್ನು ಹಾಕುತ್ತಾ ಚಮಚದಿಂದ ಕಲಕಿ. 

ಹಾಲಿಗೆ ಹುಳಿ ಹಾಕಿದ್ದರಿಂದ ನೀರನ್ನು ಹಾಕಿ ಹುಳಿ ಅಂಶ ತೆಗೆಯಬೇಕು. ನಂತರ ಬಟ್ಟೆಯನ್ನು ಗಂಟು ಕಟ್ಟಿ ಅದರ ಮೇಲೆ ಏನಾದರೂ ಭಾರ ಹೇರಿಟ್ಟು ಸ್ವಲ್ಪ ಹೊತ್ತು ಬಿಡಿ. ನೀರಿನಂಶ ಪೂರ್ತಿ ಇಳಿದು ಬರಿಯ ಪನೀರ್ ಉಳಿದ ಮೇಲೆ ಅದನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ನಾದಬೇಕು. 

ನಂತರ ಇದರಿಂದ ದೊಡ್ಡ ನೆಲ್ಲಿಕಾಯಿ ಗಾತ್ರದ ಉಂಡೆ ಮಾಡಿ ಅದನ್ನು ತಟ್ಟಿ ಚಪ್ಪಟೆ ಮಾಡಿ ಇಟ್ಟುಕೊಳ್ಳಿ.

 3-4 ಚಮಚ ಹಾಲಿನಲ್ಲಿ ಕುಂಕುಮ ಕೇಸರಿ ಹಾಕಿ ನೆನೆಸಿಡಿ.

ಈಗ ಒಂದು ಕಡೆ 1.5 ಲೀಟರ್ ಹಾಲಿಗೆ 1/2 ಕೆಜಿ ಯಷ್ಟು ಸಕ್ಕರೆ (ನಿಮಗೆ ಬೇಕಾದ  ಸಿಹಿ ಪ್ರಮಾಣಕ್ಕೆ ಅನುಸಾರ) ಹಾಕಿ ಹಾಲು ಸುಮಾರು ಅರ್ಧದಷ್ಟು ಕಮ್ಮಿ ಆಗುವವರೆಗೆ ಕುದಿಸಿ. ಉರಿ ಆರಿಸಿ ಕೇಸರಿ ಹಾಲನ್ನು ಹಾಕಿ ತಣ್ಣಗಾಗಲು ಬಿಡಿ.

ಇತ್ತ  1 ಕಪ್ ಸಕ್ಕರೆಗೆ 3 ಕಪ್ ನಷ್ಟು ನೀರು ಹಾಕಿ ಕುದಿಸಿ, ಮಾಡಿಟ್ಟುಕೊಂಡ ಪನೀರ್ ಉಂಡೆಯನ್ನು ಹಾಕಿ 8-10 ನಿಮಿಷ ಕುದಿಸಿ. ಉಂಡೆಯ ಗಾತ್ರ ದೊಡ್ಡದಾಗುತ್ತದೆ ಆಗ ಉರಿ ಆರಿಸಿ ಉಂಡೆಗಳನ್ನು ಪಾಕದಿಂದ ತೆಗೆದು ಬಿಸಿ ಆರಿದ ಒಂದೊಂದೇ ಉಂಡೆ ತೆಗೆದುಕೊಂಡು ಕೈ ಇಂದ ಒತ್ತಿ ಸಕ್ಕರೆ ನೀರು ತೆಗೆದು ಇಟ್ಟುಕೊಳ್ಳಿ.

ಈಗ ತಣ್ಣಗಾದ ಹಾಲಿನ ಮಿಶ್ರಣಕ್ಕೆ ಮಾಡಿಟ್ಟ ಉಂಡೆಗಳನ್ನು ಹಾಕಿ, ಸಣ್ಣಗೆ ಹೆಚ್ಚಿಟ್ಟುಕೊಂಡ ಬಾದಾಮ್ - ಪಿಸ್ತಾ ಚೂರುಗಳನ್ನು ಹಾಕಿ 1-2 ಘಂಟೆ ಫ್ರಿಡ್ಜ್ ಅಲ್ಲಿ ಇಟ್ಟು , ತಣ್ಣನೆಯ ರಸ್ಮಲಾಯಿ ಸವಿಯಿರಿ. 



ಶುಕ್ರವಾರ, ಜೂನ್ 16, 2017

ಕ೦ಚುಳಿ :

ಸಾಮಗ್ರಿಗಳು : 
ಹುಳಿಕ೦ಚಿಕಾಯಿ (ಹೇರಳೇಕಾಯಿ)- 3,
ಸೂಜಿಮೆಣಸು / ಹಸಿಮೆಣಸು - 6-7
ಬೆಲ್ಲ - 2 ಟೇ.ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 1ಟೀ. ಚಮಚ
ಸಾಸಿವೆ - 1/2 ಚಮಚ
ಬೆಳ್ಳುಳ್ಳಿ - 5 ಎಸಳು

 

ವಿಧಾನ : ಕ೦ಚಿಕಾಯಿಯ ಸಿಪ್ಪೆ ತೆಗೆದು ಅರ್ಧ ಮಾಡಿ ಒ೦ದು ಪಾತ್ರೆಯಲ್ಲಿ ಸಲ್ಪ ಉಪ್ಪು ಹಾಕಿ ಅದಕ್ಕೆ ಕ೦ಚಿಕಾಯಿ ರಸವನ್ನು ಹಿ೦ಡಿ, ಅದಕ್ಕೆ ಬೆಲ್ಲ ಹಾಕಿ ರುಚಿನೋಡಿಕೊಳ್ಳಿ. ಸೂಜಿಮೆಣಸು & ಬೆಳ್ಳುಳ್ಳಿಯನ್ನು ಜಜ್ಜಿಟ್ಟುಕೊಳ್ಳಿ. ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಅದು ಸ್ವಲ್ಪ ಕಾದಮೇಲೆ ಸಾಸಿವೆ ಜಜ್ಜಿಟ್ಟ ಸೂಜಿಮೆಣಸು & ಬೆಳ್ಳುಳ್ಳಿಯನ್ನು ಹಾಕಿ ಫ್ರೈ ಮಾಡಿ ಇದನ್ನು ಕ೦ಚಿಕಾಯಿರಸಕ್ಕೆ ಸೇರಿಸಿ. ಇದನ್ನು ಅನ್ನದ ಜೊತೆ ಸವಿಯಿರಿ.

(ಸೂಚನೆ: ಕ೦ಚಿಕಾಯಿರಸಕ್ಕೆ ನೀರು ಸೇರಿಸುವ ಅಗತ್ಯವಿಲ್ಲ, ಹುಳಿಗೆ ತಕ್ಕಷ್ಟು ಖಾರ & ಬೆಲ್ಲ ಬೇಕು)

ಶುಕ್ರವಾರ, ಜೂನ್ 9, 2017

ಕ್ಯಾರಟ್ - ಸೇಬಿನ ಸೂಪ್ (carrot - apple soup):

ಆರೋಗ್ಯಕರವಾಗಿ ಮಕ್ಕಳನ್ನು ಬೆಳೆಸುವುದು ಪ್ರತಿ ತಾಯಂದಿರ ಕರ್ತವ್ಯ. ಇದಕ್ಕಾಗಿ ರೆಡಿಮೇಡ್ ಆಹಾರಗಳಿಗಿಂತ ಮನೆಯಲ್ಲಿಯೇ ಸರಳವಾಗಿ ಮಾಡಿಕೊಡಬಹುದಾದ ಆಹಾರಗಳನ್ನು ತಿಳಿಸಿಕೊಡಲು 'ಶಿಶು / ಮಕ್ಕಳ ಆಹಾರ' ಎಂಬ ಹೊಸ ಅಂಕಣ ಆರಂಭಿಸಿದ್ದೇವೆ. ನಮಗೆ ತಿಳಿದಷ್ಟನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇವೆ. 

ಸಾಮಗ್ರಿಗಳು :

ಹೆಚ್ಚಿದ ಕ್ಯಾರಟ್- 1/4 ಕಪ್ 
ಹೆಚ್ಚಿದ ಸೇಬು - 1/4 ಕಪ್
ಹೆಚ್ಚಿದ ಆಲೂ - 1/4 ಕಪ್
ಹೆಚ್ಚಿದ ಈರುಳ್ಳಿ - 1/4 ಕಪ್
ಬೆಣ್ಣೆ - 1/2 ಟೀ ಚಮಚ 
ಪೆಪ್ಪರ್ ಪೌಡರ್ - 2 ಚಿಟಿಕೆ 
ಲಿಂಬೆ ರಸ - 5-6 ಹನಿ 
ಉಪ್ಪು - 3-4 ಚಿಟಿಕೆ 

ವಿಧಾನ :
ಹೆಚ್ಚಿದ  ಸೇಬು-ತರಕಾರಿಗಳೆಲ್ಲವನ್ನೂ ಒಟ್ಟಿಗೇ ಕುಕ್ಕರ್ ನಲ್ಲಿ ಮೂರು ವಿಷಲ್ ಕೂಗಿಸಿ ಬೇಯಿಸಿಕೊಳ್ಳಿ. ಬೆಂದು ತಣ್ಣಗಾದ ಮೇಲೆ  ಮಿಕ್ಸಿಗೆ ಹಾಕಿ  ನುಣ್ಣಗೆ ರುಬ್ಬಿಕೊಳ್ಳಿ. ಪ್ಯಾನ್ ಗೆ ಬೆಣ್ಣೆ ಹಾಕಿ, ಪೆಪ್ಪರ್ ಪುಡಿ ಹಾಕಿ ಒಮ್ಮೆ ಕಲಕಿ, ರುಬ್ಬಿದ ಮಿಶ್ರಣ ಹಾಕಿ  ಕಾಲು ಕಪ್ ನಷ್ಟು ನೀರು ಹಾಕಿ ಕಲಕಿ. ಬೇಕಿದ್ದಲ್ಲಿ ಇನ್ನು ಸ್ವಲ್ಪ ನೀರು ಸೇರಿಸಿ. ಉಪ್ಪು ಹಾಕಿ ಒಂದು ಕುದಿ ಕುದಿಸಿ (ಮುಂಚೆಯೇ ಬೇಯಿಸಿಕೊಂಡ ಸೇಬು / ತರಕಾರಿ ಆದ್ದರಿಂದ ಸಣ್ಣ ಕುದಿ ಬಂದರೆ ಸಾಕು). ಕೊನೆಯಲ್ಲಿ ಲಿಂಬು ರಸ ಹಾಕಿದರೆ ರುಚಿಯಾದ ಸೂಪ್ ಸಿದ್ಧ. ಸ್ವಲ್ಪ ಬೆಚ್ಚಗಿರುವಾಗಲೇ ಮಕ್ಕಳಿಗೆ ಕುಡಿಸಿ. 


ಸಲಹೆಗಳು :
1) 7-8 ತಿಂಗಳು ಮೇಲ್ಪಟ್ಟ ಮಗುವಿಗೆ ಒಳ್ಳೆಯ ಆರೋಗ್ಯಕರ ಆಹಾರ. ಶಾಲೆಗೆ ಹೋಗುವ ಮಕ್ಕಳಿಗೂ ಇಷ್ಟವಾಗುವುದಲ್ಲದೇ ದೊಡ್ಡವರೂ ಸವಿಯಬಹುದು. 
2) ತೀರಾ ತೆಳ್ಳಗಾಗುವಷ್ಟು ನೀರು ಹಾಕಬೇಡಿ, ರುಚಿಯಿರುವುದಿಲ್ಲ. 
3) ಮಗುವಿಗೆ  ಕೊಡುವಾಗ ಉಪ್ಪು, ಹುಳಿ, ಖಾರ ಎಲ್ಲವೂ ಕಡಿಮೆ ಇರುವಂತೆ ಎಚ್ಚರ ವಹಿಸಿ. ಅದಕ್ಕೆ ಎಲ್ಲವನ್ನೂ  ಕಡಿಮೆ ಪ್ರಮಾಣದಲ್ಲೇ ಹೇಳಿದ್ದೇನೆ. ದೊಡ್ಡ ಮಕ್ಕಳಿಗಾದರೆ ಅವರ ಇಷ್ಟಕ್ಕನುಸಾರ  ಜಾಸ್ತಿ ಮಾಡಿಕೊಳ್ಳಿ.  
4) ಎಲ್ಲಾ ತರಕಾರಿಗಳು ಸಮಪ್ರಮಾಣದಲ್ಲಿದ್ದರೆ ರುಚಿ ಚೆನ್ನಾಗಿರುತ್ತದೆ. ಪ್ರಮಾಣದಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆದರೂ ಯಾವುದೇ ತೊಂದರೆಯಿಲ್ಲ 

ಶುಕ್ರವಾರ, ಜೂನ್ 2, 2017

ಮುರುಗಲು ಸಿಪ್ಪೆಯ ತ೦ಬುಳಿ:

ಸಾಮಗ್ರಿಗಳು : 
ಮುರುಗಲು ಸಿಪ್ಪೆ - 6-7
 ಕಾಯಿತುರಿ - 2 ಟೇ.ಚಮಚ
ಎಣ್ಣೆ - 1ಟೀ. ಚಮಚ
ಸಾಸಿವೆ - 1/2 ಚಮಚ
ಜೀರಿಗೆ  - 1/2 ಚಮಚ
ಒಣಮೆಣಸು -1
ಕರಿಬೇವು - 4-5 ಎಲೆಗಳು
ಉಪ್ಪು, ಸಕ್ಕರೆ - ರುಚಿಗೆ ತಕ್ಕಷ್ಟು






ವಿಧಾನ:ಒಣಗಿಸಿಟ್ಟ ಮುರುಗಲು ಸಿಪ್ಪೆಯನ್ನು 15-20 ನಿಮಿಷ ನೀರಿನಲ್ಲಿ ನೆನೆಸಿಡಿ. ತೆ೦ಗಿನಕಾಯಿಯನ್ನು ತುರಿದುಕೊ೦ಡು, ಸ್ವಲ್ಪ ನೀರು ಹಾಕಿ ರುಬ್ಬಿ ಅದರಿ೦ದ ತೆ೦ಗಿನ ಹಾಲನ್ನು ತೆಗೆದು ಮುರುಗಲು ಸಿಪ್ಪೆ ನೆನೆಸಿದ ನೀರಿಗೆ ಸೇರಿಸಿ. ಈಗ ಇದಕ್ಕೆ ಸ್ವಲ್ಪ ಉಪ್ಪು ಮತ್ತು ಸಕ್ಕರೆಹಾಕಿ. ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಅದಕ್ಕೆ ಜೀರಿಗೆ, ಸಾಸಿವೆ,ಒಣಮೆಣಸು, ಕರಿಬೇವು ಹಾಕಿ, ಚಿಟಪಟಿಸಿದ ಮೇಲೆ ಈ ಒಗ್ಗರಣೆ ಹಾಕಿದರೆ ಮುರುಗಲು ಸಿಪ್ಪೆಯ ತ೦ಬುಳಿ ಸಿದ್ಧ. ಇದನ್ನು ಅನ್ನದ ಜೊತೆ ತಿನ್ನಬಹುದು ಹಾಗೆ ಕುಡಿಯಲು ರುಚಿಕಟ್ಟಾಗಿರುತ್ತದೆ.

(ಮುಗುಗಲು (ಪುನರ್ಪುಳಿ) ಸಿಪ್ಪೆಯು ಪಿತ್ತ ಶಮನಕಾರಿಯು ಹೌದು)

ಶುಕ್ರವಾರ, ಮೇ 26, 2017

ಮ್ಯಾಂಗೋ ಶಿರಾ (ಮ್ಯಾಂಗೋ ಕೇಸರಿಭಾತ್) :

ಸಾಮಗ್ರಿಗಳು :
ರವೆ / ಸೂಜಿ : 1 ಕಪ್ 
ನೀರು : 2 ಕಪ್
ಹಾಲು : 1 ಕಪ್  
ಸಕ್ಕರೆ : 1 1/4 ಕಪ್ 
ತುಪ್ಪ : 1/3 ಕಪ್ 
ಸಣ್ಣಗೆ ಹೆಚ್ಚಿದ ಮಾವಿನಹಣ್ಣು : 1/2 ಕಪ್ 
ಗೋಡಂಬಿ : 8-10 
ಕುಂಕುಮ ಕೇಸರಿ : 10-12 ದಳಗಳು  
ಉಪ್ಪು : 2 ಚಿಟಿಕೆ 

ವಿಧಾನ : 
ಕೇಸರಿಯನ್ನು ಎರಡು ಚಮಚ ಬಿಸಿ ಹಾಲಿನಲ್ಲಿ ನೆನೆಸಿಡಿ. ಬಾಣಲೆಗೆ ತುಪ್ಪ ಹಾಕಿ ರವೆ ಹಾಕಿ ಚೆನ್ನಾಗಿ ಹುರಿಯಿರಿ. ರವೆ ಸ್ವಲ್ಪ ಕೆಂಪಗಾಗಿ, ಘಮ್ಮನೆ ಸುವಾಸನೆ ಬಂದರೆ ರವೆ ಹುರಿದಿದೆ ಎಂದರ್ಥ. ರವೆ ಹುರಿಯಿತ್ತುರುವಾಗಲೇ ನೀರು ಮತ್ತು ಹಾಲನ್ನು ಸೇರಿಸಿ ಕುದಿಯಲು ಇಡಿ. ಹುರಿದ ರವೆಗೆ ಕುದಿಯುತ್ತಿರುವ ನೀರು ಮತ್ತು ಹಾಲನ್ನು ಹಾಕಿ ಕಲಕುತ್ತಾ ಬನ್ನಿ. ರವೆ ಹುರಿಯುತ್ತಿರುವ ಒಲೆಯನ್ನು ಸಣ್ಣ ಉರಿಯಲ್ಲಿಟ್ಟು ನೀರು ಹಾಕಿ, ಬಿಸಿ ನೀರು ಸಿಡಿಯುತ್ತದೆ. ಮೊದಲ ಸಲ ಮಾಡುತ್ತಿರುವವರಾದರೆ ನೀರು ಹಾಕಿ ಮಿಕ್ಸ್ ಮಾಡುವವರೆಗೆ ಒಮ್ಮೆ ಉರಿ ಆರಿಸಿಕೊಳ್ಳುವುದು ಉತ್ತಮ. ನಂತರ ನೆನೆಸಿಟ್ಟ ಕೇಸರಿ ದಳಗಳು, ಹೆಚ್ಚಿದ ಮಾವಿನಹಣ್ಣು, ಗೋಡಂಬಿ ಚೂರುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ ಒಂದೆರಡು ನಿಮಿಷ ಬೇಯಲು ಬಿಡಿ. ರವೆ ಬೆಂದ ಮೇಲೆ ಸಕ್ಕರೆ, ಉಪ್ಪು ಹಾಕಿ ಕಲಕುತ್ತಾ ಬನ್ನಿ. ಸಕ್ಕರೆ ಹಾಕಿದ ಮೇಲೆ ಮತ್ತೆ ಸ್ವಲ್ಪ ನೀರು ಬಿಟ್ಟುಕೊಳ್ಳುತ್ತದೆ. ಮಿಶ್ರಣ ಬಾಣಲೆಗೆ ಅಂಟಿಕೊಳ್ಳದಂತೆ ಸೌಟು ಮತ್ತು ಬಾಣಲೆಯನ್ನು ಬಿಡುವವರೆಗೂ ಚೆನ್ನಾಗಿ ಮಿಕ್ಸ್ ಮಾಡುತ್ತಿರಿ. ಮಿಶ್ರಣ ಬಾಣಲೆ ಅಂಚನ್ನು ಬಿಟ್ಟುಕೊಂಡ ಮೇಲೆ ಉರಿ ಆರಿಸಿ. ಈಗ ಮಾವಿನಹಣ್ಣಿನ ಶಿರಾವನ್ನು ಬಿಸಿ ಬಿಸಿಯಾಗಿ ಸವಿಯಿರಿ. 



ಸಲಹೆಗಳು :
1) ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಇದನ್ನು ಸಾಯಂಕಾಲದ ತಿಂಡಿಗೆ ಮಾಡಿಕೊಡಬಹುದು. ದೊಡ್ಡವರಿಗೂ ಇಷ್ಟವಾಗುವ ಸಿಹಿ ತಿನಿಸಿದು. ಮಕ್ಕಳಿಗೆ ಮಾಡುವಾಗ ಅಗಿದು ತಿನ್ನುವಷ್ಟು ಹಲ್ಲು ಬರದಿದ್ದರೆ ಗೋಡಂಬಿಯನ್ನು ಹಾಕಬೇಡಿ ಮತ್ತು ನೀರಿನ ಪ್ರಮಾಣಕ್ಕಿಂತ ಹಾಲಿನ ಪ್ರಮಾಣ ಜಾಸ್ತಿ ಹಾಕಿ. 

2) ಮಾವಿನಹಣ್ಣಿನ ಬದಲು ಕಿತ್ತಳೆ ಹಣ್ಣು, ಬಾಳೆಹಣ್ಣು ಅಥವಾ ಅನಾನಸ್ ಹಣ್ಣು ಹಾಕಿ ಮಾಡಿದರೂ ಚೆನ್ನಾಗಿರುತ್ತದೆ. 

3) ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಕೊನೆಯಲ್ಲಿ ಕೂಡ ಸೇರಿಸಬಹುದು. ಜೊತೆಗೆ ಒಣ ದ್ರಾಕ್ಷಿ ಹಾಕಬಹುದು ಆದರೆ ಮಾವಿನಹಣ್ಣಿನ ಜೊತೆ ಚೆನ್ನಾಗಿರುವುದಿಲ್ಲ. ಬೇರೆ ಹಣ್ಣನ್ನು ಹಾಕಿ ಮಾಡಿದಾಗ ಹಾಕಿಕೊಳ್ಳಿ. 

4) ಸೂಜಿ ರವೆಯ ಬದಲು ಚಿರೋಟಿ ರವೆಯಿಂದ ಮಾಡಿದರೂ ತುಂಬಾ ಚೆನ್ನಾಗಿ ಆಗುತ್ತದೆ.